ಕ್ರಿಕೆಟ್​ಗೆ ಗಬ್ಬರ್ ಸಿಂಗ್ ಗುಡ್ ಬೈ – ರೋಹಿತ್​ರನ್ನೇ ಮೀರಿಸಿದ್ದೇಗೆ Mr. ICC?
BCCIನಿಂದ್ಲೇ ನಿವೃತ್ತಿ.. IPLನೂ ಆಡಲ್ವಾ?

ಕ್ರಿಕೆಟ್​ಗೆ ಗಬ್ಬರ್ ಸಿಂಗ್ ಗುಡ್ ಬೈ – ರೋಹಿತ್​ರನ್ನೇ ಮೀರಿಸಿದ್ದೇಗೆ Mr. ICC?BCCIನಿಂದ್ಲೇ ನಿವೃತ್ತಿ.. IPLನೂ ಆಡಲ್ವಾ?

ವೀಕೆಂಡ್ ಮೂಡ್​​ನಲ್ಲಿದ್ದ ಟೀಂ ಇಂಡಿಯಾ ಅಭಿಮಾನಿಗಳಿಗೆ ಬೆಳ್ಳಂಬೆಳಗ್ಗೆಯೇ ಸ್ಟಾರ್ ಕ್ರಿಕೆಟರ್​ ಶಾಕ್ ಕೊಟ್ಟಿದ್ದಾರೆ. ಭಾರತ ತಂಡದ ಪರ ಸುದೀರ್ಘ ಪ್ರದರ್ಶನ ನೀಡಿದ್ದ ಗಬ್ಬರ್ ಸೀಂಗ್ ಖ್ಯಾತಿಯ ಶಿಖರ್ ಧವನ್ ತಮ್ಮ ಕ್ರಿಕೆಟ್ ಕರಿಯರ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಓಪನರ್ ಆಗಿ ರನ್​ಗಳ ಹೊಳೆ ಹರಿಸಿದ್ದ ಎಡಗೈ ಬ್ಯಾಟರ್ ಶಿಖರ್ ಧವನ್ ಇನ್ಮುಂದೆ ಯಾವ ಫಾರ್ಮೇಟ್ ಕ್ರಿಕೆಟ್​​ನಲ್ಲೂ ಮೈದಾನಕ್ಕೆ ಇಳಿಯೋದಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಬ್ಬರಿಸಿ ದೇಶೀಯ ಟೂರ್ನಿಯಲ್ಲೂ ಸದ್ದು ಮಾಡಿದ್ದ ಶಿಖರ್ ಧವನ್ ನಿವೃತ್ತಿಗೆ ಕಾರಣ ಏನು? ಬಿಸಿಸಿಐ ನಡೆಯಿಂದಲೇ ಇಂಥಾದ್ದೊಂದು ನಿರ್ಧಾರಕ್ಕೆ ಬಂದ್ರಾ? ವಿದಾಯದ ಹೊಸ್ತಿಲಲ್ಲಿ ಶಿಖರ್ ಅನುಭವಿಸಿದ ನೋವುಗಳೆಷ್ಟು? ಭಾರತ ಕಂಡ ಒಬ್ಬ ಶ್ರೇಷ್ಠ ಆಟಗಾರನ ಕ್ರಿಕೆಟ್ ಜರ್ನಿ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಿಹಿಯ ರಿಯಲ್‌ ತಂದೆ ಎಂಟ್ರಿ? – ಮೇಘಶ್ಯಾಮ್ ಗೂ ಸೀತಾಗೂ ಏನ್‌ ಸಂಬಂಧ?

ಶಿಖರ್ ಧವನ್. ಒಂದು ಕಾಲದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್​​ಮನ್. ಆರಂಭಿಕ ಬ್ಯಾಟರ್ ಆಗಿದ್ದ ಧವನ್, ಆಕರ್ಷಕ ಸ್ಟ್ರೋಕ್‌ಪ್ಲೇಗೆ ಫೇಮಸ್ ಆಗಿದ್ರು. ಐಸಿಸಿ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿರುವುದೇ ಶಿಖರ್ ವೃತ್ತಿಜೀವನದ ಪ್ರಮುಖ ಮೈಲಿಗಲ್ಲುಗೆ ಸಾಕ್ಷಿಯಾಗಿದೆ. ಟೀಂ ಇಂಡಿಯಾದಲ್ಲಿ ಅಭಿಮಾನಿಗಳಿಂದ ಗಬ್ಬರ್ ಸಿಂಗ್ ಎಂದೇ ಕರೆಸಿಕೊಳ್ತಿದ್ದ ಧವನ್, ಮೀಸೆ ತಿರುವಿ ತೊಡೆ ತಟ್ಟುವ ಮೂಲಕ ಸೆಲೆಬ್ರೇಷನ್ ಮಾಡ್ತಿದ್ರು. ಅವ್ರ ಇದೇ ಸ್ಟೈಲ್ ತುಂಬಾ ಜನ್ರಿಗೆ ಇಷ್ಟ ಆಗ್ತಿತ್ತು. ಟೀಮ್ ಇಂಡಿಯಾ ಪರ ಹಲವು ಅತ್ಯುತ್ತಮ ಇನ್ನಿಂಗ್ಸ್​ಗಳನ್ನು ಆಡಿ ವಿಶ್ವಕ್ರಿಕೆಟ್​ನಲ್ಲಿ ತಮ್ಮದೇ ಆದ ದಾಖಲೆಗಳನ್ನ ಬರೆದಿರೋ ಧವನ್ ಇನ್ಮುಂದೆ ಕ್ರಿಕೆಟ್ ಮೈದಾನದಲ್ಲಿ ಆಟಗಾರರನಾಗಿ ಇನ್ನೆಂದೂ ಕಾಣಿಸಿಕೊಳ್ಳೋದಿಲ್ಲ. ದಶಕದ ಕಾಲ ಆಟಗಾರರನಾಗಿ ಕ್ರಿಕೆಟ್ ಜಗತ್ತಿನಲ್ಲಿ ಮರೆದ ಗಬ್ಬರ್ ಸಿಂಗ್ ಅಬ್ಬರ ಯುಗಾಂತ್ಯವಾಗಿದೆ. ಸೋಶಿಯಲ್ ಮೀಡಿಯಾ ಖಾತೆ ಮೂಲಕ ವಿಡಿಯೋ ಅಪ್​ಲೋಡ್ ಮಾಡಿ ಇಂಟರ್​ನ್ಯಾಷನಲ್ ಮತ್ತು ಡೊಮೆಸ್ಟಿಕ್ ಎರಡೂ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಭಾರತಕ್ಕಾಗಿ ಆಡುವ ಗುರಿಯನ್ನು ನಾನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಂಡಿದ್ದೆ. ನಾನು ಅದನ್ನು ಸಾಧಿಸಿದೆ. ಇದಕ್ಕಾಗಿ ಬಹಳಷ್ಟು ಜನರಿಗೆ ಧನ್ಯವಾದಗಳು. ಮೊದಲನೆಯದಾಗಿ ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಕ್ರಿಕೆಟ್ ಕಲಿತೆ. ನಂತರ ನಾನು ವರ್ಷಗಳ ಕಾಲ ಆಡಿದ ನನ್ನ ಇಡೀ ತಂಡ ಮತ್ತೊಂದು ಕುಟುಂಬದಿಂದ ಖ್ಯಾತಿ ಮತ್ತು ಎಲ್ಲರ ಪ್ರೀತಿ ಮತ್ತು ಬೆಂಬಲ ಸಿಕ್ಕಿತು. ಜೀವನದಲ್ಲಿ ಮುನ್ನಡೆಯಲು ಪುಟವನ್ನು ತಿರುಗಿಸುವುದು ಮುಖ್ಯ. ಅದಕ್ಕಾಗಿಯೇ ನಾನು ಅಂತರರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ದೇಶಕ್ಕಾಗಿ ನಾನು ಸಾಕಷ್ಟು ಆಡಿದ್ದೇನೆ ಎಂಬ ತೃಪ್ತಿ ನನಗಿದೆ. ನನಗೆ ಈ ಅವಕಾಶವನ್ನು ನೀಡಿದ ಬಿಸಿಸಿಐ, ಡಿಡಿಸಿಎ ಮತ್ತು ಬೆಂಬಲಸಿದ ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನಾನು ಮತ್ತೆ ನಿಮ್ಮ ದೇಶಕ್ಕಾಗಿ ಆಡುವುದಿಲ್ಲ ಎಂದು ದುಃಖಿಸಬೇಡಿ. ಇದು ನನ್ನ ದೊಡ್ಡ ಸಾಧನೆಯಾಗಿದೆ.

ಹೀಗೆ ಸುದೀರ್ಘ ವಿಡಿಯೋ ಮೂಲಕ ಶಿಖರ್ ಧವನ್ ತಮ್ಮ ನಿವೃತ್ತಿಯ ನಿರ್ಧಾರವನ್ನ ಘೋಷಣೆ ಮಾಡಿದ್ದಾರೆ. ಧವನ್​ರ ಕ್ರಿಕೆಟ್ ಕರಿಯರ್ ಆರಂಭ, ದಾಖಲೆಗಳು ಹೇಗಿತ್ತು ಅನ್ನೋ ಮಾಹಿತಿ ಇಲ್ಲಿದೆ.

2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ!

ಶಿಖರ್ ಧವನ್ 2010 ರಲ್ಲಿ ಟೀಮ್ ಇಂಡಿಯಾಗೆ ಪಾದರ್ಪಣೆ ಮಾಡುವ ಮೂಲಕ ಇಂಟರ್​ನ್ಯಾಷನಲ್​ ಕೆರಿಯರ್ ಆರಂಭಿಸಿದ್ರು. 2010ರಿಂದ 22ರವರೆಗೆ ಸುದೀರ್ಘ 12 ವರ್ಷಗಳ ಕಾಲ ಭಾರತದ ಪರ ಕಣಕ್ಕಿಳಿದಿದ್ದ ಗಬ್ಬರ್ ಸಿಂಗ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ದಾಖಲೆಗಳೊಂದಿಗೆ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಟೀಮ್ ಇಂಡಿಯಾ ಪರ 167 ಒಡಿಐ ಪಂದ್ಯಗಳನ್ನು ಆಡಿದ್ದು, ಈ ವೇಳೆ 17 ಶತಕ ಸೇರಿದಂತೆ 6793 ರನ್ ಗಳಿಸಿದ್ದಾರೆ. ಹಾಗೆಯೇ ಭಾರತದ ಪರ 34 ಟೆಸ್ಟ್ ಪಂದ್ಯಗಳಲ್ಲಿ 58 ಇನಿಂಗ್ಸ್ ಆಡಿರುವ ಧವನ್ 7 ಶತಕ ಹಾಗೂ 5 ಅರ್ಧಶತಕಗಳೊಂದಿಗೆ 2315 ರನ್ ಕಲೆಹಾಕಿದ್ದಾರೆ. ಇನ್ನು 68 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಶಿಖರ್ ಧವನ್ 11 ಅರ್ಧಶತಕಗಳೊಂದಿಗೆ ಒಟ್ಟು 1759 ರನ್ ಬಾರಿಸಿದ್ದಾರೆ. ಭಾರತದ ಪರ ಸ್ಟಾರ್ ಪ್ಲೇಯರ್ ಆಗಿದ್ದ ಧವನ್ ಸಾಲು ಸಾಲು ದಾಖಲೆಗಳನ್ನ ಬರೆದಿದ್ದಾರೆ.

ದಾಖಲೆಗಳ ಸರದಾರ ಗಬ್ಬರ್! 

ಐಸಿಸಿ ಏಕದಿನ ಟೂರ್ನಿಯಲ್ಲಿ ಅತೀ ವೇಗವಾಗಿ 1,000 ರನ್ ಕಲೆಹಾಕಿದ ವಿಶ್ವ ದಾಖಲೆ ಶಿಖರ್ ಧವನ್ ಹೆಸರಿನಲ್ಲಿದೆ. ಧವನ್ ಕೇವಲ 16 ಇನಿಂಗ್ಸ್​ಗಳ ಮೂಲಕ ಈ ಸಾಧನೆ ಮಾಡಿದ್ದಾರೆ. ಹಾಗೇ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ವಿಶೇಷ ದಾಖಲೆ ಕೂಡ ಶಿಖರ್ ಧವನ್ ಹೆಸರಿನಲ್ಲಿದೆ. 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 187 ರನ್ ಸಿಡಿಸಿ ಎಡಗೈ ದಾಂಡಿಗ ಈ ದಾಖಲೆ ಬರೆದಿದ್ದಾರೆ. ಇನ್ನು 100ನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆ ಕೂಡ ಶಿಖರ್ ಧವನ್ ಹೆಸರಿನಲ್ಲಿದೆ. ಗಬ್ಬರ್ ಸಿಂಗ್ ಖ್ಯಾತಿಯ ಧವನ್ 2018 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಕಣಕ್ಕಿಳಿದು ಭರ್ಜರಿ ಸೆಂಚುರಿ ಸಿಡಿಸಿ ಈ ಸಾಧನೆ ಮಾಡಿದ್ದಾರೆ.  ಅಷ್ಟೇ ಅಲ್ಲದೆ ಅಂಡರ್​-19 ವಿಶ್ವಕಪ್​ನಲ್ಲಿ 505 ರನ್​ ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಧವನ್ ಪಾತ್ರರಾಗಿದ್ದರು. 2004 ರ ಕಿರಿಯರ ವಿಶ್ವಕಪ್​ನಲ್ಲಿ 7 ಇನಿಂಗ್ಸ್​ಗಳಿಂದ 505 ರನ್ ಸಿಡಿಸಿ ಈ ದಾಖಲೆ ಬರೆದಿದ್ದಾರೆ. ಹಾಗೇ ಐಸಿಸಿ ಏಕದಿನ ಟೂರ್ನಿಯಲ್ಲಿ 65ರ ಸರಾಸರಿಯಲ್ಲಿ ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಎಂಬ ವಿಶ್ವ ದಾಖಲೆ ಕೂಡ ಶಿಖರ್ ಧವನ್ ಹೆಸರಿನಲ್ಲಿದೆ. ಧವನ್ 16 ಇನಿಂಗ್ಸ್​ಗಳ ಮೂಲಕ ಈ ಸಾಧನೆ ಮಾಡಿದ್ದಾರೆ.

ಇನ್ನು ಭಾರತ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಕೂಡ ಶಿಖರ್ ಧವನ್. ಚಾಂಪಿಯನ್ಸ್​ ಟ್ರೋಫಿ ಇತಿಹಾಸದಲ್ಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವಾಗಿತ್ತು.  ಹಾಗೇ ಶಿಖರ್ ಧವನ್​ರನ್ನ ಮಿಸ್ಟರ್ ಐಸಿಸಿ ಎಂದೂ ಕರೆಯಲಾಗುತ್ತೆ. ಅದಕ್ಕೆ ಕಾರಣ ಈ ನಂಬರ್ಸ್.

ಮಿಸ್ಟರ್ ಐಸಿಸಿ ಧವನ್! 

2013ರಲ್ಲಿ ನಡೆದ ICC ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಹೆಚ್ಚಿನ ರನ್ ​ಗಳ ಕಾಣಿಕೆ ನೀಡಿದ್ದೇ ಧವನ್. 5 ಪಂದ್ಯಗಳಿಂದ 363 ರನ್ಸ್ ಕಲೆ ಹಾಕಿದ್ರು. ದಕ್ಷಿಣ ಆಫ್ರಿಕಾ ವಿರುದ್ಧ 94 ಎಸೆತಗಳಲ್ಲಿ 114 ರನ್, ವೆಸ್ಟ್ ಇಂಡೀಸ್ ವಿರುದ್ಧ 107 ಎಸೆತಗಳಲ್ಲಿ ಔಟಾಗದೇ 102 ರನ್​​, ಪಾಕಿಸ್ತಾನ ವಿರುದ್ಧ 41 ಎಸೆತಗಳಲ್ಲಿ 48 ರನ್ 68 ರನ್, ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ 31 ರನ್ ಬಾರಿಸಿದ್ದರು. ಹಾಗೇ 2015ರಲ್ಲಿ ICC ODI ವರ್ಲ್ಡ್ ಕಪ್​ನಲ್ಲಿ ಭಾರತಕ್ಕಾಗಿ 412 ರನ್ ಬಾರಿಸುವ ಮೂಲಕ ಹೆಚ್ಚಿನ ರನ್​ಗಳ ಕಾಣಿಕೆ ನೀಡಿದ್ರು. 2017ರಲ್ಲಿ ICC ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕಾಗಿ 338 ರನ್ ಚಚ್ಚಿದ್ರು. ಏಷ್ಯಾ ಕಪ್ 2018ರಲ್ಲಿ ಭಾರತಕ್ಕಾಗಿ 342 ರನ್​ಗಳ ಕಾಣಿಕೆ ನೀಡಿದ್ರು. ಹೀಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 10,867 ರನ್​ಗಳನ್ನು ಬಾರಿಸಿದ್ದಾರೆ ಶಿಖರ್ ಧವನ್.

ಹೀಗೆ ICC ODI ಪಂದ್ಯಾವಳಿಗಳಲ್ಲಿ ಶಿಖರ್ ಧವನ್ ಅದ್ಭುತ ರೆಕಾರ್ಡ್​ ಹೊಂದಿದ್ದಾರೆ. ವಿವ್ ರಿಚರ್ಡ್ಸ್, ಸೌರವ್ ಗಂಗೂಲಿ, ರೋಹಿತ್ ಶರ್ಮಾ ಮತ್ತು ಸಯೀದ್ ಅನ್ವರ್ ಅವರಂತಹ ದಿಗ್ಗಜರಿಗಿಂತ ಧವನ್ ಮುಂದಿದ್ದಾರೆ. ICC ODI ಪಂದ್ಯಾವಳಿಗಳಲ್ಲಿ ಧವನ್ ಸರಾಸರಿ 65.15 ಆಗಿದೆ.

2008ರಿಂದಲೂ ಐಪಿಎಲ್ ಆಡಿದ್ದ ಶಿಖರ್ ಧವನ್!

ಇನ್ನು ಶಿಖರ್ ಧವನ್ ಅಂತಾರಾಷ್ಟ್ರೀಯ ಮಾತ್ರವಲ್ಲದೆ ದೇಶೀಯ ಟೂರ್ನಿಗಳಲ್ಲೂ ಇನ್ಮುಂದೆ ಕಾಣಿಸಿಕೊಳ್ಳೋದಿಲ್ಲ. ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಧವನ್ 2024ರ ಟೂರ್ನಿಯಲ್ಲಿ ಗಾಯದ ಸಮಸ್ಯೆಯಿಂದ ಬಳಲಿದ್ದರು. ಇದೇ ಕಾರಣಕ್ಕೆ ಫ್ರಾಂಚೈಸಿಯು ತಂಡದಿಂದ ಕೈ ಬಿಡಲಿದೆ ಎಂಬ ಸುದ್ದಿ ಇದೆ. ಒಂದು ವೇಳೆ ಫ್ರಾಂಚೈಸಿ ಕೈ ಬಿಟ್ರೆ ಮೆಗಾ ಹರಾಜಿಗೆ ಬರಬೇಕಾಗುತ್ತೆ. 38 ವರ್ಷದ ಆಟಗಾರನನ್ನು ಯಾವುದೇ ತಂಡ ಖರೀದಿ ಮಾಡದಿದ್ದರೆ ಶಿಖರ್​ಗೆ ಅದೊಂಥರ ಮುಜುಗರವಾದಂತಾಗುತ್ತೆ. ಹೀಗಾಗಿ ಅದಕ್ಕೂ ಮುನ್ನವೇ ಧವನ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಇನ್ನು ಧವನ್ ಸುದೀರ್ಘ ಐಪಿಎಲ್ ವೃತ್ತಿಜೀವನವನ್ನು ಹೊಂದಿದ್ದಾರೆ. 2008 ರಿಂದ 2024 ರವರೆಗೆ ಪ್ರತಿ ಕ್ರೀಡಾಋತುವಿನಲ್ಲೂ ಆಡಿದ್ದಾರೆ. ಡೆಲ್ಲಿ ಡೇರ್​ಡೆವಿಲ್ಸ್ ನೊಂದಿಗೆ ಐಪಿಎಲ್ ಜೀವನ ಪ್ರಾರಂಭಿಸಿದರು. ಬಳಿಕ ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್‌ಗಾಗಿಯೂ ಆಡಿದ್ದರು.

ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗದೆ ನಿವೃತ್ತಿ ಘೋಷಣೆ

ಶಿಖರ್ ಧವನ್ ಕೊನೆಯ ಬಾರಿಗೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದು 2022 ರಲ್ಲಿ. 2022ರ ಬಾಂಗ್ಲಾದೇಶ ಪ್ರವಾಸದ ನಂತರ ಧವನ್ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಕಳೆದ 2 ವರ್ಷಗಳಿಂದ ಟೀಂ ಇಂಡಿಯಾ ಪರ ಕಣಕ್ಕಿಳಿಯರಲು ಅವಕಾಶ ಸಿಕ್ಕಿರಲಿಲ್ಲ. ಭಾರತ ತಂಡದಲ್ಲಿ ಯುವ ಆಟಗಾರ ಶುಭಮನ್ ಗಿಲ್ ಆರಂಭಿಕ ಆಟಗಾರನಾಗಿ ಸ್ಥಾನ ಪಡೆದುಕೊಂಡ ಬಳಿಕ ಧವನ್‌ ಸ್ಥಾನ ಕಳೆದುಕೊಂಡಿದ್ದರು.  ಆದ್ರೆ ತಂಡದಲ್ಲಿ ಮತ್ತೊಮ್ಮೆ ಚಾನ್ಸ್ ಸಿಕ್ಕೇ ಸಿಗುತ್ತೆ ಅನ್ನೋ ದೃಢ ವಿಶ್ವಾಸದಲ್ಲಿದ್ರು. ಆದರೆ ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ಯಂಗ್​ಸ್ಟರ್ಸ್ ದಂಡೇ ಇದ್ದು ಧವನ್​ರನ್ನ ಆಯ್ಕೆಗೆ ಪರಿಗಣಿಸಲಾಗಿಲ್ಲ. ಅದರಲ್ಲೂ ದುಲೀಪ್ ಟ್ರೋಫಿಗೆ ಆಯ್ಕೆ ಮಾಡಲಾದ ನಾಲ್ಕು ತಂಡಗಳಲ್ಲೂ ಅವರ ಹೆಸರು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ನಿವೃತ್ತಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಒಟ್ನಲ್ಲಿ ಟೀಂ ಇಂಡಿಯಾ ಅನುಭವಿ ಆರಂಭಿಕ ಬ್ಯಾಟರ್, ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಕ್ರಿಕೆಟ್ ವೃತ್ತಿಬದುಕಿಗೆ ವಿದಾಯ ಘೋಷಿಸಿದ್ದಾರೆ. ಎಡಗೈ ಆರಂಭಿಕ ಬ್ಯಾಟರ್ ಆಗಿರುವ ಡೆಲ್ಲಿ ಮೂಲದ ಅಗ್ರಶ್ರೇಯಾಂಕಿತ ಬ್ಯಾಟರ್, ಟೀಂ ಇಂಡಿಯಾಗೆ ಹಲವಾರು ಬಾರಿ ಏಕಾಂಗಿಯಾಗಿ ಗೆಲುವು ತಂದುಕೊಟ್ಟಿದ್ದಾರೆ.  ಇಂಥಹ ಕ್ರಿಕೆಟರ್ ಭಾರತದ ಪರ ಇಷ್ಟು ವರ್ಷ ಆಡಿದ್ರಲ್ಲ ಅನ್ನೋದೇ ನಮ್ಮ ಹೆಮ್ಮೆ.

Shwetha M

Leave a Reply

Your email address will not be published. Required fields are marked *