ಬೆಳ್ಳಿ ತೆರೆ ಮೇಲೆ ಯುವಿ ಬಯೋಪಿಕ್ – ಯುವರಾಜ್ ಪಾತ್ರದಲ್ಲಿ ಸ್ಟಾರ್ ನಟ!
ಮೂವರಲ್ಲಿ ಯಾರಿಗೆ ಗೋಲ್ಡನ್ ಚಾನ್ಸ್?
ಯುವರಾಜ್ ಸಿಂಗ್.. ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್.. 2011 ರ ವಿಶ್ವಕಪ್ ಹೀರೋ.. ಸಿಕ್ಸರ್‌ಗಳ ಸರದಾರ.. ಇಂದಿಗೂ ಅದೆಷ್ಟೋ ಮಂದಿ ಫ್ಯಾನ್ಸ್ ಯುವಿಗೆ ಇದ್ದಾರೆ.. ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಆಟಗಾರ ಅಂದ್ರೆ ತಪ್ಪಾಗಲ್ಲ.. ಯುವಿ ಈಗಾಗಲ್ಲೇ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಆಗಿದೆ.. ಇದೀಗ ಮತ್ತೆ ಯುವರಾಜ್ ಸಿಂಗ್ ಸೌಂಡ್ ಜೋರಾಗಿದೆ. ಅದೇನಂದರೆ ಯುವಿ ಬಯೋಪಿಕ್.. ಹೌದು.. ಯುವರಾಜ್ ಸಿಂಗ್ ಲೈಫ್ ಸ್ಟೋರಿ ಸಿನಿಮಾ ಆಗಲಿದೆ.. ಬಯೋಪಿಕ್ ನಲ್ಲಿ ಯುವಿ ಪಾತ್ರದಲ್ಲಿ ನಟಿಸಲು ಮೂವರು ಸ್ಟಾರ್ ನಟರ ಹೆಸರು ಕೇಳಿಬಂದಿದೆ.. ಅಷ್ಟಕ್ಕೂ ಆ ಮೂವರು ಸ್ಟಾರ್ ನಟರು ಯಾರು? ಯಾವಾಗ ತೆರೆಗೆ ಬರಲಿದೆ? ಇವೆಲ್ಲದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಧೋನಿ ಇದ್ದಿದ್ರೆ RCBಗೆ 3 ಕಪ್! – ಪಾಕ್ ಮಾಜಿ ಆಟಗಾರ ಹೀಗಂದಿದ್ಯಾಕೆ?
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಪಟ್ಟಿಯನ್ನು ಒಮ್ಮೆ ನೋಡಿದರೆ, ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಯುವರಾಜ್ ಸಿಂಗ್.. ಇವರ ಆಟದ ಧಾಟಿಯೇ ಅಂತಹದ್ದು.. ಇವರ ಆಟವನ್ನ ಒಮ್ಮೆ ನೋಡಿದರೆ ಪದೆ ಪದೇ ನೋಡಬೇಕೆಂದು ಅಂತಾ ಅನ್ನಿಸುತ್ತೆ.. ಯಾವುದೇ ಚಿತ್ರದ ಹೀರೋಗೂ ಕಮ್ಮಿ ಏನು ಇರಲ್ಲ ಯುವರಾಜ್ ಸಿಂಗ್ ಖ್ಯಾತಿ. ಕ್ರಿಕೆಟ್ ಲೋಕದಲ್ಲಿ ಮಿಂಚಿದ್ದ ಈ ಹೀರೋ ಕೆಲ ವರ್ಷಗಳ ಹಿಂದೆ ಕ್ಯಾನ್ಸರ್ ವಿರುದ್ಧ ಕೂಡ ಹೋರಾಡಿ ಗೆದ್ದಿದ್ರು.. ಮಹಾ ಮಾರಿಯನ್ನ ಮೆಟ್ಟಿ ನಿಂತು ಮತ್ತೆ ಮೈದಾನದತ್ತ ಗ್ರೇಟ್ ಕಮ್‌ಬ್ಯಾಕ್ ಮಾಡಿದ್ರು.. ಭಾರತ 2007ರಲ್ಲಿ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್‌ನಲ್ಲಿ ಯುವರಾಜ್ ಸಾಧನೆ ಅಮೋಘ.. ಇವರ ಆಟಕ್ಕೆ ಮನಸೋತೆ ಅಭಿಮಾನಿಗಳು ಇವರಿಗೆ ಸಿಕ್ಸರ್ ಸಿಂಗ್ ಎಂದೇ ಕರೆಯುತ್ತಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗುತ್ತಿದ್ದ ಯುವಿ, ವಿಶ್ವದ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಒಬ್ಬರು. ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರ ಜೀವನ ಗಾತೆ ತೆರೆ ಮೇಲೆ ಬರುತ್ತಿದೆ.
ಹೌದು, ಯುವರಾಜ್ ಸಿಂಗ್ ಜೀವನಾಧಾರಿತ ಸಿನಿಮಾವೊಂದು ನಿರ್ಮಾಣವಾಗಲಿದೆ. ಭೂಷಣ್ ಕುಮಾರ್ ಮತ್ತು ರವಿ ಭಾಗಚಂದಾಕ್ ಯುವಿಯ ಜೀವನಾಧಾರಿತ ಚಿತ್ರವನ್ನು ನಿರ್ಮಿಸಲಿದ್ದಾರೆ. ಈ ಬಗ್ಗೆ ಚಿತ್ರ ವಿಮರ್ಷಕ ತರಣ್ ಆದರ್ಶ್ ಪೋಸ್ಟ್ ಸಹ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಯಾವ ಹೀರೋ ಯುವಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಬಹುದು ಅಂತಾ ಚರ್ಚೆ ಕೂಡ ಜೋರಾಗಿ ನಡಿತಾ ಇದೆ. ಯುವರಾಜ್ ಸಿಂಗ್ ಅವರ ಜೀವನಾಧಾರಿತ ಚಿತ್ರ ತಯಾರಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪೂರ್ವ ತಯಾರಿ ಬೆನ್ನಲ್ಲೇ ಯುವಿ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬ ಪ್ರಶ್ನೆಗಳು ಅನೇಕರನ್ನ ಕಾಡುತ್ತಿದೆ. ಯುವಿ ಪಾತ್ರಕ್ಕೆ ಈ ಮೂವರು ಸ್ಟಾರ್ ನಟರೇ ಬೆಸ್ಟ್ ಅನ್ನೋ ಮಾತು ಕೂಡ ಕೇಳಿ ಬರ್ತಾ ಇದೆ. ಈ ಹಿಂದೆ ಧೋನಿ ಅವರ ಬಯೋಪಿಕ್‌ನಲ್ಲಿ ದಿವಗಂತ ನಟ ಸುಶಾಂತ್ ಸಿಂಗ್ ರಜ್‌ಪುತ್ ನಟಿಸಿ, ‘ಕ್ಯಾಪ್ಟನ್ ಕೂಲ್’ರಂತೆ ತೆರೆಮೇಲೆ ಕಾಣಿಸಿಕೊಂಡಿದ್ದರು. ಬೆಳ್ಳಿ ಪರದೆಯ ಮೇಲೆ ಮಾಹಿಯಂತೆಯೇ ನಟಿಸಿದ ಸುಶಾಂತ್ ನಟನೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದರು. ಇದೀಗ ಯುವರಾಜ್ ಪಾತ್ರಕ್ಕೂ ಅದೇ ರೀತಿಯ ತಯಾರಿಗಳು ಭರದಿಂದ ಸಾಗಿವೆ.
ಯುವರಾಜ್ ಸಿಂಗ್ ಬಯೋಪಿಕ್ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಭಾರೀ ಕುತೂಹಲ ವ್ಯಕ್ತಪಡಿಸಿರುವ ಅಭಿಮಾನಿಗಳ ಪೈಕಿ ಕೆಲವರು ಯುವರಾಜ್‌ರಂತೆ ಕಾಣಿಸುವ ನಟನನ್ನು ಆಯ್ಕೆ ಮಾಡಿ ಎಂದರೆ, ಇನ್ನೂ ಕೆಲವರು ಯುವಿ ಎಡಗೈ ಬ್ಯಾಟಿಂಗ್ ಹಾಗೂ ಬೌಲಿಂಗ್ ಶೈಲಿ ಪರೀಕ್ಷಿಸಿ ತೆಗೆದುಕೊಳ್ಳಿ. ನೀವು ಆಯ್ಕೆ ಮಾಡುವ ಹೀರೋಗೆ ಈ ಎಲ್ಲಾ ಕ್ವಾಲಿಟಿಗಳು ಇರಲಿ ಎಂದು ಪ್ರತ್ಯೇಕವಾಗಿ ಒತ್ತಿ ಹೇಳಿದ್ದಾರೆ. ಯುವಿ ಪಾತ್ರಕ್ಕೆ ನಟ ರಣಬೀರ್ ಕಪೂರ್, ಸಿದ್ದಾಂತ್ ಚತುರ್ವೇದಿ ಮತ್ತು ಆಯುಷ್ಮಾನ್ ಖುರಾನ ಈ ಮೂವರ ಹೆಸರು ಸದ್ಯ ಮುಂಚೂಣಿಯಲ್ಲಿದೆ. ಈ ಮೂವರ ಪೈಕಿ ಯಾರನ್ನು ಯುವಿ ಪಾತ್ರದಲ್ಲಿ ತೋರಿಸಬೇಕು ಎಂಬುದೇ ಚಿತ್ರತಂಡಕ್ಕೆ ದೊಡ್ಡ ಸವಾಲಾಗಿದೆ. ಅಸಲಿಗೆ ಚತುರ್ವೇದಿ ಅವರ ಮುಖ ಯುವರಾಜ್‌ರನ್ನು ಹೋಲುತ್ತದೆ ಎಂಬ ಕಾರಣಕ್ಕೆ ಅವರನ್ನೇ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಮೂಲಗಳು ತಿಳಿಸಿವೆ. ಆದ್ರೆ, ಈ ಕುರಿತು ಚಿತ್ರತಂಡದ ನಿಲುವೇನು? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಇನ್ನು ಬಯೋಪಿಕ್ ಕುರಿತು ಯುವರಾಜ್ ಸಿಂಗ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಜೀವನ ಚರಿತ್ರೆ ನಿರ್ಮಿಸುವುದರಿಂದ ಲಕ್ಷಾಂತರ ಜನರಿಗೆ ಸ್ಪೂರ್ತಿ ಸಿಗಲಿದೆ ಎಂದಿದ್ದಾರೆ. ನನ್ನ ಬಯೋಪಿಕ್ ಬೆಳ್ಳಿ ತೆರೆಯ ಮೇಲೆ ಬರುತ್ತದೆ ಎಂದರೆ ಅದು ನನಗೆ ಗೌರವದ ಸಂಗತಿ. ಕ್ರಿಕೆಟ್ ನನ್ನ ಮೊದಲ ಪ್ರೀತಿ. ಇದೇ ಅಂಗಳದಲ್ಲಿ ನಾನು ಸಾಧಿಸಿದ ಏರಿಳಿತಗಳನ್ನು ತೆರೆಯ ಮೇಲೆ ನೋಡಲು ಕಾತುರನಾಗಿದ್ದೇನೆ. ಈ ಚಿತ್ರವು ಹಲವು ಜನರಿಗೆ ಸವಾಲುಗಳನ್ನು ಮೆಟ್ಟಿನಿಲ್ಲಲು ಸಹಾಯಕವಾಗುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಇನ್ನು ಕ್ರಿಕೆಟ್ ಲೋಕದ ಸಾಧನೆ ನೋಡೋದಾದ್ರೆ. 17 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯುವಿ ಆಟವಾಡಿದ್ರು. ಇವರು 40 ಟೆಸ್ಟ್ ಪಂದ್ಯಗಳಲ್ಲಿ 1900 ರನ್, 304 ಏಕದಿನ ಪಂದ್ಯಗಳಲ್ಲಿ 8701 ರನ್‌ಮ 58 ಟಿ20 ಪಂದ್ಯಗಳಲ್ಲಿ 1177 ರನ್ ಸಿಡಿಸಿದ್ದಾರೆ. 2007 ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್ ಅವರಿಗೆ ಒಂದೇ ಒವರ್‌ನಲ್ಲಿ 6 ಸಿಕ್ಸರ್ ಬಾರಿಸಿದ್ದರು. ಇದಾದ ನಂತ್ರ, ಅಂದ್ರೆ 2011ರ ಬಳಿಕ ಯುವರಾಜ್ ಸಿಂಗ್ ಅವರ ವೃತ್ತಿಬದುಕು ಹಳಿ ತಪ್ಪಿತ್ತು. ಟೂರ್ನಿ ಬಳಿಕವೇ ನಡೆಸಲಾದ ತಪಾಸಣೆಯಲ್ಲಿ ಯುವರಾಜ್ ಸಿಂಗ್ ಕ್ಯಾನ್ಸರ್‌ನಿಂದ ಬಳಲಿರುವುದು ಬೆಳಕಿಗೆ ಬಂದಿತು. ಕ್ಯಾನ್ಸರ್ ಖಾಯಿಲೆ ನಡುವೆಯೇ 2011ರ ಸಾಲಿನ ಒಡಿಐ ವಿಶ್ವಕಪ್ ಆಡಿ, ಆ ಟೂರ್ನಿಯಲ್ಲಿ 15 ವಿಕೆಟ್ ಪಡೆದು 362 ರನ್‌ಗಳನ್ನೂ ಬಾರಿಸುವ ಮೂಲಕ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟು, ಟೂರ್ನಿ ಶ್ರೇಷ್ಠ ಆಟಗಾರ ಎನಿಸಿದ್ದರು. ಟೂರ್ನಿ ಬಳಿಕ ಕ್ಯಾನ್ಸರ್‌ಗೆ ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದ ನಂತರ ಕ್ರಿಕೆಟ್ ಬದುಕಿಗೆ ಹಿಂದಿರುಗಿದ ಯುವಿ ತಮ್ಮ ಶ್ರೇಷ್ಠ ಲಯ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. 2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಿದ ಬಳಿಕ ಭಾರತ ತಂಡದಲ್ಲೂ ಸ್ಥಾನ ಕಳೆದುಕೊಂಡ ಆಲ್‌ರೌಂಡರ್ 2019ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದರು.
ಹೀಗೆ ಜೀನದಲ್ಲಿ ಏಳು ಬೀಳುಗಳನ್ನ ಕಂಡ ಯುವಿಯ ಕತೆ ತೆರೆ ಮೇಲೆ ಬರಲು ಸಿದ್ಧವಾಗಿದೆ. ಯುವಿಯ ಜೀವನದ ಕತೆಯನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕೂಡ ಉತ್ಸುಕರಾಗಿದ್ದಾರೆ.