ಟ್ರೋಲ್ ರಾಜ ಪ್ರದೀಪ್ ಈಶ್ವರ್ ನಾಪತ್ತೆ – ‘ಕೈ’ ಪ್ರತಿಭಟನೆಗಳಿಂದ ದೂರ ಉಳಿದಿದ್ದೇಕೆ?
ರಾಗಾ, ಸಿದ್ದುಗೂ ಶಾಸಕ ಡೋಂಟ್​ಕೇರ್

ಟ್ರೋಲ್ ರಾಜ ಪ್ರದೀಪ್ ಈಶ್ವರ್ ನಾಪತ್ತೆ – ‘ಕೈ’ ಪ್ರತಿಭಟನೆಗಳಿಂದ ದೂರ ಉಳಿದಿದ್ದೇಕೆ?ರಾಗಾ, ಸಿದ್ದುಗೂ ಶಾಸಕ ಡೋಂಟ್​ಕೇರ್

ರಾಜ್ಯ ರಾಜಕೀಯದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿದೆ. ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಮೇಲಂತೂ ಆಡಳಿತ ಮತ್ತು ವಿಪಕ್ಷ ನಾಯಕರ ವಾಗ್ಯುದ್ಧಕ್ಕೆ ಕಾರಣವಾಗಿದೆ. ಕಾರ್ಯಕರ್ತರಿಂದ ಹಿಡಿದು ಹೈಕಮಾಂಡ್​ವರೆಗೂ ಕಾಂಗ್ರೆಸ್ ಪಟಾಲಂ ಸಿದ್ದು ಬೆನ್ನಿಗೆ ನಿಂತಿದೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿದ್ದಾರೆ ಅಂತಾ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸ್ತಿದ್ರೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ಬೇಕು ಅಂತಾ ವಿಪಕ್ಷನಾಯಕರು ಹೋರಾಟ ಮಾಡ್ತಿದ್ದಾರೆ. ಆದ್ರೆ ಈ ಹೋರಾಟಗಳ ನಡುವೆ ಚಿಕ್ಕಬಳ್ಳಾಪುರ ಕಾಂಗ್ರೆಸ್​​ನಲ್ಲಿ ಮಾತ್ರ ಯಾವುದೂ ಸರಿ ಇಲ್ವಾ ಅನ್ನೋ ವಿಚಾರ ಸದ್ದು ಮಾಡ್ತಿದೆ. ಅದೇನಂದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಯಾವುದೇ ಪ್ರತಿಭಟನೆಗಳಲ್ಲಿಯೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಪಾಲ್ಗೊಂಡಿಲ್ಲ. ಇದು ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಕೋಲಾಹಲ ಎಬ್ಬಿಸಿದೆ. ಕ್ಷೇತ್ರದ ಕಾರ್ಯಕರ್ತರಲ್ಲಿ ಮತ್ತು ಮುಖಂಡರಲ್ಲಿ ಬೇಸರ, ಅಸಮಾಧಾನ ಮತ್ತು ಆಕ್ರೋಶಕ್ಕೂ ಕಾರಣವಾಗಿದೆ. ಹಾಗಂತ ಪ್ರದೀಪ್ ಈಶ್ವರ್ ಒಂದೆರಡು ಪ್ರತಿಭಟನೆಗಳಿಗೆ ಮಾತ್ರ ಗೈರಾಗಿಲ್ಲ. ಈ ಬಗ್ಗೆ ಒಂದು ದೊಡ್ಡ ಪಟ್ಟಿಯೇ ಇದೆ ನೋಡಿ.

ಇದನ್ನೂ ಓದಿ: ಪಿಕೆಗೆ ಜಡ್ಜಸ್ ಕಮೆಂಟ್ ಕೊಡಲ್ಲ ಯಾಕೆ? – ಇವರೇನಾ ರಾಜಾ ರಾಣಿ ವಿನ್ನರ್?

ಪ್ರದೀಪ್ ಈಶ್ವರ್ ನಾಪತ್ತೆ!

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರೋದನ್ನ ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸ್ತಿದ್ದಾರೆ. ರಾಜ್ಯಪಾಲ ಗೆಹ್ಲೋಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಗಸ್ಟ್ 19ರಂದು ನಡೆದ ಪ್ರತಿಭಟನೆಯಲ್ಲಿ ಶಾಸಕರು ಭಾಗಿಯಾಗಿಲ್ಲ. ಹಾಗೇ ಆಗಸ್ಟ್ 5ರಂದು ಬಿಜೆಪಿ ಮತ್ತು ಜೆಡಿಎಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಮುಡಾ ನೆಪದಲ್ಲಿ ತೇಜೋವಧೆಗೆ ಯತ್ನಿಸುತ್ತಿವೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಹಿಂದುಳಿದ ಜಾತಿಗಳ ಒಕ್ಕೂಟದ ಸದಸ್ಯರು ಆಗಸ್ಟ್ 5ರಂದು ಚಿಕ್ಕಬಳ್ಳಾಪುರದಲ್ಲಿ ಧರಣಿ ನಡೆಸಿದ್ರು. ಇಲ್ಲಿಯೂ ಪ್ರದೀಪ್ ಈಶ್ವರ್ ಪತ್ತೆ ಇರಲಿಲ್ಲ. ಇದಕ್ಕಿಂತಲೂ ಹಿಂದೆ ನಡೆದಿರೋ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಒಂದೇ ಒಂದು ಪ್ರತಿಭಟನೆಯಲ್ಲಿಯೂ ಶಾಸಕರು ಭಾಗಿಯಾಗಿಲ್ಲ. ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಕೇಂದ್ರದಲ್ಲಿ ಕರೆ ನೀಡಿದ್ದ ಪ್ರತಿಭಟನೆಗಳಲ್ಲಿ ಚಿಂತಾಮಣಿ ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಗೌರಿಬಿದನೂರು ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ, ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಭಾಗಿಯಾದ್ರೂ ಚಿಕ್ಕಬಳ್ಳಾಪುರ ಶಾಸಕರ ಸುಳಿವಿಲ್ಲ. 2024ರ ಜುಲೈ 27ರಂದು ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರಾಜ್ಯವನ್ನು ಕಡೆಗಣಿಸಲಾಗಿದೆ. ರಾಜ್ಯಕ್ಕೆ ಯಾವುದೇ ಯೋಜನೆಗಳು ಜಾರಿಯಾಗಿಲ್ಲ. ಅನುದಾನ ನೀಡಿಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ್ದ ಱಲಿಯಲ್ಲೂ ಪ್ರದೀಪ್ ಈಶ್ವರ್ ಭಾಗಿಯಾಗಿರಲಿಲ್ಲ. ಹಾಗೇ ಕಳೆದ ಜನವರಿ 23ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹಮ್ಮಿಕೊಂಡಿದ್ದ ಭಾರತ್ ಜೋಡೊ ನ್ಯಾಯ ಯಾತ್ರೆ ಅಸ್ಸಾಂನಲ್ಲಿ ಸಾಗುತ್ತಿದ್ದಾಗ ರಾಹುಲ್ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾ ಸಮಿತಿ ಚಿಕ್ಕಬಳ್ಳಾಪುರದಲ್ಲಿ ನಡೆಸಿದ ಪ್ರತಿಭಟನೆಗೂ ಹೋಗಿರಲಿಲ್ಲ.  2023ರ ಡಿಸೆಂಬರ್ 22ರಂದು ಸಂಸತ್ ಅಧಿವೇಶನದ ವೇಳೆ 142 ಸಂಸತ್ ಸದಸ್ಯರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ನಡೆದ ಪ್ರೊಟೆಸ್ಟ್​ನಲ್ಲೂ ಕಾಣಿಸಿಕೊಂಡಿಲ್ಲ. ಹೀಗೆ ಎಲ್ಲ ಪ್ರತಿಭಟನೆಗಳಿಂದಲೂ ಪ್ರದೀಪ್ ಈಶ್ವರ್ ದೂರವೇ ಇದ್ದಾರೆ. ತಮ್ಮ ಪಕ್ಷದ ಅಗ್ರನಾಯಕರಾದ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಚಿಕ್ಕಬಳ್ಳಾಪುರದಲ್ಲಿ ನಡೆಸಿದ ಪ್ರತಿಭಟನೆಗಳಿಂದಲೂ ಶಾಸಕರು ದೂರ ಉಳಿದಿರೋದು ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್​ನಿಂದ ನಡೆಯೋ ಯಾವುದೇ ಪ್ರತಿಭಟನೆಯಲ್ಲೂ ಪ್ರದೀಪ್ ಈಶ್ವರ್ ಭಾಗಿಯಾಗ್ತಿಲ್ಲ. ಹೀಗಾಗಿ ಸ್ಥಳೀಯ ಮುಖಂಡರು ಧರಣಿ ನೇತೃತ್ವಕ್ಕಾಗಿ ಸಚಿವ ಡಾ.ಎಂ.ಸಿ.ಸುಧಾಕರ್ ಮೊರೆ ಹೋಗ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರತಿಭಟನೆಗಳಲ್ಲಿ ಪ್ರದೀಪ್ ಈಶ್ವರ್ ಏಕೆ ಭಾಗಿಯಾಗ್ತಿಲ್ಲ ಅನ್ನೋ ಬಗ್ಗೆ ಮುಖಂಡರಿಗೂ ಸ್ಪಷ್ಟತೆ ಇಲ್ಲ. ಒಟ್ನಲ್ಲಿ ವಿಪಕ್ಷನಾಯಕರ ಬಗ್ಗೆ ಉದ್ದುದ್ದ ಡೈಲಾಗ್ ಬಿಡೋ ಶಾಸಕರು ತಮ್ಮದೇ ಪಕ್ಷದ ಪ್ರತಿಭಟನೆಗಳಿಂದ ದೂರ ಉಳಿಯುತ್ತಿರೋ ನಾನಾ ಚರ್ಚೆಗಳನ್ನ ಹುಟ್ಟು ಹಾಕಿದೆ.

Shwetha M

Leave a Reply

Your email address will not be published. Required fields are marked *