IPLನಲ್ಲಿ ಧೋನಿಗೆ ₹8 ಕೋಟಿ ಲಾಸ್ – Uncapped ರೂಲ್ಸ್ ಒಪ್ಪಿಕೊಂಡ್ರಾ ಮಹಿ?
CSK ಸ್ಟಾರ್ ₹4 ಕೋಟಿಗೆ ಆಡ್ತಾರಾ?

IPLನಲ್ಲಿ ಧೋನಿಗೆ ₹8 ಕೋಟಿ ಲಾಸ್ – Uncapped ರೂಲ್ಸ್ ಒಪ್ಪಿಕೊಂಡ್ರಾ ಮಹಿ?CSK ಸ್ಟಾರ್ ₹4 ಕೋಟಿಗೆ ಆಡ್ತಾರಾ?

ಕಳೆದ ನಾಲ್ಕೈದು ವರ್ಷಗಳಿಂದ ಐಪಿಎಲ್ ಸೀಸನ್ ಸ್ಟಾರ್ಟ್ ಅಂದ್ರೆ ಸಾಕು ಒಂದು ಪ್ರಶ್ನೆ ದುತ್ತನೆ ಎದ್ದು ಕೂರುತ್ತೆ. ಅದುವೇ ಮಹೇಂದ್ರ ಸಿಂಗ್ ಧೋನಿ ಈ ವರ್ಷ ಐಪಿಎಲ್ ಆಡ್ತಾರಾ ಅನ್ನೋದು. ಟೂರ್ನಿ ಮುಗಿದ್ಮೇಲೂ ಕೂಡ ಇದೇ ಕೊನೇ ಆವೃತ್ತಿ, ಇದೇ ಕೊನೇ ಸೀಸನ್ ಅಂತಾ ಚರ್ಚೆ ಶುರುವಾಗುತ್ತೆ. ಬಟ್ ಈವರೆಗೂ ಧೋನಿ ನಿವೃತ್ತಿ ಘೋಷಿಸಿಲ್ಲ. ಸೋ 2025ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ಧೋನಿ ಆಡ್ತಾರೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ. ಬಟ್ 18ನೇ ಆವೃತ್ತಿಗೆ ಧೋನಿಗೋಸ್ಕರನೇ ಬಿಸಿಸಿಐ ಹೊಸ ರೂಲ್ಸ್ ಜಾರಿಗೆ ತರೋಕೆ ರೆಡಿಯಾಗಿದೆ. ಅದುವೇ ಅನ್ ಕ್ಯಾಪ್ಡ್ ಪ್ಲೇಯರ್. ಬಟ್ ಈ ನಿಯಮದಿಂದ ಧೋನಿ ಸಂಭಾವನೆ ತೀರಾ ಕಡಿಮೆಯಾಗಲಿದೆ. ಹಾಗಾದ್ರೆ ಏನಿದು ಅನ್ ಕ್ಯಾಪ್ಡ್ ಪ್ಲೇಯರ್ ನಿಯಮ? ಸಂಭಾವನೆ ಎಷ್ಟು ಕಡಿಮೆಯಾಗುತ್ತೆ? ಇಷ್ಟು ಮೊತ್ತಕ್ಕೆ ಧೋನಿ ಆಡ್ತಾರಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೀರ್ತಿ ಅಂತ್ಯಸಂಸ್ಕಾರ ಮುಗಿದೇಹೋಯ್ತಾ? – ತನ್ವಿ ರಾವ್ ಗುಡ್ ಬೈ?

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕೆಲ ಸ್ಟಾರ್ ಆಟಗಾರರು ಕೆಲ ಫ್ರಾಂಚೈಸಿಗಳ ಅವಿಭಾಜ್ಯ ಅಂಗದಂತಿದ್ದಾರೆ. ಫಾರ್ ಎಕ್ಸಾಂಪಲ್ ವಿರಾಟ್ ಕೊಹ್ಲಿ ಅಂದ್ರೆ ಆರ್​ಸಿಬಿ, ಆರ್​ಸಿಬಿ ಅಂದ್ರೆ ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್ ಅಂದ್ರೆ ರೋಹಿತ್ ಶರ್ಮಾ, ರೋಹಿತ್ ಶರ್ಮಾ ಅಂದ್ರೆ ಮುಂಬೈ ಇಂಡಿಯನ್ಸ್ ಹಾಗೇ ಮಹೇಂದ್ರ ಸಿಂಗ್ ಧೋನಿ ಅಂದ್ರೆ ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈ ಸೂಪರ್ ಕಿಂಗ್ಸ್ ಅಂದ್ರೆ ಮಹೇಂದ್ರ ಸಿಂಗ್ ಧೋನಿ. ಅದ್ರಲ್ಲೂ ಐಪಿಎಲ್ ಟೂರ್ನಿಯಲ್ಲಿ ಧೋನಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಕ್ರೇಜ್ ಇದೆ. ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ. ಆದ್ರೆ 2024ರ ಐಪಿಎಲ್ ಸೀಸನ್‌ಗೂ ಮುನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿದಿದ್ರು. ಕೇವಲ ವಿಕೆಟ್ ಕೀಪರ್-ಬ್ಯಾಟರ್ ಆಗಿ ಕಣಕ್ಕಿಳಿದಿದ್ದರು. ಇದೀಗ 2025ರ ಐಪಿಎಲ್​ಗೆ ಕೆಲವೇ ತಿಂಗಳಲ್ಲಿ ಮೆಗಾ ಹರಾಜು ನಡೆಯಲಿದ್ದು, ಧೋನಿ ಮತ್ತೆ ಐಪಿಎಲ್ ಆಡುತ್ತಾರಾ? ಅಥವಾ ನಿವೃತ್ತರಾಗುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಬಟ್ ಧೋನಿ ಐಪಿಎಲ್ ಭವಿಷ್ಯ ಎರಡು ಅಂಶಗಳ ಮೇಲೆ ನಿಂತಿದೆ. ಒಂದು ರೀಟೆನ್ಷನ್ ರೂಲ್ಸ್ ಇನ್ನೊಂದು ಅನ್ ಕ್ಯಾಪ್ಡ್ ಆಟಗಾರನ ನಿಯಮ.

ಧೋನಿಗಾಗಿಯೇ ಅನ್ ಕ್ಯಾಪ್ಡ್ ನಿಯಮ ಕೇಳಿದ ಸಿಎಸ್ ಕೆ ಫ್ರಾಂಚೈಸಿ!

ಐಪಿಎಲ್ ಫ್ರಾಂಚೈಸಿ ಮಾಲೀಕರು ಮತ್ತು ಬಿಸಿಸಿಐ ಜೊತೆಗಿನ ಸಭೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿನಾಥ್ ವಿಶ್ವನಾಥನ್ 2008 ರಿಂದ 2021 ರವರೆಗೆ ಇದ್ದ ಅನ್‌ಕ್ಯಾಪ್ಡ್ ನಿಯಮವನ್ನು ಮರಳಿ ತರುವಂತೆ ಬಿಸಿಸಿಐ ಬಳಿ ಬೇಡಿಕೆ ಇಟ್ಟಿದ್ರು. ಇದಕ್ಕೆ ಬಿಸಿಸಿಐ ಕೂಡ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಈ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ನಿವೃತ್ತಿಯನ್ನು ಪೂರ್ಣಗೊಳಿಸಿದ ಆಟಗಾರರನ್ನು ಅನ್‌ಕ್ಯಾಪ್ಡ್ ಎಂದು ಪರಿಗಣಿಸಲಾಗುತ್ತದೆ. ಆದರೆ ಧೋನಿ ಅನ್‌ಕ್ಯಾಪ್ಡ್ ಆಟಗಾರನಾಗಿ ಆಡಿದರೆ ವೇತನದಲ್ಲಿ ದೊಡ್ಡ ಪ್ರಮಾಣದಲ್ಲಿ ಕಡಿತ ಮಾಡಲಾಗುತ್ತೆ.

ಅನ್ ಕ್ಯಾಪ್ಡ್ ಆಟಗಾರನಾದ್ರೆ ₹4 ಕೋಟಿಯಷ್ಟೇ ವೇತನ!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ಆಟಗಾರರಲ್ಲಿ ಧೋನಿ ಕೂಡ ಒಬ್ಬರು. ಆದರೆ ಮುಂಬರುವ ಸೀಸನ್​ನಲ್ಲಿ ಅವರು ಅನ್‌ಕ್ಯಾಪ್ಡ್ ಆಟಗಾರನಾಗಿ ಆಡಿದರೆ ಆದಾಯ ತೀವ್ರವಾಗಿ ಕಡಿಮೆಯಾಗುತ್ತದೆ. ಪ್ರಸ್ತುತ ಐಪಿಎಲ್ ರಿಟೆನ್ಷನ್​ ನಿಯಮಗಳ ಪ್ರಕಾರ ಅನ್ ಕ್ಯಾಪ್ಡ್ ಆಟಗಾರರನ್ನು 4 ಕೋಟಿ ರೂಪಾಯಿಗೆ ಉಳಿಸಿಕೊಳ್ಳಬಹುದು. ಅದಕ್ಕಿಂತ ಹೆಚ್ಚು ಹಣ ಕೊಡುವಂತಿಲ್ಲ. ಪ್ರಸ್ತುತ ಧೋನಿ ತನ್ನ ಕೊನೆಯ ಒಪ್ಪಂದದಲ್ಲಿ CSK ನಲ್ಲಿ ಒಂದು ವರ್ಷಕ್ಕೆ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಆದ್ರೆ ಅನ್ ಕ್ಯಾಪ್ಡ್ ಆಟಗಾರನಾಗಿ ಕಣಕ್ಕಿಳಿದ್ರೆ ಅವರ ವೇತನದಲ್ಲಿ 66.67 ಪರ್ಸೆಂಟ್ ಕಡಿತವಾಗುಲಿದ್ದು, 8 ಕೋಟಿ ರೂಪಾಯಿ ನಷ್ಟವಾಗುತ್ತದೆ. ಅಂದರೆ 2022ರ ಐಪಿಎಲ್ ಸೀಸನ್ ನಿಂದ 12 ಕೋಟಿ ಗಳಿಸುತ್ತಿರುವ ಧೋನಿ ಅನ್ ಕ್ಯಾಪ್ಡ್ ಆಟಗಾರನಾಗಿ ಮುಂದುವರಿದರೆ ಕೇವಲ 4 ಕೋಟಿಗೆ ಸೀಮಿತವಾಗಲಿದ್ದಾರೆ.

CSK ತಂಡದ ಬ್ಯಾಕ್ ಬೋನ್ ಮಹೇಂದ್ರ ಸಿಂಗ್ ಧೋನಿ

ಸಿಎಸ್​ಕೆ ಫ್ರಾಂಚೈಸಿ ಐಪಿಎಲ್​ನಲ್ಲಿ ಅಷ್ಟೊಂದು ಪಾಪುಲರ್ ಆಗಿದೆ ಅಂದ್ರೆ ಅದಕ್ಕೆ ಕಾರಣ ಮಾಹಿಯೇ. ಅವ್ರ ಸ್ಟೈಲ್, ಸ್ಮೈಲ್, ಫ್ರೆಂಡ್ಲಿ ನೇಚರ್​ಗೆ ಕೋಟಿ ಕೋಟಿ ಫ್ಯಾನ್ಸ್ ಇದ್ದಾರೆ. ಇಡೀ ತಂಡವನ್ನ ಒಬ್ಬ ಯಜಮಾನನಂತೆ ಲೀಡ್ ಮಾಡೋ ಮಾಹಿ ಕಳೆದ ಬಾರಿ ಕ್ಯಾಪ್ಟನ್ಸಿಯಿಂದ ಕೆಳಗಿಳಿದಿದ್ರು. ಬಟ್ ರುತುರಾಜ್ ಗಾಯಕ್ವಾಡ್ಗೆ  ಪಟ್ಟ ಕಟ್ಟಿದ್ರೂ ಕೂಡ ಟೀಂ ಮುಂದಾಳತ್ವ ಮಾಡ್ತಿದ್ದದ್ದು ಧೋನಿಯೇ. ಶ್ರೇಷ್ಠ ನಾಯಕ ಹಾಗೂ ವಿಕೆಟ್ ಕೀಪರ್ ಆಗಿರುವ ಎಂಎಸ್ ಧೋನಿ, 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ರು. 42 ವರ್ಷದ ಮಾಹಿ ಪ್ರತಿ ಆವೃತ್ತಿಯಲ್ಲಿಯೂ ನಾಯಕನಾಗಿ ತಂಡವನ್ನು ಮುನ್ನಡೆಸಿದ್ರು. 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಹಿನ್ನೆಲೆ ಫ್ರಾಂಚೈಸಿಯನ್ನು ಅಮಾನತುಗೊಳಿಸಲಾಗಿತ್ತು. ಆ ಎರಡು ವರ್ಷ ಹೊರತುಪಡಿಸಿದ್ರೆ ಧೋನಿ ಸಿಎಸ್​ಕೆಯಲ್ಲೇ ಆಡ್ತಿದ್ದಾರೆ. ಹಾಗೇ  2022ರ ಐಪಿಎಲ್ ಟೂರ್ನಿಗೂ ಮೊದಲೇ ಸಿಎಸ್ಕೆ ನಾಯಕತ್ವವನ್ನು ಆಲ್ರೌಂಡರ್ ರವೀಂದ್ರ ಜಡೇಜಾಗೆ ಧೋನಿ ಹಸ್ತಾಂತರಿಸಿದ್ದರು. ಆದರೆ ಜಡೇಜಾ ಕ್ಯಾಪ್ಟನ್ಸಿಯಲ್ಲಿ ತಂಡ ಹೀನಾಯ ಪ್ರದರ್ಶನ ನೀಡಿತ್ತು. ಹೀಗಾಗಿ ಸೆಕೆಂಡ್ ಆಫ್​ನಲ್ಲಿ ಮತ್ತೆ  ನಾಯಕತ್ವ ಮರಳಿ ಪಡೆದಿದ್ರು. 2023ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಾಯಕನಾಗಿ ಮುಂದುವರಿದಿದ್ದ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐದನೇ ಬಾರಿಗೆ ಟ್ರೋಫಿ ಗೆದ್ದುಕೊಟ್ಟಿದ್ದರು. ಆದ್ರೆ 2024ರ ಸೀಸನ್​ನಲ್ಲಿ ರುತುರಾಜ್ ನೇತೃತ್ವದಲ್ಲಿ ಸಿಎಸ್​ಕೆ ಪ್ಲೇಆಫ್ ಕೂಡ ಎಂಟ್ರಿ ಪಡೆದಿರಲಿಲ್ಲ.

43 ವರ್ಷ.. 15 ವರ್ಷದ ಕ್ರಿಕೆಟ್ ಕರಿಯರ್.. ದಾಖಲೆಗಳೆಷ್ಟು?

ಭಾರತ ತಂಡ ಕಂಡಂತಹ ಗ್ರೇಟೆಸ್ಟ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಸದ್ಯ 43 ವರ್ಷ ವಯಸ್ಸು,  ಜುಲೈ 7, 1981 ರಂದು ರಾಂಚಿಯಲ್ಲಿ ಜನಿಸಿದ ಧೋನಿ ತಮ್ಮ ವೃತ್ತಿಜೀವನದಲ್ಲಿ ಭಾರತಕ್ಕೆ ಹಲವು ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. ತಮ್ಮ 15 ವರ್ಷಗಳ ಕ್ರಿಕೆಟ್ ಕೆರಿಯರ್​ನಲ್ಲಿ ಧೋನಿ ಹಲವು ವಿಶ್ವದಾಖಲೆಗಳನ್ನು ಬರೆದಿದ್ದಾರೆ. ಅದರಲ್ಲೂ ನಾಯಕನಾಗಿ ಇಡೀ ವಿಶ್ವದಲ್ಲೇ ಯಾರೂ ಮಾಡದ ಸಾಧನೆಗಳನ್ನು ಮಾಡಿದ್ದಾರೆ. 200 ಏಕದಿನ, 70 ಟೆಸ್ಟ್‌ಗಳು ಮತ್ತು 72 ಟಿ20 ಪಂದ್ಯಗಳು ಸೇರಿದಂತೆ ಒಟ್ಟು 342 ಮ್ಯಾಚ್​ಗಳಲ್ಲಿ ಧೋನಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ನಾಯಕನಾಗಿ ಕಾಣಿಸಿಕೊಂಡ ಆಟಗಾರ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ವಿಶ್ವದ ಬೆಸ್ಟ್ ಫಿನಿಶರ್ ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಏಕದಿನ ಪಂದ್ಯಗಳಲ್ಲಿ 84 ಬಾರಿ ನಾಟೌಟ್ ಆಗಿದ್ದು ಇದು ಕೂಡ ವಿಶ್ವ ದಾಖಲೆ ಬರೆದಿದೆ.

ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ

ನಾಯಕನಾಗಿ ಭಾರತ ತಂಡವನ್ನೂ ಯಶಸ್ವಿಯಾಗಿ ಮುನ್ನಡೆಸಿದ್ದ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕನೆಂಬ ವಿಶ್ವ ದಾಖಲೆ ಮಾಡಿದ್ದಾರೆ. ಭಾರತಕ್ಕೆ ಮೊದಲ ಟಿ20 ವಿಶ್ವಕಪ್ ಅನ್ನು 2007ರಲ್ಲಿ ಗೆಲ್ಲಿಸಿಕೊಟ್ಟಿದ್ರು. ಹಾಗೇ 2011ರಲ್ಲಿ ಎರಡನೇ ಏಕದಿನ ವಿಶ್ವಕಪ್, 2013ರಲ್ಲಿ  ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಡುವ ಮೂಲಕ ಧೋನಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹಾಗೇ ಟೀಮ್ ಇಂಡಿಯಾ ಪರ ಮಹೇಂದ್ರ ಸಿಂಗ್ ಧೋನಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಎರಡು ಶತಕಗಳನ್ನು ಬಾರಿಸಿದ್ದಾರೆ. ವಿಶ್ವದ ಯಾವುದೇ ಬ್ಯಾಟರ್ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಒಂದಕ್ಕಿಂತ ಹೆಚ್ಚು ಸೆಂಚುರಿ ಸಿಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ದಾಖಲೆಯನ್ನೂ ಅಭೂತಪೂರ್ವ ಸಾಧನೆ ಎಂದೇ ಪರಿಗಣಿಸಲಾಗಿದೆ.

ವಿಕೆಟ್ ಕೀಪರ್ ಆಗಿಯೂ ಧೋನಿ ಸರ್ವಶ್ರೇಷ್ಠ ಪ್ರದರ್ಶನ!

ಧೋನಿ ಟೀಂ ಇಂಡಿಯಾದ ಬೆಸ್ಟ್ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್. ಬ್ಯಾಟ್ ಹಿಡಿದು ತಂಡಕ್ಕೆ ಹೇಗೆ ನೆರವಾಗಬಲ್ಲರೋ ಹಾಗೇ ವಿಕೆಟ್ ಹಿಂದೆ ನಿಂತು ಎದುರಾಳಿಗಳ ವಿಕೆಟ್ ಬೇಟೆಯಾಡಬಲ್ಲ ಆಟಗಾರ. ಇದುವರೆಗೆ 538 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 829 ಔಟ್‌ಗಳನ್ನ ಪಡೆದಿದ್ದಾರೆ. 0.08 ಸೆಕೆಂಡುಗಳಲ್ಲಿ ಮಾಡಿದ ವೇಗದ ಸ್ಟಂಪಿಂಗ್ ದಾಖಲೆಯನ್ನು ಹೊಂದಿದ್ದಾರೆ. ಈ ಮೂಲಕ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ವಿಕೆಟ್ ಕೀಪರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಐಪಿಎಲ್​ನ ಯಶಸ್ವಿ ವಿಕೆಟ್ ಕೀಪರ್ ದಾಖಲೆ ಕೂಡ ಧೋನಿ ಹೆಸರಿನಲ್ಲಿದೆ. ಸಿಎಸ್​ಕೆ ನಾಯಕ 148 ಕ್ಯಾಚ್ ಔಟ್ ಮತ್ತು 42 ಸ್ಟಂಪಿಂಗ್ ಮೂಲಕ ಧೋನಿ 190 ಆಟಗಾರರಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಹಾಗೇ ಬ್ಯಾಟಿಂಗ್​ನಲ್ಲೂ ಕೂಡ ಕೊನೆಯ ಓವರ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಒಟ್ಟಾರೆ ಪಂದ್ಯಗಳ ಕೊನೆಯ ಓವರ್​ಗಳಿಂದ ಸಿಎಸ್​ಕೆ ನಾಯಕ ಕಲೆಹಾಕಿದ್ದು ಬರೋಬ್ಬರಿ 667 ರನ್​ಗಳನ್ನ. ಹಾಗೇ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ 5 ವಿಭಿನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಅರ್ಧಶತಕ ಗಳಿಸಿದ ಏಕೈಕ ಆಟಗಾರ ಧೋನಿ. ಮೂರು, ನಾಲ್ಕು, ಐದು, ಆರು ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಧೋನಿ ಹಾಫ್ ಸೆಂಚುರಿ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ.

2020ರ ಆಗಸ್ಟ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿರೋ ಧೋನಿ ಸದ್ಯ ಐಪಿಎಲ್​ನಲ್ಲಿ ಸಿಎಸ್​ಕೆ ಪರ ಕಣಕ್ಕಿಳಿಯುತ್ತಿದ್ದಾರೆ. ಸಿಎಸ್​ಕೆ ಮ್ಯಾಚ್ ಇದೆ ಅಂದ್ರೆ ಧೋನಿ ಮೈದಾನಕ್ಕೆ ಬರೋದನ್ನ ನೋಡೋಕಂತ್ಲೇ ಕೋಟಿ ಕೋಟಿ ಫ್ಯಾನ್ಸ್ ಕಾಯ್ತಿರ್ತಾರೆ. ಸ್ಟೇಡಿಯಂ ಯಾವುದೇ ಇರ್ಲಿ, ಯಾರ ವಿರುದ್ಧವೇ ಇರಲಿ. ಎಲ್ಲರಿಗಿಂತ ಒಂದು ಕೈ ಜಾಸ್ತಿ ಧೋನಿ ಫ್ಯಾನ್ಸ್ ಅಲ್ಲಿರ್ತಾರೆ. ಚೆನ್ನೈ ತಂಡದ ಅಭಿಮಾನಿಗಳೇ ಆಗಿದ್ರೂ ತಮ್ಮ ಟೀಮ್​ನ ಆರಂಭಿಕ ಬ್ಯಾಟ್ಸ್​​ಮನ್ಸ್ ಬೇಗ ಬೇಗ ಔಟಾಗ್ಲಿ ಅಂತಾ ಕೇಳಿಕೊಳ್ತಾರೆ. ಯಾಕಂದ್ರೆ ಧೋನಿ ಕ್ರೀಸ್​ಗೆ ಬರ್ಬೇಕು ಬ್ಯಾಟಿಂಗ್ ಮಾಡ್ಬೇಕು ಅನ್ನೋದು ಅವ್ರ ಇಂಟೆನ್ಷನ್. ಅದ್ರಲ್ಲೂ ಧೋನಿ ಬ್ಯಾಟ್ ಹಿಡ್ಕೊಂಡು ಮೈದಾನಕ್ಕೆ ಬರುವಾಗ ಅಭಿಮಾನಿಗಳ ಜೋಶ್ ನೋಡೋದೇ ಚೆಂದ. ಮೂವಿಗಳಲ್ಲಿ ಹೀರೋಗಳ ಎಂಟ್ರಿ ಹೇಗಿರುತ್ತೋ ಅದಕ್ಕಿಂತಲೂ ಧೋನಿ ಬರೋ ದೃಶ್ಯಗಳ ಕ್ರೇಜ್ ಇನ್ನೂ ಒಂದು ಲೆವೆಲ್ ಜಾಸ್ತಿನೇ ಇರುತ್ತೆ. ಇದೇ ಅಭಿಮಾನಿದಿಂದಲೇ ಐಪಿಎಲ್ ಆಡಲಿ ಅಂತಿದ್ದಾರೆ. ಸದ್ಯ 2025ರ ಐಪಿಎಲ್​ನಲ್ಲಿ ಆಡುವ ಬಗ್ಗೆ ಮಾತನಾಡಿದ್ದ ಧೋನಿ, ರಿಟೆನ್ಷನ್ ರೂಲ್ಸ್ ಫೈನಲ್ ಆದ್ಮೇಲೆ ನಾನು ಆಡ್ತೇನಾ ಇಲ್ವಾ ಅನ್ನೋದು ಗೊತ್ತಾಗಲಿದೆ. ಈಗ ನಾನು ಏನನ್ನೂ ಹೇಳಲಾರೆ. ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಚೆನ್ನೈ ಸೂಪರ್ ಕಿಂಗ್ಸ್​ಗೆ ಲಾಭವಾಗಲಿದೆ ಎಂದಿದ್ದರು. ಬಟ್ ಫೈನಲ್ ಆಗಿ ಏನ್ ರೂಲ್ಸ್ ಬರುತ್ತೆ, ಧೋನಿ ಬರೀ 4 ಕೋಟಿ ರೂಪಾಯಿಗೆ ಆಡ್ತಾರಾ ಅನ್ನೋದೇ ಈಗಿರುವ ಪ್ರಶ್ನೆ.

Shwetha M

Leave a Reply

Your email address will not be published. Required fields are marked *