ಮುಡಾ ಹಗರಣ ಕೇಸ್ – ಹೈಕೋರ್ಟ್‌ಗೆ ಸಿದ್ದರಾಮಯ್ಯ ಪರ ವಕೀಲರಿಂದ ರಿಟ್ ಅರ್ಜಿ
ಮುಡಾ ಹಗರಣ ಪ್ರಕರಣ ಈಗ ಸಿಎಂ ಸಿದ್ಧರಾಮಯ್ಯಗೆ ತಲೆನೋವಾಗಿ ಪರಿಣಮಿಸಿದೆ. ಈ ಪ್ರಕರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸಿದ್ದರಾಮಯ್ಯಗೆ ನಿದ್ದೆಗೆಡುವಂತೆ ಮಾಡಿದೆ. ಹೀಗಾಗಿ ಸಂಕಷ್ಟದಿಂದ ಪಾರಾಗಲು ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ರಕ್ಷಾ ಬಂಧನದ ಇತಿಹಾಸ ಏನು ಗೊತ್ತಾ? – ರಾಖಿ ಕಟ್ಟೋ ಮುನ್ನ ಈ ವಿಚಾರ ತಿಳಿದುಕೊಳ್ಳಿ!
ತಮ್ಮ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸೇರಿದಂತೆ ಕಾನೂನು ತಜ್ಞರೊಂದು, ಆಪ್ತರು ಮತ್ತು ವಕೀಲರ ಜೊತೆ ಸಭೆ ನಡೆಸಿದ ಸಿಎಂ ಪ್ರಾಸಿಕ್ಯೂಷನ್ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಸಿಎಂ ಪರ ವಕಾಲತ್ತು ವಹಿಸಲು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಕಬಿಲ್ ಸಿಬಲ್ ನವದೆಹಲಿಯಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸೋಮವಾರ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸೋಮವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಿರುವ ಸಿಎಂ ಪರ ವಕೀಲರು, ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಕಾನೂನು ಬಾಹಿರ ಎಂದು ವಾದ ಮಂಡಿಸಲಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 17ಎ ಅಡಿ ಪ್ರಾಸಿಕ್ಯೂಷನ್ ನೀಡಿರುವುದು ನಿಯಮಗಳ ಉಲ್ಲಂಘನೆಯಾಗಿದೆ. ಅಲ್ಲದೇ, ಪ್ರಾಸಿಕ್ಯೂಷನ್ ನೀಡುವ ಬಗ್ಗೆ 2021ರ ಸೆಪ್ಟಂಬರ್‌ನಲ್ಲಿ ಕೇಂದ್ರ ಸರ್ಕಾರವೇ ಚೆಕ್‌ಲಿಸ್ಟ್ ನೀಡಿದೆ. ಆ ಚೆಕ್‌ಲಿಸ್ಟ್ ಕೂಡಾ ಪಾಲನೆಯಾಗಿಲ್ಲ. ಇನ್ನು ಡಿಜಿ-ಐಜಿಪಿ ಮಟ್ಟದ ಅಧಿಕಾರಿಗಳು ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಬೇಕು. ಅನುಮತಿ ಕೇಳಲು ತನಿಖಾ ವರದಿ ಇರಬೇಕು. ಆದರೆ, ಇಲ್ಲಿ ತನಿಖಾ ವರದಿಯೂ ಇಲ್ಲ, ಅಧಿಕಾರಿಗಳೂ ಇಲ್ಲ. ಖಾಸಗಿ ವ್ಯಕ್ತಿಗಳ ದೂರಿನನ್ವಯ ಪ್ರಾಸಿಕ್ಯೂಷನ್‌ಗೆ ನೀಡಿದ್ದಾರೆ. ರಾಜ್ಯಪಾಲರೇ ತನಿಖಾಧಿಕಾರಿಯಂತೆ ವರ್ತಿಸಿದ್ದಾರೆ ಎಂದು ಸಿಎಂ ಪರ ವಕೀಲರು ವಾದ ಮಂಡಿಸಲು ಸಿದ್ಧತೆ ನಡೆಸಿದ್ದಾರೆ.
ಏತನ್ಮಧ್ಯೆ, ಪಕ್ಷದ ಹೈಕಮಾಂಡ್ ನಾಯಕರಾದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪ್ರಕರಣ ದಾಖಲಿಸುವ ಸಾಧಕ-ಬಾಧಕಗಳ ಕುರಿತು ಸಿಎಂ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.