ರಕ್ಷಾ ಬಂಧನದ ಇತಿಹಾಸ ಏನು ಗೊತ್ತಾ? – ರಾಖಿ ಕಟ್ಟೋ ಮುನ್ನ ಈ ವಿಚಾರ ತಿಳಿದುಕೊಳ್ಳಿ!

ರಕ್ಷಾ ಬಂಧನದ ಇತಿಹಾಸ ಏನು ಗೊತ್ತಾ? – ರಾಖಿ ಕಟ್ಟೋ ಮುನ್ನ ಈ ವಿಚಾರ ತಿಳಿದುಕೊಳ್ಳಿ!

ನಾಡಿನಾದ್ಯಂತ ಭ್ರಾತೃತ್ವದ ಮಹತ್ವ ಸಾರುವ ರಕ್ಷಾಬಂಧನ ಹಬ್ಬದ ತಯಾರಿ ಜೋರಾಗಿದೆ. ರಕ್ಷಾಬಂಧನ ಅಣ್ಣ- ತಂಗಿಯರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಹಬ್ಬ. ರಾಖಿ ಹಬ್ಬ ಅಂತಲೂ ಕರೆಯುವ ಈ ಹಬ್ಬವನ್ನು ಭಾರತ ದೇಶದಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಶ್ರಾವಣ ಮಾಸದ ಪೂರ್ಣಿಮ ತಿಥಿಯಂದು ಸಹೋದರಿಕೆಯ ಮಹತ್ವವನ್ನು ಸಾರುವ ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಈ ಹಬ್ಬದಂದು ತಂಗಿಯರು ಅಣ್ಣನ ಕೈಗೆ ರಾಖಿ ಕಟ್ಟುವ ಮೂಲಕ ಆಶೀರ್ವಾದ ಪಡೆಯುತ್ತಾರೆ. ಅಲ್ಲದೇ ಅಣ್ಣ ದೀರ್ಘಾಯಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಸಹೋದರರ ಕೈಗೆ ರಾಖಿ ಕಟ್ಟುವ ಸಹೋದರಿ ಅವರಿಂದ ಉಡುಗೊರೆಗಳನ್ನು ಪಡೆಯುತ್ತಾಳೆ.

ಇದನ್ನೂ ಓದಿ: ಹಗಲಿನಲ್ಲಿ ಹೆಚ್ಚು ನಿದ್ದೆ ಮಾಡುತ್ತೀರಾ? – ನಿಮಗೂ ಕಾಡಬಹುದು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ!

ದಂತಕತೆಗಳ ಪ್ರಕಾರ ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಆಗ ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಪೋರಸ್‌ಗೆ ಒಂದು ಪವಿತ್ರ ದಾರವನ್ನು (ರಾಖಿ) ಕಳುಹಿಸಿದಳು. ಅದರ ಜೊತೆಗೆ ಒಂದು ಮನವಿ ಸಹ ಇತ್ತು. ತನ್ನ ಪತಿಯನ್ನು ಕೊಲ್ಲದಿರುವಂತೆ ಕೇಳಿಕೊಂಡ ಮನವಿ ಅದಾಗಿತ್ತು. ಮುಂದೆ ನಡೆದ ಯುದ್ಧದಲ್ಲಿ ಪೋರಸ್ ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಇದಕ್ಕೆ ಕಾರಣ ಆತನ ಕೈಯಲ್ಲಿ ಆತ ಕಟ್ಟಿಕೊಂಡಿದ್ದ ರಾಖಿ ಅವನನ್ನು ತಡೆದು ನಿಲ್ಲಿಸಿತ್ತು.

ಮತ್ತೊಂದು ಘಟನೆಯಲ್ಲಿ ಚಿತ್ತೂರಿನ ರಾಣಿ ಕರ್ಣಾವತಿಯು ಗಂಡನನ್ನು ಕಳೆದುಕೊಂಡು ವೈಧವ್ಯದ ಜೀವನ ನಡೆಸುತ್ತಿದ್ದಳು. ಆಗ ಆಕೆಯು ಚಕ್ರವರ್ತಿ ಹುಮಾಯುನನಿಗೆ ರಾಖಿಯನ್ನು ಕಳುಹಿಸಿದಳು. ಇದಕ್ಕೆ ಕಾರಣ ಚಕ್ರವರ್ತಿ ಬಹದ್ದೂರ್ ಷಾನು ಈಕೆಯ ರಾಜ್ಯದ ಮೇಲೆ ದಂಡೆತ್ತಿ ಬರುವ ನಿರ್ಧಾರಕ್ಕೆ ಬಂದಿದ್ದನು. ಆಗ ಆಕೆಯು ಹುಮಾಯೂನನ ಸಹಾಯವನ್ನು ಬಯಸಿ ರಾಖಿಯನ್ನು ಕಳುಹಿಸಿದ್ದಳು.ಇದನ್ನು ಮುಟ್ಟುವ ಮೂಲಕ ಸ್ವೀಕರಿಸಿದ ಹುಮಾಯೂನನು ತನ್ನ ಸೇನೆಯನ್ನು ರಾಣಿ ಕರ್ಣಾವತಿಯ ಸಹಾಯಕ್ಕೆ ಧಾವಿಸುವಂತೆ ಸೂಚಿಸಿದನು. ಆದರೆ ಸೈನ್ಯವು ಅಲ್ಲಿಗೆ ತಲುಪಲು ತಡವಾಯಿತು. ಇದೇ ವೇಳೆಗೆ ರಾಣಿ ಕರ್ಣಾವತಿಯು ಇತರೆ ಹೆಂಗಸರೊಂದಿಗೆ ಕೂಡಿ, ತನ್ನ ಮಾನ ರಕ್ಷಣೆಗಾಗಿ ಜೌಹರ್ ಮಾಡಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡಿದ್ದಳು. ಮುಂದೆ ಬಹದ್ದೂರ್ ಷಾನನ್ನು ಹುಮಾಯೂನ್ ಹೊರಗೆ ಹಾಕಿ, ಕರ್ಣಾವತಿಯ ಮಗ ವಿಕ್ರಮಜೀತನನ್ನು ಸಿಂಹಾಸನದಲ್ಲಿ ಕೂರಿಸಿದನು.

ರಕ್ಷಾಬಂಧನದ ಮಹತ್ವ, ಪ್ರಾಮುಖ್ಯತೆ

ರಕ್ಷಾಬಂಧನಕ್ಕೆ ಭಾರತದಲ್ಲಿ ಹೆಚ್ಚು ಮಹತ್ವವಿದೆ. ಇದನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಸಹೋದರ – ಸಹೋದರಿಯರ ನಡುವಿನ ಪ್ರೀತಿಗೆ ಈ ದಿನ ಸಮರ್ಪಣೆಯಾಗಿದೆ. ಹಿಂದೂ ಧರ್ಮದಲ್ಲಿ ರಕ್ಷಾ ಬಂಧನಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.

ರಕ್ಷಾ ಬಂಧನ ರಕ್ಷೆ (ರಕ್ಷಣೆ) ಹಾಗೂ ಬಂಧನ (ಸಂಬಂಧ) ಎಂಬ ಎರಡು ಪದಗಳಿಂದ ಕೂಡಿದೆ. ಪ್ರಸ್ತುತ, ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮಾನಾರ್ಥಕವಾಗಿದೆ ಮತ್ತು ಇದು ಸಹೋದರಿ ಮತ್ತು ಸಹೋದರರ ನಡುವಿನ ಪ್ರೀತಿಯನ್ನು ಬಲಪಡಿಸುವ ಮತ್ತು ಪುನರುಚ್ಚರಿಸುವ ಉತ್ಸವವಾಗಿದೆ ಎಂದು ಹೇಳಬಹುದು. ಒಂದು ಕಡೆ, ಸಹೋದರನು ತನ್ನ ಸಹೋದರಿಯನ್ನು ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಮತ್ತೊಂದೆಡೆ, ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ.

Shwetha M