ಬೆಂಗಳೂರು ಬುಲ್ಸ್ ಗೆ ಆನೆಬಲ –  ಪ್ರದೀಪ್ ಗೆ ಇಷ್ಟೇ ಹಣನಾ? – ಪ್ರೋ ಕಬಡ್ಡಿಯಲ್ಲಿ ಕೋಟಿ ವೀರರು!

ಬೆಂಗಳೂರು ಬುಲ್ಸ್ ಗೆ ಆನೆಬಲ –  ಪ್ರದೀಪ್ ಗೆ ಇಷ್ಟೇ ಹಣನಾ? – ಪ್ರೋ ಕಬಡ್ಡಿಯಲ್ಲಿ ಕೋಟಿ ವೀರರು!

ದೇಶೀಯ ಅಂಗಳದ ಮದಗಜಗಳ ಕಾಳಗ ಎಂದೇ ಬಿಂಬಿತವಾಗಿರುವ ಪ್ರೋ ಕಬಡ್ಡಿ ಲೀಗ್ ಸೀಸನ್-11 ರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. 2024ರ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ನಡೆದ 2 ದಿನಗಳ ಹರಾಜು ಪ್ರಕ್ರಿಯೆ ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿತ್ತು. ಅಚ್ಚರಿಯ ರೀತಿಯಲ್ಲಿ ಕೆಲವ್ರು ಕೋಟಿಗಳ ಲೆಕ್ಕದಲ್ಲಿ ಸೇಲ್ ಆದ್ರೆ ಇನ್ನೂ ಕೆಲ ಸ್ಟಾರ್ ಆಟಗಾರರು ಅನ್ಸೋಲ್ಡ್ ಆಗುವ ಮೂಲಕ ಶಾಕ್ ಕೊಟ್ಟಿದ್ದಾರೆ. ಹೊಸ ಆವತ್ತಿಗೂ ಮುನ್ನ ಎಲ್ಲಾ 12 ತಂಡಗಳು ಬಲಿಷ್ಠ ತಂಡವನ್ನು ಕಟ್ಟಿದ ಖುಷಿಯಲ್ಲಿದ್ದಾರೆ. ಅಷ್ಟಕ್ಕೂ ಈ ಬಾರಿ ಅತೀ ಹೆಚ್ಚು ಮೊತ್ತಲ್ಲೇ ಮಾರಾಟವಾದ ಆಟಗಾರರು ಯಾರು? ಬೆಂಗಳೂರು ಬುಲ್ಸ್ ತಂಡ ಹೇಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸ್ಲಮ್ ಹುಡುಗ ಈಗ ಸೂಪರ್ ಸ್ಟಾರ್ –  RCB ವೇಗಿಯ ರೇಂಜ್ ಫುಲ್ ಚೇಂಜ್

ಪಿಕೆಎಲ್ ಕೋಟಿ ವೀರರು!

ಮುಂಬೈನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಹರಾಜಿನ ಮೊದಲ ದಿನ ಹಲವು ಆಟಗಾರರ ಮೇಲೆ ಹಣದ ಮಳೆಯಾಗಿದೆ. ಆದರೆ ಕೆಲವು ಸ್ಟಾರ್ ಪ್ಲೇಯರ್ಸ್ ನಿರೀಕ್ಷಿಸಿದಷ್ಟು ಹಣವನ್ನು ಪಡೆದಿಲ್ಲ. ಡಿಫೆಂಡರ್ ಸಚಿನ್ ಹರಾಜಿನಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗಿದ್ದಾರೆ. ಸಚಿನ್ ಮೂಲ ಬೆಲೆ ಎ ಕೆಟಗರಿಯಲ್ಲಿ 30 ಲಕ್ಷ ರೂಪಾಯಿ ನಿಗಧಿ ಆಗಿತ್ತು. ತಮಿಳ್ ತಲೈವಾಸ್ ಅವರನ್ನು 2.15 ಕೋಟಿಗೆ ಖರೀದಿಸಿದೆ. ಈ ಮೂಲಕ ಪ್ರೊ ಕಬಡ್ಡಿ ಇತಿಹಾಸದಲ್ಲೇ 11ನೇ ಅತಿ ದುಬಾರಿ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಸ್ಟಾರ್ ಇರಾನಿ ಪ್ಲೇಯರ್ ಮೊಹಮ್ಮದ್ ರೇಜಾ ಶಾಡ್ಲೌಯಿ ಚಿಯಾನೆಹ್ ಅವರಿಗೆ ಬರೋಬ್ಬರಿ 2.07 ಕೋಟಿ ಹಣ ನೀಡುವ ಮೂಲಕ ಹರಿಯಾಣ ಸ್ಟೀಲರ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇನ್ನೋರ್ವ ಸ್ಟಾರ್ ರೈಡರ್ ಗುಮನ್ ಸಿಂಗ್ ಅವರಿಗೆ ಬರೋಬ್ಬರಿ 1.97 ಕೋಟಿ ನೀಡಿ ಗುಜರಾತ್ ಜಯಂಟ್ಸ್ ತಂಡ ಖರೀದಿಸಿದೆ. ಬೆಂಗಳೂರು ಬುಲ್ಸ್ ಮಾಜಿ ನಾಯಕ ಪವನ್ ಸೆಹ್ರಾವತ್ ಅವರಿಗೆ 1.72 ಕೋಟಿ ಕೊಟ್ಟು ತೆಲುಗು ಟೈಟನ್ಸ್ ರಿಟೇನ್ ಮಾಡಿಕೊಂಡಿದೆ. ಕಳೆದೆರಡು ಋತುವಿನಲ್ಲಿ ಬೆಂಗಳೂರು ಬುಲ್ಸ್ನ ರೈಡಿಂಗ್ ಶಕ್ತಿಯಾಗಿದ್ದ ಭರತ್ ಹೂಡಾ ಅವರಿಗೆ ಯುಪಿ ಯೋಧಾಸ್ ತಂಡ 1.3 ಕೋಟಿ ನೀಡಿ ಖರೀದಿಸಿದೆ. ಬೆಂಗಾಲ್ ವಾರಿಯರ್ಸ್ನ ಸ್ಟಾರ್ ರೈಡರ್ ಮಣಿಂದರ್ ಸಿಂಗ್ ಅವರಿಗೆ 1.15 ಕೋಟಿ ರೂ. ನೀಡುವ ಮೂಲಕ ಬೆಂಗಾಲ್ ವಾರಿಯರ್ಸ್ ತಂಡ ತನ್ನಲ್ಲಿಯೇ ಉಳಿಸಿಕೊಂಡಿದೆ. ತಮಿಳುನಾಡು ಮೂಲದ ಸ್ಟಾರ್ ರೇಡರ್ ಅಜಿಂಕ್ಯ ಪವಾರ್ ಅವರಿಗೆ ಈ ಬಾರಿ ಬೆಂಗಳೂರು ಬುಲ್ಸ್ ಮಣೆ ಹಾಕಿದ್ದು, ಬರೋಬ್ಬರಿ 1.107 ಕೋಟಿ ಕೊಟ್ಟು ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಯು ಮುಂಬಾ ಕೂಡ ಸುನೀಲ್ ಕುಮಾರ್ ಅವರಿಗೆ 1.015 ಕೋಟಿ ಕೊಟ್ಟು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಇನ್ನು ಕಬಡ್ಡಿಯ ರಾಜ, ಪ್ರೋ ಕಬಡ್ಡಿ ಇತಿಹಾಸದಲ್ಲೇ ಅತೀ ಹೆಚ್ಚು ರೈಡ್ ಪಾಯಿಂಟ್ಗಳನ್ನು ಹೊಂದಿರುವ ದಾಖಲೆ ಹೊಂದಿರುವ ಪರ್ದೀಪ್ ನರ್ವಾಲ್ ಅವರನ್ನು ಬೆಂಗಳೂರು ಬುಲ್ಸ್ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರದೀಪ್ ನರ್ವಾಲ್ 170 ಪಂದ್ಯಗಳಲ್ಲಿ 1690 ಅಂಕಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.  ಆದ್ರೆ ನರ್ವಾಲ್ ಬರೀ 70 ಲಕ್ಷಕ್ಕೆ ಮಾರಾಟವಾಗಿರೋದು ಅಚ್ಚರಿಗೆ ಕಾರಣವಾಗಿದೆ.

ಹರಾಜು ಪ್ರಕ್ರಿಯೆ ಬಳಿಕ ಬೆಂಗಳೂರು ಬುಲ್ಸ್ ತಂಡ ತುಂಬಾನೇ ಜೋಶ್ನಲ್ಲಿದೆ. ಅದ್ರಲ್ಲೂ ಪ್ರೊಸೀಜರ್ಸ್ ಮುಗಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಆ ಸಾಲುಗಳೇ ಅಭಿಮಾನಿಗಳ ಹುಮ್ಮಸ್ಸನ್ನ ದುಪ್ಪಟ್ಟು ಮಾಡಿವೆ. ಬರೆವರು ಹೊಸದೊಂದು ಶಾಸನ, ಸೃಷ್ಟಿಸುವರು ಇತಿಹಾಸ. ಬಲಾಢ್ಯರಲ್ಲಿ ಬಲಾಢ್ಯರು, ಬಲಭೀಮ ಚಾಣಕ್ಯರು ತುಂಬಿರುವ ಈ ತಂಡ, ನಿಜಕ್ಕೂ ‘ಕಿಂಗ್’ಗಳೂರು ಎಂದು ಹನ್ನೊಂದನೇ ಆವೃತ್ತಿಯ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆ ಮುಗಿದ ಬಳಿಕ ಬೆಂಗಳೂರು ಬುಲ್ಸ್ ತಂಡ ತನ್ನ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ. ಒಟ್ನಲ್ಲಿ ಈ ಬಾರಿ ಪಿಕೆಎಲ್ ಇತಿಹಾಸದಲ್ಲೇ ಮೊದಲ ಬಾರಿ 8 ಮಂದಿ ಆಟಗಾರರು ಒಂದು ಕೋಟಿಗೂ ಅಧಿಕ ಮೊತ್ತವನ್ನು ಪಡೆಯುವ ಮೂಲಕ ದಾಖಲೆಯಾಗಿದೆ. ಮತ್ತೊಂದೆಡೆ ತಮ್ಮ ಉತ್ತಮ ರೈಡಿಂಗ್ ಹಾಗೂ ಡಿಫೆಂಡಿಂಗ್ ಮೂಲಕ ಹಿಂದಿನ ಆವೃತ್ತಿಗಳಲ್ಲಿ ತಾವು ಪ್ರತಿನಿಧಿಸಿದ ತಂಡಗಳಿಗೆ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟಿದ್ದರೂ ಕೆಲವರು ಖರೀದಿಯಾಗದೆ ನಿರಾಸೆ ಅನುಭವಿಸಿದ್ದಾರೆ. ಆ ಸಾಲಿನಲ್ಲಿ ರಾಹುಲ್ ಚೌಧರಿ ಹಾಗೂ ದೀಪಕ್ ನಿವಾಸ್ ಹೂಡಾ ಮುಂಚೂಣಿಯಲ್ಲಿದ್ದಾರೆ. ಇದೇ ಬೇಸರದಲ್ಲೇ ರಾಹುಲ್ ಚೌಧರಿ  ನಿರಾಸೆಯಿಂದಲೇ ಪಿಕೆಎಲ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

Shwetha M

Leave a Reply

Your email address will not be published. Required fields are marked *