ಸ್ಲಮ್ ಹುಡುಗ ಈಗ ಸೂಪರ್ ಸ್ಟಾರ್ –  RCB ವೇಗಿಯ ರೇಂಜ್ ಫುಲ್ ಚೇಂಜ್
ಮೊಹಮ್ಮದ್ ಸಿರಾಜ್ ಶಕ್ತಿಯೇ ಕೊಹ್ಲಿ

ಸ್ಲಮ್ ಹುಡುಗ ಈಗ ಸೂಪರ್ ಸ್ಟಾರ್ –  RCB ವೇಗಿಯ ರೇಂಜ್ ಫುಲ್ ಚೇಂಜ್ಮೊಹಮ್ಮದ್ ಸಿರಾಜ್ ಶಕ್ತಿಯೇ ಕೊಹ್ಲಿ

ಒಂದೇ ಒಂದು ಅವಕಾಶ ಕೊಡಿ ಪ್ಲೀಸ್.. ಈ ಬಡಹುಡುಗ ಆ ಒಂದು ಚಾನ್ಸ್ ಗಾಗಿ ನಿದ್ದೆಗೆಟ್ಟಿದ್ದು ಅದೆಷ್ಟೋ ರಾತ್ರಿಗಳು. ಅವಕಾಶಕ್ಕಾಗಿ ಕಾಯ್ತಿದ್ದ ದಿನಗಳು ಅದೆಷ್ಟೋ.. ಕೊನೆಗೂ ಅದೃಷ್ಟ ಈತನ ಕೈಬಿಡಲೇ ಇಲ್ಲ. ಸ್ಲಮ್ ನಲ್ಲಿ ಹುಟ್ಟಿ, ಪಾನಿಪೂರಿ ಮಾರಿ, ಈಗ ಇಂಡಿಯಾದ ಸ್ಟಾರ್ ವೇಗಿಯಾಗಿ ಬೆಳೆದ ಮೊಹಮ್ಮದ್ ಸಿರಾಜ್ ಲೈಫ್ ಸ್ಟೋರಿ ಪ್ರತಿಯೊಬ್ಬ ಕ್ರೀಡಾಪಟುವಿಗೂ ಸ್ಪೂರ್ತಿ. ಕಡುಬಡತನದಲ್ಲಿ ಹುಟ್ಟಿ ಸೂಪರ್ ಸ್ಟಾರ್ ಆಗಿದ್ದಾರೆ ಸಿರಾಜ್ ಭಾಯ್. ಅಂದು ಮನೆ ಮನೆಗೂ ಹಾಲು ಹಾಕುತ್ತಿದ್ದ ಸಿರಾಜ್, ಇವತ್ತು ಭಾರತೀಯರ ಮನದಲ್ಲಿ ಸೂಪರ್ ಸ್ಟಾರ್ ಕ್ರಿಕೆಟರ್ ಆಗಿ ಫೇಮಸ್ ಆಗಿದ್ದಾರೆ. ಅಷ್ಟಕ್ಕೂ ಈಗ ಸಿರಾಜ್ ಚರ್ಚೆಯಲ್ಲಿರೋದು ಕೋಟಿ ಕಾರು ಖರೀದಿಸಿದ ವಿಚಾರಕ್ಕೆ. ಹಿಂದೆ ಆಟೋದಲ್ಲಿ ಓಡಾಡುತ್ತಿದ್ದ ಸಿರಾಜ್ ಈಗ ಐಷಾರಾಮಿ ಕಾರುಗಳ ಒಡೆಯ. ಇದೆಲ್ಲಾ ಸಿಕ್ಕಿದ್ದು, ಒಲಿದಿದ್ದು ಸಿರಾಜ್ ಶ್ರಮಕ್ಕೆ. ಸಿರಾಜ್ ಬಾಲ್ಯ ಹೇಗಿತ್ತು?, ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗಲು ಸಿರಾಜ್ ಮಾಡಿರೋ ಪ್ರಯತ್ನವೇನು?, ಸಿರಾಜ್ ಮನೆಯಲ್ಲಿ ಈಗ ಇರೋ ಕಾರುಗಳು ಯಾವುದು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಡವರಿಗೆ 5 ರೂ.ಗೆ ಊಟ –  ಅನ್ನ ಕ್ಯಾಂಟೀನ್‌ ಮತ್ತೆ ಓಪನ್!

ಕ್ರಿಕೆಟ್ ಜಗತ್ತಿನಲ್ಲಿ ಹಲವು ಸ್ಪೂರ್ತಿದಾಯಕ ಕಥೆಗಳಿವೆ. ಅದರಲ್ಲಿ ಮೊಹ್ಮದ್ ಸಿರಾಜ್ ಅವರದ್ದು ಫುಲ್ ಡಿಫರೆಂಟ್ ಸ್ಟೋರಿ. ಹೈದರಾಬಾದ್ನ ಹಳೆಯ ನಗರದಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದ್ರು ಸಿರಾಜ್. ಅಂದರೆ ಸ್ಲಂ ನಲ್ಲೇ ವಾಸವಾಗಿದ್ದರು ಸಿರಾಜ್. ತಂದೆ ಮೊಹಮ್ಮದ್ ಗೌಸ್ ಆಟೋ ಚಾಲಕರಾಗಿದ್ದರು. ತಾಯಿ ಶಬಾನಾ ಬೇಗಂ ಕೂಡಾ ಮಗನಿಗಾಗಿ ಹಗಲಿರುಳು ದುಡಿಯುತ್ತಿದ್ದರು. ಬಾಲಕ ಸಿರಾಜ್ ಗೆ ಕ್ರಿಕೆಟ್ ಅಂದ್ರೆ ಪ್ರಾಣ. ಆದ್ರೆ, ಕ್ರಿಕೆಟ್ ಆಡಲು ಬಾಲ್ ಕೇಳಲು ಅಪ್ಪನಲ್ಲಿ ದುಡ್ಡಿಲ್ಲ. ಅಪ್ಪನ ಸಂಪಾದನೆಯಲ್ಲಿ ಸಂಸಾರ ನಡೆಸೋದೆ ಕಷ್ಟವಾಗಿತ್ತು. ಆದ್ರೂ, ಕ್ರಿಕೆಟರ್ ಆಗೋ ಕನಸನ್ನ ಮಾತ್ರ ಸಿರಾಜ್ ಬಿಟ್ಟಿರಲಿಲ್ಲ. ಮನೆ ಮನೆಗೆ ಹಾಲು ಹಾಕಲು ಶುರುಮಾಡಿದ್ದ. ನಂತರ ತಾನೇ ಆಟೋ ಓಡಿಸುತ್ತಿದ್ದ. ಬಾಡಿಗೆಯಲ್ಲಿ ಸಿಕ್ಕ ಒಂದಿಷ್ಟು ಹಣ ಕೂಡಿಟ್ಟು ಅಮ್ಮನಿಗೆ ಕೊಡ್ತಿದ್ದ. ಕಿಕ್ಕರ್ ಇಲ್ಲದ ಬೈಕ್ನಲ್ಲೇ ಸ್ಟೇಡಿಯಂಗೆ ಹೋಗಿ ಅಭ್ಯಾಸ ನಡೆಸ್ತಿದ್ದ ಸಿರಾಜ್, ಇತರೆ ಆಟಗಾರರು ಮನೆಗೆ ಹೊರಟ್ಮೇಲೆ ಬೈಕ್ ತಳ್ಳಿ ಸ್ಟಾರ್ಟ್ ಮಾಡಿ ಮನೆಗೆ ವಾಪಸ್ ಬರ್ತಿದ್ದ. ಯಾಕೆಂದ್ರೆ, ಸ್ವಾಭಿಮಾನಿ ಸಿರಾಜ್ ಯಾರ ಬಳಿಯೂ ತನ್ನ ಕಷ್ಟ ಹೇಳಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ. ಕ್ರಿಕೆಟರ್ ಆಗಬೇಕೆಂಬ ನಂಬಿಕೆ ಜೊತೆಗೆ ಕಠಿಣ ಪರಿಶ್ರಮ ಸಿರಾಜ್ ಕೈ ಹಿಡಿದಿತ್ತು.

ಮತ್ತೊಂದೆಡೆ ಸಿರಾಜ್ಗೆ ಕ್ರಿಕೆಟ್ ಮೇಲೆ ಹುಚ್ಚು. ಟೆನಿಸ್ ಬಾಲ್ ನಲ್ಲಿ ಕ್ರಿಕೆಟ್ ಆಡುತ್ತಿದ್ದ ಸಿರಾಜ್ ಗೆ ಹೈದರಾಬಾದ್ನ ಗಲ್ಲಿಗಳೇ ಮೊದಲ ಕ್ರಿಕೆಟ್ ಮೈದಾನಗಳು. ಸಿರಾಜ್ ಹಾಕುವ ಬೆಂಕಿ, ಬಿರುಗಾಳಿಯಂತಾ ಬೌಲಿಂಗ್ ಸ್ಟೈಲ್ ನೋಡಿ ಮೊದಲು ಗುರುತಿಸಿದ್ದೇ ಸ್ಥಳೀಯ ಕೋಚ್ಗಳು. ಇವರ ಬೆಂಬಲದೊಂದಿಗೆ, ಮೊಹಮ್ಮದ್ ಸಿರಾಜ್ ಹೈದರಾಬಾದ್ನ ಸ್ಥಳೀಯ ಕ್ರಿಕೆಟ್ ಕ್ಲಬ್ಗಳಿಗೆ ಎಂಟ್ರಿ ಪಡೆದ್ರು. ಇವರ ಆಟ ನಗರ ಕ್ರಿಕೆಟ್ ವಲಯಗಳಲ್ಲಿ ಸದ್ದು ಮಾಡಲಾರಂಭಿಸಿದ್ವು. ನಂತರ ಸಿರಾಜ್ ಜೀವನ ಬದಲು ಮಾಡಿದ್ದೇ ಐಪಿಎಲ್.  ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಧೂಳೆಬ್ಬಿಸುತ್ತಿದ್ದ ಸಿರಾಜ್, 2017ರಲ್ಲಿ ಐಪಿಎಲ್ಗೆ ಪ್ರವೇಶ ಮಾಡಿದ್ರು. 20 ಲಕ್ಷ ಮೂಲ ಬೆಲೆ ಹೊಂದಿದ್ದ ಸಿರಾಜ್ ಗೆ ಇಷ್ಟು ಹಣಕ್ಕೇನೇ ಅದೃಷ್ಟ ಅಂದುಕೊಂಡಿದ್ದರು. ಆದರೆ ಅದೃಷ್ಟವೋ ಏನೋ ಸಿರಾಜ್ಗೆ ಹೊಡೆದಿದ್ದು ಜಾಕ್ ಪಾಟ್. ಬರೋಬ್ಬರಿ 2.7 ಕೋಟಿಗೆ ಸನ್ರೈಸರ್ಸ್ ಹೈದರಾಬಾದ್ ಇವರನ್ನ ಖರೀದಿಸಿತ್ತು. ಇದು ಸಿರಾಜ್ ಹಣೆಬರಹವನ್ನೇ ಬದಲಿಸಿದ ಕ್ಷಣ. ಏಕ್ಧಮ್ ಕೋಟ್ಯದೀಶನಾಗಿಬಿಟ್ಟಿದ್ದರು ಸಿರಾಜ್. 2017ರ ಆವೃತ್ತಿಯ ಬಳಿಕ ಸಿರಾಜ್ರನ್ನು ಹೈದರಾಬಾದ್ ಕೈ ಬಿಟ್ಟಿತು. 2018ರಲ್ಲಿ ಸಿರಾಜ್ರನ್ನು 2.6 ಕೋಟಿಗೆ ಆರ್ಸಿಬಿ ಖರೀದಿಸಿತ್ತು. ಅಂದಿನಿಂದ ಆರ್ಸಿಬಿ ಪರವೇ ಆಡುತ್ತಿದ್ದಾರೆ ಸಿರಾಜ್. ಆರ್ಸಿಬಿ ಪರ ನೀಡಿದ ಅದ್ಭುತ ಪ್ರದರ್ಶನದಿಂದ ಟೀಮ್ ಇಂಡಿಯಾಗೂ ಪ್ರವೇಶಿಸಿದರು. ಇದಕ್ಕೆಲ್ಲಾ ಕಾರಣವಾಗಿದ್ದು ವಿರಾಟ್ ಕೊಹ್ಲಿ ಬೆಂಬಲದಿಂದ ಎಂಬುದನ್ನು ಮರೆಯುವುದಿಲ್ಲ. ಟೀಕೆಗೆ ಒಳಗಾದರೂ ಕೊಹ್ಲಿ ಸಿರಾಜ್ ಮೇಲೆ ನಂಬಿಕೆಯಿಟ್ಟಿದ್ದರು. ಕೊಹ್ಲಿ ನಂಬಿಕೆ ಉಳಿಸಿಕೊಂಡ ಸಿರಾಜ್, ಇಂದು ಭಾರತೀಯ ತಂಡದ ಪ್ರಮುಖ ಬೌಲರ್. ಆರ್ಸಿಬಿ ಪರ ವರ್ಷಕ್ಕೆ 7 ಕೋಟಿ, ಬಿಸಿಸಿಐ ಗುತ್ತಿಗೆ ಪಟ್ಟಿಯಲ್ಲಿ ಬಿ ಗ್ರೇಡ್ನಲ್ಲಿದ್ದು ವಾರ್ಷಿಕ 3 ಕೋಟಿ ಪಡೆಯುತ್ತಿದ್ದಾರೆ. ಪಂದ್ಯದ ಶುಲ್ಕ ಅಂದರೆ ಒಂದು ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ, ಟಿ20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಪಡೆಯುತ್ತಾರೆ ಸಿರಾಜ್. ಇದರೊಂದಿಗೆ ಜಾಹೀರಾತಿನಲ್ಲೂ ಆದಾಯ ಗಳಿಸುತ್ತಿದ್ದಾರೆ. ಅಂದು ಏನೂ ಇಲ್ಲದ ಆಟೋ ಚಾಲಕನ ಮಗನ ಆಸ್ತಿ ಇಂದು 47 ಕೋಟಿ ಮೀರಿದೆ. ಮೊದಲು ತಿಂಗಳ ಮನೆ ಬಾಡಿಗೆ ಕಟ್ಟಲು ಸಹ ಕಷ್ಟವಾಗಿತ್ತು. ಅಂತಹ ಕಷ್ಟದ ದಿನಗಳನ್ನು ಎದುರಿಸಿದ್ದರು ಸಿರಾಜ್.

ಒಂದು ಟೈಮ್ ನಲ್ಲಿ ಆಟೋ ಓಡಿಸುತ್ತಿದ್ದ ಸಿರಾಜ್ ಈಗ ಹೈದರಾಬಾದ್ನ ಶ್ರೀಮಂತ ಪ್ರದೇಶ ಎನಿಸಿದ ಜೂಬ್ಲಿಹಿಲ್ಸ್ನಲ್ಲಿ ಐಷಾರಾಮಿ ಬಂಗಲೆಯೊಂದನ್ನು ಖರೀದಿಸಿದ್ದಾರೆ. ವೃತ್ತಿ ಬದುಕಿನ ಆರಂಭಿಕ ದಿನಗಳಲ್ಲಿ ಸಿರಾಜ್ ಖರೀದಿಸಿದ್ದ ಕಾರು, ಸೆಕೆಂಡ್ ಹ್ಯಾಂಡ್ ಟೊಯೋಟಾ ಕೊರೊಲಾ ಆಗಿತ್ತು. ಕ್ರಿಕೆಟ್ ನಲ್ಲಿ ಉತ್ತುಂಗಕ್ಕೇರುತ್ತಿದ್ದಂತೆ ಮೊಹಮ್ಮದ್ ಸಿರಾಜ್ ಹಲವು ದುಬಾರಿ ಕಾರುಗಳನ್ನ ಕೂಡಾ ಖರೀದಿಸಿದ್ದಾರೆ. 40 ಲಕ್ಷದ ಟೊಯೊಟಾ ಫಾರ್ಚುನರ್, 75 ಲಕ್ಷದ ಬಿಎಂಡಬ್ಲ್ಯು 5 ಸಿರೀಸ್, 1.86 ಕೋಟಿಯ ಮರ್ಸಿಡಿಸ್ ಬೆಂಜ್ ಖರೀದಿಸಿದ್ದ ಸಿರಾಜ್, ಇದೀಗ 2.8 ಕೋಟಿ ಮೌಲ್ಯದ Range Rover ದುಬಾರಿ ಕಾರು ಖರೀದಿಸಿದ್ದಾರೆ. ಸಿರಾಜ್ ಟೀಮ್ ಇಂಡಿಯಾದಲ್ಲಿ ದೊಡ್ಡ ಕ್ರಿಕೆಟರ್ ಆಗಬೇಕು ಅನ್ನೋದು ತಂದೆಯ ಆಸೆಯಾಗಿತ್ತು. ಅಪ್ಪನ ಕನಸನ್ನ ಈಡೇರಿಸಿದ್ದಲ್ಲದೆ, ಕಷ್ಟದಲ್ಲಿದ್ದ ಹೆತ್ತವರಿಗೆ ಕ್ರಿಕೆಟ್ ಆಟದ ಮೂಲಕ ಒಂದೊಳ್ಳೇ ಜೀವನ ರೂಪಿಸಿಕೊಟ್ಟಿದ್ದರು ಸಿರಾಜ್. 2020ರಲ್ಲಿ ಸಿರಾಜ್ ಅವರ ತಂದೆ ತೀರಿಕೊಂಡಿದ್ದರು. ಅಂದು ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ ತಂಡದ ಪರ ಆಡುತ್ತಿದ್ದರು ಸಿರಾಜ್. ತನ್ನ ತಂದೆ ತೀರಿಕೊಂಡರೂ ಭಾರತಕ್ಕೆ ವಾಪಸ್ ಆಗದೆ ಪಂದ್ಯವನ್ನಾಡಿದ್ದರು. ನನಗೆ ತಂದೆಯ ಆಸೆಯನ್ನು ನೆರೆವೇರಿಸುವುದೇ ಮುಖ್ಯ ಎಂದು ಹೇಳಿದ್ದರು. ಇದು ಸಿರಾಜ್ ಅವರ ದೇಶಪ್ರೇಮವನ್ನು ಎತ್ತಿ ತೋರಿಸಿತ್ತು. ಜೊತೆಗೆ ಸಿರಾಜ್ ಕ್ರೀಡಾಸ್ಪೂರ್ತಿಗೆ ಕ್ರಿಕೆಟ್ ದಿಗ್ಗಜರು ಕೂಡಾ ಭೇಷ್ ಎಂದು ಬೆನ್ನುತಟ್ಟಿದ್ದರು.

ಇದೀಗ ಲಂಕಾ ಪ್ರವಾಸ ಮುಗಿಸಿ ತಾಯ್ನಾಡಿಗೆ ಹಿಂದಿರುಗಿರುವ ಮೊಹಮ್ಮದ್ ಸಿರಾಜ್, 2.8 ಕೋಟಿ ಬೆಲೆಯ ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಕಪ್ಪು ಬಣ್ಣದ ಕಾರ್ ಖರೀದಿಸಿರುವ ಸಿರಾಜ್, ಈ ಸಂತಸವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕನಸುಗಳಿಗೆ ಮಿತಿಯೇ ಇಲ್ಲ. ಏಕೆಂದರೆ ಆ ಕನಸುಗಳು ನಮ್ಮನ್ನು ಮತ್ತಷ್ಟು ಸಾಧಿಸುವಂತೆ, ಮತ್ತಷ್ಟು ಸಂಪಾದಿಸುವಂತೆ ಪ್ರೇರೇಪಿಸುತ್ತವೆ. ನಿರಂತರ ಪ್ರಯತ್ನ ನಡೆಸಿದರೆ ಮಾತ್ರ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ. ಆ ದೇವರ ಆಶೀರ್ವಾದದಿಂದ ಕನಸಿನ ಲ್ಯಾಂಡ್ ರೋವರ್ ಕಾರನ್ನು ಖರೀದಿಸಲು ಸಾಧ್ಯವಾಗಿದೆ. ಇದಕ್ಕಾಗಿ ನಾನು ಕೃತಜ್ಞನಾಗಿರುತ್ತೇನೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ, ಬಯಸಿದ್ದನ್ನು ಖಂಡಿತ ಸಾಧಿಸಬಹುದು ಎಂದು ಸಿರಾಜ್ ಬರೆದುಕೊಂಡಿದ್ದಾರೆ. ಹೌದು.. ಸಿರಾಜ್ ಅವರ ಈ ಕಾರು ಖರೀದಿ ಹಿಂದೆ ಅಷ್ಟೇ ಪರಿಶ್ರಮವಿದೆ. ಅಷ್ಟೇ ಕಷ್ಟದ ಬದುಕಿದೆ. ಸಿರಾಜ್ ಅವರ ಈ ಲೈಫ್ ಸ್ಟೋರಿ ಅದೆಷ್ಟೋ ಯುವಕರಿಗೆ ಸ್ಪೂರ್ತಿ.

Shwetha M

Leave a Reply

Your email address will not be published. Required fields are marked *