ವಿ.ಸೋಮಣ್ಣಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ – ಯಾವುದೇ ಕಾರಣ ನೀಡದೇ ಸಂಸದರ ಕಚೇರಿ ವಾಪಸ್ ಪಡೆದ ಸರ್ಕಾರ
ಕಾಂಗ್ರೆಸ್, ಮೈತ್ರಿ ಪಕ್ಷದ ಟಾಕ್ ವಾರ್ ಜೋರಾಗಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್, ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದರೆ, ಇತ್ತ ಕಾಂಗ್ರೆಸ್ ಈ ಎರಡು ಪಕ್ಷಗಳನ್ನ ಟಾರ್ಗೆಟ್ ಮಾಡುತ್ತಾ ಬಂದಿದೆ. ಇತ್ತೀಚೆಗೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರ ಜನತಾ ದರ್ಶನಕ್ಕೆ ಅಧಿಕಾರಿಗಳು ಹೋಗದಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದೀಗ ಕೇಂದ್ರ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಗೆ ಬಿಗ್ ಶಾಕ್ ನೀಡಿದೆ. ಸೋಮಣ್ಣಗೆ ನೀಡಲಾಗಿದ್ದ ಕಚೇರಿಯನ್ನು ವಾಪಸ್ ಪಡೆದುಕೊಂಡಿದೆ.
ಇದನ್ನೂ ಓದಿ: ದುಲೀಪ್ ಟ್ರೋಫಿಯಲ್ಲೂ ಕೆ.ಎಲ್ ರಾಹುಲ್ ಗೆ ಅನ್ಯಾಯ – ಗಿಲ್ ಕ್ಯಾಪ್ಟನ್ಸಿಯಲ್ಲಿ ಆಡ್ಬೇಕಾ?
ತುಮಕೂರಿನ ರೈಲ್ವೆ ನಿಲ್ದಾಣ ಬಳಿ ಇರುವ ಹಳೆಯ ಪರಿವೀಕ್ಷಣಾ ಮಂದಿರವನ್ನು ಸೋಮಣ್ಣ ಅವರಿಗೆ ಸರ್ಕಾರ ನೀಡಿತ್ತು. ಆ.18 ಭಾನುವಾರದಂದು ನೂತನ ಕಚೇರಿ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಸೋಮಣ್ಣ ಅವರು ನೂತನ ಕಚೇರಿಯಲ್ಲಿ ಟೇಬಲ್ ಹಾಗೂ ಕುರ್ಚಿಗಳನ್ನು ಹಾಕಿಸಿದ್ದರು. ವಿ.ಸೋಮಣ್ಣ, ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವರು ಭಾರತ ಸರ್ಕಾರ ಲೋಕಸಭಾ ಸದಸ್ಯರ ಕಚೇರಿ, ತುಮಕೂರು ಎಂದು ನಾಮಫಲಕ ಕೂಡ ಹಾಕಲಾಗಿತ್ತು. ಆದರೆ ರಾಜ್ಯ ಸರ್ಕಾರ ಯಾವುದೇ ಕಾರಣ ನೀಡದೇ ನೂತನ ಸಂಸದರ ಕಚೇರಿ ವಾಪಸ್ ಪಡೆದಿದೆ. ಕಚೇರಿ ಉಪಯೋಗಕ್ಕೆ ನೀಡಿದ ಅನುಮೋದನೆಯು ಈ ಕೂಡಲೇ ಹಿಂಪಡೆಯಲಾಗಿರುವ ಬಗ್ಗೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿ, ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜಶೇಖರ ಸೂಚಿಸಿದ್ದಾರೆ.
ಇದೀಗ ರಾಜ್ಯ ಸರ್ಕಾರದ ನಡೆಗೆ ತುಮಕೂರು ನಗರ ಬಿಜೆಪಿ ಶಾಸಕ ಜಿ.ಬಿ ಜ್ಯೋತಿ ಗಣೇಶ್ ಕಿಡಿಕಾರಿದ್ದಾರೆ. ಇಲ್ಲಿ ಇಷ್ಟು ವರ್ಷ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಕ್ಷುಲ್ಲಕ ರಾಜಕಾರಣ ಮಾಡಬಾರದು. ಈ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವ ಮಾತೇ ಇಲ್ಲ. ಯಾರು ಏನು ಮಾಡುತ್ತಾರೋ ನೋಡೋಣ. ಈ ಭಾನುವಾರ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಜಿಲ್ಲೆಯ ಎಲ್ಲಾ ಮುಖಂಡರಿಗೆ ಆಹ್ವಾನ ನೀಡಲಾಗಿತ್ತು. ಈಗ ಏಕಾಏಕಿ ರದ್ದು ಮಾಡಿ ಆದೇಶ ಮಾಡಿದ್ದಾರೆ. ಈ ರೀತಿಯ ನಡೆ ಸರಿಯಲ್ಲ ಎಂದು ಸಿಟ್ಟು ಹೊರಹಾಕಿದ್ದಾರೆ.