ಅಭಿಷೇಕ್ ಅಂಬರೀಶ್ ದರ್ಶನ್‌ ನನ್ನು ಭೇಟಿಯಾಗಿದ್ಯಾಕೆ? – ಚಿಕ್ಕಣ್ಣನಿಗೆ ಕಾಡ್ತಿದ್ಯಾ ಆ ಭಯ? –

ಅಭಿಷೇಕ್ ಅಂಬರೀಶ್ ದರ್ಶನ್‌ ನನ್ನು ಭೇಟಿಯಾಗಿದ್ಯಾಕೆ? – ಚಿಕ್ಕಣ್ಣನಿಗೆ ಕಾಡ್ತಿದ್ಯಾ ಆ ಭಯ? –

ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ & ಗ್ಯಾಂಗ್ ಜೈಲು ಸೇರಿ ಎರಡು ತಿಂಗಳಾಯ್ತು. ಆದ್ರೆ ಸದ್ಯಕ್ಕಂತೂ ಆರೋಪಿಗಳಿಗೆ ಬಿಡುಗಡೆ ಭಾಗ್ಯ ಸಿಗೋ ಹಾಗೇ ಕಾಣ್ತಿಲ್ಲ. ಪೊಲೀಸರ ತನಿಖೆಯಲ್ಲಿ ದಚ್ಚು ಮತ್ತು ಗ್ಯಾಂಗ್ ವಿರುದ್ಧ ಸಾಕ್ಷಿಗಳು ಬಲಗೊಳ್ತಿದ್ದು, ಕಾಟೇರನಿಗೆ ಸಂಕಷ್ಟ ಹೆಚ್ಚಾಗ್ತನೇ ಇದೆ. ಮತ್ತೊಂದೆಡೆ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ತಲುಪಿದ್ದು, ವರದಿಯಲ್ಲಿ ಹತ್ಯೆ ವೇಳೆ ದರ್ಶನ್ ಮತ್ತವರ ಗ್ಯಾಂಗ್ ನಡೆಸಿರುವ ರಕ್ಕಸತನದ ವರ್ತನೆ ಬಯಲಾಗಿದೆ. ಎಫ್ಎಸ್ಎಲ್ ರಿಪೋರ್ಟ್ನಲ್ಲಿ ದರ್ಶನ್ ಸೇರಿ ಆರು ಪ್ರಮುಖ ಆರೋಪಿಗಳ ಬಟ್ಟೆಗಳ ಮೇಲೆ ಮೃತ ರೇಣುಕಾಸ್ವಾಮಿಯ ರಕ್ತದ ಕಲೆಗಳಿರುವುದು ದೃಢವಾಗಿದೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಈವರೆಗೂ 200 ಕ್ಕೂ ಹೆಚ್ಚು ಪ್ರಮುಖ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಇದ್ರಿಂದಾಗಿ ದರ್ಶನ್ ಸೇರಿ 17 ಆರೋಪಿಗಳಿಗೆ ಜಾಮೀನು ಸಿಗೋದು ತುಂಬಾ ಕಷ್ಟ ಇದೆ. ಹೀಗೆ ದರ್ಶನ್ಗೆ ಜೈಲಿನ ಸಂಕಷ್ಟ ಗಟ್ಟಿಯಾಗ್ತಿರುವಾಗ್ಲೇ ಸ್ಯಾಂಡಲ್ವುಡ್ನಲ್ಲಿ ಮೃತ್ಯುಂಜಯ ಹೋಮ ಮತ್ತು ನಾಗದೇವತೆಯ ಆರಾಧನೆ ನಡೆದಿದೆ. ಪೂಜೆಯಲ್ಲಿ ಭಾಗಿಯಾಗಿದ್ದ ಅಭಿಷೇಕ್ ಅಂಬರೀಶ್ ಜೈಲಿಗೆ ತೆರಳಿ ದರ್ಶನ್ರನ್ನ ಭೇಟಿಯಾಗಿದ್ದಾರೆ. ಇದು ಸಾಕಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕಿದೆ.

ಇದನ್ನೂ ಓದಿ: ಧ್ವಜಾರೋಹಣ ನೆರವೇರಿಸಿದ ಸಿಎಂ –  ಕೇಂದ್ರದ ವಿರುದ್ದ ಸಿದ್ದರಾಮಯ್ಯ ಕಿಡಿ

ದರ್ಶನ್ ಕೈ ಸೇರಿತಾ ಪ್ರಸಾದ?

ಹತ್ಯೆ ಕೇಸ್ನಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಜೈಲು ಸೇರಿ ಭರ್ತಿ 2 ತಿಂಗಳೇ ಕಳೆದಿದೆ. ಆದ್ರೆ ಅಣ್ಣ ಅಣ್ಣ ಅಂತಾ ಸದಾ ಜೊತೆಯಲ್ಲೇ ಇರ್ತಿದ್ದ ಅಭಿಷೇಕ್ ಅಂಬರೀಶ್ ಈವರೆಗೂ ದರ್ಶನ್ ಭೇಟಿಗೆ ಬಂದಿರಲಿಲ್ಲ. ಇದೀಗ 2 ತಿಂಗಳಾದ ಮೇಲೆ ಅಭಿಷೇಕ್ ಅಂಬರೀಷ್ ಪರಪ್ಪನ ಅಗ್ರಹಾರಕ್ಕೆ ತೆರಳಿದ್ರು. ಹಾಗೇ ನಟರಾದ ಧನ್ವೀರ್ ಮತ್ತು ಚಿಕ್ಕಣ್ಣ ಕೂಡ ದರ್ಶನ್ ಭೇಟಿಗಾಗಿ ಜೈಲಿಗೆ ಬಂದಿದ್ರು. ಅರ್ಧ ಗಂಟೆಗಳ ಕಾಲ ದರ್ಶನ್ ಜೊತೆ ಮೂವರು ಮಾತುಕತೆ ನಡೆಸಿದ್ದಾರೆ. ಮಾತುಕತೆ ವೇಳೆ ಅಭಿಷೇಕ್ ದರ್ಶನ್ರನ್ನ ಅಪ್ಪಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ದರ್ಶನ್ ಸುಮಲತಾ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಮತ್ತೊಂದೆಡೆ ದರ್ಶನ್ರನ್ನ ಚಿಕ್ಕಣ್ಣ ಭೇಟಿಯಾಗಿದ್ದು ಸಾಕಷ್ಟು ಪ್ರಶ್ನೆಗಳನ್ನ ಮೂಡಿಸಿದೆ. ಯಾಕಂದ್ರೆ ಚಿಕ್ಕಣ್ಣ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಂದರ್ಭಿಕ ಸಾಕ್ಷಿಯಾಗಿದ್ದಾರೆ. ಹತ್ಯೆ ನಡೆದ ಬಳಿಕ ನಟ ದರ್ಶನ್ ಜೊತೆ ಚಿಕ್ಕಣ್ಣ ಪಾರ್ಟಿ ಮಾಡಿದ್ರು. ಪಾರ್ಟಿ ಅಧಾರದ ಮೇಲೆ ಸಿಆರ್ಪಿಸಿ 164ರ ಅಡಿಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲು ಮಾಡಲಾಗಿದೆ. ಹೀಗಿದ್ರೂ ನ್ಯಾಯಾಂಗ ಬಂಧನದಲ್ಲಿದ್ದರುವ ದರ್ಶನ್ರನ್ನ ಚಿಕ್ಕಣ್ಣ ಭೇಟಿಯಾಗಿ ಮಾತುಕತೆ ನಡೆಸಿರೋದು ಕುತೂಹಲ ಮೂಡಿಸಿದೆ. ನಟ ದರ್ಶನ್ ಭೇಟಿಯಿಂದ ಸಾಕ್ಷಿ ಮೇಲೆ ಪ್ರಭಾವ ಬೀರುವ ಸಾಧ್ಯತೆ ಕೂಡ ಇದೆ. ಇನ್ನು ದರ್ಶನ್ ಭೇಟಿಗೂ ಮುನ್ನ ಕನ್ನಡ ಚಲನಚಿತ್ರದ ಉಳಿವಿಗಾಗಿ ಕಲಾವಿದರ ಸಂಘದಲ್ಲಿ ಹೋಮ, ಹವನ ನಡೆದಿದೆ. ವಿಶೇಷ ಪೂಜೆಯಲ್ಲಿ ಸ್ಯಾಂಡಲ್ವುಡ್ನ ಹಲವು ಕಲಾವಿದರು ಭಾಗಿಯಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಪೂಜೆಯಲ್ಲಿ ಭಾಗಿಯಾಗಿದ್ದ ನಟ ಅಭಿಷೇಕ್ ಅಂಬರೀಶ್, ಧನ್ವೀರ್ ಹಾಗೂ ಚಿಕ್ಕಣ್ಣ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ದರ್ಶನ್ ಭೇಟಿ ಮಾಡಿದ್ದಾರೆ. ಹೋಮ ಹವನದ ಪ್ರಸಾದ ಪಡೆದು ಸ್ಯಾಂಡಲ್ವುಡ್ ನಟರು ಪರಪ್ಪನ ಅಗ್ರಹಾರಕ್ಕೆ ತೆರಳಿ ದರ್ಶನ್ಗೆ ಪ್ರಸಾದ ಮುಟ್ಟಿಸಿದ್ದಾರೆ.

ಅಸಲಿಗೆ ಸ್ಯಾಂಡಲ್ವುಡ್ನಲ್ಲಿ ಇಂಥಾದ್ದೊಂದು ಪೂಜೆ ನಡೆಸಲು ಸಿದ್ಧತೆ ನಡೆದಿದೆ ಎಂದಾಗಲೇ ಅದು ದರ್ಶನ್ಗಾಗಿ ಎಂಬ ಸುದ್ದಿ ಹರಿದಾಡಿತ್ತು. ಮಾಧ್ಯಮಗಳಲ್ಲೂ ಕೂಡ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಆದ್ರೆ ಇದಕ್ಕೆ ಸ್ಪಷ್ಟನೆ ನೀಡಿದ್ದ ರಾಕ್ಲೈನ್ ವೆಂಕಟೇಶ್, ದರ್ಶನ್ಗಾಗಿ ಅಲ್ಲ. ಕನ್ನಡ ಚಿತ್ರರಂಗದ ಒಳಿತಿಗಾಗಿ ಎಂದಿದ್ರು. ಆದ್ರೀಗ ಪೂಜೆಯಲ್ಲಿ ಭಾಗಿಯಾಗಿದ್ದ ನಟರು ಪ್ರಸಾದ ಪಡೆದು ಜೈಲಿಗೆ ತೆರಳಿರೋದು ಪೂಜೆ ದರ್ಶನ್ಗಾಗಿಯೇ ನಡೆದಿದ್ದು ಎಂಬ ಅನುಮಾನಕ್ಕೆ ಪುಷ್ಠಿ ನೀಡಿದಂತಿದೆ. ಮತ್ತೊಂದೆಡೆ ನ್ಯಾಯಾಲಯವು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಆಗಸ್ಟ್ 28ರ ವರೆಗೆ ಮುಂದೂಡಿದೆ.

Shwetha M