ಪಾಕ್ ಚಿನ್ನ ನದೀಮ್ ಗೆ ಸಿಕ್ಕ ಹಣವೆಷ್ಟು? – ಉಗ್ರನ ಜೊತೆ ಸ್ನೇಹ ಬೇಕಿತ್ತಾ?

ಪಾಕ್ ಚಿನ್ನ ನದೀಮ್ ಗೆ ಸಿಕ್ಕ ಹಣವೆಷ್ಟು? – ಉಗ್ರನ ಜೊತೆ ಸ್ನೇಹ ಬೇಕಿತ್ತಾ?

ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಬಂಗಾರದ ಸಾಧನೆ ಮಾಡಿ ಜಗತ್ತನ್ನೇ ಸೆಳೆದಿದ್ರು. ಪುರುಷರ ಜಾವೆಲಿನ್ ಥ್ರೋ ಫೈನಲ್ನಲ್ಲಿ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರನ್ನು ಮೀರಿಸಿ ಅರ್ಷದ್ ಗೋಲ್ಡನ್ ಬಾಯ್ ಆಗಿದ್ರು. ಆ ಮೂಲಕ ಅರ್ಷದ್ ವೈಯಕ್ತಿಕ ವಿಭಾಗದಲ್ಲಿ ಒಲಿಂಪಿಕ್ ಚಿನ್ನ ಗೆದ್ದ ಪಾಕಿಸ್ತಾನದ ಏಕೈಕ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು ಒಂದೇ ರಾತ್ರಿಗೆ ಅರ್ಷದ್ರನ್ನ ಪಾಕಿಸ್ತಾನದ ಸ್ಟಾರ್ ಆಟಗಾರನಾಗಿ ಮಾಡಿದೆ. ಪ್ಯಾರಿಸ್ನಿಂದ ತಮ್ಮ ತವರು ನೆಲಕ್ಕೆ ಮರಳಿರುವ ಅರ್ಷದ್ಗೆ ದೇಶದಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಪಾಕ್ ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯ ಸರ್ಕಾರದಿಂದಲೂ ನಗದು ಬಹುಮಾನಗಳು ಘೋಷಣೆಯಾಗಿವೆ. ಆದ್ರೆ ಚಿನ್ನದ ಸಾಧನೆ ಮಾಡಿದ್ದ ಅದೇ ಅರ್ಶದ್ ಈಗ ವಿವಾದದ ಕೇಂದ್ರ ಬಿಂದು ಆಗಿದ್ದಾರೆ. ಅದೊಬ್ಬನ ಜೊತೆಗಿನ ನಂಟು ಬಂಗಾರ ಗೆದ್ದವನ ಅಸಲಿಯತ್ತನ್ನೇ ಪ್ರಶ್ನಿಸುತ್ತಿದೆ. ಅಷ್ಟಕ್ಕೂ ಅರ್ಷದ್ ಎಳೆದುಕೊಂಡಿರೋ ವಿವಾದ ಎಂಥಾದ್ದು? ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಾಷ್ಟ್ರ ಮೊದಲು.. ದೇಶ ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ – ಪ್ರಧಾನಿ ಮೋದಿ ಪ್ರತಿಜ್ಞೆ

ಪಾಕಿಸ್ತಾನದ 32 ವರ್ಷಗಳ ಪದಕದ ಬರ ನೀಗಿಸಿದ್ದ ನದೀಮ್ ನನ್ನ ಇಡೀ ಕ್ರೀಡಾಜಗತ್ತು ಕೊಂಡಾಡುತ್ತಿತ್ತು. ಒಂದು ರೀತಿ ಕ್ರೀಡಾಲೋಕದ ಕಣ್ಮಣಿಯಾಗಿ ಮೆರೆದಿದ್ದರು ನದೀಮ್. ಸರ್ಕಾರದ ನೆರವಿಲ್ಲದೇ, ಜಾವಲಿನ್ ಖರೀದಿಗೆ ದುಡ್ಡಿಲ್ಲದೇ, ಯಾರ್ಯಾರದೋ ನೆರವಿನೊಂದಿಗೆ ಒಲಿಂಪಿಕ್ಸ್ ಅಂಗಳಕ್ಕೆ ಕಾಲಿಟ್ಟಿದ್ದ ನದೀಮ್ ಚಿನ್ನ ಗೆಲ್ಲೋ ಮೂಲಕ ವಿಶ್ವದ ಗಮನ ಸೆಳೆದಿದ್ದರು. ಅದರಲ್ಲೂ 92.97 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಒಲಿಂಪಿಕ್ಸ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಇದೇ ಒಲಿಂಪಿಕ್ಸ್ ವೀರ ನದೀಮ್ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಅರ್ಷದ್ ನದೀಮ್ ಒಂದು ಫೋಟೋ ಹಾಗೂ ವಿಡಿಯೋ ಈಗ ಸೋಷಿಯಲ್ ಮಿಡಿಯಾಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಬೇಡದ ಕಾರಣಕ್ಕೆ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಈ ವಿವಾದ ನದೀಮ್ ಜನಪ್ರಿಯತೆಗೆ ಹಾನಿ ಮಾಡುವ ಸಾಧ್ಯತೆ ಕೂಡಾ ಹೆಚ್ಚಾಗಿದೆ.

ಉಗ್ರನ ಜೊತೆ ನದೀಮ್ ನಂಟು?

ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾರನ್ನೇ ಹಿಂದಿಕ್ಕಿ ಜಾವಲಿನ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದರು ಅರ್ಷದ್ ನದೀಮ್. ನದೀಮ್ ಸಾಧನೆಗೆ ಇಡೀ ವಿಶ್ವವೇ ಬೆರಗಾಗಿತ್ತು. ಇದೀಗ ಇದೇ ನದೀಮ್ ತೆಗೆಸಿಕೊಂಡ ಒಂದು ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಅರ್ಷದ್ ನದೀಮ್ ಪಾಕಿಸ್ತಾನಕ್ಕೆ ಮರಳುತ್ತಿದ್ದಂತೆ ಮೊದಲು ಭೇಟಿಯಾಗಿದ್ದೇ ಧಾರ್ ಎಂಬುವನನ್ನ ಅನ್ನೋದೇ ದೊಡ್ಡ ವಿವಾದವಾಗಿದೆ. ಯುಎನ್ ಲಿಸ್ಟ್ನಲ್ಲಿರೋ ಲಷ್ಕರ್ ಎ ತೈಬಾ ಭಯೋತ್ಪಾದಕನ ಜೊತೆ ಅರ್ಷದ್ ಕಾಣಿಸಿಕೊಂಡಿದ್ದಾರೆ. ಸಂಘಟನೆಯ ಹಣಕಾಸು ಕಾರ್ಯದರ್ಶಿಯಾಗಿರುವ ಹ್ಯಾರಿಸ್ ದಾರ್, ಈಗಾಗಲೇ ಪಾಕಿಸ್ತಾನದ ಪೈಸಲಾಬಾದ್ ಸೇರಿದಂತೆ ಅನೇಕ ಕಡೆ ಕಾನೂನು ಬಾಹಿರ ಚಟುವಟಿಕೆಗಳ ಶಿಬಿರಗಳನ್ನು ಆಯೋಜಿಸಿದ್ದಾನೆ. ಅಷ್ಟೇ ಅಲ್ಲದೆ ವಿಶ್ವಸಂಸ್ಥೆಯ ಕುಖ್ಯಾತ ಭಯೋತ್ಪಾದಕರ ಪಟ್ಟಿಯಲ್ಲೂ ಹ್ಯಾರಿಸ್ ದಾರ್ ಹೆಸರಿದೆ. ಇದಾಗ್ಯೂ ಅರ್ಷದ್ ನದೀಮ್ ಆತನೊಂದಿಗೆ ಕಾಣಿಸಿಕೊಂಡಿರುವುದು ಸಾಕಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕಿದೆ.

ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವುದು ನದೀಮ್ ಅವರ ಜಾಗತಿಕ ಮನ್ನಣೆಗೂ ಹಾನಿ ಮಾಡಲಿದೆ ಎನ್ನಲಾಗಿದೆ. ಇನ್ನೊಂದೆಡೆ ಧಾರ್ ಒಂದು ಕಾರ್ಯಕ್ರಮಕ್ಕೆ ನದೀಮ್ ಅವ್ರನ್ನ ಗೆಸ್ಟ್ ಆಗಿ ಕರೆದಿದ್ದ ಅಂತಾನೂ ಹೇಳಲಾಗ್ತಿದೆ. ಮತ್ತೊಂದೆಡೆ ನದೀಮ್ ಒಲಿಂಪಿಕ್ಸ್ ನಲ್ಲಿ ಮಾಡಿದ ಸಾಧನೆಗೆ ಪಾಕಿಸ್ತಾನ ಸರ್ಕಾರ ಕೋಟಿ ಕೋಟಿ ಬಹುಮಾನವನ್ನೇ ಸುರಿಯುತ್ತಿದೆ.

ನದೀಮ್ ಗೆ ಕೋಟಿ ಕೋಟಿ ಗಿಫ್ಟ್

ಅರ್ಷದ್ ನದೀಮ್ ಬಂಗಾರ ಪದಕ ಗೆದ್ದುಕೊಂಡು ಪಾಕಿಸ್ತಾನಕ್ಕೆ ಬಂದಾಗ ದೊಡ್ಡ ವಿಜಯೋತ್ಸವ ಆಚರಿಸಲಾಯ್ತು. ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಿಕೆಆರ್ ನೀಡಿ ಗೌರವಿಸಲಾಗಿದೆ. ಜೊತೆಗೆ ಪಾಕಿಸ್ತಾನಿ ರೂಪಾಯಿ 15 ಕೋಟಿ ನೀಡಿ ಸನ್ಮಾನಿಸಲಾಗಿದೆ. ಅಷ್ಟೇ ಅಲ್ಲದೇ, ಜಾವಲಿನ್ ಎಸೆದ ದೂರದ 92.97 ಮೀಟರ್ ನಂಬರ್ ನ ಕಾರು ಕೂಡಾ ಉಡುಗೊರೆಯಾಗಿ ಸಿಕ್ಕಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಎಂ ಆಗಿರುವ ಮರ್ಯಮ್ ನವಾಜ್ ಅರ್ಷದ್ರನ್ನು ಭೇಟಿಯಾಗಿ, ಈ ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ. ಹೊಂಡಾ ಸಿವಕ್ ಕಂಪನಿಯ ಕಾರನ್ನ ಉಡುಗೊರೆಯಾಗಿ ನೀಡಿದೆ.

ಯಾವುದೇ ಸೌಲಭ್ಯ, ಪ್ರಾಯೋಜಕತ್ವವಿಲ್ಲದೆ ಒಲಿಂಪಿಕ್ಸ್ಗೆ ಕಾಲಿಟ್ಟಿದ್ದ ನದೀಮ್ ಐತಿಹಾಸಿಕ ಚಿನ್ನ ಗೆದ್ದಿದ್ದಾರೆ. ಇವರ ಪ್ರತಿಭೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅನೇಕ ಕ್ರಿಕೆಟಿಗರು ಮತ್ತು ಸೆಲೆಬ್ರಿಟಿಗಳು ಅವರನ್ನು ಸಾಧನೆಯನ್ನ ಪ್ರಶಂಸಿಸುತ್ತಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನ ಸರ್ಕಾರವೂ ಅವರನ್ನು ಸನ್ಮಾನಿಸಲು ಸಿದ್ಧತೆ ನಡೆಸಿದೆ. ಹೀಗೆ ಕೋಟಿ ಕೋಟಿ ರೂಪಾಯಿಯ ಬಹುಮಾನ ಪಡೆದು ದಿಢೀರ್ ಕೋಟ್ಯಾಧಿಪತಿಯಾದ ನದೀಮ್ ಈಗ ಯಾಕೆ ಧಾರ್ ಜೊತೆ ಕಾಣಿಸಿಕೊಂಡಿದ್ದು ಅನ್ನೋದೇ ವಿವಾದಕ್ಕೀಡಾಗಿದೆ. ಒಲಿಂಪಿಕ್ಸ್ ನಲ್ಲಿ ಚಿನ್ನದಂಥಾ ಸಾಧನೆ ಮಾಡಿದ ನದೀಮ್ ಗೆ ಇದೆಲ್ಲಾ ಬೇಕಿತ್ತಾ ಅನ್ನೋ ಪ್ರಶ್ನೆ ಕೂಡಾ ಎದುರಾಗಿದೆ.

Shwetha M

Leave a Reply

Your email address will not be published. Required fields are marked *