ದುಲೀಪ್ ಟ್ರೋಫಿಯಲ್ಲಿ ರೋಹಿತ್ & ಕೊಹ್ಲಿ ಫೈಟ್? – ಸ್ಟಾರ್ ಪ್ಲೇಯರ್ಸ್.. ಟೂರ್ನಿ ಟ್ವಿಸ್ಟ್ ಏನು?
ಶ್ರೀಲಂಕಾ ಪ್ರವಾಸದ ಬಳಿಕ ರಿಲ್ಯಾಕ್ಸ್ ಮೋಡ್ನಲ್ಲಿರೋ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಶಾಕ್ ಕೊಟ್ಟಿದೆ. ಟೀಮ್ ಮ್ಯಾನೇಜ್ಮೆಂಟ್, ಸೆಲೆಕ್ಷನ್ ಕಮಿಟಿ ಜೊತೆ ಹೈವೋಲ್ಟೆಜ್ ಸಭೆ ನಡೆಸಿರೋ ಬಿಸಿಸಿಐ ಬಾಸ್ಗಳು ಆಟಗಾರರಿಗೆ ಹೊಸ ಟಾಸ್ಕ್ ನೀಡಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಬಾಂಗ್ಲಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ಡೊಮೆಸ್ಟಿಕ್ ಕ್ರಿಕೆಟ್ ಆಡುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ಗಳ ಸರಣಿಯೊಂದಿಗೆ ಟೀಮ್ ಇಂಡಿಯಾದ ಕ್ರಿಕೆಟ್ ವೇಳಾಪಟ್ಟಿ ಪುನರಾರಂಭವಾಗಲಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಭಾರತ ತಂಡ 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದರೊಂದಿಗೆ ಭಾರತ ತಂಡದ ಟೀಮ್ ಮ್ಯಾನೇಜ್ಮೆಂಟ್ ಮತ್ತು ಆಯ್ಕೆಗಾರರು ಅತ್ಯುತ್ತಮ ಟೆಸ್ಟ್ ತಂಡವನ್ನು ಆಯ್ಕೆ ಮಾಡಲು ಮಾಸ್ಟರ್ ಪ್ಲಾನ್ ಹಾಕಿಕೊಂಡಿದ್ದಾರೆ. ಇದ್ರ ಸಿದ್ಧತೆಯ ಭಾಗವಾಗಿ ಸಪ್ಟೆಂಬರ್ 5ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡುವಂತೆ ಭಾರತ ತಂಡದ ಸ್ಟಾರ್ಗಳಿಗೆ ಬಿಸಿಸಿಐ ಸೂಚಿಸಿದೆ. ಅಷ್ಟಕ್ಕೂ ದುಲೀಪ್ ಟ್ರೋಫಿ ಅಂದ್ರೇನು? ಎಷ್ಟು ತಂಡಗಳು ಭಾಗಿಯಾಗುತ್ತವೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಪವಿತ್ರಾಗೌಡ ವಿರುದ್ಧ ಮತ್ತೊಂದು ಪ್ರಬಲ ಸಾಕ್ಷಿ!
ದುಲೀಪ್ ಟ್ರೋಫಿ ಆಡಲು ಆದೇಶ!
ಟೀಮ್ ಇಂಡಿಯಾದ ಎಲ್ಲಾ ಸ್ಟಾರ್ ಆಟಗಾರರಿಗೆ ದುಲೀಪ್ ಟ್ರೋಫಿ ಆಡಲು ಈಗಾಗಲೇ ಆದೇಶ ನೀಡಲಾಗಿದೆ. ನಾಯಕ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ, ರಿಷಬ್ ಪಂತ್, ಕೆಎಲ್ ರಾಹುಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ಇತರ ಆಟಗಾರರು ದೇಶಿ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲಿದ್ದಾರೆ. ಹಾಗೇನಾದ್ರೂ ರೋಹಿತ್ ಮತ್ತು ವಿರಾಟ್ ಈ ಟೂರ್ನಿಯಲ್ಲಿ ಭಾಗವಹಿಸಿದ್ರೆ ಎದುರು ಬದುರಾಗಿ ಸೆಣಸಾಡೋದಂತೂ ಪಕ್ಕ ಆಗಲಿದೆ. ಅಷ್ಟಕ್ಕೂ ದುಲೀಪ್ ಟ್ರೋಫಿ ಅನ್ನೋದು ಭಾರತದಲ್ಲಿ ಆಡಲಾಗುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್ಸಿನ್ಜಿ ಅವರ ಹೆಸರನ್ನು ಇಡಲಾಗಿದೆ. ದುಲೀಪ್ ಟ್ರೋಫಿಯನ್ನು 1961-62 ರಲ್ಲಿ ಮೊದಲ ಬಾರಿಗೆ ಆಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ. ಈ ಟೂರ್ನಿಯಲ್ಲಿ ಕೇಂದ್ರ, ದಕ್ಷಿಣ, ಪೂರ್ವ, ಪಶ್ಚಿಮ, ಉತ್ತರ ಹಾಗೂ ಈಶಾನ್ಯ ವಲಯ ಎಂದು ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ. ಇನ್ನು ದುಲೀಪ್ ಟ್ರೋಫಿ ಟೂರ್ನಿಯಿಂದ ಆಲ್ಫಾರ್ಮೆಟ್ ಪ್ಲೇಯರ್, ವೇಗಿ ಜಸ್ಪ್ರಿತ್ ಬೂಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ತಿರ್ಮಾನಿಸಿದೆ. ಟೆಸ್ಟ್ನಿಂದ ದೂರ ಉಳಿದಿರೋದ್ರಿಂದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೂ ವಿನಾಯಿತಿ ನೀಡಲಾಗಿದೆ. ಹಾಗೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಆಡಬೇಕಾ? ಬೇಡ್ವಾ? ಅನ್ನೋ ನಿರ್ಧಾರವನ್ನ ನೀವೇ ತೆಗೆದುಕೊಳ್ಳಿ ಎಂದಿದೆ. ಇನ್ನುಳಿದಂತೆ, ಉಳಿದೆಲ್ಲಾ ಆಟಗಾರರಿಗೆ ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಹಂತದ ಪಂದ್ಯಗಳನ್ನಾಡುವಂತೆ ಸೂಚಿಸಲಾಗಿದೆ. ಕೆ.ಎಲ್ ರಾಹುಲ್, ಶುಭ್ಮನ್ ಗಿಲ್, ಆರ್.ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಸೇರಿದಂತೆ ಟೆಸ್ಟ್ ತಂಡದ ಖಾಯಂ ಆಟಗಾರರಿಗೆ ಬಿಸಿಸಿಐ ಈ ಬಗ್ಗೆ ಸೂಚನೆಯನ್ನೂ ಕಳುಹಿಸಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಬಾಂಗ್ಲಾ ಸರಣಿಯೊಂದಿಗೆ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಸಾಲು ಸಾಲು ಟೆಸ್ಟ್ ಸರಣಿಗಳನ್ನು ಆಡಲಿದೆ. ನ್ಯೂಜಿಲೆಂಡ್, ಆ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಪಂದ್ಯಗಳನ್ನ ಆಡಲಿದೆ. ಕಳೆದ ಕೆಲ ತಿಂಗಳಿಂದ ವೈಟ್ ಬಾಲ್ ಫಾರ್ಮೆಟ್ಗೆ ಟೀಮ್ ಇಂಡಿಯಾ ಸ್ಟಾರ್ಸ್ ಸೀಮಿತವಾಗಿದ್ದಾರೆ. ಇದೀಗ ರೆಡ್ ಬಾಲ್ ಫಾರ್ಮೆಟ್ಗೆ ಶಿಫ್ಟ್ ಆಗಲು ದುಲೀಫ್ ಟ್ರೋಫಿ ಸಹಾಯ ಮಾಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ದೃಷ್ಟಿಯಿಂದ ಮುಂಬರೋ ಎಲ್ಲಾ ಟೆಸ್ಟ್ ಪಂದ್ಯಗಳು ಭಾರತದ ಪಾಲಿಗೆ ಮೋಸ್ಟ್ ಇಂಪಾರ್ಟೆಂಟ್.. ಸೆಪ್ಟೆಂಬರ್ 5ರಿಂದ ಆರಂಭವಾಗುವ ರೆಡ್ ಬಾಲ್ ಟೂರ್ನಿಯ ಮೊದಲ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.. ಪಂದ್ಯಾವಳಿಯಲ್ಲಿ ಒಟ್ಟು ಆರು ಪಂದ್ಯಗಳು ನಡೆಯಲಿದ್ದು, ಪ್ರತಿ ಪಂದ್ಯವು ನಾಲ್ಕು ದಿನಗಳ ಕಾಲ ನಡೆಯಲಿದೆ. ಸೋ ಇದೆಲ್ಲವನ್ನು ಗಮನದಲ್ಲಿರಿಸಿಕೊಂಡೇ ಬಿಸಿಸಿಐ ಈ ತೀರ್ಮಾನ ಮಾಡಿದೆ. ಆಟಗಾರರು ಕೂಡ ಆಡಲು ಒಕೆ ಅಂದಿದ್ದು, ಬಾರೀ ಕುತೂಹಲ ಕೆರಳಿಸಿದೆ.