3 ವರ್ಷ.. ಐವರೊಂದಿಗೆ ವಿವಾಹ- ಮದುವೆಯಾಗದ ಯುವಕರನ್ನ ಟಾರ್ಗೆಟ್‌ ಮಾಡುತ್ತಿದ್ದ ಖತರ್ನಾಕ್‌ ಗ್ಯಾಂಗ್‌ ಅಂದರ್‌

3 ವರ್ಷ.. ಐವರೊಂದಿಗೆ ವಿವಾಹ- ಮದುವೆಯಾಗದ ಯುವಕರನ್ನ ಟಾರ್ಗೆಟ್‌ ಮಾಡುತ್ತಿದ್ದ ಖತರ್ನಾಕ್‌ ಗ್ಯಾಂಗ್‌ ಅಂದರ್‌

ಹೆಣ್ಣು ಸಿಗದ ಯುವಕರೇ ಈ ಗ್ಯಾಂಗ್‌ನ ಟಾರ್ಗೆಟ್‌.. ಈ ಮಹಿಳೆ ಮೂರು ವರ್ಷದಲ್ಲಿ ಮದುವೆಯಾಗಿದ್ದು ಒಂದೆರಡಲ್ಲ.. ಬರೋಬ್ಬರಿ ಐದು ಮದುವೆ. ಹೌದು, ಶ್ರೀಮಂತ ಮನೆಯ ಯುವಕರನ್ನ ಪುಸಲಾಯಿಸಿ ಮದುವೆಯಾಗಿ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ  ಖತರ್ನಾಕ್‌ ಗ್ಯಾಂಗ್‌ ವೊಂದು ಸಿಕ್ಕಿ ಬಿದ್ದಿದೆ.

ಇದನ್ನೂ ಓದಿ:ಬಿಎಂಟಿಸಿ ವೋಲ್ವೋ ಬಸ್​​​​​ನಿಂದ ಸರಣಿ ಅಪಘಾತ – ಬಿಎಂಟಿಸಿ ಚಾಲಕನ ಯಡವಟ್ಟಿಗೆ ಬೈಕ್, ಕಾರು ಜಖಂ

ಈ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ನಡೆದಿದೆ.  ಮದುವೆ ನಾಟಕವಾಡಿ ಹಣ, ಒಡವೆ ದೋಚುತ್ತಿದ್ದ ದೋಖಾ ಗ್ಯಾಂಗ್ ಅನ್ನು ಪೊಲೀಸರು ಬಂಧಿಸದ್ದಾರೆ. ಆ ಗ್ಯಾಂಗ್‌ನ ಮಹಿಳೆಯೊಬ್ಬಳು ಮೂರು ವರ್ಷದಲ್ಲಿ ಐದು ಮದುವೆಯಾಗಿದ್ದಾಳೆ ಎಂಬ ವಿಚಾರ ಈಗ ಬಯಲಾಗಿದೆ. ಪ್ರಕರಣ ಸಂಬಂಧ ಲಕ್ಷ್ಮೀ ಬಾಳ ಸಾಬ್ ಜನಕರ್ ಅಲಿಯಾಸ್ ಕೋಮಲ, ಸಿದ್ದಪ್ಪ ,  ಲಕ್ಷ್ಮೀಬಾಯಿ, ಬ್ರೋಕರ್ ಲಕ್ಷ್ಮಿ ಎಂಬುವವರನ್ನ ತುಮಕೂರು ಜಿಲ್ಲೆ ಗುಬ್ಬಿ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.  ಈ ಗ್ಯಾಂಗ್‌ನಲ್ಲಿ ಕೋಮಲ ಮದುಮಗಳಾದರೆ, ಚಿಕ್ಕಪ್ಪ ಸಿದ್ದಪ್ಪ  ಮತ್ತು ಚಿಕ್ಕಮ್ಮ ಲಕ್ಷ್ಮೀಬಾಯಿ ಮದುವೆ ಮಾಡಿಕೊಡುವ ಪಾತ್ರಧಾರಿಗಳು. ಇನ್ನು ಗಂಡು ಸಿಗದವರನ್ನು ಗುರುತಿಸಿ ಹೆಣ್ಣು ತೋರಿಸುವವಳು ಈ ಬ್ರೋಕರ್ ಲಕ್ಷ್ಮಿ. ಎಲ್ಲ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?

ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದ ಪಾಲಾಕ್ಷ ಅವರ ಮಗ ದಯಾನಂದಮೂರ್ತಿ (34) ಎಂಬುವವರಿಗೆ ಮದುವೆ ಆಗಿರಲಿಲ್ಲ. ನೂರಾರು ಹೆಣ್ಣು ಹುಡುಕಿದ್ರೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಹತ್ತಾರು ಮದುವೆ ಬ್ರೋಕರ್‌ ಮೂಲಕ ಹೆಣ್ಣು ಹುಡುಕಿಸಿದ್ದರೂ ಮದುವೆ ಸೆಟ್ ಆಗಿರಲಿಲ್ಲ. ವಯಸ್ಸು ಮೀರುತ್ತಿದ್ದರೂ ಹೆಣ್ಣು ಸಿಗದೆ ನೊಂದಿದ್ದರು. ಈ ವೇಳೆ ಕುಷ್ಟಗಿ ಮೂಲದ ಬಸವರಾಜು ಎನ್ನುವವರ ಮೂಲಕ ಬ್ರೋಕರ್ ಲಕ್ಷ್ಮಿ ಎಂಬಾಕೆಯ ಪರಿಚಯ ಮಾಡಿಕೊಂಡು ಕರೆ ಮಾಡಿದಾಗ, ಮನೆಯ ಎಲ್ಲ ಪರಿಸ್ಥಿತಿ ತಿಳಿದುಕೊಂಡಿದ್ದಾಳೆ. ನಂತರ, ನಿಮ್ಮ ಮಗನಿಗೆ ನಾನು ಹೆಣ್ಣು ತೋರಿಸಿ ಮದುವೆ ಮಾಡಿಸುತ್ತೇವೆ ಎಂದು ಭರವಸೆ ನೀಡಿದ್ದಳು.

ಇದಾದ ಕೆಲವು ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಒಬ್ಬ ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ-ತಾಯಿ ಇಲ್ಲ. ನೀವೆ ಮದುವೆ ಮಾಡಿಕೊಳ್ಳಬೇಕೆಂದು ಸುಳ್ಳು ಹೇಳಿದ್ದಾಳೆ. ಆಗ ಬ್ರೋಕರ್ ಲಕ್ಷ್ಮೀ ಈ ಕೋಮಲ ಎಂಬ ಹೆಸರಿನಲ್ಲಿ ಯುವತಿಯ ಪೋಟೋ ತೋರಿಸಿದ್ದಾಳೆ. ಇನ್ನು ಹುಡುಗನ ಮನೆ ನೋಡಲು ಅತ್ತಿಕಟ್ಟೆ ಗ್ರಾಮಕ್ಕೆ ಬಂದಿದ್ದ ಯುವತಿ ಹಾಗೂ ಆಕೆಯ ಚಿಕ್ಕಮ್ಮ-ಚಿಕ್ಕಪ್ಪ ಕಳೆದ  ವರ್ಷ ನವೆಂಬರ್‌ 11ರಂದು ಬಂದಿದ್ದರು. ಇದೇ ವೇಳೆ ಮದುವೆ ಮಾತುಕತೆಯನ್ನೂ ಮುಗಿಸಿದ್ದರು. ನಂತರ, ಹುಡುಗ ಒಪ್ಪಿಗೆ ಇದ್ದಾನೆ, ನಿಮಗೂ ಹುಡುಗಿ ಒಪ್ಪಿಗೆ ಇದ್ದರೆ ನಾಳೆಯೇ ನಿಮ್ಮೂರಿನ ದೇವಸ್ಥಾನದಲ್ಲಿ ಸಿಂಪಲ್ಲಾಗಿ ಮದುವೆ ಮಾಡಿಬಿಡೋಣ ಎಂದು ಹೇಳಿದ್ದಾರೆ.

ಮೊದಲೇ ಮಗನಿಗೆ ಹೆಣ್ಣು ಸಿಗದೆ ಹೈರಾಣಾಗಿದ್ದ ದಯಾನಂದ ಮೂರ್ತಿ ಕುಟುಂಬ ಈ ಹುಡುಗಿಯಾದ್ರು ಸಿಕ್ಕಳು ಅಂತಾ ಖುಷಿಯಲ್ಲಿತ್ತು. ಹೆಣ್ಣು ಸಿಕ್ಕಿದ್ದೇ ತಡ ಹಿಂದೂ ಮುಂದು ಯೋಚಿಸದೆ ದಿಢೀರ್‌ ಮದುವೆಗೆ ಒಪ್ಪಿಕೊಂದ್ದಿದ್ದಾರೆ. ಹೆಣ್ಣು ಒಪ್ಪಿಗೆಯಾದ ಕೆಲವೇ ದಿನದಲ್ಲಿ ಗ್ರಾಮದಲ್ಲಿ ಮದುವೆ ಮಾಡಿದ್ದರು. ಈ ಮದುವೆಗೆ ಸುಮಾರು 200ಕ್ಕೂ ಹೆಚ್ಚು ಜನರು ಸಾಕ್ಷಿಯಾಗಿದ್ದರು. ಮದುಮಗಳಿಗೆ ಚಿನ್ನದ ಸರ, ತಾಳಿ, ಕಿವಿಗೆ ಓಲೆ ಸೇರಿ ಸುಮಾರು 25 ಗ್ರಾಂ ತೂಕದ ಚಿನ್ನಾಭರಣವನ್ನು ಗಂಡಿನ ಮನೆಯವರು ಮಾಡಿಸಿಕೊಟ್ಟಿದ್ದರು. ಇನ್ನು ಬ್ರೋಕರ್ ಲಕ್ಷ್ಮೀಗೆ ಬರೋಬ್ಬರಿ 1.5 ಲಕ್ಷ ರೂ. ಹಣ ನೀಡಿದ್ದರು.

ಮದುವೆ ಮುಗಿದ 2 ದಿನದ ನಂತರ ತವರುಮನೆಗೆ ಯುವತಿಯನ್ನು ಕರೆದುಕೊಂಡು ಹೋಗಬೇಕೆಂದು ಆಕೆಯೊಬ್ಬಳನ್ನೇ ಕರೆದುಕೊಂದು ಹೋಗಿದ್ದರು. ಹಣ-ಚಿನ್ನದ ಒಡವೆ ಸಹಿತ ಮದುಮಗಳನ್ನ ಕರೆದುಕೊಂಡು ಹೋಗಿದ್ದರು. ಇನ್ನು ಒಂದು ವಾರ ಕಳೆದರೂ ವಾಪಸ್‌ ಬರಲಿಲ್ಲ. ಇದಿಂದ ಆತಂಕಗೊಂಡ ಪಾಲಾಕ್ಷ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಸತ್ಯ ಬಯಲಾಗಿದೆ. ನಕಲಿ ಮದುವೆಗೆ ಬಂದವರು ಕೂಡ ದೋಖಾ ಗಿರಾಕಿಗಳು ಎಂಬ ಸತ್ಯ ಬಯಲಾಗಿದೆ. ಆಗ ಪುನಃ ತಮ್ಮೂರಿಗೆ ವಾಪಸ್ ಬಂದು ಗುಬ್ಬಿ ಠಾಣೆಗೆ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಗುಬ್ಬಿ ಪೊಲೀಸರು ನಿರಂತರ ತನಿಖೆ ನಡೆಸುತ್ತಿದ್ದರು. ಆದರೆ, ಇದೇ ರೀತಿ ಪುನಃ ಮಹರಾಷ್ಟ್ರದಲ್ಲಿ ಮದುವೆ ಮಾಡಿಕೊಂಡು ಸೆಟೆಲ್ ಆಗಿದ್ದರು. ಆಗ ಮದುವೆ ಫೋಟೋ ಹಾಗೂ ವಿಡಿಯೋ ಆಧರಿಸಿ ವಂಚನೆ ಮಾಡಿದ ಗ್ಯಾಂಗ್‌ನ ಎಲ್ಲರನ್ನೂ ಬಂಧಿಸಿದ್ದಾರೆ. ಒಟ್ಟಾರೆ, ಕರ್ನಾಕಟ ಹಾಗೂ ಮಹಾರಾಷ್ಟ್ರ ಸೇರಿದಂತೆ ಒಟ್ಟು ನಾಲ್ಕೈದು ಮದುವೆಗಳನ್ನು ಮಾಡಿಕೊಂಡು ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದರು. ಇದಕ್ಕಾಗಿ ನಕಲಿ ಅಡ್ರೆಸ್‌ನಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿಕೊಳ್ಳುತ್ತಿದ್ದರು. ಆಧಾರ್ ಕಾರ್ಡ್ ತೋರಿಸಿ ಗಂಡಿನ‌ ಮನೆಯವರನ್ನ ನಂಬಿಸುತ್ತಿದ್ದರು. ನಂತರ ವಂಚನೆ ಮಾಡಿ ಹೋಗುತ್ತಿದ್ದರು. ಇದೀಗ ಯುವಕರಿಗೆ ಮದುವೆ ಹೆಸರಿನಲ್ಲಿ ವಂಚಿಸುತ್ತಿದ್ದ ಖತರ್ನಾಕ್‌ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿದೆ.

Shwetha M