ಚಾಂಪಿಯನ್ಸ್ ಟ್ರೋಫಿ ಟೂರ್ನಿ ಲೆಕ್ಕಕ್ಕಿಲ್ವಾ? – BCCI ಎಡವಟ್ಟೇನು?
ಟಿ-20 ವಿಶ್ವಕಪ್ ಗೆದ್ದಿರೋ ಟೀಂ ಇಂಡಿಯಾದ ನೆಕ್ಸ್ಟ್ ಟಾರ್ಗೆಟ್ 2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ. ಚುಟುಕು ಸಮರದಲ್ಲಿ ಸೋಲಿಲ್ಲದ ಸರದಾರನಾಗಿ ಚಾಂಪಿಯನ್ ಪಟ್ಟಕ್ಕೇರಿದ್ದ ರೋಹಿತ್ ಶರ್ಮಾ ಬಳಗವೇ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಕಪ್ ಗೆಲ್ಲೋ ಫೇವರೆಟ್ ಟೀಂ ಎನಿಸಿಕೊಂಡಿದೆ. ಆದ್ರೆ ಬಿಸಿಸಿಐ ಪ್ಲ್ಯಾನ್ ನೋಡಿದ್ರೆ ಗೆಲುವಿನ ಲೆಕ್ಕಾಚಾರಗಳೆಲ್ಲಾ ಬುಡಮೇಲಾಗೋ ಆತಂಕ ಎದುರಾಗಿದೆ. ಟೀಂ ಇಂಡಿಯಾದ ಮುಂದಿನ ಶೆಡ್ಯೂಲ್ಗಳೇ ಇದಕ್ಕೆ ಪುಷ್ಠಿ ನೀಡುತ್ತಿವೆ. ಅಷ್ಟಕ್ಕೂ ಬಿಸಿಸಿಐ ಮಾಡಿಕೊಂಡಿರೋ ಎಡವಟ್ಟೇನು? ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಎಫೆಕ್ಟ್ ಆಗುತ್ತಾ? ತಂಡದ ಆಯ್ಕೆಯೇ ಕಷ್ಟವಾಗುತ್ತಾ? ಈ ಬಗೆಗಿನ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಿಎಂಟಿಸಿ ವೋಲ್ವೋ ಬಸ್ನಿಂದ ಸರಣಿ ಅಪಘಾತ – ಬಿಎಂಟಿಸಿ ಚಾಲಕನ ಯಡವಟ್ಟಿಗೆ ಬೈಕ್, ಕಾರು ಜಖಂ
2024ರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಟೀಂ ಇಂಡಿಯಾ 17 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿತ್ತು. ಇದೀಗ 2025ಕ್ಕೆ ಮತ್ತೊಂದು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲೋ ಅವಕಾಶ ಬಂದಿದೆ. 2013ರಲ್ಲಿ ಭಾರತ ಕೊನೆಯ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. 2017ರಲ್ಲಿ ಫೈನಲ್ ತಲುಪಿದ್ದ ಟೀಮ್ ಇಂಡಿಯಾ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಸೋಲು ಕಂಡಿತ್ತು. ಹೀಗಾಗಿ 11 ವರ್ಷಗಳ ಬಳಿಕ ಕಪ್ ಗೆಲ್ಲೋ ಅವಕಾಶ ಸಿಕ್ಕಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಆದ್ರೆ ಈ ಟೂರ್ನಿಯನ್ನ ಬಿಸಿಸಿಐ ಗಂಭೀರವಾಗಿ ಪರಿಗಣಿಸಿದಂತೆ ಕಾಣ್ತಿಲ್ಲ. ಯಾಕಂದ್ರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯೋದು ಏಕದಿನ ಮಾದರಿಯಲ್ಲಿ. ಸದ್ಯ ಶ್ರೀಲಂಕಾ ವಿರುದ್ಧದ ಸರಣಿ ಮುಗಿದಿದ್ದು, ಭಾರತಕ್ಕೆ ಇನ್ನೂ ಒಂದು ತಿಂಗಳ ವಿರಾಮ ಸಿಗಲಿದೆ. ಬಾಂಗ್ಲಾದೇಶ ವಿರುದ್ಧದ ಸರಣಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಅದರ ನಂತರ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿ ಆಡಲಿದೆ. ಆದ್ರೆ ಇಂಗ್ಲೆಂಡ್ ವಿರುದ್ಧದ ಸರಣಿ ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳು ಟಿ-20 ಹಾಗೂ ಟೆಸ್ಟ್ ಮಾದರಿಯಲ್ಲಿ ನಡೆಯಲಿವೆ. ಇದೇ ಮಾದರಿ ಭಾರತ ತಂಡಕ್ಕೆ ಮಾರಕವಾಗೋ ಲಕ್ಷಣ ಕಾಣ್ತಿದೆ. .
ಎಡವಟ್ಟು ಬಿಸಿಸಿಐ!
2025ರಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಏಕದಿನ ಮಾದರಿಯಲ್ಲಿ ನಡೆಯಲಿದೆ. ಆದ್ರೆ ಟೂರ್ನಿಗೂ ಮುನ್ನ ಟೀಮ್ ಇಂಡಿಯಾ ಕೇವಲ ಮೂರೇ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ನಿಮಗೆ ಆಶ್ಚರ್ಯ ಅನ್ನಿಸಿದ್ರೂ ಕೂಡ ಇದೇ ಸತ್ಯ. ಏಕದಿನ ಮಾದರಿಯಲ್ಲಿ ಟೂರ್ನಿ ನಡೆಯೋದು ಗೊತ್ತಿದ್ರೂ ಬಿಸಿಸಿಐ ತನ್ನ ವೇಳಾಪಟ್ಟಿಯಲ್ಲಿ ಟಿ20 ಹಾಗೂ ಟೆಸ್ಟ್ ಪಂದ್ಯಗಳಿಗೆ ಆದ್ಯತೆ ನೀಡಿದೆ.ಇತ್ತೀಚೆಗಷ್ಟೇ ಶ್ರೀಲಂಕಾ ಎದುರು ನಡೆಯ 3 ದಿನಗಳ ಏಕದಿನ ಸರಣಿಯಲ್ಲಿ ಭಾರತಕ್ಕೆ ಒಂದು ಪಂದ್ಯವನ್ನೂ ಗೆಲ್ಲೋಕೆ ಆಗಿಲ್ಲ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬಲಿಷ್ಠ ತಂಡವನ್ನ ಕಟ್ಟಬೇಕಾದ ಅನಿವಾರ್ಯತೆ ಇದೆ. ಆದ್ರೆ ಇದಕ್ಕಾಗಿ ಟೀಮ್ ಇಂಡಿಯಾ ಮುಂದೆ ಉಳಿದಿರುವುದು ಕೇವಲ ಮೂರೇ ಪಂದ್ಯಗಳು. ಅದೂ ಕೂಡ ಮುಂದಿನ ವರ್ಷ. 2025ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಟೀಮ್ ಇಂಡಿಯಾ ಮೂರು ಏಕದಿನ ಪಂದ್ಯಗಳನ್ನಾಡಲಿದೆ. 2025 ರಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ. ಫೆಬ್ರವರಿ 6, 9 ಮತ್ತು 12ರಂದು ಏಕದಿನ ಪಂದ್ಯಗಳು ನಡೆಯಲಿವೆ. ಮತ್ತೊಂದ್ಕಡೆ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಸಲು ವೇಳಾಪಟ್ಟಿ ಸಿದ್ಧಗೊಂಡಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧ ಸರಣಿ ಮುಗಿಯುತ್ತಿದ್ದಂತೆ ಭಾರತ ಚಾಂಪಿಯನ್ಸ್ ಟ್ರೋಫಿಗೆ ರೆಡಿಯಾಗ್ಬೇಕು. ಈ ಪಂದ್ಯಗಳ ಮೂಲಕ ಭಾರತವು ಒಂದು ವಾರದಲ್ಲೇ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಿಕೊಳ್ಳಬೇಕಾಗಿದೆ.
ಸದ್ಯ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಲೆಕ್ಕಾಚಾರದ ಪ್ರಕಾರ ಕ್ಯಾಪ್ಟನ್ ರೋಹಿತ್ ಶರ್ಮಾ, ಕಿಂಗ್ ವಿರಾಟ್ ಕೊಹ್ಲಿ ಹಾಗೇ ಬೌಲಿಂಗ್ ಬ್ರಹ್ಮಾಸ್ತ್ರ ಜಸ್ಪ್ರೀತ್ ಬುಮ್ರಾ ಇರೋದಂತೂ ಪಕ್ಕಾ. ಆದ್ರೆ ಉಳಿದ ಆಟಗಾರರನ್ನ ಹೇಗೆ ಸೆಲೆಕ್ಟ್ ಮಾಡ್ತಾರೆ. ಯಾಕಂದ್ರೆ ಓಪನರ್ ರೇಸ್ನಲ್ಲಿ ಈಗಾಗ್ಲೇ ಗಿಲ್ ಮತ್ತು ಜೈಸ್ವಾಲ್ ನಡುವೆ ಫೈಟ್ ನಡೀತಿದೆ. ಹಾಗೇ ಮಿಡಲ್ ಆರ್ಡರ್ ಬ್ಯಾಟರ್ ರೇಸ್ನಲ್ಲಿ ರಿಷಬ್ ಪಂತ್, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್ ಮತ್ತು ಶ್ರೇಯಸ್ ಅಯ್ಯರ್ ಇದ್ದಾರೆ. ಬೌಲಿಂಗ್ನಲ್ಲೂ ಕೂಡ ಯಂಗ್ ಸ್ಟರ್ಸ್ ಕಮಾಲ್ ತೋರಿಸ್ತಿರೋದ್ರಿಂದ ಅಲ್ಲೂ ಜಟಾಪಟಿ ಇದೆ. ಹೀಗಾಗಿ ಅಂತಿಮವಾಗಿ ಯಾರನ್ನ ಉಳಿಸಿಕೊಳ್ಬೇಕು ಯಾರನ್ನ ಕೈ ಬಿಡ್ಬೇಕು ಅನ್ನೋದನ್ನ ತೀರ್ಮಾನ ಮಾಡೋಕೆ ಅವಕಾಶವೇ ಸಿಗೋದಿಲ್ಲ. ಒಟ್ಟಿನಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತಂಡವನ್ನ ಬಲಿಷ್ಠಗೊಳಿಸಬೇಕಿದೆ. ಹೀಗಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಹೆಡ್ ಕೋಚ್ ಗೌತಮ್ ಗಂಭೀರ್ಗೆ ಇದು ಕಠಿಣ ಸವಾಲಾಗಿ ಪರಿಣಮಿಸಿದೆ.