ಇಂಡಿಯಾ ಮತ್ತು ಬಾಂಗ್ಲಾ ಸರಣಿಗೆ ಬ್ರಹ್ಮಾಸ್ತ್ರ – ಶಮಿ & ಬುಮ್ರಾ ಕಮ್ ಬ್ಯಾಕ್ ಫಿಕ್ಸ್
ಲಾಂಗ್ ಬ್ರೇಕ್.. ಶ್ರೀಲಂಕಾ ವಿರುದ್ಧದ ಸರಣಿ ಬಳಿಕ ಟೀಂ ಇಂಡಿಯಾಗೆ ಭರ್ಜರಿ 5 ವಾರಗಳ ವಿಶ್ರಾಂತಿ ಸಿಕ್ಕಿದೆ. ಇದಾದ ಬಳಿಕ ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗೆ ಬಲಿಷ್ಠ ತಂಡವನ್ನೇ ಕಣಕ್ಕಳಿಸಲು ಟೀಂ ಮ್ಯಾನೇಜ್ ಮೆಂಟ್ ಪ್ಲ್ಯಾನ್ ಮಾಡಿದೆ. ಲಂಕಾ ವಿರುದ್ಧದ ಸರಣಿಗೆ ಆದ ಎಡವಟ್ಟನ್ನ ಈ ಪಂದ್ಯಕ್ಕೆ ಆಗದಂತೆ ಈಗಿನಿಂದಲೇ ತಂತ್ರಗಾರಿಕೆ ಶುರು ಮಾಡಿದ್ದಾರೆ. ಬೌಲಿಂಗ್ನಲ್ಲಿ ಮತ್ತು ಬ್ಯಾಟಿಂಗ್ ಎರಡರಲ್ಲೂ ಫೇಲ್ ಆಗಿದ್ದ ಟೀಂ ಇಂಡಿಯಾಗೆ ಬಾಂಗ್ಲಾ ಸರಣಿ ವೇಳೆಗೆ ಇಬ್ಬರು ಬೌಲಿಂಗ್ ಬ್ರಹ್ಮಾಸ್ತ್ರಗಳೇ ಕಮ್ ಬ್ಯಾಕ್ ಮಾಡಲಿದ್ದಾರೆ. ಅವ್ರು ಮತ್ತಿನ್ಯಾರೂ ಅಲ್ಲ. 2023ರ ಏಕದಿನ ವಿಶ್ವಕಪ್ನಲ್ಲಿ ಭಾರತವನ್ನ ಫಿನಾಲೆವರೆಗೂ ಕೊಂಡೊಯ್ಯಲು ಪ್ರಮುಖ ಕಾರಣವಾಗಿದ್ದ ಮೊಹಮ್ಮದ್ ಶಮಿ ಹಾಗೆ 2024ರಲ್ಲಿ ಭಾರತಕ್ಕೆ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟ ಜಸ್ಪ್ರೀತ್ ಬುಮ್ರಾ. ಅಷ್ಟಕ್ಕೂ ಈ ಇಬ್ಬರು ಆಟಗಾರರು ಕಮ್ ಬ್ಯಾಕ್ ಮಾಡಿದ್ರೆ ಅದೆಷ್ಟು ಲಾಭವಾಗಲಿದೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ನಾನಿನ್ನೂ ವಿವಾಹಿತ.. ಡಿವೋರ್ಸ್ ವದಂತಿ ಬ್ರೇಕ್ ಹಾಕಿದ ಅಭಿಷೇಕ್ ಬಚ್ಚನ್!
ಶಮಿ ಮತ್ತು ಬುಮ್ರಾ ವಾಪಸ್!
ಆಗಸ್ಟ್ ಮೊದಲ ವಾರದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ, ಏಕದಿನ ಮತ್ತು ಟಿ20 ಸರಣಿಗಳನ್ನು ಆಡಿತ್ತು. ಇದರಲ್ಲಿ ಟಿ20 ಸರಣಿಯಲ್ಲಿ ಗೆದ್ದುಬೀಗಿದ್ರೆ ಏಕದಿನ ಸರಣಿಯಲ್ಲಿ ಸೋಲನ್ನು ಎದುರಿಸಬೇಕಾಗಿತ್ತು. ಇದಕ್ಕೆ ಪ್ರಮುಖ ಕಾರಣ ತಂಡದ ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನ ಎನ್ನಲಾಗುತ್ತಿದೆಯಾದರೂ, ಪ್ರಮುಖ ಬೌಲರ್ಗಳ ಅಲಭ್ಯತೆಯೂ ಒಂದು ಕಾರಣವಾಗಿತ್ತು. ಯಾಕಂದ್ರೆ ಈ ಸರಣಿಯಿಂದ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದರು. ಮತ್ತೊಬ್ಬ ಅನುಭವಿ ವೇಗಿ ಮೊಹಮ್ಮದ್ ಶಮಿ ಕೂಡ ಇಂಜುರಿಯಿಂದಾಗಿ ಈಗಾಗಲೇ ತಂಡದಿಂದ ಹೊರಗುಳಿದಿದ್ದಾರೆ. ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ಸಹ ಸರಣಿಗೆ ಆಯ್ಕೆಯಾಗಿರಲಿಲ್ಲ. ಈ ಅನುಭವಿಗಳ ಅಲಭ್ಯತೆ ತಂಡವನ್ನು ಏಕದಿನ ಸರಣಿ ಸೋಲುವಂತೆ ಮಾಡಿತ್ತು. ಇದೀಗ ಟೀಂ ಇಂಡಿಯಾ ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯೊಂದಿಗೆ ಪ್ರಮುಖ ಬೌಲರ್ಗಳು ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಅದರಲ್ಲೂ ಏಕದಿನ ವಿಶ್ವಕಪ್ ಬಳಿಕ ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿರುವ ವೇಗಿ ಮೊಹಮ್ಮದ್ ಶಮಿ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಆಡುವ ಸಾಧ್ಯತೆಗಳು ಹೆಚ್ಚಾಗಿವೆ. ಇಂಜುರಿಯಿಂದ ಚೇತರಿಸಿಕೊಳ್ತಿರೋ ಶಮಿ, ಈಗಾಗಲೇ ನೆಟ್ಸ್ನಲ್ಲಿ ಬೌಲಿಂಗ್ ಕೂಡ ಆರಂಭಿಸಿದ್ದಾರೆ. ಪಾದದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಆಯ್ಕೆದಾರರು ಶಮಿ ಅವರ ಪ್ರಸ್ತುತ ಸ್ಥಿತಿಯ ಬಗ್ಗೆ ನಿರಂತರವಾಗಿ ಮಾಹಿತಿ ತೆಗೆದುಕೊಳ್ಳುತ್ತಿದ್ದಾರೆ. ಮೊಹಮ್ಮದ್ ಶಮಿ ಕೊನೆಯ ಬಾರಿಗೆ 2023 ರ ಏಕದಿನ ವಿಶ್ವಕಪ್ನಲ್ಲಿ ತಂಡದ ಪರ ಆಡಿದ್ದರು. ಈ ಟೂರ್ನಿಯಲ್ಲಿ ಶಮಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಬರೋಬ್ಬರಿ 24 ವಿಕೆಟ್ ಪಡೆದು ಪಂದ್ಯಾವಳಿಯಲ್ಲಿ ಅಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಹಾಗೇ ಜಸ್ಪ್ರೀತ್ ಬುಮ್ರಾ ಕೂಡ ಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಪರ ಕಣಕ್ಕಿಳಿದಿಲ್ಲ. ಜಿಂಬಾಬ್ವೆ ಸರಣಿ, ಲಂಕಾ ವಿರುದ್ಧ ಏಕದಿನ, ಟಿ20 ಪಂದ್ಯಗಳಿಗೂ ಮರಳಿರಲಿಲ್ಲ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ರೂ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಆದ್ರೆ ಈಗ ಬಾಂಗ್ಲಾ ವಿರುದ್ಧದ ಸರಣಿಗೆ ಈ ಇಬ್ಬರನ್ನೂ ಪ್ರಮುಖ ಅಸ್ತ್ರವಾಗಿ ಬಳಸೋಕೆ ಟೀಂ ಇಂಡಿಯಾ ಮುಂದಾಗಿದೆ.
ಸದ್ಯ ಲಂಕಾ ವಿರುದ್ಧದ ಸೋಲು ಟೀಂ ಇಂಡಿಯಾಗೆ ಹಲವು ಪಾಠಗಳನ್ನ ಕಲಿಸಿದೆ. ಅದ್ರಲ್ಲೂ ಎಲ್ಲಾ ಮ್ಯಾಚ್ಗಳಲ್ಲೂ ಪ್ರಯೋಗ ಮಾಡಬಾರದು ಅನ್ನೋದು ನೂತನ ಕೋಚ್ ಗೌತಮ್ ಗಂಭೀರ್ಗೂ ಅರ್ಥವಾಗಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಈ ಎಡವಟ್ಟನ್ನ ಮಾಡಿಕೊಳ್ಳದಿರಲು ಈಗಿನಿಂದಲೇ ತಯಾರಿ ಶುರು ಮಾಡಿದೆ. ಬಾಂಗ್ಲಾ ಸರಣಿಗೆ ಒಂದು ತಿಂಗಳಿಗೂ ಹೆಚ್ಚು ಟೈಂ ಇದ್ರೂ ಕೂಡ ಯಾರನ್ನೆಲ್ಲಾ ಆಯ್ಕೆ ಮಾಡಬೇಕು, ಯಾರನ್ನ ಕೈ ಬಿಡಬೇಕು ಅನ್ನೋ ಬಗ್ಗೆ ಗ್ರಾಫ್ ಕೂಡ ರೆಡಿ ಮಾಡಿಕೊಳ್ತಿದ್ದಾರೆ.