21 ವರ್ಷದ ಅನಾಥ ಅಮನ್ – 10 ಗಂಟೆಯಲ್ಲಿ 4.6ಕೆಜಿ ತೂಕ ಇಳಿಕೆ
ವಿನೇಶ್ ಭಯವೇ ಅಮನ್ ಗೆಲುವು..!

21 ವರ್ಷದ ಅನಾಥ ಅಮನ್ – 10 ಗಂಟೆಯಲ್ಲಿ 4.6ಕೆಜಿ ತೂಕ ಇಳಿಕೆವಿನೇಶ್ ಭಯವೇ ಅಮನ್ ಗೆಲುವು..!

ಕುಸ್ತಿಯಲ್ಲಿ ಪದಕಕ್ಕಾಗಿ ಕಾಯ್ತಿದ್ದ ಕೋಟಿ ಕೋಟಿ ಭಾರತೀಯರ ಪ್ರಾರ್ಥನೆ ಈಡೇರಿದೆ. ಒಲಿಂಪಿಕ್ಸ್ ಗೆ ಎಂಟ್ರಿಕೊಟ್ಟ ಮೊದಲ ಯತ್ನದಲ್ಲೇ ಕೇವಲ 21 ವರ್ಷದ ವೀರಪುತ್ರ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾನೆ. ಪುರುಷರ 57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಭಾರತದ ಅಮನ್‌ ಶೆರಾವತ್‌ ಕಂಚು ಗೆದ್ದಿದ್ದಾರೆ. ಈ ಮೂಲಕ ಕುಸ್ತಿಯಲ್ಲಿ ಮೊದಲ ಪದಕ ಸಿಕ್ಕಿದೆ. ಈಗ ಎಲ್ಲರ ಚಿತ್ರ ಅಮನ್ ನತ್ತ ನೆಟ್ಟಿದೆ. ಅಮನ್ ಯಾರು?, ಬಾಲ್ಯದಲ್ಲೇ ಅಮನ್ ಗೆ ಎದುರಾದ ಘೋರ ಆಘಾತವೇನು? ಕಂಚಿನ ಪದಕ ಗೆಲ್ಲೋ ಮೊದಲು ಅಮನ್ ಅನುಭವಿಸಿದ ಆ ಯಾತನೆ ಏನು ಅನ್ನೋಮಾಹಿತಿ ಇಲ್ಲಿದೆ.

ಇದನ್ನೂ ಓದಿ: PAK ಅಸಲಿ ಚಿನ್ನ ನದೀಮ್.. ಗುರುವಿಲ್ಲ, ಹಣವಿಲ್ಲ, ಜನರೇ ಕಳಿಸಿದ್ರು.. ಜಾವಲಿನ್ ಕೊಟ್ಟಿದ್ದು ನೀರಜ್ ಚೋಪ್ರಾ 

ವಯಸ್ಸು ಕೇವಲ 21. ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಪದಕ ತಂದು ಕೊಟ್ಟ ಕಿರಿಯ ವಯಸ್ಸಿನ ಹುಡುಗ ಅಮನ್ ಸೆಹ್ರಾವತ್. ಒಲಿಂಪಿಕ್ಸ್ ಅಂಗಳಕ್ಕೆ ಕಾಲಿಟ್ಟ ಮೊದಲ ಪ್ರಯತ್ನದಲ್ಲೇ ಭಾರತಕ್ಕೆ ಹೆಮ್ಮೆ ತಂದು ಕೊಟ್ಟ ಅಮನ್ ಲೈಫ್ ಸ್ಟೋರಿ ನಿಜಕ್ಕೂ ನೋವು ಕೊಡುತ್ತೆ. ಆ ನೋವಿನ ಬದುಕೇ ಬಹುಶಃ ಅಮನ್ ಇಷ್ಟೆತ್ತೆರಕ್ಕೆ ಬೆಳೆಯೋದಕ್ಕೆ ಸಾಧ್ಯವಾಗಿತ್ತು ಅನ್ಸುತ್ತೆ. ಹೆತ್ತವರಿಲ್ಲದ ಸಂಕಟ, ಮಣ್ಣಿನಲ್ಲಿ ಉರುಳಿ ಬಿದ್ದಾಗ ಅಮ್ಮಾ ಅಂತಾ ಕರೆಯುವಾಗ ಬರುವ ಕಣ್ಣೀರು, ಗೆದ್ದಾಗ, ಬಿದ್ದಾಗ ಸಿಗದೇ ಇರೋ ಅಪ್ಪನ ಹೆಗಲು.. ಅಬ್ಬಬ್ಬಾ.. ಈ ಅಮನ್ ಎದುರಿಸಿದ್ದು ಅದೆಷ್ಟು ನೋವು, ಅದೆಷ್ಟು ಸಂಕಟ.

ಅಜ್ಜನ ಗರಡಿಯಲ್ಲಿ ಬೆಳೆದ ಅನಾಥ ಅಮನ್ 

ಅಮನ್ ಸೆಹ್ರಾವತ್ ಹರಿಯಾಣದ ಮೂಲದವರು. ಜಜ್ಜರ್ ಜಿಲ್ಲೆಯ ಬಿರೋಹರ್ ಗ್ರಾಮದವರು. 10 ವರ್ಷದವರೆಗೂ ಅಮನ್ ಮನೆಯಲ್ಲಿ ಖುಷಿಯಿತ್ತು. ಅಪ್ಪ ಅಮ್ಮನ ಪ್ರೀತಿಯಲ್ಲಿ ಖುಷಿಯಾಗಿದ್ದ ಅಮನ್. ಆದ್ರೆ, ಕೇವಲ ಒಂದು ವರ್ಷದಲ್ಲಿ ಅಮನ್ ಬದುಕಲ್ಲಿ ಹೆತ್ತವರ ಪಾತ್ರ ಮುಗಿದೇ ಹೋಗುತ್ತದೆ. ಹೌದು. ಅನಾರೋಗ್ಯದ ಕಾರಣ 2013ರಲ್ಲಿ ತಂದೆ ಸೋಮ್​ವೀರ್​ ಸೆಹ್ರಾವತ್​ ಸಾವನ್ನಪ್ಪುತ್ತಾರೆ. ಒಂದು ವರ್ಷದ ಬಳಿಕ ಗಂಡನ ಕಳೆದುಕೊಂಡ ನೋವಿನಲ್ಲಿ ತಾಯಿ ಕಮಲೇಶ್​​ ಸೆಹ್ರಾವತ್​ ಕೂಡಾ ನಿಧನರಾಗುತ್ತಾರೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಅಮನ್​ ಮತ್ತು ಸಹೋದರಿ ಪೂಜಾ ಅನಾಥರಾಗುತ್ತಾರೆ. ಆಗ್ಲೇ ಅಮನ್ ಅಜ್ಜ ಮೊಮ್ಮಗನ ಕೈ ಬಿಡದಂತೆ ಹಿಡಿದುಕೊಂಡರು. ಅಜ್ಜನೇ ಅಮ್ಮನಾಗಿ, ಅಪ್ಪನಾಗಿ ಅಮನ್ ಬದುಕು ರೂಪಿಸಿದರು. ಅಮನ್ ಗೆ  ಚಿಕ್ಕ ವಯಸ್ಸಿನಿಂದಲೇ ಮಣ್ಣಿನಲ್ಲಿ ಉರುಳಾಡಿ ಕುಸ್ತಿ ಮಾಡೋದಂದ್ರೆ ತುಂಬಾನೇ ಇಷ್ಟವಿತ್ತಂತೆ. ಜೊತೆಗೆ ಸಹೋದರಿ ಪೂಜಾ ಕೂಡಾ ಕ್ರೀಡೆಯಲ್ಲಿ ಮುಂದಿದ್ರು. ಅಮನ್ ಆಸಕ್ತಿಯನ್ನ ಗಮನಿಸಿದ ಅಜ್ಜ ಸಂಪೂರ್ಣ ಸಹಕಾರ ನೀಡಿದ್ರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಪದಕ ಗೆದ್ದಾಗ ಅಮನ್ ಕೂಡಾ ನಾನು ಒಂದು ದಿನ ಇದೇ ಥರಾ ಪದಕ ಗೆಲ್ಲಬೇಕು ಅಂತಾ ಹಠ ಮಾಡಿದ್ದರಂತೆ. ಅಲ್ಲಿಂದಲೇ ಶುರುವಾಯ್ತು ಕುಸ್ತಿಗಾಗಿ ಹೋರಾಟ. ಹುಟ್ಟೂರಿನಿಂದ 95 ಕಿಲೋಮೀಟರ್ ದೂರದ ದೆಹಲಿಯ ಛತ್ರಸಾಲ್ ಕುಸ್ತಿ ಅಕಾಡೆಮಿಯಲ್ಲಿ ಪ್ರಾಕ್ಟೀಸ್ ಕೂಡಾ ಶುರುಮಾಡ್ತಾರೆ. ಇದೇ ಅಕಾಡೆಮಿಯಲ್ಲಿ ಸುಶೀಲ್ ಕುಮಾರ್, ಯೋಗೇಶ್ವರ್ ದತ್, ರವಿ ದಹಿಯಾ, ಭಜರಂಗ್ ಪೂನಿಯಾ ಪ್ರಾಕ್ಟೀಸ್ ಮಾಡಿದ್ದರು. ಇವರ ಸಾಧನೆಯೇ ಅಮನ್‌ಗೆ ಸ್ಪೂರ್ತಿಯಾಗಿತ್ತು. ಇವರ ಛಲ ಮೆಚ್ಚಲೇಬೇಕು. 11 ವರ್ಷದಲ್ಲಿ ಅನಾಥನಾಗಿ ಕುಗ್ಗಿ ಹೋಗಿದ್ದ ಬಾಲಕ ಅಜ್ಜನ ಗರಡಿಯಲ್ಲಿ ತನ್ನ ನೋವನ್ನ ಮರೆಯಲು ಪ್ರಯತ್ನಿಸಿದ್ದ. ಕೇವಲ 18 ವರ್ಷಕ್ಕೆ ನ್ಯಾಷನಲ್ ಚಾಂಪಿಯನ್ ಆಗಿದ್ದ.

ಕಂಚಿನ ಪದಕ ಗೆಲ್ಲೋ ಮೊದಲು ತೂಕ ಇಳಿಸಿಕೊಂಡಿದ್ದ ಅಮನ್ 

ವಿನೇಶ್ ಫೋಗಟ್ ಅನರ್ಹ ಭಯ ಅಮನ್ ಗೂ ಕಾಡಿತ್ತು. ಕುಸ್ತಿಯಲ್ಲಿ ಫೈನಲ್‌ ಪ್ರವೇಶಿಸಿದ್ದ ವಿನೇಶ್‌ ಫೋಗಟ್‌ ಕೇವಲ 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣ ಒಲಿಂಪಿಕ್ಸ್‌ ಸ್ಪರ್ಧೆಯಿಂದಲೇ ಅನರ್ಹಗೊಂಡರು. ಇದೇ ಭಯದಿಂದ ಅಮನ್ ಕೂಡಾ ಹತ್ತು ಗಂಟೆಗಳಲ್ಲಿ ನಡೆಸಿದ್ದ ಕಸರತ್ತು ಒಂದೆರೆಡಲ್ಲ. ಪಂದ್ಯಕ್ಕೂ ಮುನ್ನ ಕೇವಲ 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಅಮನ್. ಸೆಮಿಫೈನಲ್‌ ಸೋಲಿನ ಬಳಿಕ 61 ಕೆಜಿ ತೂಕ ಹೊಂದಿದ್ದ ಅಮನ್‌ ಕಂಚಿನ ಪದಕಕ್ಕೆ ಹೋರಾಡಬೇಕಿತ್ತು. ನಿಗದಿತ ಮಿತಿಗಿಂತ ಅಮನ್‌ 4.5 ಕೆಜಿ ಹೆಚ್ಚುವರಿ ತೂಕವಿದ್ದ ಕಾರಣ ಭಾರೀ ಕಸರತ್ತು ನಡೆಸಿ ತೂಕ ಇಳಿಸಿದ್ದಾರೆ. 21 ವರ್ಷ ವಯಸ್ಸಿನ ಅಮನ್ ಅವರು ಜಪಾನ್‌ನ ರೇ ಹಿಗುಚಿ ವಿರುದ್ಧ ಗುರುವಾರ ಸಂಜೆ 6:30ರ ವೇಳೆಗೆ ಸೆಮಿಸ್‌ನಲ್ಲಿ ಸೋಲು ಕಂಡಿದ್ದರು. ಬಳಿಕ ಪ್ಯೂಟೋರಿಕೋದ ಕುಸ್ತಿಪಟು ಕರ್ಜ್‌ ವಿರುದ್ಧ ಕಂಚಿನ ಪದಕಕ್ಕೆ ಅವರು ಸೆಣಸಬೇಕಿತ್ತು. ಸ್ವಲ್ಪವೂ ಟೈಮ್ ವೇಸ್ಟ್ ಮಾಡದೇ ಅಮನ್, ನಿರಂತರವಾಗಿ ದೇಹ ದಂಡಿಸುವ ಕಾರ್ಯ ಶುರುಮಾಡಿದ್ದರು. ಸೆಮಿಫೈನಲ್‌ ಪಂದ್ಯ ಮುಗಿದ ಬಳಿಕ ಗುರುವಾರ ಮಧ್ಯಾಹ್ನ 12:30ರ ವೇಳೆಗೆ ಅಮನ್‌ ಜಿಮ್‌ಗೆ ಬಂದು ಟ್ರೆಡ್‌ಮಿಲ್‌ನಲ್ಲಿ 1 ಗಂಟೆ ನಾನ್‌ಸ್ಟಾಪ್‌ ಓಟ ಅಭ್ಯಾಸ ಮಾಡಿದ್ರು. ಇದಕ್ಕೂ ಮುನ್ನ ಅವರು ಹಿರಿಯ ಕೋಚ್‌ಗಳೊಂದಿಗೆ ಸತತ ಒಂದೂವರೆ ಗಂಟೆ ಮ್ಯಾಚ್‌ ಸೆಷನ್‌ ಅಭ್ಯಾಸ ಮಾಡಿದ್ದರು. ನಂತರ 30 ನಿಮಿಷಗಳ ಕಾಲ ವಿರಾಮ ತೆಗೆದುಕೊಂಡು, 5 ನಿಮಿಷಗಳ ಕಾಲ ಸೌನಾ ಸ್ನಾನ ಮಾಡಿದರು. ಆದ್ರೆ ಸೆಷನ್‌ ಮುಕ್ತಾಯದ ಹೊತ್ತಿಗೆ ಇನ್ನೂ 900 ಗ್ರಾಂ ಹೆಚ್ಚು ತೂಕ ಹೊಂದಿದ್ದರು. ಇದರಿಂದ ಅವರಿಗೆ ಇನ್ನಷ್ಟು ಮಸಾಜ್‌ ಮಾಡಿಸಿ, ಲಘು ಜಾಗಿಂಗ್ ಮಾಡಿಸಲಾಯಿತು. ಹೀಗೆ ಬಿಡುವಿಲ್ಲದೇ ಮಾಡಿದ ಕಸರತ್ತಿನ ಪರಿಣಾಮ ಶುಕ್ರವಾರ ಮುಂಜಾನೆ 4:30ರ ವೇಳೆಗೆ ಅಮನ್‌ ದೇಹದ ತೂಕವನ್ನು 56.9 ಕೆಜಿಗೆ ಇಳಿಸಿದರು. ಇದರ ಜೊತೆಗೆ ಒಂದು ತುತ್ತು ಊಟ ಕೂಡಾ ಮಾಡಿರಲಿಲ್ಲ. ಅಮನ್‌ ಆಹಾರವನ್ನ ತಿನ್ನಲೇ ಇಲ್ಲ. ಜೇನುತುಪ್ಪ ಬೆರಸಿದ ಉಗುರುಬೆಚ್ಚಗಿನ ನೀರು ಹಾಗೂ ಸ್ವಲ್ಪ ಕಾಫಿ ಕುಡಿದಿದ್ದು ಮಾತ್ರ. ಅಲ್ಲದೇ ಕಂಚಿನ ಪದಕದ ಪಂದ್ಯ ಮುಗಿಯುವವರೆಗೂ ಅಮನ್‌ ನಿದ್ದೆ ಮಾಡಿರಲೇ ಇಲ್ಲ.

ಅಂತೂ ಅಮನ್ ಶ್ರಮಕ್ಕೆ ಸರಿಯಾದ ಪ್ರತಿಫಲವೇ ಸಿಕ್ಕಿದೆ. ಚೊಚ್ಚಲ ಪ್ರಯತ್ನದಲ್ಲೇ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ ಅಮನ್. ಅಷ್ಟೇ ಅಲ್ಲ ಕೊರಳಿಗೆ ಕಂಚಿನ ಪದಕ ಬಿದ್ದಾಗ ನೆನೆಸಿಕೊಂಡಿದ್ದು ತನ್ನ ಹೆತ್ತವರನ್ನು. ಕಂಚಿನ​ ಪದಕವನ್ನು ಅಗಲಿದ ತಂದೆ-ತಾಯಿಗೆ ಅರ್ಪಿಸಿದ್ದಾರೆ ಅಮನ್. ಅಜ್ಜನ ಶ್ರಮ, ಕೋಚ್‌ಗಳ ಎಫರ್ಟ್.. ಅಮನ್ ಹಠ.. ಇವತ್ತು ಗೆದ್ದಿದೆ. ಈ ಗೆಲುವು ಕುಸ್ತಿಪಟುಗಳ ಹೋರಾಟದ ಗೆಲುವು ಕೂಡಾ ಹೌದು.

Sulekha