PAK ಅಸಲಿ ಚಿನ್ನ ನದೀಮ್.. ಗುರುವಿಲ್ಲ, ಹಣವಿಲ್ಲ, ಜನರೇ ಕಳಿಸಿದ್ರು.. ಜಾವಲಿನ್ ಕೊಟ್ಟಿದ್ದು ನೀರಜ್ ಚೋಪ್ರಾ

PAK ಅಸಲಿ ಚಿನ್ನ ನದೀಮ್.. ಗುರುವಿಲ್ಲ, ಹಣವಿಲ್ಲ, ಜನರೇ ಕಳಿಸಿದ್ರು.. ಜಾವಲಿನ್ ಕೊಟ್ಟಿದ್ದು ನೀರಜ್ ಚೋಪ್ರಾ

ಇಡೀ ಭಾರತ ನಿನ್ನೆ ತಡರಾತ್ರಿ ನಿದ್ದೆ ಮಾಡಿರಲಿಲ್ಲ. ಎಲ್ಲರೂ ಚಿನ್ನದ ಗಳಿಗೆಗಾಗಿ ಕಾಯುತ್ತಲೇ ಇದ್ರು. ನೀರಜ್ ಚೋಪ್ರಾಗಾಗಿ ಕೋಟಿ ಕೋಟಿ ಭಾರತೀಯರು ಪ್ರಾರ್ಥನೆ ಮಾಡುತ್ತಿದ್ರು. ಆದ್ರೆ, ನೀರಜ್ ಚೋಪ್ರಾ ನಿರಾಸೆ ಮಾಡಲಿಲ್ಲ. ಬೆಳ್ಳಿ ಪದಕ ತಂದು ಭಾರತಕ್ಕೆ ಹೆಮ್ಮೆ ತಂದ್ರು. ಇವರ ಜೊತೆಗೆ ಚಿನ್ನ ಗೆದ್ದ ಪಾಕ್ ಯುವಕ ಕೂಡಾ ರಾತ್ರಿ ಬೆಳಗಾಗೋದ್ರಲ್ಲಿ ಕೋಟ್ಯಂತರ ಕ್ರೀಡಾಭಿಮಾನಿಗಳ ಮನಸು ಗೆದ್ದಿದ್ದ. ಆತನೇ ಅರ್ಷದ್ ನದೀಮ್. ಹೌದು. ನೀರಜ್ ಚೋಪ್ರಾ ಕೈ ಜಾರಿದ ಚಿನ್ನ ಅರ್ಷದ್ ನದೀಮ್ ಕೊರಳಿಗೆ ಸುಮ್ಮನೆ ಬಿದ್ದಿಲ್ಲ. ಇದರ ಹಿಂದೆ ನದೀಮ್ ನೋವಿನ ಕಥೆಯಿದೆ. ಚಿನ್ನಕ್ಕೆ ಗುರಿಯಿಟ್ಟ ನದೀಮ್ ಮೊದಲು ತನ್ನ ಸಂತಸ ಹಂಚಿಕೊಂಡಿದ್ದು ಕೂಡಾ ನೀರಜ್ ಚೋಪ್ರಾ ಜೊತೆಗೆ. ಇದಕ್ಕೂ ಕಾರಣವಿದೆ. ಈ ಚಿನ್ನ ಗೆಲ್ಲಲೂ ಕೂಡಾ ನೀರಜ್ ಚೋಪ್ರಾರೇ ಕಾರಣ. ಇದೇ ಕಾರಣಕ್ಕೆ ಆನಂದ್ ಮಹೀಂದ್ರ ಕೂಡಾ ನೀರಜ್ ಬಗ್ಗೆ ಹೆಮ್ಮೆಯ ಮಾತುಗಳಾಡಿದ್ದು. ಇದೇ ಕಾರಣಕ್ಕೆ ನೀರಜ್ ಚೋಪ್ರಾ ತಾಯಿ ಕೂಡಾ ನದೀಮ್ ನನ್ನ ಮಗನೇ ಅಂತಾ ಹೇಳಿದ್ದು. ಹಾಗಾದ್ರೆ ಕೊನೇ ಗಳಿಗೆಯಲ್ಲಿ ನಡೆದ ಮ್ಯಾಜಿಕ್ ಏನು? ಎಲ್ಲಿಯ ನೀರಜ್ ಎಲ್ಲಿಯ ನದೀಮ್. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: T-20, ODI, Test.. ಭಾರತ ಬ್ಯುಸಿ – ಮೇವರೆಗೂ ಟೀಂ ಇಂಡಿಯಾಗಿಲ್ಲ ರೆಸ್ಟ್

ಕ್ರೀಡಾಸ್ಪೂರ್ತಿ ಅಂದರೆ ಏನು ಅಂತಾ ಮಕ್ಕಳು ಕೇಳಿದ್ರೆ ಅವ್ರಿಗೆ ನೀರಜ್ ಚೋಪ್ರಾ ಬಗ್ಗೆ ನೀವು ಹೇಳಲೇಬೇಕು. ಕ್ರೀಡಾಸ್ಪೂರ್ತಿಗೆ ಬಹುದೊಡ್ಡ ಎಕ್ಸಾಂಪಲ್ ಅಂದ್ರೆ ನೀರಜ್ ಚೋಪ್ರಾ. ಒಂದೇ ವಿಭಾಗದಲ್ಲಿ ಸ್ಪರ್ಧೆ ಮಾಡೋರಿಗೆ ಗೆಲ್ಲಲೇಬೇಕು ಅನ್ನೋ ಹಠ ಇರುತ್ತದೆ. ನಾವೇ ವಿನ್ ಆಗ್ಬೇಕು. ನನಗೇ ಮೆಡಲ್ ಬರಬೇಕು ಅನ್ನೋ ಭಾವನೆ ಇರುತ್ತದೆ. ನಾನೂ ಗೆಲ್ಲಬೇಕು. ನನ್ನ ಜೊತೆ ಇದ್ದವರನ್ನೂ ಗೆಲ್ಲಿಸಬೇಕು ಅನ್ನೋ ಮನಸಿದೆಯಲ್ಲಾ. ಇದು ಕೋಟಿಗೊಬ್ಬರಿಗೆ ಮಾತ್ರ. ಆ ಕೋಟಿಗೊಬ್ಬನೇ ನೀರಜ್ ಚೋಪ್ರಾ.

ಹೌದು.. ಜಾವಲಿನ್ ಥ್ರೋ ವಿಭಾಗಕ್ಕೆ ಬಂದ್ರೆ ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಮ್ ಘಟಾನುಘಟಿ ಆಟಗಾರರು. ಅಕ್ಕಪಕ್ಕದ ರಾಷ್ಟ್ರದವರು. ಅಷ್ಟೇ ಏಕೆ ಇಬ್ಬರೂ ಉತ್ತಮ ಸ್ನೇಹಿತರು. ಒಲಿಂಪಿಕ್‌ ಪಂದ್ಯದಲ್ಲಿ ತಾವಿಬ್ಬರೂ ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಯಾದರೂ ಸ್ನೇಹ, ಸಂಬಂಧ ಮತ್ತು ಕ್ರೀಡಾ ಸ್ಪೂರ್ತಿಯನ್ನು ಇಬ್ಬರೂ ಮರೆತಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನಮ್ಮ ಹೆಮ್ಮೆಯ ನೀರಜ್ ಚೋಪ್ರಾ ಗೋಲ್ಡ್ ಮೆಡಲ್ ಗೆಲ್ಲೋದನ್ನ ಕಣ್ತುಂಬಿಕೊಳ್ಳಲು ಇಡೀ ಭಾರತ ಕಾಯುತ್ತಿತ್ತು. ಆದ್ರೆ, ಅದೇ ಸಮಯದಲ್ಲಿ ಎಲ್ಲರ ನಿರೀಕ್ಷೆ ಬುಡಮೇಲು ಮಾಡಿದ್ದು ಪಾಕಿಸ್ತಾನದ ಅರ್ಷದ್ ನದೀಮ್. ನಿರೀಕ್ಷೆಗೂ ಮೀರಿ ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನದ ಪದಕವನ್ನು ತನ್ನ ಕೊರಳಿಗೇರಿಸಿಕೊಂಡಿದ್ದರು. ಈ ಮೂಲಕ 32 ವರ್ಷಗಳ ನಂತರ ಪಾಕಿಸ್ತಾನಕ್ಕೆ ಮೊದಲ ಒಲಿಂಪಿಕ್ಸ್ ಪದಕವನ್ನು ಕಾಣಿಕೆಯಾಗಿ ನೀಡಿದ್ದರು ನದೀಮ್. ರೋಮ್‌ನಲ್ಲಿ ನಡೆದ 1960 ರಲ್ಲಿ ಕುಸ್ತಿಯಲ್ಲಿ ಒಂದು ಮತ್ತು 1988ರ ಸಿಯೋಲ್‌ನಲ್ಲಿ ಬಾಕ್ಸಿಂಗ್‌ನಲ್ಲಿ ಪದಕ ಗೆದ್ದ ನಂತರ ಇದು ಪಾಕಿಸ್ತಾನ ದೇಶದ ಮೂರನೇ ಪದಕವಾಗಿದೆ.

ಚಿನ್ನ ಗೆದ್ದ ನದೀಮ್‌ಗೂ ನೀರಜ್ ಚೋಪ್ರಾರ ಕ್ರೀಡಾ ಸ್ಪೂರ್ತಿಗೂ ಏನ್ ಸಂಬಂಧ ಅನ್ನೋದನ್ನ ನೋಡ್ತಾ ಹೋದ್ರೆ ನಮ್ಮ ನೀರಜ್ ಕೂಡಾ ಬಂಗಾರದ ಹುಡುಗ ಅಂತಾ ಮತ್ತೊಮ್ಮೆ ಹೆಮ್ಮೆಯಿಂದ ಹೇಳಿಕೊಳ್ತೀರಾ. ಐದು ತಿಂಗಳ ಹಿಂದೆ ನಡೆದ ಘಟನೆಯಿದು. ಅರ್ಷದ್ ನದೀಮ್ ಹತ್ರ ಇರೋ ಜಾವಲಿನ್ ಕೈಕೊಡುತ್ತೆ. ಹೊಸ ಜಾವಲಿನ್ ಖರೀದಿಸಲು ಜೇಬಲ್ಲಿ ದುಡ್ಡಿಲ್ಲ. ಮೊದಲೇ ಪಾಕಿಸ್ತಾನದ ಆರ್ಥಿಕತೆ ಪಾತಾಳಕ್ಕೆ ಕುಸಿದುಹೋಗಿರುತ್ತೆ. ನದೀಮ್ ಬೇಡಿಕೆ ಈಡೇರಿಸಲು ಸಾಧ್ಯವಾಗದ ಸ್ಥಿತಿ. ಆಗ ನದೀಮ್ ಸಹಾಯಕ್ಕೆ ಬಂದಿದ್ದು ನೀರಜ್ ಚೋಪ್ರಾ. ಗೆಳೆಯನ ಕಷ್ಟದ ಸ್ಥಿತಿ ಗೊತ್ತಾಗುತ್ತಿದ್ದಂತೆ ನೀರಜ್ ಚೋಪ್ರಾ ಬೆಂಬಲವಾಗಿ ನಿಲ್ತಾರೆ. ಕಳೆದ ಏಳೆಂಟು ವರ್ಷಗಳಿಂದ ನದೀಮ್ ಒಂದೇ ಜಾವಲಿನ್ ಬಳಸುತ್ತಿದ್ದರು. ಆದ್ರೆ, ಪ್ಯಾರಿಸ್ ಒಲಿಂಪಿಕ್ಸ್ ಗೆ ಹೋಗಲು ತಯಾರಿ ನಡೆಸುತ್ತಿರುವಾಗ ಹೊಸ ಜಾವಲಿನ್ ಪಡೆಯಲು ತುಂಬಾ ಕಷ್ಟ ಪಟ್ಟಿದ್ದರು. ಮಾರ್ಚ್‌ 2024ರಲ್ಲಿ ಅರ್ಷದ್‌ ಮಾಧ್ಯಮ ಮೂಲಕವೂ ತನ್ನ ನೋವನ್ನ ಹೇಳಿಕೊಂಡಿದ್ರು. ನನ್ನ ಜಾವಲಿನ್ ಹಾನಿಗೊಂಡಿದೆ. ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಏನಾದರೂ ಮಾಡುವಂತೆ ನಮ್ಮ ಫೆಡರೇಶನ್ ಗೆ ಮನವಿ ಮಾಡಿದ್ದೇನೆ ಅಂತಾ ಹೇಳಿದ್ದರು. ಆದ್ರೆ, ಜಾವಲಿನ್ ಮಾತ್ರ ಸಿಕ್ಕಿರಲೇ ಇಲ್ಲ. ಹೊಸ ಅಂತರರಾಷ್ಟ್ರೀಯ ಮಟ್ಟದ ಜಾವೆಲಿನ್‌ ಪಡೆಯಲು ಕಷ್ಟಪಡುತ್ತಿದ್ದ ಸಂದರ್ಭದಲ್ಲಿ ಬೆಂಬಲಕ್ಕೆ ಬಂದವರೇ ನಮ್ಮ ನೀರಜ್‌.

ಇದೇ ಜಾವಲಿನ್ ಎಸೆತದಲ್ಲಿ ಚಿನ್ನ ಗೆದ್ದ ನದೀಮ್ ಭಾರತೀಯ ನಿದ್ದೆ ಕೆಡಿಸಿದ್ದು ಸತ್ಯ. ಹಾಗಂತಾ ನದೀಮ್ ಜೀವನ ಮಾತ್ರ ಯಾವತ್ತೂ ಹೂವಿನ ಹಾದಿಯಾಗಿರಲಿಲ್ಲ. ಕಷ್ಟದ ಕುಲುಮೆಯಾಗಿತ್ತು.ಅದಕ್ಕೆ ಬೆಂಕಿಯಲ್ಲಿ ಅರಳಿದ ಚಿನ್ನದ ಸಾಧಕ ನದೀಮ್ ಅಂತಾ ಈಗ ಬಣ್ಣಿಸಲಾಗ್ತಿದೆ. ಹಾಗಾದ್ರೆ ನದೀಮ್ ಯಾರು, ನದೀಮ್ ಬದುಕು ಹೇಗಿತ್ತು ಅನ್ನೋ ವಿವರ ಇಲ್ಲಿದೆ.

ಪಾಕಿಸ್ತಾನದ ಮಿಯಾನ್‌ ಚಾನುವಿನಲ್ಲಿನ ಬಡ ಪಂಜಾಬಿ ಕುಟುಂಬದಲ್ಲಿ ಅರ್ಷದ್‌ ನದೀಮ್‌ ಜನನವಾಗುತ್ತದೆ. ನದೀಮ್ ತಂದೆ ಮುಹಮ್ಮದ್‌ ಅಶ್ರಫ್‌ ಮೇಸ್ತ್ರಿಯಾಗಿದ್ರು. ಹೀಗಾಗಿ ನದೀಮ್ ಕೂಡಾ ಗಾರೆ ಕೆಲಸ ಮಾಡುತ್ತಿದ್ರು. ಗಾರೆ ಕೆಲಸ ಮಾಡುತ್ತಲೇ ಶಾಲೆಗೂ ಹೋಗುತ್ತಿದ್ದರು. ಇದರ ಜೊತೆಗೆ ಕ್ರೀಡೆ ಮೇಲೆ ಒಲವು ತೋರಿಸಲು ಶುರುಮಾಡಿದ್ರು. ನದೀಮ್ ಕ್ರೀಡಾಚಟುವಟಿಕೆಯಲ್ಲಿ ಪ್ರತಿಭೆ ತೋರಿಸುತ್ತಾ ಬಂದಾಗ ಗ್ರಾಮಸ್ಥರು ಕೂಡಾ ನದೀಮ್ ಗೆ ಬೆಂಬಲವಾಗಿ ನಿಂತರು. ನಂತರ  ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಹಣ ಬೇಕಿದ್ದ ಸಂದರ್ಭದಲ್ಲಿ ಗ್ರಾಮಸ್ಥರೇ ಹಣ ಸಹಾಯ ಮಾಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನದೀಮ್ ಪಾಲ್ಗೊಂಡಿದ್ದ ಸಂದರ್ಭದಲ್ಲೂ ಪಾಕ್‌ ಸರ್ಕಾರದಿಂದ ಯಾವುದೇ ಬೆಂಬಲ ಸಿಕ್ಕಿರಲಿಲ್ಲ. ದೊಡ್ಡ ಪ್ರಾಯೋಜಕತ್ವಗಳೂ ಲಭ್ಯವಾಗಿರಲಿಲ್ಲ. ಆಗಲೂ ಕೂಡಾ ಧನ ಸಹಾಯಕ್ಕೆ ಮನವಿ ಮಾಡಿಕೊಂಡಿದ್ದರು. ಆಗಲೂ ಗ್ರಾಮಸ್ಥಲ್ಲಾ ಸೇರಿ ಹಣ ಸಹಾಯಮಾಡಿದ್ದರು.  ಈಗಂತೂ ಪಾಕಿಸ್ತಾನದ ಆರ್ಥಿಕತೆ ಬಗ್ಗೆ ಕೇಳೋದೇ ಬೇಡ. ಪಾತಾಳಕ್ಕೆ ಕುಸಿದ ಪಾಕಿಸ್ತಾನದ ಆರ್ಥಿಕತೆಯ ಮಧ್ಯೆ ಸವಲತ್ತುಗಳಿಲ್ಲದೇ ಸವಾಲುಗಳನ್ನು ಮೆಟ್ಟಿ ನಿಂತು ಅರ್ಷದ್ ನದೀಮ್‌ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಈ ಚಿನ್ನದ ಸಾಧನೆಗೆ ಬೆಂಬಲವಾಗಿ ನಿಂತವರು ಮತ್ತದೇ ಗ್ರಾಮಸ್ಥರು. ನದೀಮ್ ಅವರ ತರಬೇತಿಗಾಗಿ ಹಣವನ್ನು ಸಂಗ್ರಹಿಸಿ ಕೊಟ್ಟಿದ್ದರು ಗ್ರಾಮಸ್ಥರು. ನಂತರ ಪ್ಯಾರಿಸ್ ಒಲಿಂಪಿಕ್ಸ್ ಗೆ ಬರುವಾಗಲೇ ಗ್ರಾಮಸ್ಥರೇ ತಮ್ಮ ಕೈಲಾದಷ್ಟು ಹಣ ಸಹಾಯ ಮಾಡಿದ್ದಾರೆ. ಚಿನ್ನದ ಹುಡುಗ ಅರ್ಷದ್ ನದೀಮ್ ಅವರ ತಂದೆ ಮುಹಮ್ಮದ್ ಅಶ್ರಫ್ ಅವರು, ‘ಅರ್ಷದ್ ಇಂದು ಈ ಮಟ್ಟಕ್ಕೆ ಬರಲು ನಮ್ಮ ಗ್ರಾಮ ಮತ್ತು ಪಕ್ಕದ ಗ್ರಾಮಸ್ಥರೇ ಕಾರಣ. ಗ್ರಾಮಸ್ಥರು ಮತ್ತು ಸಂಬಂಧಿಕರು ಅವನಿಗೆ ಹಣ ನೀಡಿ ಸಾಧನೆಗೈಯಲು ದೇಣಿಗೆ ನೀಡುತ್ತಿದ್ದರು, ಅವರ ಪ್ರೋತ್ಸಾಹದಿಂದಾಗಿ ನದೀಮ್ ಈ ಸಾಧನೆ ಮಾಡಿದ್ದಾನೆ ಅಂತಾ ತಂದೆ ಹೇಳಿದ್ದಾರೆ.

ಇನ್ನು, ನೀರಜ್ ಚೋಪ್ರಾ ಕೈಯಿಂದ ಚಿನ್ನ ಜಾರಿದರೂ ಕೂಡಾ ತಾಯಿ ಸರೋಜಾ ದೇವಿ ಬಂಗಾರದಂತಾ ಮಾತನಾಡಿದ್ದಾರೆ. ಜಾವಲಿನ್ ಥ್ರೋನಲ್ಲಿ ಚಿನ್ನ ಗೆದ್ದವನು ಕೂಡಾ ನನ್ನ ಮಗನೇ ಎಂದು ಸರೋಜಾ ದೇವಿ ಹೇಳಿದ್ದಾರೆ. ಈ ಮೂಲಕ ನದೀಮ್ ಮತ್ತು ನೀರಜ್ ಚೋಪ್ರಾ ಗೆಳೆತನವನ್ನ ಕಾಪಾಡಿಕೊಂಡಿದ್ದಾರೆ ಸರೋಜಾ ದೇವಿ.

ಅದೇನೇ ಇರಲಿ, ನದೀಮ್ ಈಗ ಪಾಕಿಸ್ತಾನದ ಅಸಲಿ ಚಿನ್ನ. 32 ವರ್ಷಗಳಿಂದ ಒಲಿಂಪಿಕ್ಸ್ ಪದಕಕ್ಕಾಗಿ ಕಾಯುತ್ತಿದ್ದ ದೇಶಕ್ಕೆ ಚಿನ್ನ ಗೆದ್ದು ತಂದುಕೊಟ್ಟಿದ್ದಾರೆ ನದೀಮ್. ಜೊತೆಗೆ ಕಷ್ಟ, ಸವಾಲುಗಳನ್ನ ಮೆಟ್ಟಿನಿಂತು ಚಿನ್ನದಂತಾ ಸಾಧನೆ ಮಾಡಿದ್ದಾರೆ. ಗೆಳೆಯ ನದೀಮ್ ದಾಖಲೆಯ ಎಸೆತ ಕಂಡು ನೀರಜ್ ಚೋಪ್ರಾ ಕೂಡಾ ಅಭಿನಂದನೆ ಸಲ್ಲಿಸಿದ್ದಾರೆ. ನೀರಜ್ ಚೋಪ್ರಾರ ಈ ದೊಡ್ಡ ಗುಣಕ್ಕೆ ಮಹೀಂದ್ರ ಕಂಪನಿಯ ಆನಂದ್​​ ಮಹೇಂದ್ರ ಕೂಡಾ ಸೆಲ್ಯೂಟ್ ಹೇಳಿದ್ದಾರೆ. ನಿನ್ನೆ ರಾತ್ರಿ ನಡೆದ ಪಂದ್ಯದಿಂದ ತುಂಬಾ ನೋವಾಗಿತ್ತು. ನೀರಜ್ ಚೋಪ್ರಾ ತನ್ನ ಎರಡನೇ ಒಲಿಂಪಿಕ್​​ನಲ್ಲಿ ಚಿನ್ನದ ಪದಕವನ್ನು ಗೆಲ್ಲಲಿಲ್ಲ. ಆದರೆ, ಇಂದು ಬೆಳಿಗ್ಗೆ, ನಾನು ಮೊದಲು ಅರ್ಷದ್ ನದೀಮ್ ಅವರ ದಾಖಲೆಗೆ ಅಭಿನಂದಿಸಲು ಬಯಸುತ್ತೇನೆ. ಅದರಲ್ಲೂ ನೀರಜ್ ಅವರೊಂದಿಗಿನ ಅವರ ಕ್ರೀಡಾ ಮನೋಭಾವ ಮತ್ತು ಒಡನಾಟಕ್ಕೆ ನಾನು ಸೋತೆ. ನೀರಜ್ ಮತ್ತೊಮ್ಮೆ ಚಿನ್ನ ಗೆಲ್ಲುತ್ತಾರೆ ಅಂತಾ ನೀರಜ್ ಅವರ ಗುಣವನ್ನು ಕೊಂಡಾಡಿದ್ದಾರೆ ಆನಂದ್ ಮಹೀಂದ್ರ. ಭಾರತಕ್ಕೆ ಬ್ಯಾಕ್ ಟು ಬ್ಯಾಕ್ ಪದಕ ತಂದುಕೊಟ್ಟ ನೀರಜ್ ಚೋಪ್ರಾ ನಿಜವಾಗಿಯೂ ಶ್ರೇಷ್ಠ ಕ್ರೀಡಾಪಟು ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ.

Shwetha M

Leave a Reply

Your email address will not be published. Required fields are marked *