ಲಂಕಾ ಗೆಲ್ಲಿಸಿದ್ದೇ ಜಯಸೂರ್ಯ – ಸೋತ ಗಂಭೀರ್ ಸನತ್ ಲೇವಡಿ
ಗೌತಮ್ ವಿರುದ್ಧ ಸೇಡು ಮರೆಯಕ್ಕಾಗುತ್ತಾ?

ಲಂಕಾ ಗೆಲ್ಲಿಸಿದ್ದೇ ಜಯಸೂರ್ಯ – ಸೋತ ಗಂಭೀರ್ ಸನತ್ ಲೇವಡಿಗೌತಮ್ ವಿರುದ್ಧ ಸೇಡು ಮರೆಯಕ್ಕಾಗುತ್ತಾ?

ಪ್ರತಿಯೊಂದಕ್ಕೂ ಟೈಮ್ ಉತ್ತರ ಕೊಡುತ್ತೆ ಅಂತಾರಲ್ಲ ಅದು ಇದೇ ಇರ್ಬೇಕು. ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್ ಆಗಿ ಬರೋದನ್ನೇ ಕಾಯ್ತಾ ಇದ್ದಿದ್ದು ಯಾರು ಗೊತ್ತಾ.. ಲಂಕಾದಲ್ಲಿ ಹಸಿದು ಕಾಯುತ್ತಿದ್ದ ಅದೇ ಸಿಂಹ. ವರ್ಷಗಳ ಸೇಡಿಗಾಗಿ ಕಾಯುತ್ತಿದ್ದ ಆ ಸಿಂಹಾ ಕೊನೆಗೂ ಗೌತಮ್ ಗಂಭೀರ್‌ಗೆ ಸೋಲುಣಿಸಿದೆ. ಇದು ಲಂಕಾ ವಿರುದ್ಧ ಟೀಮ್ ಇಂಡಿಯಾದ ಸೋಲು ಅನ್ನೋದಕ್ಕಿಂತ ಕೋಚ್ ಗೌತಮ್ ಗಂಭೀರ್ ಸೋಲು. ಇಲ್ಲಿ ಗೆದ್ದಿದ್ದು ಶ್ರೀಲಂಕಾ ಅನ್ನೋ ಬದಲು ಸನತ್ ಜಯಸೂರ್ಯ ಅನ್ನೋದೇ ಕರೆಕ್ಟ್. ಹಾಗಾದ್ರೆ, ಗಂಭೀರ್ ವರ್ಸಸ್ ಜಯಸೂರ್ಯ ಜಿದ್ದಾಜಿದ್ದಿ ಶುರುವಾಗಿದ್ದೆಲ್ಲಿ?, ಇಬ್ಬರೂ ಹೊಸ ಕೋಚ್‌ಗಳಲ್ಲಿ ಗೆಲುವಿನ ಪೈಪೋಟಿ ಯಾಕೆ ಶುರುವಾಗಿತ್ತು? ಈ ಸೋಲಲ್ಲೂ ಗಂಭೀರ್‌ಗೆ ಜಯಸೂರ್ಯ ಕಲಿಸಿಕೊಟ್ಟ ಪಾಠವೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: T-20, ODI, Test.. ಭಾರತ ಬ್ಯುಸಿ – ಮೇವರೆಗೂ ಟೀಂ ಇಂಡಿಯಾಗಿಲ್ಲ ರೆಸ್ಟ್

ಶ್ರೀಲಂಕಾ ವರ್ಸಸ್ ಇಂಡಿಯಾ. ಕ್ರಿಕೆಟ್ ಪ್ರೇಮಿಗಳು ಈ ಪಂದ್ಯ ನೋಡುತ್ತಿದ್ದರೆ ಅಲ್ಲಿ ನಿಜವಾಗಿ ಸಮರ ಸೇನಾನಿಗಳಾಗಿ ನಿಂತಿದ್ದು ಗೌತಮ್ ಗಂಭೀರ್ ಮತ್ತು ಸನತ್ ಜಯಸೂರ್ಯ. ನಿಮಗೂ ಗೊತ್ತಿರಬೇಕು ಸ್ನೇಹಿತರೇ, ಟೀಮ್ ಇಂಡಿಯಾಕ್ಕೆ ಗೌತಮ್ ಗಂಭೀರ್ ಮಾತ್ರ ಹೊಸ ಕೋಚ್ ಆಗಿ ನೇಮಕವಾಗಿದ್ದಲ್ಲ. ಇತ್ತ ಶ್ರೀಲಂಕಾ ಟೀಮ್‌ಗೂ ಸನತ್ ಜಯಸೂರ್ಯ ನೂತನ ಕೋಚ್ ಆಗಿ ಭಾರತದ ವಿರುದ್ಧ ಹೊಸ ಇನ್ನಿಂಗ್ಸ್‌ ಗಾಗಿ ಕಾಯುತ್ತಿದ್ದರು. ಇಲ್ಲೂ ಕೂಡಾ ಜಯಸೂರ್ಯ ಟಾರ್ಗೆಟ್ ಇದ್ದಿದ್ದು ಗಂಭೀರ್ ಮೇಲೆ. ಕೋಚ್ ಆಗಿ ಮೊದಲ ಏಕದಿನ ಸರಣಿಯನ್ನು ಗೌತಮ್ ಗಂಭೀರ್ ಸೋತಿದ್ದರೆ, ಸನತ್ ಜಯಸೂರ್ಯ ಆತ್ಮವಿಶ್ವಾಸದ ಗೆಲುವಿನ ಮೂಲಕ ತಮ್ಮ ಯುಗ ಆರಂಭಿಸಿದ್ದರು. ಆದರೆ, ಈ ಗೆಲುವಿಗಾಗಿ ಸನತ್ ಜಯಸೂರ್ಯ ಕಾಯ್ತಾ ಇದ್ದಿದ್ದು ಬರೋಬ್ಬರಿ 27 ವರ್ಷಗಳಿಂದ ಅನ್ನೋದನ್ನ ನೀವು ನಂಬಲೇಬೇಕು.

1997ರಲ್ಲಿ ಲಂಕಾ ಆಟಗಾರನಾಗಿ ಮೈನ್ ಬ್ಯಾಟರ್ ಆಗಿ ಕಣಕ್ಕಿಳಿದಿದ್ದ ಸನತ್, ಭಾರತ ತಂಡದ ಸೋಲಿಗೆ ಕಾರಣವಾಗಿದ್ದರು. 1997ರಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಏಕದಿನ ಸರಣಿ ಗೆದ್ದಿತ್ತು. ಆ ಸರಣಿಯಲ್ಲಿ ಲಂಕಾ ಗೆಲುವಿಗೆ ಕಾರಣವಾಗಿದ್ದು ಇದೇ ಸನತ್ ಜಯಸೂರ್ಯ. ಆ ಸರಣಿಯಲ್ಲಿ ಸರಣಿ ಶ್ರೇಷ್ಠ ಪಟ್ಟ ದಕ್ಕಿಸಿಕೊಂಡಿದ್ದು ಕೂಡಾ ಇದೇ ಸೂರ್ಯ. ವಿಪರ್ಯಾಸವೆಂದ್ರೆ ಅಲ್ಲಿಂದ ಇಲ್ಲಿಯವರೆಗೂ ಟೀಮ್ ಇಂಡಿಯಾದ ವಿರುದ್ಧ ಸರಣಿ ಗೆಲ್ಲಲು ಲಂಕಾಗೆ ಸಾಧ್ಯವಾಗಲೇ ಇಲ್ಲ. ಆರಂಭಿಕ ಬ್ಯಾಟರ್ ಆಗಿ ಶೈನ್ ಆಗುತ್ತಿದ್ದ ಜಯಸೂರ್ಯ ಕೂಡಾ ಗೆಲ್ಲೋ ಪ್ರಯತ್ನದಲ್ಲಿ ಸೋತು ಹೋಗಿದ್ದರು. ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಅಂದಿನ ಆಟಗಾರರು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಇಂದಿನ ಆಟಗಾರರು ಕೂಡಾ ಲಂಕಾಗೆ ಸರಣಿ ಗೆಲ್ಲಲು ಬಿಡದೆ ಕಾಡಿದ್ದರು. ಇದೇ ಸೇಡು ಸಿಂಹಳೀಯರ ಎದೆಯಲ್ಲಿ ಬೇರೂರಿತ್ತು. ಸೇಡು ತೀರಿಸಿಕೊಳ್ಳಲು ಬೇಟೆಗಾಗಿ ತಮ್ಮದೇ ನೆಲದಲ್ಲಿ ಹೊಂಚು ಹಾಕಿ ಕೂತಿದ್ದ ಲಂಕಾ ಆಟಗಾರರು ಕೊನೆಗೂ ಸೇಡು ತೀರಿಸಿಕೊಂಡಿದ್ದಾರೆ. ಅದರಲ್ಲೂ ಸನತ್ ಜಯಸೂರ್ಯ ಗೆದ್ದಿದ್ದು ಗೌತಮ್ ಗಂಭೀರ್ ವಿರುದ್ಧ ಅನ್ನೋದೇ ವಿಶೇಷ.

ಇಲ್ಲಿ ಸನತ್ ಜಯಸೂರ್ಯ ವಿಚಾರಕ್ಕೆ ಬರೋದಾದ್ರೆ, ಶ್ರೀಲಂಕಾ ತಂಡ ಸತತ ಸೋಲುಗಳಿಂದ ಕಂಗೆಟ್ಟು ಹೋಗಿತ್ತು. ಟಿ20 ವಿಶ್ವಕಪ್​ನಲ್ಲಂತೂ ಹೀನಾಯ ಸೋಲಿನಿಂದಾಗಿ ಲಂಕಾ ಟೀಮ್ ಅವಮಾನ, ಟೀಕೆಗಳಿಂದ ಕುಸಿದು ಹೋಗಿತ್ತು. ಆಟಗಾರರಂತೂ ಗೆಲುವಿನ ದಾರಿ ಕಾಣದೆ ಕುಗ್ಗಿ ಹೋಗಿದ್ದರು. ಕೋಚ್ ಕ್ರಿಸ್ ಸಿಲ್ವರ್‌ವುಡ್ ಟಿ20 ವಿಶ್ವಕಪ್​ನಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮನೆಗೆ ನಡೆದಿದ್ದರು. ಇತ್ತ ಸಾರಥಿಯಿಲ್ಲದೇ, ಗೆಲುವಿನ ದಾರಿ ಕಾಣದೇ ತತ್ತರಿಸಿದ್ದ ಲಂಕಾ ಟೀಮ್ ಗೆ ಜುಲೈ ಕೊನೇ ವಾರದಲ್ಲಿ ಎಂಟ್ರಿಕೊಟ್ಟಿದ್ದೇ ಲಂಕಾ ಲೆಜೆಂಡರಿ ಕ್ರಿಕೆಟರ್ ಸನತ್ ಜಯಸೂರ್ಯ. ಲಂಕಾ ತಂಡದ ಸಾರಥ್ಯವನ್ನು ಲೆಜೆಂಡ್ ಆಟಗಾರನಿಗೆ ವಹಿಸಿದ್ದೇ ತಡ, ಎಲ್ಲವೂ ಬದಲಾಗಿತ್ತು. ಅದರಲ್ಲೂ ಜಯಸೂರ್ಯ ಕೋಚ್ ಆಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದೇ ಭಾರತದ ವಿರುದ್ಧ. ಶ್ರೀಲಂಕಾ ಕಂಡ ಅತ್ಯಂತ ಶ್ರೇಷ್ಠ ಆಲ್​ರೌಂಡರ್​ ಸನತ್ ಜಯಸೂರ್ಯ. ಇದೇ ಸೂರ್ಯ ಈಗ ತಾನು ಸಾರಥ್ಯವಹಿಸಿಕೊಂಡ ಮೊದಲ ಸರಣಿಯಲ್ಲೇ ಲಂಕಾವನ್ನ ಚಾಂಪಿಯನ್ ಮಾಡಿದ್ದಾರೆ.

ಇತ್ತ ಏಕದಿನ ಸರಣಿಯಲ್ಲಿ ಗೌತಮ್ ಗಂಭೀರ್ ಸೋತಿರಬಹುದು. ಆದ್ರೆ, ಟಿ20 ಸರಣಿ ಗೆದ್ದಿರುವುದರ ಹಿಂದಿರೋ ಶ್ರಮ ಗೌತಮ್ ಗಂಭೀರ್‌ ಅವ್ರದ್ದೇ ಅನ್ನೋದನ್ನ ಮರೆಯಬಾರದು. ಪ್ರಿಪರೇಟರಿಯಲ್ಲಿ ಡಿಸ್ಟಿಂಕ್ಷನ್‌ ಬಂದಿದೆ. ಮೇನ್‌ ಎಕ್ಸಾಮ್‌ನಲ್ಲಿ ಗೌತಮ್‌ ಗಂಭೀರ್ ಫೇಲ್ ಆಗಿದ್ದಾರೆ. ಇವರನ್ನ ಫೇಲ್ ಮಾಡಲೆಂದೇ ಲಂಕಾದಲ್ಲಿ ಕಾದು ಕುಳಿತ ಸಿಂಹ ಸಕ್ಸಸ್ ಆಗಿದೆ. ಹಾಗಂತಾ ಇದೇ ಸೋಲು ಗೌತಮ್ ಗಂಭೀರ್‌ ಗೂ ಗೆಲುವಿನ ಪಾಠವಾಗಿದೆ. ಭವಿಷ್ಯದ ತಂಡವನ್ನು ಕಟ್ಟಲು ಗೌತಮ್​ಗೆ ದೊಡ್ಡ ಹಿಂಟ್ ಇದೇ ಸೋಲಿಂದ ಸಿಕ್ಕಿದೆ. ಕೋಚ್ ಆಗಿ ಗಂಭೀರ್ ಆರಂಭದಲ್ಲೇ ದೊಡ್ಡ ಜಯ, ಸಾಧನೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಅದರ ಬದಲು ತಂಡವನ್ನು ಕಟ್ಟುವಲ್ಲಿ, ಯುವ ಆಟಗಾರರಿಗೆ ಚಾನ್ಸ್ ಕೊಡಿಸುವತ್ತ ಪ್ರಯತ್ನ ಮಾಡಿದ್ದರು. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ವಾಷಿಂಗ್ಟನ್ ಸುಂದರ್. ಗಂಭೀರ್ ಪ್ರಯೋಗ ಟಿ20 ಸರಣಿಯಲ್ಲಿ ಸಕ್ಸಸ್ ಆಗಿತ್ತು. ಟಿ20 ಸರಣಿಯಲ್ಲಿ ಸುಂದರ್ ಪ್ಲೇಯರ್ ಆಫ್ ದಿ ಮ್ಯಾಚ್ ಕೂಡ ಆಗಿದ್ದರು. ಇದೀಗ ಒನ್ ಡೇ ಮ್ಯಾಚ್‌ನಲ್ಲಿ ಗಂಭೀರ್ ಸ್ಟ್ರಾಟಜಿ ಕೈಕೊಟ್ಟಿತ್ತು. ಯಾವಗಲೂ ಗೆಲುವಿಗಾಗಿ ಸ್ಟ್ಟಾಟಜಿ ಮಾಡ್ಬೇಕು ಅನ್ನೋ ಸತ್ಯ ಜಯಸೂರ್ಯ ಅವ್ರನ್ನ ನೋಡಿ ಗಂಭೀರ್‌ಗೂ ಅರ್ಥವಾಗಿರಬೇಕು. ಅದೇನೇ ಇರಲಿ, ಸನತ್ ಜಯಸೂರ್ಯ ಹಾಗೂ ಗೌತಮ್ ಗಂಭೀರ್ ಇಬ್ಬರೂ ಕೂಡಾ ಮೊದಲ ಬಾರಿಗೆ ಕೋಚ್ ಆಗಿ ಮುಖಾಮುಖಿಯಾಗಿದ್ದರು. ಇದರಲ್ಲಿ ಸೂರ್ಯ ಗೆದ್ದರೆ, ಗಂಭೀರ್ ಸೋತಿದ್ದಾರೆ. ಸೋತ ಗಂಭೀರ್ ವಿರುದ್ಧ ಸನತ್ ಲೇವಡಿ ಮಾಡಿ ಮನಸು ಹಗುರಮಾಡಿಕೊಂಡಿದ್ದಾರೆ. ಇದಕ್ಕೆ ಗೌತಮ್ ಗಂಭೀರ್ ಮುಂದಿನ ಪಂದ್ಯಗಳಲ್ಲಿ ಕೌಂಟರ್ ಕೊಡ್ತಾರಾ ಅನ್ನೋದೇ ಸದ್ಯದ ಕ್ಯೂರಿಯಾಸಿಟಿ.

Shwetha M