IND Vs SL.. ಭಾರತ ಕ್ಲೀನ್ ಸ್ವೀಪ್! – ಸ್ಪಿನ್ನರ್ಸ್ ಬೆಂಕಿ ಬಲೆಗೆ ಭಾರತ ಬಲಿ!
ಗಂಭೀರ್ ಟ್ರೋಲ್.. ತಪ್ಪು ಮಾಡಿದ್ಯಾರು?

IND Vs SL.. ಭಾರತ ಕ್ಲೀನ್ ಸ್ವೀಪ್! – ಸ್ಪಿನ್ನರ್ಸ್ ಬೆಂಕಿ ಬಲೆಗೆ ಭಾರತ ಬಲಿ!ಗಂಭೀರ್ ಟ್ರೋಲ್.. ತಪ್ಪು ಮಾಡಿದ್ಯಾರು?

ನೋ ಯೂಸ್.. ಟೀಂ ಚೇಂಜ್ ಮಾಡಿದ್ರೂ ಅಷ್ಟೇ.. ಆರ್ಡರ್ ಬದಲಾಯಿಸಿದ್ರೂ ಅಷ್ಟೇ. ಬ್ಯಾಟರ್ಸ್ ಎಲ್ಲಾ ಬ್ಯಾಟಿಂಗ್​ನೇ ಮರೆತವರಂತೆ ಕ್ರೀಸ್​​ನಲ್ಲಿ ನಿಂತ್ರೆ ಎದುರಾಳಿ ಬೌಲರ್ಸ್ ಬಿಡ್ತಾರಾ. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಿತ್ತು ಖೆಡ್ಡಾ ತೋಡ್ತಾರೆ. ಶ್ರೀಲಂಕಾ ಮತ್ತು ಭಾರತದ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಆಗಿದ್ದೂ ಅದೇ. ಫಸ್ಟ್ ಮ್ಯಾಚ್ ಟೈ ಮಾಡ್ಕೊಂಡು ಸೆಕೆಂಡ್ ಮ್ಯಾಚ್​ನಲ್ಲಿ ಸೋತು ಸುಣ್ಣವಾಗಿ ಹೋಗ್ಲಿ ಮೂರನೇ ಮ್ಯಾಚ್​ನಲ್ಲಾದ್ರೂ ಗೆದ್ದು ಸಮಬಲ ಸಾಧಿಸ್ತಾರೆ ಅಂದ್ರೆ ಮೊದಲೆರಡು ಪಂದ್ಯಗಳಿಗಿಂತಲೂ ಅತ್ಯಂತ ಕೆಟ್ಟ ಪ್ರದರ್ಶನ ನೀಡಿ ಸರಣಿಯನ್ನೇ ಸೋತಿದ್ದಾರೆ. ಕನಿಷ್ಠ ಪಕ್ಷ ಗೆಲುವಿಗಾಗಿ ಹೋರಾಟ ಕೂಡ ನಡೆಸದೆ ಮಕಾಡೆ ಮಲಗಿದ್ದಾರೆ. ಗೆದ್ದು ತೋರಿಸ್ತೇನೆ ಅಂತಾ ಲಂಕಾಗೆ ಹಾರಿದ್ದ ಕೋಚ್ ಗೌತಮ್ ಗಂಭೀರ್​ರ ನಿರ್ಧಾರಗಳೇ ಸೋಲಿಗೆ ಕಾರಣನಾ? ಸ್ಟಾರ್ ಆಟಗಾರರ ದಂಡೇ ಇದ್ರೂ ಒಂದೂ ಪಂದ್ಯ ಗೆಲ್ಲೋಕೆ ಯಾಕೆ ಆಗ್ಲಿಲ್ಲ? ಟೀಂ ಇಂಡಿಯಾ ಫ್ಯಾನ್ಸ್ ಕೇಳ್ತಿರೋ ಪ್ರಶ್ನೆಗಳೇನು..? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ವಿನೇಶ್ ಫೋಗಟ್‌ ಗೆ ಅನ್ಯಾಯ – ತೆರೆಮೇಲೆ ಬರುತ್ತಾ ದಂಗಲ್-2 ಸಿನಿಮಾ

ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ ಏಕದಿನದಲ್ಲಿ ತಾನೇ ಕ್ಲೀನ್ ಸ್ವೀಪ್ ಆಗಿದೆ. ಕೊಲಂಬೊದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ 110 ರನ್‌ಗಳ ಭರ್ಜರಿ ಜಯ ಸಾಧಿಸಿದ ಆತಿಥೇಯ ಲಂಕಾ, 2-0 ಅಂತರದಿಂದ ಸರಣಿಯನ್ನ ವೈಟ್ ವಾಶ್ ಮಾಡಿಕೊಂಡಿದೆ. ತವರಿನಲ್ಲೇ ಭಾರಿ ಮುಖಭಂಗ ಅನುಭವಿಸಿದ್ದ ಲಂಕನ್ನರು, ಇದೀಗ ಏಕದಿನ ಸರಣಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ. ಇದೊಂದು ಗೆಲುವಿನ ಮೂಲಕ ಭಾರತವು ಬರೋಬ್ಬರಿ 27 ವರ್ಷಗಳ ಬಳಿಕ ಶ್ರೀಲಂಕಾ ವಿರುದ್ಧ ಸರಣಿ ಕಳೆದುಕೊಂಡಿದೆ. 1997ರಲ್ಲಿ ಕೊನೆಯ ಬಾರಿ ದ್ವೀಪರಾಷ್ಟ್ರದ ವಿರುದ್ಧ ಭಾರತ ಸರಣಿ ಸೋತಿತ್ತು. ಇದೀಗ ಲಂಕಾ ತಂಡ ಭಾರತವನ್ನು ಬಗ್ಗುಬಡಿದಿದೆ. ಭಾರತಕ್ಕೆ ಒಂದೂ ಪಂದ್ಯವನ್ನು ಗೆಲ್ಲಲು ಅವಕಾಶ ನೀಡದೆ, ಮುಂಬರುವ ಚಾಂಪಿಯನ್ಸ್‌ ಟ್ರೋಫಿಗೆ ತಮ್ಮದು ಕೂಡಾ ಬಲಿಷ್ಠ ಸ್ಪರ್ಧಿ ಎಂಬುದನ್ನು ಪ್ರೂವ್ ಮಾಡಿದೆ. ಇಲ್ಲಿ ಸರಣಿಯಲ್ಲಿ ಶ್ರೀಲಂಕಾ ಗೆಲ್ತು ಅನ್ನೋದಕ್ಕಿಂತ ಭಾರತ ತಂಡ ತನ್ನದೇ ಕಳಪೆ ಪ್ರದರ್ಶನದಿಂದ ಕೈಚೆಲ್ಲಿಕೊಳ್ತು ಅಂತಾನೇ ಹೇಳ್ಬೇಕಾಗುತ್ತೆ.

ಮೂರನೇ ಪಂದ್ಯದಲ್ಲೂ ಟಾಸ್ ವಿನ್.. ಬ್ಯಾಟಿಂಗ್ ಆಯ್ಕೆ! 

ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳು ಕೊಲಂಬೊದ ಆರ್ ಪ್ರೇಮದಾಸ ಮೈದಾದನಲ್ಲೇ ನಡೆದಿವೆ. ಇಲ್ಲಿ ಟಾಸ್‌ ಗೆದ್ದೋರೇ ಬಾಸ್‌ ಎಂಬುದು ಮೊದಲೇ ಅರ್ಥವಾಗಿತ್ತು. ಸಿಂಹಳೀಯರಿಗೆ ಅದೇನ್ ಅದೃಷ್ಟನೋ ಏನೋ. ಏಕದಿನ ಸರಣಿಯ ಮೂರಕ್ಕೆ ಮೂರೂ ಪಂದ್ಯಗಳಲ್ಲೂ ಟಾಸ್ ವಿನ್ ಆಗಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಟಾಸ್ ಸೋತ ಭಾರತ ಸರಣಿಯನ್ನೂ ಕಳೆದುಕೊಳ್ತು. ಹಾಗೇ ಬುಧವಾರದ ಮ್ಯಾಚ್​ನಲ್ಲೂ ಪಸ್ಟ್ ಬ್ಯಾಟಿಂಗ್​ಗೆ ಬಂದ ಲಂಕಾ ಪಡೆ ಪರ ಓಪನರ್ಸ್ ಅದ್ಭುತ ಇನ್ನಿಂಗ್ಸ್ ಕಟ್ಟಿದ್ರು. ಆವಿಷ್ಕಾ ಫರ್ನಾಂಡೋ 102 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ ಸಹಿತ 96 ರನ್​ಗಳಿಸಿದರೆ, ಪತುಮ್ ನಿಸ್ಸಾಂಕ 65 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 45 ರನ್​ಗಳಿಸಿದರು. ನಂತರ ಬಂದವರಲ್ಲಿ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್​ ಮಾತ್ರ ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರಿದರು. ಉಳಿದ ಬ್ಯಾಟರ್​ಗಳು ಯಾರೂ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಮೆಂಡಿಸ್ 49ನೇ ಓವರ್​ ವರೆಗೂ ಬ್ಯಾಟಿಂಗ್​ ಮಾಡಿ 82 ಎಸೆಗಳಲ್ಲಿ 4 ಬೌಂಡರಿ ಸಹಿತ 59 ರನ್ ​ಗಳಿಸಿದರು. ಕಮಿಂಡು ಮೆಂಡಿಸ್ ಅಜೇಯ 23 ರನ್​ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಭಾರತದ ಪರ ರಿಯಾನ್ ಪರಾಗ್ 54ಕ್ಕೆ 3 ವಿಕೆಟ್ ಪಡೆದರೆ, ಸಿರಾಜ್ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಕುಲ್ದೀಪ್ ಯಾದವ್​ ತಲಾ ಒಂದು ವಿಕೆಟ್ ಪಡೆದರು. ಪರಿಣಾಮ ಶ್ರೀಲಂಕಾ 50 ಓವರ್​ಗಳಲ್ಲಿ ಶ್ರೀಲಂಕಾ 7 ವಿಕೆಟ್ ನಷ್ಟಕ್ಕೆ 248 ರನ್ ಕಲೆ ಹಾಕಿತು.

ಒಂದಂಕಿ ದಾಟಲೂ ಪರದಾಡಿದ ಭಾರತೀಯ ಬ್ಯಾಟರ್ಸ್!

ಲಂಕಾ ನೀಡಿದ್ದ 249 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾ ಬ್ಯಾಟರ್ಸ್​ಗೆ ಲಂಕಾ ಸ್ಪಿನ್ನರ್ಸ್ ಸಿಂಹಸ್ವಪ್ನವಾಗಿ ಕಾಡಿದ್ರು. ಭಾರತ ತಂಡದ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಎಂದಿನಂತೆ ಹೊಡಿಬಡಿ ಆಟಕ್ಕೆ ಮುಂದಾದರು. ತಾನು ಎದುರಿಸಿದ 20 ಬಾಲ್​​ನಲ್ಲಿ 1 ಸಿಕ್ಸರ್​​, 6 ಫೋರ್​ ಸಮೇತ 35 ರನ್​​ ಚಚ್ಚಿದ್ರು. ನಂತರ ಶುಭ್ಮನ್​​ ಗಿಲ್​ ಕೇವಲ 6 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಇನ್ನು, ಬಳಿಕ ಕ್ರೀಸ್​ಗೆ ಬಂದ ವಿರಾಟ್​ ಕೊಹ್ಲಿ 3ನೇ ಪಂದ್ಯದಲ್ಲೂ ಸರಿಯಾಗಿ ಆಡಲಿಲ್ಲ. ಈ ಪಂದ್ಯದಲ್ಲೂ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು. ಹೊಡಿಬಡಿ ಆಟ ಆಡಲು ಹೋದ ಕೊಹ್ಲಿ 4 ಫೋರ್​​ ಬಾರಿಸಿ ಕೇವಲ 20 ರನ್​​ ಚಚ್ಚಿ ವಿಕೆಟ್​ ಕೈ ಚೆಲ್ಲಿದ್ರು. ಎಲ್​ಬಿಡಬ್ಲ್ಯೂಗೆ ಬಲಿಯಾದರು ಕೊಹ್ಲಿ. ನಂತರ ಕೆಎಲ್ ರಾಹುಲ್ ಸ್ಥಾನದಲ್ಲಿ ತಂಡಕ್ಕೆ ಸೇರಿದ್ದ ರಿಷಬ್​​​ ಪಂತ್​ ಮೇಲೆ ಟೀಮ್​ ಇಂಡಿಯಾ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟಿದ್ದರು. ಆದರೆ, ತನ್ನ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸಿದ ಪಂತ್​ ಕೇವಲ 6 ರನ್​ಗೆ ವಿಕೆಟ್​ ಒಪ್ಪಿಸಿದ್ರು. ನಂತ್ರ ಕ್ರಿಸ್​ಗೆ ಬಂದ ಶ್ರೇಯಸ್ ಅಯ್ಯರ್ ಕೂಡ 8 ರನ್ ಗಳಿಸುವಷ್ಟ್ರಲ್ಲೇ ಸುಸ್ತಾದ್ರು. ಇನ್ನು ಅಕ್ಷರ್ ಪಟೇಲ್ 2 ರನ್, ರಿಯಾನ್ ಪರಾಗ್ 15 ರನ್, ಶಿವಂ ದುಬೆ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಜವಾಬ್ದಾರಿಯುತ ಆಟವಾಡಿದ ವಾಷಿಂಗ್ ಟನ್ ಸುಂದರ್ ಮಾತ್ರ 25 ರನ್ ಬಾರಿಸಿದ್ರು. ಕುಲ್​ದೀಪ್ ಯಾದವ್ 6 ರನ್ ಸಿಡಿಸಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ರು. ಪರಿಣಾಮ ಭಾರತ ತಂಡ 26.1 ಓವರ್​ನಲ್ಲೇ 138 ರನ್ ಗಳಿಸಿ ಸರ್ವಪತನ ಕಂಡಿತು. ಈ ಮೂಲಕ ಶ್ರೀಲಂಕಾ ತಂಡವು ಬರೋಬ್ಬರಿ 110 ರನ್​ಗಳಿಂದ ಗೆಲ್ಲುವ ಮೂಲಕ 2-0 ಅಂತರದಿಂದ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತು.

ಭಾರತ ಬೇಟೆಯಾಡಿದ್ದೇ ಲಂಕಾ ಸ್ಪಿನ್ನರ್ಸ್ 

ಭಾರತ ತಂಡದ ಸೋಲಿಗೆ ಶ್ರೀಲಂಕಾ ಸ್ಪಿನ್ನರ್‌ಗಳ ಮಾರಕ ದಾಳಿಯೇ ಮೇನ್ ರೀಸನ್. ಮೊದಲೆರಡು ಪಂದ್ಯಗಳಲ್ಲಿ ಪಾರುಪತ್ಯ ಮೆರೆದಿದ್ದ ಲಂಕಾ ಸ್ಪಿನ್ನರ್ಸ್​ ಕೊನೆಯ ಏಕದಿನ ಪಂದ್ಯದಲ್ಲೂ ಬಿರುಗಾಳಿಯಂಥ ಬೌಲಿಂಗ್ ಮಾಡಿದ್ರು. ಲಂಕಾ ವಿರುದ್ಧದ ಮೂರು ಪಂದ್ಯಗಳಲ್ಲೂ ಭಾರತ ಆಲೌಟ್‌ ಆಗಿದ್ದು, ಇದರಲ್ಲಿ ಭಾರತದ 27 ವಿಕೆಟ್‌ ಸ್ಪಿನ್‌ ಬೌಲಿಂಗ್‌ನಲ್ಲಿ ಪತನವಾಗಿದೆ. ಅದರಲ್ಲೂ ಭಾರತದ ಬ್ಯಾಟರ್ಸ್​ಗಳ ಹೆಡೆಮುರಿ ಕಟ್ಟಿದ ಎಡಗೈ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಭಾರತದ ಬ್ಯಾಟಿಂಗ್ ಬೆನ್ನೆಲುವನ್ನೇ ಮುರಿದ್ರು. ಕೇವಲ 31 ಎಸೆತಗಳಲ್ಲಿ 5 ವಿಕೆಟ್ ಪಡೆದು ಸರಣಿಯಲ್ಲಿ ಎರಡನೇ ಬಾರಿಗೆ ಐದು ವಿಕೆಟ್ ಪಡೆದ ದಸಾಧನೆ ಮಾಡಿದರು. ಬಲಿಷ್ಠ ಬ್ಯಾಟರ್​ಗಳಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಶ್ರೇಯಸ್ ಅಯ್ಯರ್‌ ಹಾಗೂ ಅಕ್ಷರ್‌ ಪಟೇಲ್‌ ಸೇರಿದಂತೆ 5 ಪ್ರಮುಖ ವಿಕೆಟ್‌ ಕಿತ್ತು ಪಂದ್ಯದ ದಿಕ್ಕನ್ನೇ ಬದಲಿಸಿದರು. ಸರಣಿಯುದ್ದಕ್ಕೂ ಬ್ಯಾಟ್‌ ಹಾಗೂ ಬಾಲ್‌ ಎರಡರಲ್ಲೂ ಮಿಂಚಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದ್ರು.

ಏಕದಿನ ಸರಣಿ ಸೋಲು.. ಚಾಂಪಿಯನ್ಸ್ ಟ್ರೋಫಿಗೆ ತಲೆನೋವು!

ಶ್ರೀಲಂಕಾ ವಿರುದ್ಧದ ಸೋಲು ಬರೀ ಸರಣಿ ಸೋಲು ಮಾತ್ರ ಅಲ್ಲ. 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸಿದ್ಧತೆ ಅಂತಾನೇ ಹೇಳಲಾಗಿತ್ತು. ಬಟ್ ಇದೀಗ ಲಂಕಾ ವಿರುದ್ಧ ಬಾರತ ಕ್ಲೀನ್ ಸ್ವೀಪ್ ಆಗಿರೋದು ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ತಲೆ ನೋವು ಹೆಚ್ಚಿಸಿದೆ. ಸರಣಿ ಆರಂಭಕ್ಕೂ ಮುನ್ನ ಗೆಲುವಿನ ಫೇವರೇಟ್ ಎನಿಸಿಕೊಂಡಿದ್ದ ರೋಹಿತ್ ಪಡೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗದೆ ಮುಜುಗರದ ಸೋಲಿಗೆ ಕೊರಳೊಡ್ಡಿದೆ. ವಿಚಿತ್ರ ಸಂಗತಿಯೆಂದರೆ ಇಡೀ ಸರಣಿಯಲ್ಲಿ ಟೀಂ ಇಂಡಿಯಾ 8ನೇ ಕ್ರಮಾಂಕದವರೆಗೂ ಬ್ಯಾಟ್ಸ್​ಮನ್​ಗಳನ್ನೂ ಹೊಂದಿದ್ದರೂ, ಮೂರೂ ಪಂದ್ಯಗಳಲ್ಲಿ ಕೇವಲ 250 ಕ್ಕೂ ಕಡಿಮೆ ಟಾರ್ಗೆಟ್ ಅನ್ನು ಬೆನ್ನಟ್ಟಲು ಸಾಧ್ಯವಾಗದೆ ಸೋಲೊಪ್ಪಿಕೊಂಡಿದೆ. ಈ ಮೂಲಕ 1997 ರ ನಂತರ ಅಂದರೆ ಬರೋಬ್ಬರಿ 27 ವರ್ಷಗಳ ನಂತರ ಲಂಕಾ ನಾಡಲ್ಲಿ ಟೀಂ ಇಂಡಿಯಾ ಏಕದಿನ ಸರಣಿ ಸೋತ ಕಳಪೆ ದಾಖಲೆ ಬರೆದಿದೆ. ಚಾಂಪಿಯನ್ಸ್​ ಟ್ರೋಫಿಗೂ ಮುನ್ನ ಟೀಂ ಇಂಡಿಯಾದ ಈ ಬ್ಯಾಟಿಂಗ್ ವೈಫಲ್ಯ ತಂಡದ ನೂತನ ಕೋಚ್ ಗೌತಮ್ ಗಂಭೀರ್ ತಲೆ ಕೆಡಿಸಿದೆ.

ಪ್ರಯೋಗ ಮಾಡಿ ಸೋತ ಗಂಭೀರ್ ಫುಲ್ ಟ್ರೋಲ್!

ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆದ್ಮೇಲೆ ಅವ್ರ ಮೇಲೆ ಬಾರೀ ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿತ್ತು. ಲಂಕಾ ಸರಣಿ ಮೂಲಕವೇ ಹೊಸ ಇನ್ನಿಂಗ್ಸ್ ಆರಂಭಿಸಿದ್ದ ಗಂಭೀರ್ ಟಿ-20 ಸರಣಿಯನ್ನ ಕ್ಲೀನ್ ಸ್ಪೀಪ್ ಮಾಡಿ ಸೈ ಎನಿಸಿಕೊಂಡಿದ್ರು. ಸೋ ಏಕದಿನದಲ್ಲೂ ಟೀಂ ಇಂಡಿಯಾವನ್ನ ಗೆಲ್ಲಿಸಿ ಕಂಪ್ಲೀಟ್ ಕ್ರೆಡಿಟ್ ಪಡೆಯೋ ಜೋಶ್​ನಲ್ಲಿದ್ರು. ಬಟ್ ಗಂಭಿರ್ ಆಸೆಗೆ ತಣ್ಣೀರೆರಚಿದ ಬ್ಯಾಟರ್ಸ್ ಸರಣಿಯನ್ನೇ ಕೈ ಚೆಲ್ಲಿಕೊಂಡಿದ್ದಾರೆ. ಅದ್ರಲ್ಲೂ ಶ್ರೀಲಂಕಾ ವಿರುದ್ಧದ ಸರಣಿ ಸೋಲಿನ ಭೀತಿ ತಪ್ಪಿಸಿಕೊಳ್ಳಲು ನಿರ್ಣಾಯಕವಾಗಿದ್ದ ಮೂರನೇ ಪಂದ್ಯದಲ್ಲಿ ಭಾರತ  ಬರೋಬ್ಬರಿ 110ರನ್​ಗಳ ಹೀನಾಯ ಸೋಲು ಕಂಡಿದೆ. ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟರ್​ಗಳು ತೋರಿದ ನೀರಸ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.  ನೂತನ ಕೋಚ್ ಗೌತಮ್ ಗಂಭೀರ್ ಅವರನ್ನ ಸಖತ್ ಟ್ರೋಲ್ ಮಾಡ್ತಿದ್ದಾರೆ. ಗಂಭೀರ್ ನೂತನ ಕೋಚ್ ಆಗಿ ನೇಮಕವಾದನಂತರ ನಡೆದ ಮೊದಲ ಏಕದಿನ ಸರಣಿಯಲ್ಲಿ ಸೋಲು ಕಂಡಿದ್ದಕ್ಕೆ ‘ಗೌತಮ್ ಗಂಭೀರ್ ಯುಗಾರಂಭ’ ಎಂದು ನೆಟ್ಟಿಗರು ಕಿಚಾಯಿಸಿದ್ದಾರೆ. ಭಾರತ ತಂಡಕ್ಕೆ ಕಠಿಣವಾದ ಪ್ರವಾಸ ಯಾವುದು, ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾ? ಎಂದು ಕೇಳಿದರೆ ಗೌತಮ್ ಗಂಭೀರ್ ಶ್ರೀಲಂಕಾ ಪ್ರವಾಸ ಎಂದು ಗಂಭೀರ್ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಶ್ರೇಷ್ಠ ಪ್ರದರ್ಶನ ನೀಡಿಯೂ ಸೋಲೊಪ್ಪಿಕೊಂಡ ನಾಯಕ!

ಸ್ನೇಹಿತರೇ. ಲಂಕಾ ವಿರುದ್ಧದ ಸರಣಿಯಲ್ಲಿ ನಾಯಕ ಹಿಟ್​ಮ್ಯಾನ್ ರೋಹಿತ್ ಶರ್ಮಾರನ್ನ  ಬ್ಯಾಟಿಂಗ್​ನಲ್ಲಿ ಬಿಟ್ರೆ ಉಳಿದವ್ರೆಲ್ಲಾ ಕಂಪ್ಲೀಟ್ ಫೇಲ್ಯೂರ್ ಆಗಿದ್ರು. ಪರಿಣಾಮ ತನ್ನದಲ್ಲದ ತಪ್ಪಿಗೆ ರೋಹಿತ್ ಸೋಲೊಪ್ಪಿಕೊಳ್ಳಬೇಕಾಗಿದೆ. ಮೂರಕ್ಕೆ ಮೂರೂ ಪಂದ್ಯಗಳಲ್ಲೂ ಹೈಯೆಸ್ಟ್ ರನ್ ಕಲೆ ಹಾಕಿದ್ದ ರೋಹಿತ್ ಸರಣಿ ಸೋಲಿನ ಹೊಣೆ ಹೊರಬೇಕಾಗಿದೆ. ಮೊದಲನೇ ಪಂದ್ಯದಲ್ಲಿ 58 ರನ್ ಕಲೆ ಹಾಕಿದ್ದ ರೋಹಿತ್ ಎರಡನೇ ಪಂದ್ಯದಲ್ಲಿ 64 ರನ್ ಚಚ್ಚಿದ್ರು. ಹಾಗೇ ಮೂರನೇ ಪಂದ್ಯದಲ್ಲಿ 35 ರನ್ ಬಾರಿಸಿದ್ರು. ಮೂರೂ ಪಂದ್ಯಗಳಲ್ಲೂ ರೋಹಿತ್ ಶರ್ಮಾರೇ ಹೈಯೆಸ್ಟ್ ರನ್ ಕಲೆ ಹಾಕಿದ್ರು. ವಿಚಿತ್ರ ಸಂಗತಿಯೆಂದರೆ ಇಡೀ ಸರಣಿಯಲ್ಲಿ ಟೀಂ ಇಂಡಿಯಾ 8ನೇ ಕ್ರಮಾಂಕದವರೆಗೂ ಬ್ಯಾಟ್ಸ್​ಮನ್​ಗಳನ್ನೂ ಹೊಂದಿದ್ರೂ ಟಾರ್ಗೆಟ್ ರೀಚ್ ಆಗೋಕೆ ಆಗ್ಲಿಲ್ಲ. ಅದ್ರಲ್ಲೂ ಮೂರನೇ ಪಂದ್ಯದಲ್ಲಿ ಐವರು ಬ್ಯಾಟರ್ಸ್ ಒಂದಂಕಿಯನ್ನೂ ದಾಟೋಕೆ ಆಗಲಿಲ್ಲ.

ಒಟ್ನಲ್ಲಿ ಲಂಕಾ ವಿರುದ್ಧದ ಏಕದಿನ ಸರಣಿ ಹಲವು ಕಾರಣಗಳಿಂದ ಟೀಂ ಇಂಡಿಯಾಗೆ ತುಂಬಾನೇ ವಿಶೇಷವಾಗಿತ್ತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬ್ಯಾಟಿಂಗ್, ಕೆಎಲ್ ರಾಹುಲ್ ಹಾಗೇ ಶ್ರೇಯಸ್ ಅಯ್ಯರ್ ಕಮ್​ಬ್ಯಾಕ್ ಮತ್ತೆ ಗೌತಮ್ ಗಂಭೀರ್ ಶುಭಾರಂಭಕ್ಕೆ ಮುನ್ನುಡಿ ಬರೆಯಬೇಕಿತ್ತು. ಬಟ್ ಟೀಂ ಇಂಡಿಯಾ ಬ್ಯಾಟರ್ಸ್ ಕಳಪೆ ಪ್ರದರ್ಶನ ಸೋಲಿನ ಆಘಾತ ನೀಡಿದೆ. ವಿಶ್ವಚಾಂಪಿಯನ್, ಬಲಿಷ್ಠ ಭಾರತದ ಬ್ಯಾಟಿಂಗ್ ವೈಫಲ್ಯ ಜಗಜ್ಜಾಹೀರಾಗಿದೆ. ಹೀಗಾಗಿ ತಂಡದಲ್ಲಿನ ನ್ಯೂನತೆಗಳನ್ನ ಈಗಲೇ ಸರಿ ಪಡಿಸಿಕೊಳ್ಬೇಕಿದೆ. ಇಲ್ಲದೇ ಇದ್ರೆ ಮುಂದಿನ ದಿನಗಳಲ್ಲಿ ದೊಡ್ಡ ಹೊಡೆತ ಬೀಳೋದ್ರಲ್ಲಿ ಅನುಮಾನವೇ ಇಲ್ಲ.

Shwetha M