‘ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ’ – ಕ್ಷಮೆ ಕೇಳಿ ವಿನೇಶ್ ಫೋಗಟ್ ಭಾವುಕ ವಿದಾಯ

‘ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ’ – ಕ್ಷಮೆ ಕೇಳಿ ವಿನೇಶ್ ಫೋಗಟ್ ಭಾವುಕ ವಿದಾಯ

ನೂರು ಗ್ರಾಮ್ ತೂಕ ನೂರು ಟನ್‌ನಷ್ಟು ನೋವು ಕೊಡುತ್ತೆ ಅನ್ನೋದಕ್ಕೆ ವಿನೇಶ್ ಫೋಗಟ್ ಸಾಕ್ಷಿಯಾಗಿದ್ದರು. ಇಡೀ ಭಾರತವೇ ಕುಸ್ತಿಯಲ್ಲಿ ಪದಕ ಬಂದೇ ಬರುತ್ತದೆ ಅಂತಾ ಕಾಯುತ್ತಿದ್ದ ಕ್ಷಣವದು. ಆದ್ರೆ, ಕೋಟಿ ಕೋಟಿ ಭಾರತೀಯರ ಕನಸು ಭಗ್ನ ಮಾಡಿದ್ದು 100 ಗ್ರಾಮ್ ತೂಕದ ವಿಚಾರ. ಆಗಿದ್ದೆಲ್ಲಾ ಆಗಿ ಹೋಯ್ತು ಬಿಡಿ.. ವಿನೇಶ್ ಫೋಗಟ್ ಅನರ್ಹ ಆಗಿರೋದನ್ನ ಭಾರತೀಯರು ಒಪ್ಪಿಕೊಳ್ಳಲೇಬೇಕಿತ್ತು. ಒಪ್ಪಿಕೊಂಡಾಗಿದೆ ಕೂಡಾ.. ಆದರೆ, ಸ್ವತಃ ಹಸಿದ ಹೆಬ್ಬುಲಿಯಂತೆ ಎದುರಾಳಿಗಳನ್ನ ಮಣ್ಣು ಮುಕ್ಕಿಸುತ್ತಾ ಚಿನ್ನದತ್ತ ಗುರಿಯಿಟ್ಟ ವಿನೇಶ್ ಫೋಗಟ್ ಸ್ಥಿತಿ ಏನಾಗಿರಬೇಡ. ಈ ಎಲ್ಲಾ ಬೆಳವಣಿಗೆಯ ನಂತರ ಗಾಯಗೊಂಡ ಆ ಹೆಣ್ಣು ಹುಲಿ ಹೇಳಿದ ಒಂದೊಂದು ಮಾತುಗಳು ಮನಸನ್ನ ಘಾಸಿಗೊಳಿಸುತ್ತಿದೆ.. ಯಾಕೆಂದರೆ, ವಿನೇಶ್‌ಗೆ ಈ ಗೆಲುವು ಅನಿವಾರ್ಯವಾಗಿತ್ತು.. ತನ್ನ ಗೆಲುವಲ್ಲಿ ತನಗಾದ ಅವಮಾನಗಳ ಲೆಕ್ಕ ಚುಕ್ತಾ ಮಾಡಬೇಕಿತ್ತು. ಆದ್ರೆ, ಇದೀಗ ಇದೇ ಧೀರ ಹುಡುಗಿ ಫೋಗಟ್ ಕುಸ್ತಿಗೆ ನೋವಿನ ವಿದಾಯ ಹೇಳಿದ್ದಾಳೆ

ಇದನ್ನೂ ಓದಿ: ಸೋತಿದ್ದೇವೆ ಏನಿವಾಗ ರೋಹಿತ್ ಶರ್ಮಾ ಸಿಟ್ಟು – ವಿರಾಟ್ ಕೊಹ್ಲಿ ವಿಂಟೇಜ್ ರೂಪ ಹೇಗಿತ್ತು ಗೊತ್ತಾ?

‘ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋಲನುಭವಿಸಿದ್ದೇನೆ’.. ಈ ಒಂದು ವಾಕ್ಯವೇ ಸಾಕಲ್ಲವೇ, ಒಂದು ಹೆಣ್ಣಿನ ಹೋರಾಟ ನೋವಲ್ಲೇ ಮುಗಿದಿದೆ ಅನ್ನೋದಕ್ಕೆ. ನಿಮಗೆ ಗೊತ್ತಾ.. ಕುಸ್ತಿ ಅಖಾಡದಲ್ಲಿ ನೆಲ ತಟ್ಟುತ್ತಾ ಅಂಗಾತ ಮಲಗಿದ್ದ ವಿನೇಶ್ ಫೋಗಟ್ ಚಿತ್ರ ಅದೆಷ್ಟೋ ಭಾವನೆಗಳನ್ನ ಹೊರಹಾಕಿತ್ತು ಎಂಬುದನ್ನ. ಯಾಕೆಂದರೆ ಈ ಗೆಲುವಿಗಾಗಿ ವಿನೇಶ್ ಫೋಗಟ್ ಅದೆಷ್ಟು ಬಾರಿ ಹೋರಾಡಿದ್ದಳೋ.. ಕೊನೆಗೂ ಪದಕ ಕೊರಳಿಗೆ ಹಾಕಿಕೊಂಡು ಹೆಮ್ಮೆಯಿಂದಲೇ ಭಾರತಕ್ಕೆ ಬರುವ ದಿನಕ್ಕಾಗಿ ಕಾಯುತ್ತಿದ್ದಳು. ಆದ್ರೆ, ಇಲ್ಲೂ ಅನರ್ಹ ಎಂಬ ಸೋಲು ಫೋಗಟ್ ಧೈರ್ಯವನ್ನೇ ಹೊಸಕಿ ಹಾಕಿತ್ತು. ಇದೀಗ ಭಾರತೀಯರಿಗೆ ವಿನೇಶ್ ಫೋಗಟ್ ಪದಕದ ಮೇಲಿನ ಆಸಕ್ತಿ ಹೋಗಿದೆ. ಎಲ್ಲರ ಮನಸು ಗೆದ್ದ ಮೇಲೆ ಪದಕ ಯಾಕೆ ಬೇಕು ಅಲ್ವಾ. ಇದನ್ನೇ ಕೂಡಾ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಹೇಳಿದ್ದು. ನೀನು ಚಾಂಪಿಯನ್‌ಗಳ ಚಾಂಪಿಯನ್, ಧೈರ್ಯವಾಗಿರು ಅಂತಾ ಮೋದಿ ಕೂಡಾ ವಿನೇಶ್ ಪರ ನಿಂತಿದ್ದಾರೆ. ಜೊತೆಗೆ ತವರು ರಾಜ್ಯ ಹರ್ಯಾಣ ಕೂಡಾ ವಿನೇಶ್ ಫೋಗಟ್‌ ಬೆನ್ನಿಗೆ ನಿಂತಿದೆ. ವಿನೇಶ್ ಫೋಗಟ್ ಅವರನ್ನು ಪದಕ ಗೆದ್ದ ಕ್ರೀಡಾಪಟುವಂತೆ ಸ್ವಾಗತಿಸಲಾಗುತ್ತದೆ ಎಂದು ಹರ್ಯಾಣ ಮುಖ್ಯಮಂತ್ರಿ ನಯಬ್ ಸೈನಿ ಈಗಾಗಲೇ ಘೋಷಿಸಿದ್ದಾರೆ. ಇಷ್ಟೇ ಅಲ್ಲ ಪದಕ ಗೆದ್ದ ಕ್ರೀಡಾಪಟುವಿಗೆ ನೀಡುವ ಎಲ್ಲಾ ಬಹುಮಾನ, ಸೌಲಭ್ಯವನ್ನು ನೀಡಲಾಗುತ್ತದೆ ಎಂದಿದ್ದಾರೆ. ಇದರರ್ಥ ವಿನೇಶ್ ಫೋಗಟ್ ನಮ್ಮ ದೇಶದ ಧೀರ ಹೆಣ್ಣು ಮಗಳು ಅನ್ನೋದು.

ಫೈನಲ್‌ನಲ್ಲಿ ಅನರ್ಹಗೊಂಡ ಬೆನ್ನಲ್ಲೇ ಫೋಗಟ್ ಏನ್ ಹೇಳ್ತಾಳೆ. ಫೋಗಟ್ ಹೇಗಿದ್ದಾಳೆ ಅಂತಾ ತಿಳಿಯುವ ಕುತೂಹಲ ಕೋಟಿ ಕೋಟಿ ಭಾರತೀಯರಿಗಿತ್ತು. ಎಲ್ಲರ ಹೆಮ್ಮೆಯ ವಿನೇಶ್ ಹೇಳಿರೋ ಮಾತು ಭಾರತೀಯರ ಹೃದಯವನ್ನ ಘಾಸಿಗೊಳಿಸಿದೆ. ಹೌದು. ವಿನೇಶ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಜೊತೆಗೆ ತನ್ನ ತಾಯಿಯಲ್ಲೂ ಕ್ಷಮೆ ಕೇಳಿದ್ದಾರೆ. ‘ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ, ಕ್ಷಮಿಸಿ. ನಿನ್ನ ಕನಸು, ನನ್ನ ಧೈರ್ಯ ಎಲ್ಲ ಭಗ್ನವಾಯಿತು. ನನ್ನ ಧೈರ್ಯ ಸಂಪೂರ್ಣ ಛಿದ್ರವಾಗಿದೆ, ಈಗ ಹೆಚ್ಚಿನ ಶಕ್ತಿ ಉಳಿದಿಲ್ಲ’ ಎಂಬ ಭಾವುಕ ಸಂದೇಶದೊಂದಿಗೆ ವಿನೇಶ್ ಫೋಗಟ್ ಕುಸ್ತಿಗೆ ವಿದಾಯ ಹೇಳಿದ್ದಾರೆ. ನಿಮ್ಮೆಲ್ಲರಿಗೂ ನಾನು ಸದಾ ಋಣಿಯಾಗಿರುತ್ತೇನೆ, ಕ್ಷಮಿಸಿ ಎಂದು ವಿನೇಶ್ ಫೋಗಟ್ ದೇಶದ ಜನತೆಯಲ್ಲೂ ಕ್ಷಮೆ ಕೇಳಿದ್ದಾರೆ. ಅಂತೂ ತನ್ನಲ್ಲಿ ಹೋರಾಡುವ ಶಕ್ತಿ ಉಳಿದಿಲ್ಲ ಅಂತಾ ಸ್ವತಃ ಫೋಗಟ್ ಹೇಳಿದ್ದಾರೆ.

ವಿನೇಶ್ ಫೋಗಟ್ ಅನರ್ಹತೆ ಈಕೆಯ ಖ್ಯಾತಿಗೆ, ಸಾಧನೆಗೆ ಕಿಂಚಿತ್ತೂ ಊನ ತರಲಾರದು. ಫೋಗಟ್ ಶ್ರಮಕ್ಕೆ, ತಪಸ್ಸಿಗೆ, ಬದ್ಧತೆಗೆ, ಆತ್ಮವಿಶ್ವಾಸಕ್ಕೂ ಬೆಲೆಕಟ್ಟಲಾಗದು. ಈಗಲೂ, ಎಂದೆಂದಿಗೂ ಫೋಗಟ್ ಭಾರತದ ಚಾಂಪಿಯನ್. ಅಷ್ಟೇಯಾಕೆ, ಮನೆಯೊಳಗೂ, ಹೊರಗೂ ದೌರ್ಜನ್ಯ, ಮಾನಸಿಕ ತುಳಿತ ಅನುಭವಿಸುತ್ತಾ, ಪ್ರತಿಭಟಿಸುವ ಧೈರ್ಯವಿಲ್ಲದೇ ಮನಸ್ಸೊಳಗೇ ಕುಸ್ತಿ ಮಾಡುತ್ತಿರುವ ಅನೇಕ ಹೆಣ್ಮಕ್ಕಳ ಪಾಲಿಗೂ ವಿನೇಶಾಳೇ ದೊಡ್ಡ ಶಕ್ತಿ. ಭಾರತೀಯ ಕುಸ್ತಿಯಲ್ಲಿ ಚರಿತ್ರೆ ಸೃಷ್ಟಿಸಬೇಕಿದ್ದ ವಿನೇಶಾ ಫೋಗಟ್​ ಎಂಬ ಹೆಣ್ಣು ಹುಲಿಯ ಯಶೋಗಾಥೆ ಈಗ ಅನರ್ಹತೆಯೊಂದಿಗೆ ದುರಂತ ಅಂತ್ಯ ಕಂಡಿದೆ. ಇದಕ್ಕೆ ವಿದಾಯವೂ ಸೇರಿಕೊಂಡಿದೆ. ಮೊದಲು ಕೆರಳಿ, ನಂತರ ಗಾಯಗೊಂಡು ಕೊನೆಗೂ ಕುಸ್ತಿ ಅಖಾಡದಿಂದಲೇ ವಿದಾಯ ಹೇಳಿದ ವಿನೇಶ್ ಫೋಗಟ್ ಭಾರತದ ಹೆಮ್ಮೆ ಅನ್ನೋದೇ ಸಮಾಧಾನ.

suddiyaana

Leave a Reply

Your email address will not be published. Required fields are marked *