ಕ್ಯಾಪ್ಟನ್ಸಿ ಇಲ್ಲ.. KL ಆಟವೂ ಬೇಡ್ವಾ? – SL 3ನೇ ಪಂದ್ಯಕ್ಕೆ ಕೊಕ್ ಕೊಟ್ಟಿದ್ದೇಕೆ?
ದುಬೆ, ಶ್ರೇಯಸ್​ಗೆ ಮಾತ್ರ ಚಾನ್ಸ್ ಏಕೆ?

ಕ್ಯಾಪ್ಟನ್ಸಿ ಇಲ್ಲ.. KL ಆಟವೂ ಬೇಡ್ವಾ? – SL 3ನೇ ಪಂದ್ಯಕ್ಕೆ ಕೊಕ್ ಕೊಟ್ಟಿದ್ದೇಕೆ?ದುಬೆ, ಶ್ರೇಯಸ್​ಗೆ ಮಾತ್ರ ಚಾನ್ಸ್ ಏಕೆ?

2 ಮ್ಯಾಚ್.. 2 ಚಾನ್ಸ್.. ಒಬ್ಬ ಆಟಗಾರನ ಸಾಮರ್ಥ್ಯವನ್ನ ಅಳೆಯೋಕೆ ಇಷ್ಟು ಸಾಕಾ. ತಿಂಗಳುಗಟ್ಟಲೆ ತಂಡಕ್ಕೆ ಸೇರಿಸಿಕೊಳ್ಳದೆ ಈಗ ಎರಡೇ ಎರಡು ಪಂದ್ಯಗಳನ್ನ ಆಡಿಸಿ ಮೂರನೇ ಮ್ಯಾಚ್​ನಲ್ಲಿ ಬೆಂಚ್ ಕಾಯಿಸೋದು ಎಷ್ಟು ಸರಿ. ಕ್ರಿಕೆಟ್ ಕರಿಯರ್ ಆರಂಭ ಆದಾಗಿಂದ್ಲೂ ಏರಿಳಿತಗಳನ್ನೇ ಕಾಣ್ತಿರೋ ಕನ್ನಡಿಗ ಕೆಎಲ್ ರಾಹುಲ್​ಗೆ ಮತ್ತೊಮ್ಮೆ ಅನ್ಯಾಯ ಆಗಿದೆ. ಟೀಂ ಇಂಡಿಯಾದಲ್ಲಿ ಅಕ್ಷರಶಃ ಸೈಡ್​ಲೈನ್ ಮಾಡಲಾಗ್ತಿದೆ. ಫ್ಲ್ಯಾಪ್ ಶೋ ತೋರಿಸ್ತಿರೋ ಬೇರೆ ಬೇರೆ ಆಟಗಾರರಿಗೆ ಸಿಕ್ತಿರೋವಷ್ಟು ಅವಕಾಶ ನಿಜಕ್ಕೂ ಕೆಎಲ್​ ರಾಹುಲ್​ಗೆ ಸಿಗ್ಲಿಲ್ಲ. ಒಂದು ಪಂದ್ಯದಲ್ಲಿ ಡಕ್​ಔಟ್ ಆದ್ರು ಅನ್ನೋ ಒಂದೇ ಕಾರಣಕ್ಕೆ ಪಂದ್ಯದಿಂದ ಈಗ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಸರಣಿಯಲ್ಲಿ ಡ್ರಾಪ್ ಮಾಡಲಾಗಿದೆ. ಬೇಡವಲ್ಲದ ಪ್ರಯೋಗಗಳನ್ನ ಮಾಡಿ ಕೈ ಸುಟ್ಟುಕೊಂಡ ಕೋಚ್ ಗೌತಮ್ ಗಂಭೀರ್ ನಿಜಕ್ಕೂ ಕೆ.ಎಲ್ ರಾಹುಲ್ ಭವಿಷ್ಯಕ್ಕೆ ಕಲ್ಲು ಹಾಕ್ತಿದ್ದಾರಾ? ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ಬಳಿಕ ತಂಡದಿಂದಲೇ ಗೇಟ್​ಪಾಸ್ ಕೊಡೋ ಹುನ್ನಾರನಾ? ಬೇರೆ ಆಟಗಾರರ ಕಳಪೆ ಪ್ರದರ್ಶನ ಲೆಕ್ಕಕ್ಕಿಲ್ವಾ? ಕೆಎಲ್ ರಾಹುಲ್​ಗೆ ಆಗ್ತಿರೋ ಅನ್ಯಾಯದ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಚಿನ್‌ ತಪಾಕ್‌ ದಂ ದಂ.. ತಲೆ ತುಂಬಾ ಥಕಿಯಾ ಮಾಟಮಂತ್ರ – ನಿಮಗೆ ಛೋಟಾ ಭೀಮ್ ನೆನಪಾಗ್ತಾನಾ?

ಶ್ರೀಲಂಕಾ ವಿರುದ್ಧದ ಭಾರತದ ಏಕದಿನ ಸರಣಿ ಕ್ರಿಕೆಟ್ ಜಗತ್ತಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಗೆಲ್ಲೋ ಚಾನ್ಸ್ ಇದ್ರೂ ಮೊದಲ ಪಂದ್ಯವನ್ನ ತಮ್ಮದೇ ತಪ್ಪಿನಿಂದ ಟೈ ಮಾಡಿಕೊಂಡಿದ್ರು. ಎರಡನೇ ಪಂದ್ಯದಲ್ಲಿ ಬ್ಯಾಟರ್ಸ್ ವೈಫಲ್ಯದಿಂದಾಗಿ ಸಿಂಹಳೀಯರ ವಿರುದ್ಧ ಸೋಲಬೇಕಾಯ್ತು. ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಯಾಕಂದ್ರೆ ಶ್ರೀಲಂಕಾ ವಿರುದ್ದ 27 ವರ್ಷದಲ್ಲಿ ಇದೇ ಮೊದಲ ಬಾರಿಗೆ ಏಕದಿನ ಸರಣಿ ಸೋಲುವ ಭೀತಿ ಭಾರತವನ್ನ ಕಾಡಿತ್ತು. 1997ರಲ್ಲಿ ಅರ್ಜುನ ರಣತುಂಗಾ ನೇತೃತ್ವದ ಲಂಕಾ ತಂಡ ಭಾರತವನ್ನು 0-3ರಲ್ಲಿ ಮಣಿಸಿತ್ತು. ಆ ಬಳಿಕ ಉಭಯ ತಂಡಗಳ ನಡುವೆ ಎರಡೂ ದೇಶಗಳಲ್ಲಿ ಒಟ್ಟು 13 ಏಕದಿನ ಸರಣಿಗಳು ನಡೆದಿದ್ದು, ಭಾರತ ಸರಣಿ ಸೋತಿಲ್ಲ. ಅಲ್ದೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂಥ ಸ್ಟಾರ್ ಆಟಗಾರರು ತಂಡದಲ್ಲಿದ್ದಾರೆ. ಕೋಚ್ ಗೌತಮ್ ಗಂಭೀರ್​ಗೆ ಇದು ಮೊದಲನೇ ಸರಣಿಯಾಗಿದೆ. ಇದೇ ಕಾರಣಕ್ಕೆ ಶತಾಯ ಗತಾಯ ಟೀಂ ಇಂಡಿಯಾ ಕೊನೇ ಪಂದ್ಯವನ್ನ ಗೆಲ್ಲಲೇಬೇಕಿತ್ತು. ಇಂಥಾ ಟೈಮಲ್ಲಿ ಕೋಚ್ ಮತ್ತು ಕ್ಯಾಪ್ಟನ್​ಗೆ ಒಳಿದಿದ್ದೇ ಪ್ಲೇಯಿಂಗ್ 11 ಬದಲಾವಣೆ. ಆದ್ರೆ ಈ ಬದಲಾವಣೆಗಾಗಿ ಕನ್ನಡಿಗ ಕೆ.ಎಲ್ ರಾಹುಲ್​ಗೆ ಅನ್ಯಾಯ ಮಾಡಿದ್ರಾ ಅನ್ನೋ ಚರ್ಚೆ ಶುರುವಾಗಿದೆ.

ರಾಹುಲ್ ಗೆ ಗಂಭೀರ್ ಅನ್ಯಾಯ! 

ಭಾರತ ವರ್ಸಸ್ ಲಂಕಾ ನಡುವಿನ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಹಿಟ್​ಮ್ಯಾನ್ ರೋಹಿತ್ ಶರ್ಮಾರನ್ನ ಬಿಟ್ರೆ ಉಳಿದೆಲ್ಲಾ ಬ್ಯಾಟರ್ಸ್ ಫೇಲ್ಯೂರ್ ಆಗಿದ್ರು. ಅದ್ರಲ್ಲೂ ಎರಡನೇ ಪಂದ್ಯದಲ್ಲಿ ಮಿಡಲ್ ಆರ್ಡರ್ ಕಂಪ್ಲೀಟ್ ಪಲ್ಟಿ ಹೊಡೆದಿತ್ತು. ಅದರಲ್ಲೂ ಶಿವಂ ದುಬೆ ಮತ್ತು ಕೆ.ಎಲ್ ರಾಹುಲ್ ಡಕ್ ಔಟ್ ಆಗಿದ್ರು. ಉಳಿದಂತೆ ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ ಕೂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದ್ರೆ ಅಂತಿಮವಾಗಿ ಮೂರನೇ ಪಂದ್ಯಕ್ಕೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಂಡದಲ್ಲಿ 2 ಬದಲಾವಣೆ ಮಾಡಿದ್ದಾರೆ. ಕೆಎಲ್ ರಾಹುಲ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ತಂಡದಿಂದ ಕೈ ಬಿಟ್ಟು ರಿಷಬ್ ಪಂತ್ ಮತ್ತು ರಿಯಾನ್ ಪರಾಗ್ ಅವರಿಗೆ ಅವಕಾಶ ನೀಡಿದ್ದಾರೆ. ಈ ಮೂಲಕ ಒಬ್ಬ ವೇಗದ ಬೌಲರ್ ಜೊತೆಗೆ ಟೀಂ ಇಂಡಿಯಾ 4 ಸ್ಪಿನ್ನರ್​ಗಳನ್ನು ಕಣಕ್ಕಿಳಿಸಿದೆ. ಹಾಗೆಯೇ ಬೌಲಿಂಗ್ ಆಲ್​ರೌಂಡರ್ ಆಗಿ ಶಿವಂ ದುಬೆ ತಂಡದಲ್ಲೇ ಉಳಿದಿದ್ದಾರೆ. ಇಬ್ಬರು ಆಟಗಾರರ ಬದಲಾವಣೆ ಬಗ್ಗೆ ಮಾತನಾಡಿರೋ ರೋಹಿತ್ ಶರ್ಮಾ,  ಸರಣಿ ಸಮಬಲ ಮಾಡಿಕೊಳ್ಳುವುದಕ್ಕಾಗಿ ತಂಡದಲ್ಲಿ ಎರಡು ಬದಲಾವಣೆ ಮಾಡಿದ್ದೇವೆ. ಕೆಎಲ್ ರಾಹುಲ್ ಮತ್ತು ಅರ್ಷದೀಪ್ ಸಿಂಗ್ ಬದಲಿಗೆ ರಿಷಬ್ ಪಂತ್ ಮತ್ತು ರಿಯಾನ್ ಪರಾಗ್ ಆಗಮಿಸಿದ್ದಾರೆ. ಪಿಚ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದ್ರೆ ಮೂಲಗಳ ಪ್ರಕಾರ ಮೊದಲ ಎರಡು ಪಂದ್ಯಗಳಲ್ಲಿ ರಾಹುಲ್ ವಿಫಲರಾದ ಕಾರಣಕ್ಕೆ ಅವರನ್ನ ಕೈಬಿಡಲಾಗಿದೆ ಎನ್ನಲಾಗುತ್ತಿದೆ. ಫಸ್ಟ್ ಮ್ಯಾಚ್​ನಲ್ಲಿ 31 ರನ್ ಗಳಿಸಿದ್ದ ರಾಹುಲ್​ ಎರಡನೇ ಇನ್ನಿಂಗ್ಸ್​ಗೆ ಖಾತೆ ತೆರೆಯದೆಯೇ ವಿಕೆಟ್ ಒಪ್ಪಿಸಿದ್ರು.  ಮೊದಲ ಪಂದ್ಯದಲ್ಲಿ ಆಕ್ಷರ್ ಪಟೇಲ್ ಜೊತೆಗೆ ಮಹತ್ವದ ಇನಿಂಗ್ಸ್ ಕಟ್ಟಿದ್ರೂ ಕೂಡ ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು ಎಂಬ ಒಂದೇ ಕಾರಣಕ್ಕೆ ಮೂರನೇ ಪಂದ್ಯದಿಂದಲೇ ಹೊರಗಿಡಲಾಗಿದೆ. ಶಿವಂ ದುಬೆ, ಶ್ರೇಯಸ್‌ ಅಯ್ಯರ್, ಶುಲ್ಮನ್ ಗಿಲ್ ನಂತಹ ಆಟಗಾರರಿಗೂ ತಂಡದಲ್ಲಿ ನಿಯಮಿತವಾಗಿ ಸ್ಥಾನ ಸಿಗ್ತಿದೆ. ಆದರೆ ಕೆಎಲ್ ರಾಹುಲ್ ನಂತಹ ಆಟಗಾರರಿಗೆ ಅವರ ಅನುಭವ ಪರಿಗಣಿಸಿಯಾದರೂ ಅವಕಾಶ ಕೊಡುತ್ತಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ನಿಜ ಹೇಳ್ಬೇಕಂದ್ರೆ ಒಬ್ಬ ಆಟಗಾರನ ಸಾಮರ್ಥ್ಯವನ್ನ ಒಂದೆರಡು ಪಂದ್ಯಗಳಿಂದ ಅಳೆಯೋಕೆ ಸಾಧ್ಯನೇ ಇಲ್ಲ. ಅವಕಾಶಗಳು ಸಿಕ್ಕಾಗಷ್ಟೇ ಅವ್ರ ಪ್ರತಿಭೆಯನ್ನ ಹೊರ ತರೋಕೆ ಸಾಧ್ಯ. ಫಾರ್ ಎಕ್ಸಾಂಪಲ್ ವಿರಾಟ್ ಕೊಹ್ಲಿಯವ್ರನ್ನೇ ಇಟ್ಕೊಳಿ. ಟಿ-20 ವಿಶ್ವಕಪ್​ನಲ್ಲಿ ಮೊದಲ ಪಂದ್ಯದಿಂದ ಸೆಮಿಫೈನಲ್​ವರೆಗೂ ವಿರಾಟ್ ಪ್ರದರ್ಶನ ಅಷ್ಟಕ್ಕಷ್ಟೇ ಇತ್ತು. ಆದ್ರೆ ಫೈನಲ್ ಮ್ಯಾಚ್​ನಲ್ಲಿ ವಿರಾಟ್ ಇರ್ಲಿಲ್ಲ ಅಂದ್ರೆ ಭಾರತ ಚಾಂಪಿಯನ್ ಪಟ್ಟಕ್ಕೇರೋಕೆ ಆಗ್ತಾನೇ ಇರ್ಲಿಲ್ಲ. ಎಲ್ಲರೂ ಕೈಕೊಟ್ಟಾಗ ತಂಡಕ್ಕೆ ಆಸರೆಯಾಗಿ ನಿಂತದ್ದೇ ವಿರಾಟ್. ಬಹುಶಃ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿದ್ರೆ ಕೆಎಲ್ ರಾಹುಲ್​ ಡ್ರಾಪ್ ಆಗ್ತಿರಲಿಲ್ಲ. ಯಾಕಂದ್ರೆ ದ್ರಾವಿಡ್ ಕೋಚ್ ಆಗಿದ್ದಾಗ ಯಾವುದೇ ಆಟಗಾರನನ್ನು ಒಂದೇ ಪಂದ್ಯದ ವೈಫಲ್ಯತೆಯಿಂದ ಸ್ಥಾನ ವಂಚಿತರಾಗಿ ಮಾಡುತ್ತಿರಲಿಲ್ಲ. ಉದಾಹರಣೆಗೆ ರಜತ್ ಪಾಟೀದಾರ್ ಗೆ ನೀಡಿದ ಅವಕಾಶಗಳೇ ಸಾಕ್ಷಿ. ಆದರೆ ಗಂಭೀರ್ ಕೋಚ್ ಆದ ಬಳಿಕ ರಿಷಬ್ ಪಂತ್ ಗೆ ಅನುಕೂಲ ಮಾಡಿಕೊಡಲು ರಾಹುಲ್ ರನ್ನು ಒಂದೇ ಪಂದ್ಯದಲ್ಲಿ ಫೇಲ್ ಆಗಿದ್ದಕ್ಕೆ ಕಿತ್ತು ಹಾಕಲಾಗಿದೆ ಅಂತಾ ಫ್ಯಾನ್ಸ್ ಸಿಟ್ಟಾಗ್ತಿದ್ದಾರೆ. ಅದೇನೇ ಇದ್ರೂ ನಾಯಕತ್ವ, ಉಪನಾಯಕತ್ವ ಕಳ್ಕೊಂಡು ನಿರಾಸೆಗೊಂಡಿದ್ದ ಕೆಎಲ್ ರಾಹುಲ್​ಗೆ ಈಗ ತಂಡದಲ್ಲೂ ಆಡೋಕೆ ಚಾನ್ಸ್ ಸಿಗ್ತಿಲ್ಲ ಅಂದ್ರೆ ನಿಜಕ್ಕೂ ವಿಪರ್ಯಾಸ.

Shwetha M

Leave a Reply

Your email address will not be published. Required fields are marked *