ಕೆರಳಿದ ಹೆಣ್ಣು ಹುಲಿ – ಅವಮಾನಕ್ಕೆ ಗೆಲುವಿನಲ್ಲೇ ತಕ್ಕ ಉತ್ತರ

ಕೆರಳಿದ ಹೆಣ್ಣು ಹುಲಿ – ಅವಮಾನಕ್ಕೆ ಗೆಲುವಿನಲ್ಲೇ ತಕ್ಕ ಉತ್ತರ

ವಿನೇಶ್ ಫೊಗಾಟ್. ಎಂಥಾ ಛಲಗಾರ್ತಿ. ಕುಸ್ತಿ ಅಖಾಡದಲ್ಲಿ ಕಂಡು ಬಂದಿದ್ದು ವಿನೇಶ್ ಎಂಬ ಹೆಣ್ಣಲ್ಲ.. ಕೆರಳಿದ ಹೆಣ್ಣು ಹುಲಿ.. ಇವಳೇನಾ ಅಂದು ದೆಹಲಿಯ ಬೀದಿ ಬೀದಿಯಲ್ಲಿ ತನ್ನವರಿಗಾಗಿ ಕಣ್ಣೀರಿಟ್ಟವಳು.. ಬೀದಿಯಲ್ಲಿ ಕುಳಿತು ಪ್ರತಿಭಟಿಸಿದಳು.. ಆಕೆಯನ್ನು ಮೃಗದಂತೆ ಹಿಡಿದು ಎಳೆದಾಡಿದವರು ಈಗ ಎಲ್ಲಿ ಹೋದರು.. ಆಕೆ ನಿಮಗೆಲ್ಲಾ ಎಷ್ಟೊಂದು ಬಾರಿ ಕೈ ಮುಗಿದಳು.. ಇದೀಗ ಅದೇ ಅದೇ ಹೆಣ್ಣು ಹುಲಿಗೆ ಕೋಟಿ ಕೋಟಿ ಭಾರತೀಯರು ಹೆಮ್ಮೆಯಿಂದ ಸೆಲ್ಯೂಟ್ ಮಾಡ್ತಿದ್ದಾರೆ.. ಆ ಪ್ರತಿಭಟನೆ, ಆ ನೋವು, ಆ ಹತಾಶೆ, ಆ ಆಕ್ರೋಶ.. ಕುಹಕ, ಅಪಹಾಸ್ಯ, ಅವಮಾನ ಎಲ್ಲದಕ್ಕೂ ಕುಸ್ತಿಯಲ್ಲೇ ಉತ್ತರ ಕೊಟ್ಟಿದ್ದಾಳೆ ಫೋಗಟ್. ಅವಮಾನಕ್ಕೆ ಉತ್ತರ ಕೊಡೋ ರೀತಿ ಇದುವೆ ಅಲ್ವಾ. ವಿನೀಶ್ ಗೆಲುವಿನ ರೀತಿ ನೀವು ನೋಡಿದ್ರಾ?, ಆಕೆಯ ಕಣ್ಣಲ್ಲಿ ಅವಮಾನಿಸಿದವರನ್ನ ಕೆಡವಿ ಹಾಕಿದ ಕಿಚ್ಚು ಕಂಡು ಬಂದಿತ್ತು. ವಿನೇಶ್ ಫೋಗಟ್ ಗೆದ್ದಿದ್ದು ಯಾರ ವಿರುದ್ಧ? ತನ್ನನ್ನ ಬೀದಿಗೆ ತಂದವರ ವಿರುದ್ಧವೋ? ಇಲ್ಲ ಒಲಿಂಪಿಕ್ಸ್‌ನಲ್ಲಿ ಕುಸ್ತಿ ಅಖಾಡದಲ್ಲೋ.. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಮಾರ್ಟಿನ್‌ ವಿರುದ್ಧ ಕನ್ನಡಿಗರು ಕೆರಳಿದ್ದೇಕೆ?  – ಟ್ರೈಲರ್‌ ನೋಡಲು ದುಡ್ಡು ಕೊಡ್ಬೇಕಾ?

ಒಂದು ವರ್ಷದ ಹಿಂದೆ ಈ ಫೋಟೋ ನೋಡಿರ್ತೀರಾ ಸ್ನೇಹಿತರೇ.. 2023 ಮೇ ತಿಂಗಳಲ್ಲಿ ದೇಶಕ್ಕೆ ಹೆಮ್ಮೆ ತಂದ, ಕುಸ್ತಿ ಕಣದಲ್ಲಿ ಪದಕ ಮುಡಿಗೇರಿಸಿಕೊಂಡ ಹೆಮ್ಮೆಯ ಕುಸ್ತಿಪಟುಗಳು ದೆಹಲಿಯ ಬೀದಿಯಲ್ಲಿ ನಿಂತು ನ್ಯಾಯಕ್ಕಾಗಿ ಮೊರೆಯಿಟ್ಟಿದ್ದರು. ತಮ್ಮ ಮೇಲಾದ ದೌರ್ಜನ್ಯಕ್ಕೆ ನ್ಯಾಯ ಕೇಳಿದ್ದರು. ಆಗ ದೇಶಕ್ಕೆ ಹೆಮ್ಮೆ ತಂದ ಕುಸ್ತಿ ಪಟುಗಳ ಮೇಲಾಗಿದ್ದು ಏನು ಗೊತ್ತಾ.. ಭಯಂಕರ ಅವಮಾನ, ಅಲ್ಲಿ ಬೀದಿಯಲ್ಲಿ ಎಳೆದಾಡಿದ್ದು ಯಾರನ್ನ ಗೊತ್ತಾ.. ಪದಕಕ್ಕೆ ಕೊರಳೊಡ್ಡಿದ್ದ ನಮ್ಮ ಭಾರತೀಯರ ಹೆಮ್ಮೆಯಾದ ಕುಸ್ತಿಪಟುಗಳನ್ನ. ಅದ್ರಲ್ಲೂ ವಿನೇಶ್ ಫೋಗಟ್ ಎಂಬ ಛಲಗಾರ್ತಿ ಕುಸ್ತಿಪಟುವನ್ನ ಪೊಲೀಸರು ಎಳೆದಾಡಿದ ದೃಶ್ಯ ಯಾರೂ ಮರೆತಿರಲಿಲ್ಲ. ಈ ಅವಮಾನ. ಈ ನೋವು, ನ್ಯಾಯ ಕೊಡಿಸಬೇಕಾದವರಿಂದ ಅನ್ಯಾಯಕ್ಕೆ ಈಗ ಉತ್ತರ ಕೊಡೋ ಸಮಯ ಬಂದಿದೆ. ಇಂಥಾ ಸಮಯ ಬಂದಾಗ ನಮ್ಮ ಹೆಣ್ಣು ಹುಲಿ ಕೆರಳಿದೆ. ಗೆದ್ದಾಗಲೂ ಇದೇ ಹೆಣ್ಣು ಹುಲಿ ಸಂಭ್ರಮಿಸಿದ್ದು ಹೇಗೆ ಗೊತ್ತಾ.. ಕಣ್ಣಲ್ಲಿ ಹತಾಶೆ ಗೆದ್ದ ಖುಷಿ.. ಮುಖದಲ್ಲಿ ಅವಮಾನ ಮಾಡಿದವರನ್ನ ಕೆಡವಿದ ಹಠ.. ಹೌದು.. ಈ ಒಂದು ವರ್ಷದಿಂದ ತನಗಾದ ಅವಮಾನವನ್ನ ಗೆಲುವಿನ ಮೂಲಕ ತೀರಿಸಿಕೊಂಡಿದ್ದಾರೆ ವಿನೇಶ್ ಫೋಗಾಟ್. ಇಲ್ಲಿ ಕುಸ್ತಿ ಕಣದಲ್ಲಿ ಕೆರಳಿದ ಹುಲಿ ತೊಡೆ ತಟ್ಟಿ ನಿಂತಾಗ ಮೊದಲ ಬಾರಿ ನಡುಗಿದ್ದು ಯಾರು ಗೊತ್ತಾ..? ಟೋಕಿಯೊ ಒಲಿಂಪಿಕ್ಸ್ನ ಚಿನ್ನದ ಪದಕ ವಿಜೇತೆ, ಜಪಾನ್‌ನ ಯೂಯಿ ಸುಸಾಕಿ. ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಯೂಯಿ ಸುಸಾಕಿ ವಿರುದ್ಧದ ವಿನೇಶ್ ವಿಜಯದ ಬಗ್ಗೆ ಇಡೀ ಜಗತ್ತೇ ಮಾತನಾಡುತ್ತಿದೆ. ಇದಕ್ಕೆ ಕಾರಣವೂ ಇದೆ. ವಿನೇಶ್ ಫೊಗಾಟ್ ಹಾಕಿದ ಪಟ್ಟುಗಳಿಗೆ ಮಣ್ಣು ಮುಕ್ಕಿದ ಯೂಯಿ ಸುಸಾಕಿ ಯಾರು ಗೊತ್ತಾ?. ಕಳೆದ 14 ವರ್ಷಗಳಲ್ಲಿ ಸುಸಾಕಿ ಸೋತಿರುವುದು ಕೇವಲ ಮೂರೇ ಮೂರು ಪಂದ್ಯಗಳನ್ನು. ಅದೂ ತನ್ನದೇ ದೇಶದ ಯೂಕಿ ಐರಿಯ ಎದುರು. ಆಕೆಯನ್ನು ಬಿಟ್ಟರೆ ಸುಸಾಕಿಯನ್ನು ಸೋಲಿಸಿದ ಮತ್ತೊಬ್ಬ ಕುಸ್ತಿಪಟು ಈ ಜಗತ್ತಿನಲ್ಲೇ ಇಲ್ಲ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಒಂದೇ ಒಂದು ಅಂಕವನ್ನು ಎದುರಾಳಿಗೆ ಬಿಟ್ಟುಕೊಡದೆ ಚಿನ್ನದ ಪದಕ ಗೆದ್ದಿದ್ದಳು ಸುಸಾಕಿ. ಜಗತ್ತಿನ ನಂ.1 ಕುಸ್ತಿಪಟುವನ್ನೇ ಕೆಡವಿ ಹಾಕಿದ್ದಳು ವಿನೇಶ್ ಫೊಗಾಟ್.

ನಂತರ ಕೇವಲ ಕೆಲವೇ ಕ್ಷಣಗಳು.. ಮತ್ತೆ ಅಖಾಡದಲ್ಲಿ ಗೆಲುವಿಗೆ ರೆಡಿಯಾಗಿ ನಿಂತಿದ್ದಳು ವಿನೇಶ್.. ಅವಳ ಮುಖದಲ್ಲಿ ಗೆಲುವಿನ ಹಠ ಕಾಣುತ್ತಿತ್ತು. ಗೆದ್ದೇ ಗೆಲ್ಲುವೆ ಒಂದು ದಿನ. ಗೆಲ್ಲಲೇ ಬೇಕು ಒಳ್ಳೇತನ ಅಂತಾರಲ್ಲ.. ಇದನ್ನೇ ನಂಬಿದ್ದಳು ವಿನೇಶ್. ಉಕ್ರೇನ್‌ನ ಒಕ್ಸಾನಾ ಲಿವಾಚ್ ಈಕೆಯ ಎದುರಾಳಿಯಾಗಿ ತೊಡೆ ತಟ್ಟಿ ನಿಂತಿದ್ದರು. ಫೋಗಟ್ ಹಾಕಿದ ಒಂದೊಂದು ಪಟ್ಟು ಉಕ್ರೇನ್ ಕುಸ್ತಿ ಪಟುವಿಗೆ ಸುಧಾರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಕೆಯನ್ನೂ ಸೋಲಿಸಿ. ಸೆಮಿಫೈನಲ್​​​ಗೆ ಏರಿ ಮತ್ತೊಂದು ಗೆಲುವಿಗೆ ರೆಡಿಯಾಗಿದ್ದಳು ವಿನೇಶ್.

ಬಹುಶಃ ಬುಧವಾರ ರಾತ್ರಿ ವಿನೇಶ್ ಫೋಗಟ್ ಫೈನಲ್ ಗೆ ಏರೋದನ್ನ ನೋಡಲು ಅದೆಷ್ಟು ಬಂದಿ ಕಾಯ್ತಿದ್ದರು ಅಂದ್ರೆ, ಇವತ್ತು ಸೋಶಿಯಲ್ ಮೀಡಿಯಾದಲ್ಲಿ ವಿನೇಶ್ ಪರ ಹಾಕಿರೋ ಪೋಸ್ಟ್‌ಗಳೇ ಸಾಕ್ಷಿ. ಸೆಮಿಫೈನಲ್‌ನಲ್ಲಿ ಫೋಗಟ್‌ಗೆ ಎದುರಾಳಿಯಾಗಿ ನಿಂತಿದ್ದು ಕ್ಯೂಬಾದ ಯುಸ್‌ನೈಲೆಸ್‌ ಗುಜ್ಮನ್‌. ಸೆಮಿಫೈನಲ್​ ಪಂದ್ಯದಲ್ಲಿ ಗುಜ್ಮಾನ್ ಅವರನ್ನು 5-0 ಅಂತರದಿಂದ ಮಣಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ ವಿನೇಶ್. ಎದುರಾಳಿಯನ್ನ ನೇರವಾಗಿ ಹೊಸಕಿ ಹಾಕಿ ಫೈನಲ್ ಗೆ ಎಂಟ್ರಿಕೊಟ್ಟ ವಿನೇಶ್ ಫೋಗಟ್ ಒಲಿಂಪಿಕ್ ಇತಿಹಾಸದಲ್ಲಿ ಫೈನಲ್‌ ಪ್ರವೇಶಿಸಿ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಭಾರತೀಯ ಕುಸ್ತಿ ಫೆಡರೇಶನ್’ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೌರ್ಜನ್ಯದ ಆರೋಪ ಕೇಳಿ ಬಂದಿತ್ತಲ್ಲಾ.. ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟಿಸಿದ್ದ ಕುಸ್ತಿಪಟುಗಳಲ್ಲಿ ಈ ವಿನೇಶ್ ಫೊಗಟ್ ಕೂಡ ಒಬ್ಬಳು. ದೆಹಲಿಯ ಬೀದಿ ಬದಿ ಕುಳಿತು ನ್ಯಾಯ ಕೇಳಿದ್ದ ಕುಸ್ತಿಪಟುಗಳನ್ನು ಇವರು ದೇಶಕ್ಕೆ ಹೆಮ್ಮೆ ತಂದ ಕ್ರೀಡಾಪಟುಗಳು ಎಂಬುದನ್ನೂ ನೋಡದೆ ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳಲಾಗಿತ್ತು. ಒಲಿಂಪಿಕ್ಸ್ ಅಖಾಡಕ್ಕೆ ಕಾಲಿಟ್ಟಾಗ ವಿನೇಶ್ ಫೊಗಾಟ್ ಮೇಲೆ ಇದ್ದ ಒತ್ತಡ ಅಷ್ಟಿಷ್ಟಲ್ಲ. ಒಂದು ವೇಳೆ ಸೆಮಿಫೈನಲ್ ಪ್ರವೇಶಿಸದೆ ಸೋತಿದ್ದರೆ ಈಕೆ ಅದೆಷ್ಟು ಟೀಕೆ, ನಿಂದನೆಗಳನ್ನು ಸಹಿಸಿಕೊಳ್ಳಬೇಕಿತ್ತೋ..

ಒಲಿಂಪಿಕ್ಸ್ ನಲ್ಲಿ ಭಾರತೀಯ ಕುಸ್ತಿಪಟುಗಳ, ಅದರಲ್ಲೂ ಮಹಿಳಾ ಕುಸ್ತಿಪಟುಗಳ ಪ್ರತೀ ವಿಜಯ ಭಾರತೀಯ ಕುಸ್ತಿ ಫೆಡರೇಶನ್, ಅದರ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಹಾಗೂ ಕೇಂದ್ರ ಸರ್ಕಾರಕ್ಕೆ ಬೀಸು ಚಾಟಿಯೇಟು. ಇಂಥಾ ವಿಶ್ವಮಾನ್ಯ ಕುಸ್ತಿಪಟುಗಳ ಮೇಲೆ ದೌರ್ಜನ್ಯ ನಡೆಸಿ, ಅವರು ನ್ಯಾಯ ಕೇಳಿದಾಗ ಅವರನ್ನು ಬೀದಿಗೆ ತಳ್ಳಿ, ಅವರನ್ನು ಕ್ರೂರವಾಗಿ ನಡೆಸಿಕೊಂಡ ನಮ್ಮ ವ್ಯವಸ್ಥೆಗೆ ಕುಸ್ತಿಪಟುಗಳ ಜಯದಲ್ಲಿ ಯಾವುದೇ ಪಾಲಿಲ್ಲ.

Shwetha M

Leave a Reply

Your email address will not be published. Required fields are marked *