ಮಿಶ್ರ ಡಬಲ್ಸ್‌ನಲ್ಲಿ Love.. ಒಲಿಂಪಿಕ್ಸ್‌ನಲ್ಲಿ ಪ್ರಪೋಸ್ – ಚಿನ್ನ ಕೊರಳಿಗೆ.. ಉಂಗುರ ಬೆರಳಿಗೆ..!
ಪ್ಯಾರಿಸ್‌ನಲ್ಲಿ ಪ್ರಣಯ ಪಕ್ಷಿಗಳು..!

ಮಿಶ್ರ ಡಬಲ್ಸ್‌ನಲ್ಲಿ Love.. ಒಲಿಂಪಿಕ್ಸ್‌ನಲ್ಲಿ ಪ್ರಪೋಸ್ – ಚಿನ್ನ ಕೊರಳಿಗೆ.. ಉಂಗುರ ಬೆರಳಿಗೆ..!ಪ್ಯಾರಿಸ್‌ನಲ್ಲಿ ಪ್ರಣಯ ಪಕ್ಷಿಗಳು..!

ಪ್ಯಾರೀಸ್ ಮೊದಲೇ ಪ್ರಣಯ ನಗರಿಯೆಂದೇ ಫೇಮಸ್. ಪ್ಯಾರೀಸ್ ನಲ್ಲಿ ಪ್ರಯಣ ಪಕ್ಷಿಗಳು ಇರೋದು ಕೂಡಾ ಕಾಮನ್. ಆದ್ರೀಗ ಪ್ಯಾರೀಸ್ ನಲ್ಲಿ ನಡೆಯುತ್ತಿರೋ ಒಲಿಂಪಿಕ್ಸ್ ಕೂಡಾ ಅನೇಕ ರೋಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲೂ ಒಂದಷ್ಟು ವಿವಾದಗಳು ಕಂಡು ಬರುತ್ತಿವೆ. ಆದರೆ ಇದೆಲ್ಲದರ ನಡುವೆಯೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿಯುವಂತಹ ಕೆಲವು ಸುಂದರ ಕ್ಷಣಗಳಿಗೂ ಈ ಬಾರಿಯ ಒಲಿಂಪಿಕ್ಸ್ ಸಾಕ್ಷಿಯಾಗುತ್ತಿದೆ. ಜೊತೆಗೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪ್ರತಿಯೊಂದು ದೇಶವೂ ಸಾಧ್ಯವಾದಷ್ಟು ಪದಕಗಳನ್ನು ಗೆಲ್ಲಲು ಶತ ಪ್ರಯತ್ನ ನಡೆಸುತ್ತಿವೆ. ಅಥ್ಲೀಟ್‌ಗಳು ಸಿಕ್ಕಾಪಟ್ಟೆ ಎಫರ್ಟ್ ಹಾಕ್ತಿದ್ದಾರೆ. ಇದರ ನಡುವೆ ಪದಕ ಸಮಾರಂಭದಲ್ಲೇ ಜೋಡಿಯೊಂದು ಲವ್ ಪ್ರಪೋಸಲ್ ಮಾಡೋ ಮೂಲಕ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: ಕಂಚಿನ ರಾಣಿ ರೇಂಜೇ ಚೇಂಜ್..! – ಮನು ಬಾಕರ್ ಬ್ರ್ಯಾಂಡ್ ಮೌಲ್ಯ ಡಬಲ್

ಸಿಟಿ ಆಫ್ ಲವ್ ಎಂದೇ ಫೇಮಸ್ ಈ ಪ್ಯಾರಿಸ್. ಬಹುಶಃ ಇಲ್ಲೊಂದು ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ ಜೋಡಿಗೆ ಲವ್ ಪ್ರಪೋಸ್ ಮಾಡೋಕೂ ಕೂಡಾ ಪ್ಯಾರಿಸ್ ಬೆಸ್ಟ್ ಪ್ಲೇಸ್ ಅಂತಾ ಅನ್ಸಿರಬೇಕು. ಇಲ್ಲ, ಪದಕ ಪಟ್ಟಿಯಲ್ಲಿ ಟಾಪ್ ಪ್ಲೇಸ್ ಲ್ಲಿರೋ ಚೀನಿ ಜೋಡಿಗೆ ಈ ರೀತಿ ಎಕ್ಸಪರಿಮೆಂಟ್ ಮಾಡಿದ್ರೆ ಹೇಗೆ ಎಂಬ ಐಡಿಯಾ ಬಂತೋ ಏನೋ.. ಅದೇನೇ ಇರಲಿ, ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಚೀನೀ ಆಟಗಾರ, ತನ್ನ ಸಹ ಆಟಗಾರ್ತಿಗೆ ಮದುವೆ ಪ್ರಸ್ತಾಪವಂತೂ ಮಾಡಿಯೇ ಬಿಟ್ಟಿದ್ದಾನೆ. ಈ ಮೂಲಕ ಪದಕ ಸಮಾರಂಭ ಮಾಡೋ ಪೋಡಿಯಂನಲ್ಲೇ ತನ್ನ ಗೆಳತಿಗೆ ಸರ್‌ಪ್ಸೈಸ್ ಅಂತೂ ನೀಡಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಚೀನಾದ ಹುವಾಂಗ್ ಯಾ ಕಿಯೊಂಗ್ ಹಾಗೂ ಝೆಂಗ್ ಸಿವೀ ಜೋಡಿ ಗೆಲ್ಲುತ್ತೆ. ಅದು ಕೂಡಾ ದಕ್ಷಿಣ ಕೊರಿಯಾದ ಕಿಮ್ ವಾನ್ ಹೊ ಮತ್ತು ಜಿಯೋಂಗ್ ನಾ ಯುನ್ ಜೋಡಿಯನ್ನು ಸೋಲಿಸಿ ಚಿನ್ನದ ಪದಕವನ್ನ ಚೀನಿ ಜೋಡಿ ತಮ್ಮದಾಗಿಸಿಕೊಳ್ಳುತ್ತೆ. ಈ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಚೀನಾ ಜೋಡಿಯ ಮಿಂಚಿನ ಆಟ ಕೂಡಾ ಸಖತ್ ಸೌಂಡ್ ಮಾಡಿತ್ತು. ದಕ್ಷಿಣ ಕೊರಿಯಾ ಜೋಡಿಯನ್ನು 41 ನಿಮಿಷಗಳಲ್ಲಿ 21-8, 21-11 ಅಂತರದಿಂದ ಸೋಲಿಸಿದ ಚೀನಿ ಜೋಡಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತ್ತು. ಮಿಶ್ರ ಡಬಲ್ಸ್ ಈವೆಂಟ್ ಮುಗಿದ ನಂತರ, ಪದಕ ಸಮಾರಂಭವು ನಡೆಯಿತು. ಅಲ್ಲಿ ಚೀನಾದ ಜೋಡಿಗೆ ಪದಕ ವಿತರಣೆ ಕೂಡ ನಡೆಯಿತು. ಆದರೆ ಆ ನಂತರ ನಡೆದಿದ್ದೇ ಒಂದು ಹೈ ಡ್ರಾಮಾ. ಪದಕ ಪಡೆದು ವೇದಿಕೆಯಿಂದ ಹೊರಬಂದ ಹುವಾಂಗ್ ಯಾ ಕಿಯೊಂಗ್ ಅವರಿಗೆ ಚೀನಾದ ಮತ್ತೊಬ್ಬ ಬ್ಯಾಡ್ಮಿಂಟನ್ ಆಟಗಾರ ಲಿ ಯುಚೆನ್ ತಮ್ಮ ಮೊಣಕಾಲಿನ ಮೇಲೆ ಕುಳಿತು ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಅಲ್ಲದೆ, ವಿಲ್​ ಯು ಮ್ಯಾರಿ ಮಿ? ಎಂದು ಕೇಳಿದ್ದಾನೆ. ಈ ಸಡನ್ ಬೆಳವಣಿಗೆಗೆ ಹುವಾಂಗ್ ಯಾ ಕಿಯೊಂಗ್ ಕೆಲ ಸಮಯ ಶಾಕ್ ಆದಂತೆ ಕಂಡುಬಂದ್ರು. ನಂತರ ಯುಚೆನ್ ಅವರ ಮದುವೆ ಪ್ರಸ್ತಾಪಕ್ಕೆ ಸಮ್ಮತಿಯನ್ನು ನೀಡಿದರು. ಇದೇ ವೇಳೆ ಯುಚೆನ್, ಹುವಾಂಗ್ ಅವರಿಗೆ ಉಂಗುರವನ್ನು ತೊಡಿಸಿದರು. ಅಂದಹಾಗೆ ಒಲಿಂಪಿಕ್ಸ್ ವೇದಿಕೆಯಲ್ಲಿ ಈ ರೀತಿ ಲವ್ ಪ್ರಪೋಸ್ ಮಾಡಿದ್ದು ಈ ಜೋಡಿ ಮೊದಲಲ್ಲ. ಇದಕ್ಕೂ ಮೊದಲು ಮತ್ತೊಂದು ಜೋಡಿ ಇಂಥದ್ದೇ ಗಳಿಗೆಗೆ ಸಾಕ್ಷಿಯಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಅರ್ಜೆಂಟೀನಾದ ಆಟಗಾರನೊಬ್ಬ ತನ್ನ ಸಹ ಆಟಗಾರ್ತಿಗೆ ಎಲ್ಲರ ಮುಂದೆ ಪ್ರಪೋಸ್ ಮಾಡಿದ್ದರು. ಅರ್ಜೆಂಟೀನಾ ಪುರುಷರ ಹ್ಯಾಂಡ್‌ಬಾಲ್ ತಂಡದ ಆಟಗಾರ ಪ್ಯಾಬ್ಲೊ ಸಿಮೊನೆಟ್ ಅರ್ಜೆಂಟೀನಾ ಮಹಿಳಾ ಹಾಕಿ ತಂಡದ ಆಟಗಾರ್ತಿ ಮರಿಯಾ ಕ್ಯಾಂಪೊಯ್‌ಗೆ ಪ್ರೇಮ ನಿವೇದನೆ ಮಾಡಿದ್ದರು. ಇಬ್ಬರೂ ಆಟಗಾರರು 2015 ರಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದರು. ಒಲಂಪಿಕ್ ಗೇಮ್ಸ್ ಸ್ವತಃ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಈ ವಿಶೇಷ ಕ್ಷಣದ ವೀಡಿಯೊವನ್ನು ಹಂಚಿಕೊಂಡಿತ್ತು.

ಅಂತೂ ಚೀನಾದ ಖ್ಯಾತ ಬ್ಯಾಡ್ಮಿಂಟನ್ ತಾರೆಗಳು ಆಡುವಾಗ ಜೊತೆಯಾಗಿ ಆಡಿದ್ದು ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ಜೊತೆಯಾಗಿಯೇ ಜೀವನ ನಡೆಸಲು ಪರಸ್ಪರ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ. ಇದಕ್ಕೆ ಒಲಿಂಪಿಕ್ಸ್ ಎಂಬ ಮಹಾ ವೇದಿಕೆಯನ್ನೇ ಸಾಕ್ಷಿ ಮಾಡಿಕೊಂಡಿದ್ದಾರೆ. ಅಂತೂ ಪ್ರಣಯನಗರಿ ಪ್ಯಾರಿಸ್ ಇವರ ಪ್ರೀತಿಗೆ ಸ್ಪೂರ್ತಿಯಾಗಿದ್ದಂತೂ ಸತ್ಯ.

Sulekha

Leave a Reply

Your email address will not be published. Required fields are marked *