INDದಂತೆ PAKಗೆ ಬಾಂಗ್ಲಾ ಶಾಕ್! – ಚಾಂಪಿಯನ್ಸ್ ಟ್ರೋಫಿಗೆ ಬಿಗ್ ಎಫೆಕ್ಟ್
ಭದ್ರತೆ ಭಯ ಪಾಕ್​ ಗೆ ಮುಳುವಾಯ್ತಾ? 

INDದಂತೆ PAKಗೆ ಬಾಂಗ್ಲಾ ಶಾಕ್! – ಚಾಂಪಿಯನ್ಸ್ ಟ್ರೋಫಿಗೆ ಬಿಗ್ ಎಫೆಕ್ಟ್ಭದ್ರತೆ ಭಯ ಪಾಕ್​ ಗೆ ಮುಳುವಾಯ್ತಾ? 

2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆ ಮಾಡ್ತಿರೋ ಪಾಕಿಸ್ತಾನ ಈಗಾಗ್ಲೇ ಭರ್ಜರಿ ಸಿದ್ಧತೆಯಲ್ಲಿದೆ. ವೇಳಾಪಟ್ಟಿಯನ್ನೂ ರೆಡಿ ಮಾಡಿ ಕ್ರೀಡಾಂಗಣಗಳನ್ನ ಸಜ್ಜುಗೊಳಿಸ್ತಿದೆ. ಆದ್ರೆ ಟೂರ್ನಿಗಾಗಿ ದಶಕದ ದ್ವೇಷ ಮರೆತು ಭಾರತ ಪಾಕಿಸ್ತಾನಕ್ಕೆ ಕಾಲಿಡುತ್ತಾ? ಅಥವಾ ಬೇರೆ ಸ್ಥಳದಲ್ಲಿ ಭಾರತದ ಪಂದ್ಯಗಳನ್ನ ಆಯೋಜನೆ ಮಾಡ್ತಾರಾ ಅನ್ನೋದು ಈವರೆಗೂ ಫೈನಲ್ ಆಗಿಲ್ಲ. ಐಸಿಸಿ ಮಟ್ಟದಲ್ಲಿ ಈ ವಿಚಾರ ಇನ್ನೂ ಕೂಡ ಚರ್ಚೆಯಲ್ಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾತ್ರ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನಕ್ಕೇ ಬಂದು ಪಂದ್ಯಗಳನ್ನ ಆಡ್ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಆದ್ರೆ ಭಾರತವನ್ನ ತನ್ನ ನೆಲಕ್ಕೆ ಕರೆಸಿಕೊಳ್ಳೋಕೆ ಸರ್ವಪ್ರಯತ್ನಗಳಲ್ಲೂ ಮಾಡ್ತಿರುವ ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಕೂಡ ಬಿಗ್ ಶಾಕ್ ನೀಡಿದೆ. ಏನದು ಶಾಕ್? ಇದ್ರಿಂದ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಹೇಗೆ ಹೊಡೆತ ಕೊಡುತ್ತೆ? ಇತರೆ ದೇಶಗಳ ನಿಲುವು ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ನ್ಯೂಯಾರ್ಕ್‌ ಗೆ ಹೋಗಿದ್ಯಾಕೆ ಐಶ್ವರ್ಯ ರೈ – ಸಲ್ಲು,  ಐಶ್‌ ಪ್ರೀತಿ ವಿಚಾರ ಈಗ ಯಾಕೆ?

ದಶಕಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟೂರ್ನಿಗೆ ಆತಿಥ್ಯ ವಹಿಸುತ್ತಿರೋ ಪಾಕಿಸ್ತಾನ ಆತುರಾತುರವಾಗೇ ಮೈದಾನಗಳನ್ನ ಫೈನಲ್ ಮಾಡಿದೆ. ಟೈಂ ಟೇಬಲ್ ಫಿಕ್ಸ್ ಮಾಡಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಸಲ್ಲಿಕೆ ಮಾಡಿಯೂ ಆಗಿದೆ. ಇತ್ತ ಐಸಿಸಿ ಕೂಡ ಟೂರ್ನಿ ಆಯೋಜನೆಯ ಬಜೆಟ್​ಗೂ ಅನುಮೋದನೆ ನೀಡಿದೆ. ಬಟ್ ಈಗ ಇರೋ ಪ್ರಶ್ನೆ ಅಂದ್ರೆ ಟೂರ್ನಿ ಆಡೋಕೆ ಪಾಕಿಸ್ತಾನಕ್ಕೆ ಭಾರತ ಹೋಗುತ್ತಾ ಅನ್ನೋದು. ಈ ಬಗ್ಗೆ ಇನ್ನೂ ಯಾವುದೇ ಕ್ಲಾರಿಟಿ ಇಲ್ಲ. ಒಂದ್ಕಡೆ ಪಾಕಿಸ್ತಾನ ನಮ್ಮ ದೇಶಕ್ಕೆ ಭಾರತ ಬರಲೇಬೇಕು ಅಂತಾ ಪಟ್ಟು ಹಿಡಿದಿದೆ. ಮತ್ತೊಂದ್ಕಡೆ ಸರ್ಕಾರದ ಒಪ್ಪಿಗೆ ಇಲ್ಲದೆ ನಮ್ಮ ಆಟಗಾರರು ಪಾಕ್​ಗೆ ಕಾಲಿಡಲ್ಲ ಅಂತಾ ಬಿಸಿಸಿಐ ಖಡಕ್ಕಾಗೇ ಹೇಳಿದೆ. ಹೀಗೆ ಗೊಂದಲಗಳ ನಡುವೆಯೇ 2025ರಲ್ಲಿ ಟಿ-20 ಮಾದರಿಯಲ್ಲಿ ಏಷ್ಯಾಕಪ್​ಗೆ ಐಸಿಸಿ ಮುಂದಾಗಿದ್ದು, ಇದಕ್ಕೆ ಭಾರತ ಆತಿಥ್ಯವನ್ನು ವಹಿಸಲಿದೆ. ಸೋ ಮುಂದಿನ ವರ್ಷ ನಮ್ಮ ದೇಶದಲ್ಲಿ ಟಿ20 ಮಾದರಿಯಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಪಾಕಿಸ್ತಾನ ಬರಲೇಬೇಕಾದ ಪರಿಸ್ಥಿತಿಯನ್ನು ಬಿಸಿಸಿಐ ನಿರ್ಮಿಸಿದೆ. ಈಗಿನಿಂದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಐಸಿಸಿ ಭಾರತಕ್ಕೆ ಹೋಗುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಲು ಆರಂಭಿಸಿವೆ. ಆದ್ರೆ ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಮ್ಮ ದೇಶಕ್ಕೆ ಭಾರತ ಬರಲು ಒಪ್ಪದಿದ್ದರೆ, ನಮ್ಮ ತಂಡದವರು ಹೇಗೆ ಭಾರತಕ್ಕೆ ಹೋಗಲಿದ್ದಾರೆ ಎಂದು ವಾದ ಆರಂಭಿಸಿದೆ. ಪಾಕ್ ಪ್ರಶ್ನೆ ಎತ್ತುತ್ತಿದ್ದಂತೆ ಬಿಸಿಸಿಐ ಬಾಂಗ್ಲಾ ದೇಶವನ್ನ ಕಣಕ್ಕಿಳಿಸಿದೆ.

 ನಮಗೂ ಭದ್ರತೆ ಭಯ ಕಾಡ್ತಿದೆ ಎಂದ ಬಾಂಗ್ಲಾದೇಶ

ಭಾರತ ಪಾಕಿಸ್ತಾನಕ್ಕೆ ಹೋಗಿ ಆಡಲ್ಲ ಅನ್ನೋಕೆ ಕೊಡ್ತಿರುವ ಪ್ರಮುಖ ಕಾರಣ ಭದ್ರತೆ ಹಾಗೇ ಕಾನೂನು ವಿರೋಧಿ ಚಟುವಟಿಕೆಗಳು. ಪಾಕಿಸ್ತಾನ ಭಾರತದ ವಿರುದ್ಧ ಒಂದಿಲ್ಲೊಂದು ಕೃತ್ಯಗಳನ್ನ ಎಸಗುತ್ತಲೇ ಇದೆ. ಅದ್ರಲ್ಲೂ 2008ರಲ್ಲಿ ನಡೆದಿದ್ದ ಮುಂಬೈ ದಾಳಿ ಪ್ರಕರಣವನ್ನ ಮರೆಯೋಕೆ ಸಾಧ್ಯನೇ ಇಲ್ಲ. ಈ ದಾಳಿಯಾದ ಮೇಲೆ ಭಾರತ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. ಇದೀಗ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಪಾಕ್​ಗೇ ಬರುವಂತೆ ಪಿಸಿಬಿ ವರಸೆ ತೆಗೆದಿದೆ. ಇದ್ರ ನಡುವೆ ಬಾಂಗ್ಲಾದೇಶ ಕೂಡ ಪಾಕ್ ವಿರುದ್ಧ ಧ್ವನಿ ಎತ್ತಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಪಾಕಿಸ್ತಾನದಲ್ಲಿ ಶಾಂತಿ ಮತ್ತು ಭದ್ರತೆಗೆ ತೊಂದರೆಯಾಗುತ್ತದೆ ಎಂದು ಪರೋಕ್ಷವಾಗಿ ಹೇಳಿಕೆಗಳನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ 2 ಟೆಸ್ಟ್‌ ಪಂದ್ಯಗಳು ನಡೆಯಲಿವೆ. ಆಗಸ್ಟ್‌ 21ರಿಂದ 25ರವರೆಗೆ ಮೊದಲ ಟೆಸ್ಟ್ ಪಂದ್ಯ ರಾವಲಪಿಂಡಿಯಲ್ಲಿ ನಡೆಯುತ್ತೆ. ಹಾಗೇ ಆಗಸ್ಟ್‌ 30ರಿಂದ ಸೆಪ್ಟೆಂಬರ್‌ 03ರವರೆಗೆ ಎರಡನೇ ಟೆಸ್ಟ್‌ ಮ್ಯಾಚ್​ಗೆ ಕರಾಚಿ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಭದ್ರತಾ ಸಲಹೆಗಾರರನ್ನು ಒದಗಿಸುವಂತೆ ಬಾಂಗ್ಲಾ ಪಟ್ಟು

2009ರಲ್ಲಿ ಪಾಕಿಸ್ತಾನದಲ್ಲಿ ಬಾಂಗ್ಲಾ ಕ್ರಿಕೆಟರ್ಸ್ ಮೇಲೆ ದಾಳಿ ನಡೆಸಲಾಗಿತ್ತು. ಬಾಂಗ್ಲಾ ಆಟಗಾರರು ಇದ್ದ ಬಸ್ ಮೇಲೆ ಅಟ್ಯಾಕ್ ಆಗಿತ್ತು. ಕೂದಲೆಳೆ ಅಂತರದಲ್ಲಿ ಆಟಗಾರರು ಪ್ರಾಣಾಪಾಯದಿಂದ ಪಾರಾಗಿದ್ರು. ಇದೀಗ ಇದೇ ಇದೇ ತಿಂಗಳಾಂತ್ಯದಲ್ಲಿ 2 ಟೆಸ್ಟ್ ಪಂದ್ಯಗಳು ನಡೆಯಲಿದ್ದು ಬಾಂಗ್ಲಾ ಆಟಗಾರರು ಪಾಕ್​ಗೆ ತೆರಳಬೇಕಾಗಿದೆ. ಹೀಗಾಗಿ ಬಾಂಗ್ಲಾ ಆಟಗಾರರ ಪಾಕಿಸ್ತಾನ ಪ್ರವಾಸದ ವೇಳೆ ತಮ್ಮ ತಂಡಕ್ಕೆ ಭದ್ರತಾ ಸಲಹೆಗಾರರನ್ನು ಒದಗಿಸುವಂತೆ ಪಾಕಿಸ್ತಾನ ಸರ್ಕಾರವನ್ನು ಬಾಂಗ್ಲಾ ಕೇಳಿದೆ. ಇದರೊಂದಿಗೆ ಬಾಂಗ್ಲಾದೇಶ ಮಂಡಳಿಯೂ ಪಾಕಿಸ್ತಾನಕ್ಕೆ ಹೋಗಲು ಹೆದರುತ್ತಿದೆ ಎಂಬ ಸುದ್ದಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ. ನಮಗೂ ಭದ್ರತೆಯ ಬಗ್ಗೆ ತುಂಬಾ ಕಳವಳವಿದೆ. ಆದರೆ ಎಲ್ಲವನ್ನೂ ತಿಳಿದ ಮೇಲೆ ಹಾಗೇ ಭದ್ರತೆಯ ಬಗ್ಗೆ ಅವರಿಂದ ಭರವಸೆ ಪಡೆದ ನಂತರವಷ್ಟೇ ನಾವು ಪ್ರವಾಸವನ್ನು ನಿಗದಿಪಡಿಸುತ್ತೇವೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ಕಾರ್ಯಾಚರಣೆ ಅಧ್ಯಕ್ಷ ಜಲಾಲ್ ಯೂನಸ್ ತಿಳಿಸಿದ್ದಾರೆ. ಈ ಸುದ್ದಿ ದೊಡ್ಡದಾಗುತ್ತಿದ್ದಂತೆ ತಮ್ಮ ದೇಶಕ್ಕೆ ಬರಲೇಬೇಕೆಂದು ಆಗ್ರಹಿಸುವ ಅವಕಾಶವನ್ನು ಪಾಕಿಸ್ತಾನ್ ಕ್ರಿಕೆಟ್​ ಮಂಡಳಿ ಕಳೆದುಕೊಂಡಿದೆ. ಬಾಂಗ್ಲಾದೇಶ ಪಾಕಿಸ್ತಾನ ವಿರುದ್ಧ ಆಗಸ್ಟ್ 21ರಿಂದ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಅದಕ್ಕೂ ಮುನ್ನವೇ ಬಾಂಗ್ಲಾದೇಶ ಭದ್ರತಾ ವ್ಯವಸ್ಥೆ ಕುರಿತು ಕಳವಳ ವ್ಯಕ್ತಪಡಿಸುತ್ತಿರುವುದು ಪಾಕ್​ಗೆ ದೊಡ್ಡ ಆಘಾತವನ್ನುಂಟು ಮಾಡಿದೆ.

ಚಾಂಪಿಯನ್ಸ್ ಟೂರ್ನಿಗಾಗಿ 586 ಕೋಟಿ ಬಜೆಟ್ ಗೆ ಅನುಮೋದನೆ!

ಮತ್ತೊಂದೆಡೆ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಸುಮಾರು 70 ಮಿಲಿಯನ್ ಡಾಲರ್, ಅಂದರೆ ಭಾರತೀಯ ರೂಪಾಯಿಯಲ್ಲಿ 586 ಕೋಟಿ​ ಬಜೆಟ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅನುಮೋದನೆ ನೀಡಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇತೃತ್ವದ ವಿಶ್ವ ಕ್ರಿಕೆಟ್ ಸಂಸ್ಥೆಯ ಹಣಕಾಸು ಇಲಾಖೆ ಮತ್ತು ವಾಣಿಜ್ಯ ಸಮಿತಿಯು ಪಾಕಿಸ್ತಾನ ಕ್ರಿಕೆಟ್ ಮಂಡಳಿ  ಜಂಟಿಯಾಗಿ ಸಿದ್ಧಪಡಿಸಿದ ಬಜೆಟ್ ಅನ್ನು ಪರಿಶೀಲಿಸಿ ಅನುಮೋದಿಸಲಾಗಿದೆ. ಒಟ್ಟು ಬಜೆಟ್ ಸುಮಾರು $70 ಮಿಲಿಯನ್ ಮತ್ತು ಇದರಲ್ಲಿ ಹೆಚ್ಚುವರಿ ವೆಚ್ಚಕ್ಕಾಗಿ ಕೇವಲ $4.5 ಮಿಲಿಯನ್ ಮಾತ್ರ ಮೀಸಲಿಡಲಾಗಿದೆ.  4.5 ಮಿಲಿಯನ್ ಡಾಲರ್ ಮೊತ್ತವು ಪಾಕಿಸ್ತಾನದಿಂದ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ತುಂಬಾ ಸಣ್ಣ ಮೊತ್ತ ಎನ್ನಲಾಗಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಹೈಬ್ರಿಡ್ ಮಾದರಿತಯಲ್ಲಿ ನಡೆಯೋದು ಡೌಟ್ ಎನ್ನಲಾಗ್ತಿದೆ. ಅಲ್ದೇ 2023 ರಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಸ್ಥಳ ಬದಲಾವಣೆ ಮತ್ತು ಹೆಚ್ಚುವರಿ ವೆಚ್ಚಗಳ ಹೊರತಾಗಿಯೂ, ಎಸಿಸಿ ಲಾಭ ಗಳಿಸಿದೆ ಎಂದು ಮೂಲಗಳು ತಿಳಿಸಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳಿಂದ ಮಾತ್ರ ಹೆಚ್ಚು ಲಾಭ ಸಿಕ್ಕಿದೆ. ಹಾಗಾಗಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತ vs ಪಾಕಿಸ್ತಾನ ಪಂದ್ಯಗಳು ಆದಾಯ ದೃಷ್ಟಿಯಿಂದ ಐಸಿಸಿ ಹಾಗೂ ಪಿಸಿಬಿಗೆ ಮಹತ್ವದ್ದಾಗಿದೆ.

ಮಾರ್ಚ್ 1ರಂದು ಭಾರತ ಮತ್ತು ಪಾಕಿಸ್ತಾನ ಫೈಟ್!

ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಶುರುವಾಗಲಿದ್ದು, ಉದ್ಘಾಟನಾ ಪಂದ್ಯವನ್ನು ಕರಾಚಿಯಲ್ಲಿ ಆಯೋಜಿಸಲಾಗುತ್ತಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ಫೆಬ್ರವರಿ 20 ರಂದು ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿಯುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ.  ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್ ಮತ್ತು ನ್ಯೂಜಿಲೆಂಡ್ ತಂಡಗಳಿವೆ. ಹಾಗೇ ಬಿ ಗುಂಪಿನಲ್ಲಿ   ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ್ ತಂಡಗಳಿವೆ. ಮಾರ್ಚ್ 1 ರಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ 11ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಕಣಕ್ಕಿಳಿಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಲಾಹೋರ್​ನ ಗಡ್ಡಾಫಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಹಾಗೆಯೇ ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ.

2008 ರ ಬಳಿಕ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಿಲ್ಲ. ಆದರೆ ಈ ಬಾರಿ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿ ನಡೆಯುತ್ತಿದೆ. ಹೀಗಾಗಿ ಈ ಟೂರ್ನಿಯಲ್ಲಿ ಭಾರತ ಭಾಗವಹಿಸುತ್ತಾ ಅಥವಾ ಬೇರೆ ದೇಶಗಳಲ್ಲಿ ಪಂದ್ಯ ಆಯೋಜನೆ ಮಾಡಲಾಗುತ್ತಾ ಅನ್ನೋದು ಈವರೆಗೂ ಕನ್ಫರ್ಮ್ ಆಗಿಲ್ಲ.  ಅಲ್ದೇ ಐಸಿಸಿ ಟೂರ್ನಿಗಳನ್ನು ಸ್ಥಳಾಂತರಿಸಬೇಕಿದ್ದರೆ ನಿರ್ದಿಷ್ಠ ಕಾರಣಗಳಿರಬೇಕಾಗುತ್ತದೆ. ಇಲ್ಲಿ ಬಿಸಿಸಿಐ ಟೂರ್ನಿಯನ್ನು ಸ್ಥಳಾಂತರಿಸಲು ಸುರಕ್ಷತೆಯ ಕಾರಣಗಳನ್ನು ನೀಡಿದರೂ, ಅದಕ್ಕೆ ಇತರೆ ಕ್ರಿಕೆಟ್ ಮಂಡಳಿಗಳೂ ಕೂಡ ಕೈ ಜೋಡಿಸಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್, ಇಂಗ್ಲೆಂಡ್, ನ್ಯೂಝಿಲೆಂಡ್​ ತಂಡಗಳು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಿದೆ. ಇದೇ ವಾದವನ್ನು ಮುಂದಿಟ್ಟು ಟೂರ್ನಿಯನ್ನು ಸ್ಥಳಾಂತರಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹಿಂದೇಟು ಹಾಕಬಹುದು. ಒಂದ್ಕಡೆ ಪಾಕಿಸ್ತಾನಕ್ಕೆ ಭಾರತ ಹೋಗುತ್ತಾ ಅನ್ನೋದೇ ಇನ್ನೂ ಫೈನಲ್ ಆಗಿಲ್ಲ. ಇದೀಗ ಬಾಂಗ್ಲಾ ಕೂಡ ಭದ್ರತೆಯ ಆತಂಕ ವ್ಯಕ್ತಪಡಿಸಿದೆ. ಹೀಗಾಗಿ ಇದು ಚಾಂಪಿಯನ್ಸ್ ಟ್ರೋಫಿ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅನ್ನೋದೇ ಈಗಿರುವ ಪ್ರಶ್ನೆ.

Shwetha M

Leave a Reply

Your email address will not be published. Required fields are marked *