IPLನ ರೀಟೇನ್ & RTMಗೆ ಟ್ವಿಸ್ಟ್ – ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಬೇಡ್ವಾ?
BCCI & ಮಾಲೀಕರ ಸಭೆಯಲ್ಲಿ ಆಗಿದ್ದೇನು?

IPLನ ರೀಟೇನ್ & RTMಗೆ ಟ್ವಿಸ್ಟ್ – ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಬೇಡ್ವಾ?BCCI & ಮಾಲೀಕರ ಸಭೆಯಲ್ಲಿ ಆಗಿದ್ದೇನು?

ಭಾರತೀಯ ಕ್ರಿಕೆಟ್ ಲೋಕದ ಚಿತ್ತ ಇದೀಗ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ನೆಟ್ಟಿದೆ. ಈ ವರ್ಷದ ಕೊನೆಯಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಸಲ ಒಂದಷ್ಟು ಚೇಂಜಸ್ ಮಾಡ್ಬೇಕು ಅನ್ನೋದು ಫ್ರಾಂಚೈಸಿಗಳ ಡಿಮ್ಯಾಂಡ್ ಆಗಿತ್ತು. ಇದೇ ಕಾರಣಕ್ಕೆ ಬಿಸಿಸಿಐ ಬುಧವಾರ ಐಪಿಎಲ್ ಫ್ರಾಂಚೈಸಿ ಓನರ್​ಗಳ ಜೊತೆ ಸಭೆ ನಡೆಸಿದೆ. ಸಭೆಯಲ್ಲಿ ಫ್ರಾಂಚೈಸಿಗಳ ಮಾಲೀಕರು ಆಕ್ಷನ್​ನಲ್ಲಿ ಏನೆಲ್ಲಾ ಬದಲಾವಣೆ ಮಾಡ್ಬೇಕು? ರೀಟೇನ್ ಮತ್ತು ಆರ್​ಟಿಎಂ ರೂಲ್ಸ್ ಹೇಗೆ ಇರ್ಬೇಕು ಅನ್ನೋ ಬಗ್ಗೆ ತಮ್ಮ ಒಪೀನಿಯನ್ ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ ಮಾಲೀಕರ ನಡುವೆ ವಾಗ್ದಾದ ನಡೆದು ಗಲಾಟೆಗೂ ಕಾರಣವಾಗಿದೆ. ಅಷ್ಟಕ್ಕೂ ಬಿಸಿಸಿಐ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು? ಫೈನಲಿ ಏನೆಲ್ಲಾ ರೂಲ್ಸ್ ಮಾಡಲಾಗಿದೆ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕರೀನಾ ಮಕ್ಕಳಿಗೆ, ಅನಂತ್‌ಗೆ ಈಕೆಯೇ ದಾದಿ – ತೈಮೂರ್ ನಾನಿ ಸಂಬಳ ಇಷ್ಟೊಂದಾ?

ಮುಂದಿನ ವರ್ಷ ನಡೆಯಲಿರುವ 18ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​ಗೆ ಬಿಸಿಸಿಐ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಟೂರ್ನಿ ಆರಂಭಕ್ಕೂ ಮುನ್ನ ಮೇಜರ್ ಬದಲಾವಣೆ ತರುವ ಮೆಗಾ ಹರಾಜು ಹಾಗೂ ಕೆಲ ವಿಚಾರಗಳ ಬಗ್ಗೆ ಚರ್ಚಿಸಲು ಬುಧವಾರ ಬಿಸಿಸಿಐ ತನ್ನ ಪ್ರಧಾನ ಕಚೇರಿಯಲ್ಲಿ ಸಭೆ ಕರೆದಿತ್ತು. ಸಭೆಯಲ್ಲಿ ಐಪಿಎಲ್​ ತಂಡಗಳ ಮಾಲೀಕರು, ಸಹ ಮಾಲೀಕರು ಭಾಗವಹಿಸಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್‌ನ ಶಾರುಖ್ ಖಾನ್, ಸನ್‌ರೈಸರ್ಸ್ ಹೈದರಾಬಾದ್‌ನ ಕಾವ್ಯಾ ಮಾರನ್, ಪಂಜಾಬ್ ಕಿಂಗ್ಸ್‌ನ ನೆಸ್ ವಾಡಿಯಾ, ಲಖನೌ ಸೂಪರ್ ಜೈಂಟ್ಸ್‌ನ ಸಂಜೀವ್ ಗೋಯೆಂಕಾ ಅವರ ಮಗ ಶಾಶ್ವತ್, ಡೆಲ್ಲಿ ಕ್ಯಾಪಿಟಲ್ಸ್‌ನ ಕೆ.ಕೆ.ಗ್ರ್ಯಾಂಡ್ ಮತ್ತು ಪಾರ್ಥ್ ಜಿಂದಾಲ್ ಉಪಸ್ಥಿತರಿದ್ದರು. ಹಾಗೇ ರಾಜಸ್ಥಾನ ರಾಯಲ್ಸ್‌ನ ಮನೋಜ್ ಬದಾಲೆ, ರಂಜಿತ್ ಬಾರ್ಥಕೂರ್, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ರಥಮೇಶ್ ಮಿಶ್ರಾ, ಚೆನ್ನೈ ಸೂಪರ್ ಕಿಂಗ್ಸ್‌ನ ಕಾಸಿ ವಿಶ್ವನಾಥನ್ ಮತ್ತು ರೂಪಾ ಗುರುನಾಥ್, ಗುಜರಾತ್ ಟೈಟಾನ್ಸ್‌ನ ಅಮಿತ್ ಸೋನಿ ಪಾಲ್ಗೊಂಡಿದ್ರು. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಮಾಲೀಕರು ಆನ್‌ಲೈನ್‌ ಮೂಲಕ ಭಾಗವಹಿಸಿದ್ದರು.

ಇಂಪ್ಯಾಕ್ಸ್ ಪ್ಲೇಯರ್ ನಿಯಮದ ಬಗ್ಗೆ ಅಸಮಾಧಾನ!

2024ರ ಟೂರ್ನಿಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಇಂಪ್ಯಾಕ್ಟ್​ ಪ್ಲೇಯರ್ ನಿಯಮದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿಯು ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ವಿರುದ್ಧವಾಗಿದೆ ಎಂದು ಜಿಂದಾಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು. ಇಂಪ್ಯಾಕ್ಟ್​ ಪ್ಲೇಯರ್ ನಿಯಮದ ಬಗ್ಗೆ ಬೇರೆ ಬೇರೆ ಫ್ರಾಂಚೈಸಿಗಳೂ ಕೂಡ ತಮ್ಮ ನಿಲುವನ್ನ ಸ್ಪಷ್ಟಪಡಿಸಿದ್ವು. ಕೆಲವರು ನಿಯಮವನ್ನ ಕಂಟಿನ್ಯೂ ಮಾಡುವಂತೆ ಕೇಳಿದ್ರು. ಯಾಕಂದ್ರೆ ಯುವ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡುತ್ತದೆ ಎಂದು. ಆದ್ರೆ ಇನ್ನೂ ಕೆಲ ಮಾಲೀಕರಿಗೆ ಇದು ಇಷ್ಟ ಆಗಲಿಲ್ಲ. ಯಾಕೆಂದರೆ, ಆಲ್ ರೌಂಡರ್‌ಗಳ ಬೆಳವಣಿಗೆಯ ದೃಷ್ಟಿಯಿಂದ ಇದು ಭಾರತೀಯ ಕ್ರಿಕೆಟ್‌ಗೆ ಹಾನಿಕಾರಕ ಎಂದ್ರು. ಹೀಗಾಗಿ ಅಂತಿಮವಾಗಿ ಯಾವುದೇ ನಿರ್ಧಾರ ಕೈಗೊಳ್ಳೋಕೆ ಸಾದ್ಯ ಆಗ್ಲಿಲ್ಲ.

ಶಾರುಖ್ ಖಾನ್ ಹಾಗೂ ನೆಸ್ ವಾಡಿಯಾ ನಡುವೆ ವಾಕ್ಸಮರ

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಕೆಲ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಆದರೆ ಈ ಬಾರಿ 4 ಆಟಗಾರರ ಬದಲಿಗೆ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕೆಂದು ಕೆಲ ಫ್ರಾಂಚೈಸಿಗಳು ಬೇಡಿಕೆಯಿಟ್ಟಿದ್ವು. ಈ ಬೇಡಿಕೆಗಳ ನಡುವೆ  ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಓನರ್ ಶಾರುಖ್ ಖಾನ್ ಹಾಗೂ ಪಂಜಾಬ್ ಕಿಂಗ್ಸ್ ಸಹ-ಮಾಲೀಕ ನೆಸ್ ವಾಡಿಯಾ ನಡುವೆ ತೀವ್ರ ವಾಗ್ವಾದ ನಡೆದಿದೆ. ಆಟಗಾರರ ರಿಟೈನ್​ ನಿಯಮಕ್ಕೆ ಸಂಬಂಧಿಸಿದಂತೆ ಇಬ್ಬರು ವಾಕ್ಸಮರ ನಡೆಸಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಹೆಚ್ಚಿನ ಆಟಗಾರರ ರಿಟೈನ್​ಗಾಗಿ ಬೇಡಿಕೆಯಿಟ್ಟಿದ್ದು, ಈ ವೇಳೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕಡೆಯಿಂದ ಆಕ್ಷೇಪ ವ್ಯಕ್ತವಾಗಿದೆ. ಇದರಿಂದ ಶಾರುಖ್ ಖಾನ್ ಹಾಗೂ ನೆಸ್ ವಾಡಿಯಾ ನಡುವೆ ವಾಗ್ವಾದ ಉಂಟಾಗಿದ್ದು, ಇಬ್ಬರು ಏರುಧ್ವನಿಯಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಸಿದ್ದಾರೆ. ಹಾಲಿ ಚಾಂಪಿಯನ್ ಕೆಕೆಆರ್ ತಂಡವು ತನ್ನ ಬಹುತೇಕ ಆಟಗಾರರನ್ನ ಟೀಮ್​ನಲ್ಲೇ ಉಳಿಸಿಕೊಳ್ಳೋ ಯೋಜನೆಯಲ್ಲಿದೆ. ಇದೇ ಕಾರಣಕ್ಕೆ ಮೆಗಾ ಹರಾಜಿಗೂ ಮುನ್ನ ಹೆಚ್ಚಿನ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಬಿಸಿಸಿಐಗೆ ಮನವಿ ಮಾಡಿತ್ತು. ಇದಕ್ಕೆ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್​ರೈಸರ್ಸ್ ಹೈದರಾಬಾದ್​ ಫ್ರಾಂಚೈಸಿಗಳು ಬೆಂಬಲ ವ್ಯಕ್ತಪಡಿಸಿದೆ. ಆದರೆ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ ಕೆಲ ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬಾರದೆಂದು ಪಟ್ಟು ಹಿಡಿದಿದ್ದಾರೆ.

ಬ್ರ್ಯಾಂಡಿಂಗ್ ಉಳಿಸಿಕೊಳ್ಳೋಕೆ ಕೊಲ್ಕತ್ತಾ ತಂಡದ ಪ್ಲ್ಯಾನ್!

2024ರ ಐಪಿಎಲ್​ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಕೆಕೆಆರ್ ತಂಡ ಮುಂದಿನ ಸೀಸನ್​ಗೂ ಕೂಡ ಅದೇ ಆಟಗಾರರ ತಂಡ ಉಳಿಸಿಕೊಳ್ಳೋ ಚಿಂತನೆಯಲ್ಲಿದೆ. ಇದೇ ಕಾರಣಕ್ಕೆ ಹೆಚ್ಚಿನ ಆಟಗಾರರ ರೀಟೇನ್​ಗೆ ಅವಕಾಶ ಕೇಳಿದೆ. ಹಾಗೇನಾದ್ರೂ ಹೆಚ್ಚಿನ ಆಟಗಾರರ ರಿಟೈನ್​ಗೆ ಅವಕಾಶ ನೀಡದಿದ್ದರೆ, 8 ಆಟಗಾರರ ಮೇಲೆ ಆರ್​ಟಿಎಂ ಕಾರ್ಡ್ ಬಳಸಲು ಅವಕಾಶ ನೀಡುವಂತೆ ಕೋರಿದೆ. ಆದರೆ ಪಂಜಾಬ್ ಕಿಂಗ್ಸ್​​ 3 ರಿಂದ 4 ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಿದರೆ ಸಾಕು ಎಂದು ವಾದ ಮುಂದಿಟ್ಟಿದೆ. ಕೆಕೆಆರ್ ಸೇರಿದಂತೆ ಕೆಲ ಫ್ರಾಂಚೈಸಿಗಳು ತಮ್ಮ ಬ್ರ್ಯಾಂಡಿಂಗ್ ಅನ್ನು ಉಳಿಸಿಕೊಳ್ಳಲು ಬಹುತೇಕ ಆಟಗಾರರನ್ನು ಉಳಿಸಿಕೊಳ್ಳಲು ಬಯಸುತ್ತಿದೆ. ಆದರೆ ಪಂಜಾಬ್ ಕಿಂಗ್ಸ್​ ಫ್ರಾಂಚೈಸಿ ಈ ಆಯ್ಕೆ ನೀಡಬಾರದೆಂದು ಮನವಿ ಮಾಡಿದ್ದು, ಇದರಿಂದ ಶಾರುಖ್ ಖಾನ್ ಕೋಪಗೊಂಡಿದ್ದಾರೆ. ಕೆಕೆಆರ್ ಫ್ರಾಂಚೈಸಿಯ ಬೇಡಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ತಮ್ಮ ವಾದವನ್ನು ಮುಂದಿಡುತ್ತಿದ್ದಂತೆ ನೆಸ್ ವಾಡಿಯಾ ಅವರೊಂದಿಗೆ ಶಾರುಖ್ ತೀವ್ರ ವಾಗ್ವಾದ ನಡೆಸಿದ್ದಾರೆ. ಇದೇ ವೇಳೆ ಮಧ್ಯೆ ಪ್ರವೇಶಿಸಿದ ಐಪಿಎಲ್ ಗವರ್ನರ್ ಕೌನ್ಸಿಲ್​ನ ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿ ಸಭೆಯನ್ನು ಮುಂದುವರೆಸಿದ್ದಾರೆ.

ಆರ್ ಟಿಎಂ ಕಾರ್ಡ್ ಗೆ ಪಟ್ಟು ಹಿಡಿದ ಮಾಲೀಕರು!

ಐಪಿಎಲ್​ ಮುಖ್ಯಸ್ಥ ಅರುಣ್​ ಧುಮಾಲ್ ಈ ಹಿಂದೆಯೇ ಹೇಳಿದಂತೆ ಪ್ರತಿ ತಂಡಕ್ಕೆ 3 ಅಥವಾ 4 ಆಟಗಾರರನ್ನು ಮಾತ್ರ ರಿಟೇನ್​ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಆದರೆ ಇದಕ್ಕೆ ಫ್ರಾಂಚೈಗಳು ಭಾರೀ ವಿರೋಧ ವ್ಯಕ್ತಪಡಿಸಿವೆ. ಇದು ಮಾತ್ರವಲ್ಲದೆ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ RTM ಅಂದ್ರೆ ರೈಟ್ ಟು ಮ್ಯಾಚ್ ಕಾರ್ಡ್ ಬಳಕೆ ಬಗ್ಗೆಯೂ ಫ್ರಾಂಚೈಸಿ ಡಿಮ್ಯಾಂಡ್ ಮಾಡಿವೆ. 2018ರ ಮೆಗಾ ಹರಾಜಿನಲ್ಲಿ RTMಗೆ ಅವಕಾಶವಿತ್ತು. ಆದರೆ 2022ರಲ್ಲಿ ಲಕ್ನೋ ಮತ್ತು ಗುಜರಾತ್ ಎರಡು ಹೊಸ ತಂಡಗಳು ಸೇರ್ಪಡೆಗೊಂಡಿದ್ದರಿಂದ ಮೆಗಾ ಹರಾಜಿನಲ್ಲಿ ಆರ್​​ಟಿಎಂ ರೂಲ್ಸ್ ಕೈಬಿಡಲಾಗಿತ್ತು, ಇದೀಗ ಮತ್ತೆ ಈ ನಿಯವನ್ನು ಜಾರಿಗೆ ತರಲು ಫ್ರಾಂಚೈಸಿಗಳು ಒಲವು ತೋರಿವೆ. ಅಷ್ಟಕ್ಕೂ ಏನಿದು ಆರ್ ಟಿಎಂ ಕಾರ್ಡ್ ಅನ್ನೋದನ್ನ ನೋಡೋದಾದ್ರೆ, ಆರ್​ಟಿಎಂ ನಿಯಮದಡಿ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನನ್ನ ಹರಾಜಿಗೆ ಬಿಡಬಹುದು. ಈ ವೇಳೆ ಯಾವುದೇ ಫ್ರಾಂಚೈಸಿ ಬಿಡ್ ನಲ್ಲಿ ಭಾಗವಹಿಸಿ ಆತನನ್ನ ಖರೀದಿ ಮಾಡ್ಬೋದು. ಆದ್ರೆ ಹರಾಜಿಗೆ ಬಿಟ್ಟಿದ್ದ ತಂಡಕ್ಕೆ ಆ ಆಟಗಾರರ ಅವಶ್ಯಕತೆ ಇದ್ರೆ ಬೇರೆ ಫ್ರಾಂಚೈಸಿ ಬಿಡ್ ಮಾಡಿದ ಮೊತ್ತಕ್ಕೆ ಆತನನ್ನ ತಾನೇ ಖರೀದಿ ಮಾಡ್ಬೋದು. ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಈ ನಿಯಮದಡಿ ಅವಕಾಶ ನೀಡಲಾಗುತ್ತದೆ. ಇದನ್ನು ಆರ್​ಟಿಎಂ ಎನ್ನಲಾಗುತ್ತದೆ. ಆದ್ರೆ ಈ ಬಾರಿ ಒಂದೇ ಕಾರ್ಡ್​ ಬಳಕೆಗೆ ಅವಕಾಶ ನೀಡುವುದಾಗಿ ಬಿಸಿಸಿಐ ಹೇಳಿದೆ. ಹೆಚ್ಚಿನ ಆರ್​ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಅನ್ನೋದು ಅಧಿಕಾರಿಗಳ ಅಭಿಪ್ರಾಯ. ಐಪಿಎಲ್​ನಲ್ಲಿ ಇದುವರೆಗೆ ವಿರಾಟ್​ ಕೊಹ್ಲಿ (ಆರ್​ಸಿಬಿ), ಜಸ್​ಪ್ರೀತ್​ ಬುಮ್ರಾ(ಮುಂಬೈ) ಮಾತ್ರ ಒಂದೇ ತಂಡದ ಪರ ಆಡಿದ್ದಾರೆ. ಉಳಿದ ಆಟಗಾರರು ಬೇರೆ ಬೇರೆ ಫ್ರಾಂಚೈಸಿ ಪರ ಕನಿಷ್ಠ ಒಂದೆರಡು ವರ್ಷಗಳ ಕಾಲ ಆಡಿದ್ದಾರೆ.

5 ವರ್ಷಗಳಿಗೊಮ್ಮೆ ಮೆಗಾ ಹರಾಜುಗೆ ಮಾಲೀಕರ ಮನವಿ!

ಇದೆಲ್ಲದ್ರ ನಡುವೆ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯನ್ನ ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವಂತೆಯೂ ಕೆಲವು ಫ್ರಾಂಚೈಸಿಗಳು ಮನವಿ ಮಾಡಿವೆ. ಈ ಹಿಂದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತಿತ್ತು. ಒಂದೊಮ್ಮೆ ಈ ಬೇಡಿಕೆಗೆ ಬಿಸಿಸಿಐ ಸಮ್ಮತಿಸಿದರೆ ಮುಂದಿನ ಮೆಗಾ ಹರಾಜು 2029ರಲ್ಲಿ ನಡೆಯಲಿದೆ. ಇದರ ನಡುವೆ ಮಿನಿ ಹರಾಜು ಮಾತ್ರ ನಡೆಯಲಿದೆ. ಇನ್ನು ಕಳೆದ ಆವೃತ್ತಿಯ ಐಪಿಎಲ್ ನಲ್ಲಿ ರನ್ನರ್ ಅಪ್ ಆಗಿದ್ದ ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಒಟ್ಟು ಆರು ಆಟಗಾರರನ್ನು ರೈಟ್ ಟು ಮ್ಯಾಚ್ ಕಾರ್ಡ್ ಅಡಿ ಉಳಿಸಿಕೊಳ್ಳೋಕೆ ಅವಕಾಶ ನೀಡುವಂತೆ ಕೇಳಿದ್ದಾರೆ. ಹಾಗೆಯೇ ಉಳಿಸಿಕೊಂಡಿರುವ ಪಟ್ಟಿಯಲ್ಲಿ ವಿದೇಶಿ ಆಟಗಾರರ ಮೇಲೆ ಯಾವುದೇ ನಿರ್ಬಂಧ ಹೇರಬಾರದು ಎಂದಿದ್ದಾರೆ.

ಇನ್ನು ಸಭೆಯಲ್ಲಿ ನಡೆದ ವಿಷಯಗಳ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಮಾಲೀಕತ್ವದ ಜೆಎಸ್​ಡಬ್ಲ್ಯೂ ಸ್ಪೋರ್ಟ್ಸ್‌ನ ನಿರ್ದೇಶಕ ಪಾರ್ಥ್ ಜಿಂದಾಲ್ ಮಾಹಿತಿ ನೀಡಿದ್ದಾರೆ. ಎಲ್ಲ ವಿಷಯಗಳ ಬಗ್ಗೆ ತಂಡಗಳು ತಮ್ಮ ಅಭಿಪ್ರಾಯಗಳಿಂದ ಹೊರ ಬರ್ತಿಲ್ಲ. ಹೀಗಾಗಿ ಸಭೆಯಿಂದ ಯಾವುದೇ ಫಲಿತಾಂಶ ಹೊರಬರಲಿಲ್ಲ. ಎಲ್ಲ ಮಾಲೀಕರಿಂದ ಅವರ ವಿಭಿನ್ನ ದೃಷ್ಟಿಕೋನಗಳನ್ನು ಆಲಿಸುವ ಸಭೆ ಮಾತ್ರ ಇದಾಗಿತ್ತು. ಬಿಸಿಸಿಐ ಎಲ್ಲವನ್ನೂ ಕೇಳಿದೆ. ಈಗ ಅವರೇ ನಮಗೆ ಎಲ್ಲ ನಿಯಮಗಳನ್ನು ನೀಡುತ್ತಾರೆ. ಆಗಸ್ಟ್ ಅಂತ್ಯದ ವೇಳೆಗೆ ಮುಂದಿನ ಆವೃತ್ತಿಯ ನಿಯಮಗಳು ಅಂತಿಮಗೊಳ್ಳುವ ನಿರೀಕ್ಷೆ ಇದೆ. ಇದೇ ವೇಳೆ, ಮೆಗಾ ಹರಾಜಿನ ಮೊದಲು ಉಳಿಸಿಕೊಳ್ಳಲು ಬಯಸುವ ಆಟಗಾರರ ಸಂಖ್ಯೆಯ ವಿಷಯ ತಂಡಗಳ ನಡುವೆ ಯಾವುದೇ ಒಮ್ಮತ ಮೂಡಿಲ್ಲ. ಕೆಲ ತಂಡಗಳಿಗೆ 8-10 ಆಟಗಾರರು ಬೇಕು. ಮತ್ತೆ ಕೆಲ ತಂಡಗಳಿಗೆ ನಾಲ್ವರು, ಇನ್ನೂ ಕೆಲ ತಂಡಗಳಿಗೆ ಆರು ಆಟಗಾರರು ಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಇದೆಲ್ಲವೂ ಇನ್ನೂ ಚರ್ಚೆಯಲ್ಲಿದೆ ಎಂದಿದ್ದಾರೆ. ಮತ್ತೊಂದೆಡೆ, ಐಪಿಎಲ್‌ನಲ್ಲಿ ಹರಾಜು ಮಾಡಬೇಕೇ ಬೇಡ್ವಾ ಅನ್ನೋ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದಿರುವ ಡೆಲ್ಲಿ ಕ್ಯಾಪಿಟಲ್ಸ್​ನ ಪಾರ್ಥ್ ಜಿಂದಾಲ್, ಹರಾಜು ಕುರಿತ ವಿಷಯದ ಬಗ್ಗೆ ಕೇಳಿದ ಪ್ರಶ್ನೆಗೆ ನನಗೆ ಆಶ್ಚರ್ಯವಾಯಿತು. ಕೆಲವರು ಮೆಗಾ ಹರಾಜು ಮಾಡಬಾರದು. ಸಣ್ಣ ಹರಾಜುಗಳು ಮಾತ್ರ ಇರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಹರಾಜಿಗೆ ವಿರುದ್ಧವಾಗಿಲ್ಲ ಎಂದಿದ್ದಾರೆ.

ಒಟ್ನಲ್ಲಿ ಐಪಿಎಲ್ ಫ್ರಾಂಚೈಸಿ ಮಾಲೀಕರ ಜೊತೆಗಿನ ಸಭೆಯಲ್ಲಿ ಮೆಗಾ ಹರಾಜು ಪ್ರಕ್ರಿಯೆ ಮತ್ತು ಇಂಪ್ಯಾಕ್ಟ್​ ಪ್ಲೇಯರ್ ನಿಯಮದ ಬಗ್ಗೆಯೇ ಹೆಚ್ಚು ಚರ್ಚೆ ನಡೆಸಲಾಗಿದೆ. ಆದ್ರೆ ಚರ್ಚೆ ವೇಳೆ ತಂಡಗಳ ನಡುವೆಯೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ, ನಿಯಮಗಳ ಕುರಿತ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹೊಣೆಯನ್ನು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಗೆ ವಹಿಸಲಾಗಿದೆ. ಇನ್ನು ಸಭೆ ಬಳಿಕ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ,ಮುಂದಿನ ಐಪಿಎಲ್​ನಲ್ಲಿ ಒಂದು ರೈಟ್ ಟು ಮ್ಯಾಚ್ ಕಾರ್ಡ್‌ನೊಂದಿಗೆ ಐದಕ್ಕಿಂತ ಹೆಚ್ಚು ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶ ನೀಡುವ ಸಾಧ್ಯತೆ ಇಲ್ಲ. ಆರ್‌ಟಿಎಂ ಕಾರ್ಡ್ ಫ್ರಾಂಚೈಸಿಗೆ ಹಿಂದಿನ ಋತುವಿನ ತಮ್ಮ ತಂಡದ ಆಟಗಾರನ ಅಂತಿಮ ಬಿಡ್ಅನ್ನು ಹೊಂದಿಸಲು ಅವಕಾಶವನ್ನು ನೀಡುತ್ತಿತ್ತು. ಸಭೆಯಲ್ಲಿ ಚರ್ಚಿಸಿದ ಎಲ್ಲ ಅಂಶಗಳ ಬಗ್ಗೆ ಮಂಡಳಿಯು ಶೀಘ್ರದಲ್ಲೇ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ಸ್ಪಪ್ಟಪಡಿಸಿದ್ದಾರೆ. ಒಟ್ನಲ್ಲಿ 2025ರ ಐಪಿಎಲ್​ಗೆ ಮೊದಲ ಹೆಜ್ಜೆ ಇಟ್ಟಿರೋ ಬಿಸಿಸಿಐ ಮಾಲೀಕರ ಡಿಮ್ಯಾಂಡ್ಸ್ ಏನು ಅನ್ನೋದನ್ನ ಕೇಳಿದೆ. ಸೋ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ತಾರೆ ಅನ್ನೋದೇ ಈಗಿರುವ ಪ್ರಶ್ನೆ.

Shwetha M

Leave a Reply

Your email address will not be published. Required fields are marked *