ರೋಹನ್ ಬೋಪಣ್ಣ ಟೆನ್ನಿಸ್‌ಗೆ ವಿದಾಯ – ಕೊಡಗಿನ ಕಲಿಯ 22 ವರ್ಷಗಳ ಜರ್ನಿ ಹೇಗಿತ್ತು?

ರೋಹನ್ ಬೋಪಣ್ಣ ಟೆನ್ನಿಸ್‌ಗೆ ವಿದಾಯ – ಕೊಡಗಿನ ಕಲಿಯ 22 ವರ್ಷಗಳ ಜರ್ನಿ ಹೇಗಿತ್ತು?

ರೋಹನ್‌ ಬೋಪಣ್ಣ.. ಟೆನಿಸ್‌ ಲೋಕದ ದಿಗ್ಗಜ ಆಟಗಾರ.. ಇದೀಗ 22 ವರ್ಷಗಳ  ಟೆನಿಸ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಹೌದು, ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 2024ರ ಸಾಲಿನ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ವಿಶ್ವದ ಮಾಜಿ ನಂ.1 ಡಬಲ್ಸ್‌ ಆಟಗಾರ ರೋಹನ್ ಬೋಪಣ್ಣ ಮತ್ತು ಎನ್‌ ಶ್ರೀರಾಮ್‌ ಬಾಲಾಜಿ ಪುರುಷರ ಡಬಲ್ಸ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ನೇರ ಸೆಟ್‌ಗಳ ಅಂತರದಲ್ಲಿ ಸೋತು ಸ್ಪರ್ಧೆಯಿಂದ ಹೊರಬಿದ್ದಾರೆ. ಈ ಬೆನ್ನಲ್ಲೇ ರೋಹನ್ ಬೋಪಣ್ಣ ನಿವೃತ್ತಿ ಘೋಷಿಸಿದ್ದಾರೆ. ರೋಹನ್‌ ಬೋಪಣ್ಣ ಟೆನಿಸ್‌ ಜರ್ನಿ ಬಗ್ಗೆ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RCBಯಿಂದ ಮ್ಯಾಕ್ಸಿಗೆ ಗೇಟ್ ಪಾಸ್ – ₹11 ಕೋಟಿ.. 10 ಪಂದ್ಯ.. 52 ರನ್!

ಕೊಡಗಿನ ಕಲಿ ರೋಹನ್‌ ಬೋಪಣ್ಣ 2024ರ ಸಾಲಿನ ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಪದಕ ಗೆದ್ದ ಬಳಿಕ ನಿವೃತ್ತಿ ಘೋಷಣೆ ಮಾಡ್ಬೇಕು ಎಂಬ ಲೆಕ್ಕಾಚಾರದಲ್ಲಿ ಇದ್ರು.. ಆದ್ರೆ ಅವರ ಲೆಕ್ಕಾಚಾರ ಎಲ್ಲವೂ ಉಲ್ಟಾ ಆಗಿತ್ತು.. ಯಾಕಂದ್ರೆ 2024ರ ಸಾಲಿನ ಒಲಿಂಪಿಕ್ಸ್‌ ಕ್ರೀಡಾಕೂಟದ ಪುರುಷರ ಡಬಲ್ಸ್‌ ಸ್ಪರ್ಧೆಯ ಮೊದಲ ಪಂದ್ಯದಲ್ಲೇ ಆಘಾತಕಾರಿ ಸೋಲುಂಡಿದ್ದಾರೆ. ಜುಲೈ 28ರ ಭಾನುವಾರ ನಡೆದ ಡಬಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲಿ ಫ್ರೆಂಚ್ ಜೋಡಿ ಗೇಲ್ ಮೊನ್ಫಿಲ್ಸ್ ಮತ್ತು ಎಡ್ವರ್ಡ್ ರೋಜರ್-ವಾಸೆಲಿನ್ ವಿರುದ್ಧ ನಡೆದ ಪಂದ್ಯದಲ್ಲಿ ಬೋಪಣ್ಣ ಮತ್ತು ಎನ್. ಶ್ರೀರಾಮ್ ಬಾಲಾಜಿ ಜೋಡಿ 5-7, 2-6 ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ಇದರೊಂದಿಗೆ 2026 ರಲ್ಲಿ ಜಪಾನ್‌ ಆತಿಥ್ಯದಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ರೋಹನ್ ಪಾಲ್ಗೊಳ್ಳದಂತ್ತಾಗಿದೆ. ಸೋಲಿನ ಕಹಿ ಉಣ್ಣುತ್ತಿದ್ದಂತೆ ರೋಹನ್‌ ಟೆನಿಸ್‌ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ರೋಹನ್ ಬೋಪಣ್ಣ ಇನ್ಮುಂದೆ ಭಾರತವನ್ನು ಪ್ರತಿನಿಧಿಸಿ ಯಾವುದೇ ಪಂದ್ಯಗಳನ್ನು ಆಡುವುದಿಲ್ಲ. ಆದರೆ, ವೃತ್ತಿಪರವಾಗಿ ಗ್ರ್ಯಾಂಡ್ ಸ್ಲ್ಯಾಮ್‌ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರೋಹನ್‌ ಬೋಪಣ್ಣ ಟೆನಿಸ್‌ ಜರ್ನಿ ರೋಚಕವಾಗಿದ್ದು. ತಮ್ಮ 22 ನೇ ವಯಸ್ಸಿನಲ್ಲಿ ಟೆನಿಸ್‌ ಅನ್ನೇ ವೃತ್ತಿಯನ್ನಾಗಿ ತೆಗೆದುಕೊಂಡ್ರು. ಆರಂಭದಲ್ಲಿ ಸಿಂಗಲ್ಸ್‌ನಲ್ಲಿ ಆಡ್ತಿದ್ರು. ಆದ್ರೆ ಹೆಚ್ಚಿನ ಭಾರತೀಯ ಆಟಗಾರರಂತೆ ಸಿಂಗಲ್ಸ್‌ನಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ನಂತರ ಡಬಲ್ಸ್​ನತ್ತ ಒಲವು ತೋರಿದರು. 2002 ರಿಂದ ಅಂತಾರಾಷ್ಟ್ರೀಯ ಟೆನಿಸ್​ಗೆ ಪದಾರ್ಪಣೆ ಮಾಡಿದ್ರು.. ಅಂದಿನಿಂದ ಇಂದಿನ ವರೆಗೂ ಭಾರತವನ್ನ ಪ್ರತಿನಿಧಿಸುತ್ತಾ ಬಂದಿದ್ದಾರೆ.  ಕಳೆದ ಎರಡು ದಶಕಗಳಲ್ಲಿ, ಬೋಪಣ್ಣ ಸಾವಿರಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಒಟ್ಟು 25 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಸಾನಿಯಾ ಮಿರ್ಜಾ ಜೊತೆಗೂಡಿ ಮಿಶ್ರ ಡಬಲ್ಸ್​ನಲ್ಲಿ ನಾಲ್ಕನೇ ಸ್ಥಾನ ಪಡೆದು ಪದಕ ಗೆಲ್ಲಲು ವಿಫಲರಾಗಿದ್ದರು. ಆದ್ರೂ ಕೂಡ ಅವರ ಸಾಧನೆ ಭಾರತೀಯರ ಹೆಮ್ಮೆಗೆ ಕಾರಣವಾಗಿತ್ತು.

ರೋಹನ್ ಬೋಪಣ್ಣ ಗ್ರ್ಯಾಂಡ್‌ ಸ್ಲ್ಯಾಮ್‌ ಡಬಲ್ಸ್‌  ನಲ್ಲೂ ಸಾಕಷ್ಟು ದಾಖಲೆ ಬರ್ದಿದ್ದಾರೆ. ಅಮೆರಿಕ ಓಪನ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ 2010 ಮತ್ತು 2023ರಲ್ಲಿ ಫೈನಲ್‌ ತಲುಪಿ ಎರಡನೇ ಸ್ಥಾನ ಪಡೆದಿದ್ದಾರೆ. ಇನ್ನು 2024ರಲ್ಲಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಸೆಮಿಫೈನಲ್‌ ತಲುಪಿದ್ರು. 2022ರ ಫ್ರೆಂಚ್‌ ಓಪನ್‌ ಟೂರ್ನಿಯ ಡಬಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದರು. ಪ್ರತಿಷ್ಠಿತ ವಿಂಬಲ್ಡನ್‌ ಟೂರ್ನಿಯ ಡಬಲ್ಸ್‌ನಲ್ಲಿ 2013, 2015, 2023ರ ಆವೃತ್ತಿಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. 2024ರಲ್ಲಿ, ಅವರಿಗೆ ಮತ್ತೊಂದು ಅವಕಾಶ ಇದ್ದರೂ ಫ್ರೆಂಚ್ ಎದುರಾಳಿಗಳ ವಿರುದ್ದ ಸೆಣಸಾಡುವಲ್ಲಿ ಬೋಪಣ್ಣ ವೈಫಲ್ಯ ಕಂಡಿದ್ದಾರೆ.

ಗ್ರ್ಯಾಂಡ್‌ ಸ್ಲ್ಯಾಮ್‌ ಮಿಶ್ರ ಡಬಲ್ಸ್‌ ನಲ್ಲೂ ರೋಹನ್‌ ಉತ್ತಮ ಸಾಧನೆ ಮಾಡಿದ್ದಾರೆ. 2018 ಮತ್ತು 2023ರ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲ್ಯಾಮ್‌ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ ಸೆಮಿಫೈನಲ್‌ ತಲುಪಿದ್ದರು. 2017ರ ಫ್ರೆಂಚ್‌ ಓಪನ್‌ ಗ್ರ್ಯಾಂಡ್‌ ಸ್ಲ್ಯಾಮ್‌ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಟ್ರೋಫಿ ಗೆದ್ದಿದ್ದರು.  ಇನ್ನು ವಿಂಬಲ್ಡನ್‌ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ 2011, 2012, 2013 ಮತ್ತು 2017ರಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದರು. ಅಮೆರಿಕ ಓಪನ್ ಟೂರ್ನಿಯ  2015ರ ಆವೃತ್ತಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. 2017ರಲ್ಲಿ ಅವರು ಗೇಬ್ರಿಯೆಲಾ  ಅವರೊಂದಿಗೆ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಇನ್ನು ರೋಹನ್‌ ಬೋಪಣ್ಣ ಅವರು ಕಳೆದ ವರ್ಷ ಡೇವಿಸ್‌ ಕಪ್‌ಗೂ ವಿದಾಯ ಹೇಳಿದ್ದಾರೆ. ಸುಮಾರು ಎರಡು ದಶಕಗಳಿಂದ ಡೇವಿಸ್‌ ಕಪ್‌ ಪಂದ್ಯಗಳಲ್ಲಿ ಭಾಗವಸುತ್ತಿದ್ದರು. ಈ ವರೆಗೂ 33  ಡೇವಿಸ್‌ ಕಪ್‌ ಪಂದ್ಯಗಳಲ್ಲಿ 23ರಲ್ಲಿ ಗೆಲುವು ಸಾಧಿಸಿದ್ರು. ಇದರಲ್ಲಿ 10 ಸಿಂಗಲ್ಸ್‌ ವಿಭಾಗದಲ್ಲಿ ಸಿಕ್ಕಿವೆ ಎಂಬುದು ವಿಶೇಷ.

ಕಳೆದ ಜನವರಿಯಲ್ಲಿ ರೋಹನ್ ಬೋಪಣ್ಣ ಆಸ್ಟ್ರೇಲಿಯಾ ಓಪನ್‌ ಡಬಲ್ಸ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದರು. ಬೋಪಣ್ಣ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆಲ್ಲೋ ಮೂಲಕ ಅತ್ಯಂತ ಹಿರಿಯ ವಿಶ್ವದ ನಂ.1 ಮತ್ತು ಅತ್ಯಂತ ಹಿರಿಯ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು.. ರೋಹನ್ ಬೋಪಣ್ಣ ಅವರು 2024ರ ಏಪ್ರಿಲ್‌ನಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

43 ವರ್ಷದ ಬೋಪಣ್ಣ ಟೆನಿಸ್‌ ಗೆ ವಿದಾಯ ಹೇಳುತ್ತಿದ್ದಂತೆ ಭಾವುಕರಾಗಿ ಮಾತನಾಡಿದ್ದಾರೆ. ಇದು ಖಂಡಿತವಾಗಿಯೂ ದೇಶಕ್ಕಾಗಿ ನನ್ನ ಕೊನೆಯ ಸ್ಪರ್ಧೆಯಾಗಿದೆ. ನಾನು ಎಲ್ಲಿದ್ದೇನೆ ಎಂಬುದನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ  ಈಗ, ನಾನು ಟೆನಿಸ್ ಸರ್ಕೀಟ್​ನಿಂದ ನಿರ್ಗಮಿಸಲಿದ್ದೇನೆ. ನನಗೆ ಸಿಕ್ಕಿರುವ ಅವಕಾಶ ದೊಡ್ಡ ಬೋನಸ್ ಆಗಿದೆ. ನಾನು ಎರಡು ದಶಕಗಳ ಕಾಲ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. 2002ರಿಂದ ಅಂತಾರಾಷ್ಟ್ರೀಯ ಟೆನಿಸ್​ಗೆ ಪದಾರ್ಪಣೆ ಮಾಡಿ, 22 ವರ್ಷಗಳ ನಂತರವೂ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ. ಅದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಈ ಪ್ರಯಾಣದಲ್ಲಿ ಅನೇಕ ತ್ಯಾಗಗಳನ್ನು ಮಾಡಿದ ತನ್ನ ಪತ್ನಿ ಸುಪ್ರಿಯಾ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ಬೋಪಣ್ಣ ಟೆನಿಸ್‌ಗೆ ವಿದಾಯ ಹೇಳಿರುವುದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಇನ್ನು ಮುಂದೆ ರೋಹನ್‌ ಟೆನಿಸ್‌ ಅಂಗಳದಲ್ಲಿ ಕಣ್ತುಂಬಿಕೊಳ್ಳಲು ಸಾಧ್ಯ ಆಗೋದಿಲ್ಲ. ಇನ್ಮುಂದೆ ಅವರು ಟೆನಿಸ್ ಅಂಗಳದಲ್ಲಿ ಕಾಣಿಸಿಕೊಂಡರೂ, ಒಲಿಂಪಿಕ್ಸ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸುವುದಿಲ್ಲ.

Shwetha M

Leave a Reply

Your email address will not be published. Required fields are marked *