RCBಯಿಂದ ಮ್ಯಾಕ್ಸಿಗೆ ಗೇಟ್ ಪಾಸ್ – ₹11 ಕೋಟಿ.. 10 ಪಂದ್ಯ.. 52 ರನ್!
ಫಾಫ್ ಗೆ ಕೊಕ್.. ಕನ್ನಡಿಗನೇ ಕ್ಯಾಪ್ಟನ್! 

RCBಯಿಂದ ಮ್ಯಾಕ್ಸಿಗೆ ಗೇಟ್ ಪಾಸ್ – ₹11 ಕೋಟಿ.. 10 ಪಂದ್ಯ.. 52 ರನ್!ಫಾಫ್ ಗೆ ಕೊಕ್.. ಕನ್ನಡಿಗನೇ ಕ್ಯಾಪ್ಟನ್! 

ಒಂದಲ್ಲ ಎರಡಲ್ಲ. ಬರೋಬ್ಬರಿ 17 ವರ್ಷ. ಕೋಟ್ಯಂತರ ಅಭಿಮಾನಿಗಳು. ಜಗತ್ತನ್ನೇ ಗೆದ್ದ ಆಟಗಾರರು ಇದ್ರೂ ಕೂಡ ಆರ್​ಸಿಬಿಗೆ ಒಂದೇ ಒಂದು ಟ್ರೋಫಿ ಗೆಲ್ಲೋಕೆ ಆಗಿಲ್ಲ. ಫಿನಾಲೆವರೆಗೂ ಹೋಗಿ ಕೊನೇ ಗಳಿಗೆಯಲ್ಲಿ ಚಾಂಪಿಯನ್ ಪಟ್ಟ ಮಿಸ್ ಮಾಡಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುತ್ತಿಲ್ಲ ಅನ್ನೋದಕ್ಕಿಂತ ಕಿಂಗ್ ವಿರಾಟ್ ಕೊಹ್ಲಿಯಂಥ ದಿಗ್ಗಜ ಆಟಗಾರ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸೋದನ್ನ ನೋಡೋಕೆ ಆಗ್ತಿಲ್ವಲ್ಲ ಅನ್ನೋ ನೋವು ಅಭಿಮಾನಿಗಳನ್ನ ಕಾಡ್ತಿದೆ. ಸೋ 18ನೇ ಸೀಸನ್​ನಲ್ಲಾದ್ರೂ ಚಾಂಪಿಯನ್ ಪಟ್ಟಕ್ಕೇರಬೇಕು ಅಂತಾ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಲು ಆರ್​ಸಿಬಿ ಫ್ರಾಂಚೈಸಿ ಈಗಿನಿಂದಲೇ ತಯಾರಿ ಆರಂಭಿಸಿದೆ. ತಂಡಕ್ಕೆ ಹೊರೆಯಾಗಿರೋ ಸ್ಟಾರ್ ಆಟಗಾರರಿಗೆ ಗೇಟ್​ಪಾಸ್ ಕೊಡೋಕೆ ಮುಂದಾಗಿದೆ. ಇದ್ರ ನಡುವೆ ಗ್ಲೆನ್ ಮ್ಯಾಕ್ಸ್​ವೆಲ್ ಬೆಂಗಳೂರು ತಂಡಕ್ಕೆ ಬಿಗ್ ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ಬೆಂಗಳೂರು ತಂಡ ಯಾವೆಲ್ಲಾ ಆಟಗಾರರಿಗೆ ಕೊಕ್ ಕೊಡಲು ಮುಂದಾಗಿದೆ? ಮುಂದಿನ ವರ್ಷ ಮ್ಯಾಕ್ಸಿ ಆರ್​ಸಿಬಿ ಪರ ಆಡಲ್ವಾ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕಾಡು ಸೇರ್ಕೊಂಡ ಆನೆ, ಸಿಂಹಿಣಿ – ನುಡಿದಂತೆ ನಡೆದ  ಪ್ರತಾಪ್‌

2025ರ ಇಂಡಿಯನ್​ ಪ್ರೀಮಿಯರ್​ ಲೀಗ್ ಅಂದ್ರೆ ಇಡೀ ಕ್ರೀಡಾ ಜಗತ್ತೇ ಕಾಯುತ್ತಿರುತ್ತೆ. ಈ ವರ್ಷದ ಕೊನೆಗೆ 2025ರ ಐಪಿಎಲ್​ ಮೆಗಾ ಆಕ್ಷನ್​ ನಡೆಯಲಿದೆ. ಇದಕ್ಕೂ ಮುನ್ನವೇ ಐಪಿಎಲ್​ ತಂಡಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್​ ಮಾಡಿಕೊಳ್ಳಬಹುದು. ಬಳಿಕ ಉಳಿದ ಆಟಗಾರರನ್ನು ಆಕ್ಷನ್​ಗಾಗಿ ಬಿಡಲೇಬೇಕಿದೆ. ಆದ್ರೆ ಒಂದು ತಂಡದಲ್ಲಿ ಎಷ್ಟು ಜನರನ್ನು ರಿಟೇನ್ ಮಾಡಿಕೊಳ್ಳಬೇಕು ಅನ್ನೋದೇ ತಲೆನೋವಾಗಿದೆ. ಹೀಗಾಗಿ ಜುಲೈ 31ರಂದು ಎಲ್ಲಾ ಐಪಿಎಲ್ ತಂಡಗಳ ಜತೆ ಬಿಸಿಸಿಐ ಸಭೆ ನಡೆಸಲಿದೆ. ಇನ್ನು, ಆರ್​​ಸಿಬಿ ತಂಡವು ಸ್ಟಾರ್ ಐಕಾನ್ ವಿರಾಟ್​ ಕೊಹ್ಲಿಯವ್ರನ್ನ ಹೊರತುಪಡಿಸಿ ಮತ್ಯಾರನ್ನ ರೀಟೈನ್​ ಮಾಡಿಕೊಳ್ಳಲಿದೆ ಅನ್ನೋದಕ್ಕೆ ಇದುವರೆಗೂ ಸ್ಪಷ್ಟನೆ ನೀಡಿಲ್ಲ. ರೀಟೈನ್​​​ ಲಿಸ್ಟ್​ನಲ್ಲಿ ಕೊಹ್ಲಿ ಜೊತೆಗೆ ವಿಲ್​ ಜಾಕ್ಸ್, ಮೊಹಮ್ಮದ್​ ಸಿರಾಜ್, ರಜತ್ ಪಟೀದಾರ್​ ಹೆಸರಿದೆ ಎಂದು ಹೇಳಲಾಗುತ್ತಿದೆ. ಇದೀಗ 2025ರ ಐಪಿಎಲ್​ಗೆ ಆಸಿಸ್ ಬ್ಯಾಟರ್ ಬೆಂಗಳೂರು ತಂಡದ ಪರ ಕಣಕ್ಕಿಳಿಯೋದು ಅನುಮಾನವಾಗಿದೆ. 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಮ್ಯಾಕ್ಸ್​ವೆಲ್​ ಆರ್​​ಸಿಬಿ ಫ್ಯಾನ್ಸ್​ಗೆ ಶಾಕ್ ಕೊಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖಾತೆಯನ್ನ ಇನ್ಸ್​​ಸ್ಟಾಗ್ರಾಮ್​ನಲ್ಲಿ ಅನ್ ಫಾಲೋ ಮಾಡಿದ್ದಾರೆ.  ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪ್ರಮುಖ ಸ್ಫೋಟಕ ಬ್ಯಾಟರ್ ಎನಿಸಿಕೊಂಡಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಬೆಂಗಳೂರು ತಂಡದ ಪರ ಮೂರು ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದ್ರೆ ಅದ್ಯಾಕೋ 2024ರ ಸೀಸನ್​ನಲ್ಲಿ ಮಾತ್ರ ಮ್ಯಾಕ್ಸಿ ಬ್ಯಾಟ್ ಸದ್ದು ಮಾಡ್ಲೇ ಇಲ್ಲ. ಅವ್ರ ಪ್ರದರ್ಶನ ಕ್ರೀಸ್​ಗೆ ಬರೋದು ಹೋಗೋದು ಅಂದ್ರೆ ಒಂಥರಾ ಪೆವಿಲಿಯನ್ ಪರೇಡ್ ರೀತಿಯೇ ಇತ್ತು. ಇದೇ ಕಾರಣಕ್ಕೆ ಕೆಲ ಪಂದ್ಯಗಳಿಂದ ಹೊರಗೂ ಉಳಿಯಬೇಕಾಗಿತ್ತು.

RCB ಖಾತೆ ಅನ್ ಫಾಲೋ ಮಾಡಿದ ಮ್ಯಾಕ್ಸ್ ವೆಲ್!

ಸೀಸನ್ 17 ಐಪಿಎಲ್​ನಲ್ಲಿ ಮ್ಯಾಕ್ಸ್​ವೆಲ್ ಕಂಪ್ಲೀಟ್ ಫೇಲ್ಯೂರ್ ಆಗಿದ್ರು. ಕಳಪೆ ಪ್ರದರ್ಶನದಂದಾಗಿ   ಸಾಕಷ್ಟು ಟೀಕೆಗಳನ್ನೂ ಎದುರಿಸಿದ್ದರು. ಆರ್​ಸಿಬಿ ಫ್ಯಾನ್ಸ್​ಗೆ ಮ್ಯಾಕ್ಸಿ ಪ್ರದರ್ಶನದ ಬಗ್ಗೆ ಬೇಸರ ಇದ್ರೂ ಕೂಡ ಭರವಸೆ ಮಾತ್ರ ಕಮ್ಮಿ ಆಗಿರಲಿಲ್ಲ. ಈ ಸೀಸನ್​ಗೆ ಅಲ್ಲದಿದ್ದರೂ ಮುಂದಿನ ಸೀಸನ್​ನಲ್ಲಿ ಮ್ಯಾಕ್ಸಿ ಉತ್ತಮ ಪ್ರದರ್ಶನ ನೀಡ್ತಾರೆ ಅನ್ನೋ ಕಾನ್ಫಿಡೆನ್ಸ್​ನಲ್ಲಿದ್ರು. ಬಟ್ ಈಗ ಮ್ಯಾಕ್ಸ್​ವೆಲ್​ ಆರ್​​ಸಿಬಿ ಖಾತೆಯನ್ನು ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿದ್ದಾರೆ. ಮ್ಯಾಕ್ಸ್​ವೆಲ್​ ಅವರನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ರಿಟೇನ್ ಮಾಡಿಕೊಳ್ಳಲು ಬಯಸಿಲ್ಲ. ಈ ಬಗ್ಗೆ ಮ್ಯಾಕ್ಸಿಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ಆಸ್ಟ್ರೇಲಿಯ ತಂಡದ ಸ್ಟಾರ್ ಬ್ಯಾಟರ್ ಮ್ಯಾಕ್ಸ್​ವೆಲ್ ಅವ್ರನ್ನ ಬೆಂಗಳೂರು ತಂಡ 2021ರಲ್ಲಿ 14.25 ಕೋಟಿ ಮೊತ್ತಕ್ಕೆ ಖರೀದಿ ಮಾಡಿತ್ತು. ನಂತರದ ವರ್ಷಗಳಲ್ಲಿ 11 ಕೋಟಿ ರೂಪಾಯಿಗೆ ರಿಟೇನ್ ಮಾಡಿಕೊಂಡಿತ್ತು. ಮ್ಯಾಕ್ಸ್​ವೆಲ್​ ಆರ್​ಸಿಬಿ ಪರ 2021 ರಲ್ಲಿ 513 ರನ್ ಗಳಿಸಿದ್ದರು. 2022ರಲ್ಲಿ 301 ಮತ್ತು 2023ರಲ್ಲಿ 400 ರನ್ ಗಳಿಸಿ ಉತ್ತಮ ಪ್ರದರ್ಶನ ತೋರಿದ್ದರು. ಆದರೆ 2024ರಲ್ಲಿ ಮಾತ್ರ ಬ್ಯಾಕ್ ಟು ಬ್ಯಾಕ್ ಡಕ್ ಔಟ್ ಆಗುವ ಮೂಲಕ ತುಂಬಾನೇ ನಿರಾಸೆ ಮೂಡಿಸಿದ್ರು.

10 ಪಂದ್ಯ.. 52 ರನ್.. ಕೈ ಕೊಟ್ಟ ಮ್ಯಾಕ್ಸ್ ವೆಲ್!

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮ್ಯಾಕ್ಸ್​ವೆಲ್ ತೀರಾ ಕಳಪೆ ಪ್ರದರ್ಶನ ನೀಡಿದ್ರು. ಒಂದು ಮ್ಯಾಚ್​​ನಲ್ಲೂ 30ಕ್ಕಿಂತಲೂ ಹೆಚ್ಚು ರನ್​ಗಳನ್ನ​ ಮ್ಯಾಕ್ಸಿ ಗಳಿಸಲೇ ಇಲ್ಲ. ಇದು ತಂಡದ ಫಲಿತಾಂಶಗಳ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರಿತ್ತು. ಟೂರ್ನಿಯ ಆರಂಭದಿಂದ ಶುರುವಾದ ಮ್ಯಾಕ್ಸಿ ವೈಫಲ್ಯವು ಕ್ವಾಲಿಫೈಯರ್ ಮ್ಯಾಚ್​ವರೆಗೂ ಕಂಟಿನ್ಯೂ ಆಗಿತ್ತು. ಅದರಲ್ಲೂ ನಿರ್ಣಾಯಕ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಗೋಲ್ಡನ್ ಡಕ್​ಗೆ ಔಟಾಗಿದ್ದರು. ಬ್ಯಾಟಿಂಗ್​ನಲ್ಲಿ ವಿಫಲರಾಗಿದ್ದ ಮ್ಯಾಕ್ಸ್​ವೆಲ್ ಫೀಲ್ಡಿಂಗ್​ನಲ್ಲೂ ಆರ್​ಸಿಬಿ ಪಾಲಿಗೆ ದುಬಾರಿಯಾಗಿದ್ರು. ಅಲ್ದೇ ಕಳೆದ ಐಪಿಎಲ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಕೊಡುಗೆ ಕೇವಲ 52 ರನ್​ಗಳು. 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಮ್ಯಾಕ್ಸಿ 5.78 ಸರಾಸರಿಯಂತೆ ಕೇವಲ 52 ರನ್ ಮಾತ್ರ ಕಲೆಹಾಕಿದ್ರು. ಈ ಪೈಕಿ ಹೈಎಸ್ಟ್​ ಸ್ಕೋರ್​​ 28 ರನ್. ಅದರಲ್ಲೂ ಒಂದೇ ಸೀಸನ್​ನಲ್ಲಿ 5 ಬಾರಿ ಸೊನ್ನೆಗೆ ಔಟಾಗಿದ್ದಾರೆ ಎಂದರೆ ನಂಬಲೇಬೇಕು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಗ್ಲೆನ್ ಮ್ಯಾಕ್ಸ್​ವೆಲ್​ಗಾಗಿ ಆರ್​ಸಿಬಿ ನೀಡುತ್ತಿರುವ ಸಂಭಾವನೆ. ಒಂದು ಸೀಸನ್​ಗಾಗಿ ಮ್ಯಾಕ್ಸ್​ವೆಲ್ ಪಡೆದಿರುವುದು ಬರೋಬ್ಬರಿ 11 ಕೋಟಿ ರೂಪಾಯಿ. ಆದ್ರೆ ಕಲೆ ಹಾಕಿರೋದು ಕೇವಲ 52 ರನ್. ಸೋ ಮ್ಯಾಕ್ಸ್​ವೆಲ್ ಪ್ರತಿ ರನ್​ಗೆ 21 ಲಕ್ಷ ರೂಪಾಯಿ ಕೊಟ್ಟಂತಾಗಿತ್ತು. ಇನ್ನು ಬೌಲಿಂಗ್​ನಲ್ಲೂ ಕೂಡ ಮ್ಯಾಕ್ಸ್​ವೆಲ್ 10 ಪಂದ್ಯಗಳಿಂದ 6 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ರು. ಅಂದರೆ ಆಲ್​ರೌಂಡರ್ ಆಗಿ ಮ್ಯಾಕ್ಸ್​ವೆಲ್ ಸಂಪೂರ್ಣ ವಿಫಲರಾಗಿದ್ರು.

ಟಿ-20 ವಿಶ್ವಕಪ್ ನಲ್ಲೂ ಕಳಪೆ ಪ್ರದರ್ಶನ ಕಂಟಿನ್ಯೂ!

ಐಪಿಎಲ್​ನಲ್ಲಿ ಸೊನ್ನೆ ಸುತ್ತುವ ಮೂಲಕವೇ ಸುದ್ದಿಯಲ್ಲಿದ್ದ ಮ್ಯಾಕ್ಸ್​ವೆಲ್ ಟಿ20 ವಿಶ್ವಕಪ್​ನಲ್ಲೂ ಕಳಪೆ ಪ್ರದರ್ಶನದಿಂದಲೇ ಬಳಲಿದ್ರು. ಅದ್ರಲ್ಲೂ ತನ್ನ ಮೊದಲ ಪಂದ್ಯದಲ್ಲೇ ಗ್ಲೆನ್ ಮ್ಯಾಕ್ಸ್​ವೆಲ್ ಗೋಲ್ಡನ್ ಡಕ್​ಗೆ ಔಟಾಗಿದ್ದಾರೆ. ಬಾರ್ಬಡೋಸ್​ನಲ್ಲಿ ನಡೆದಿದ್ದ ಒಮಾನ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಟಿ20 ವಿಶ್ವಕಪ್ 2024 ಅನ್ನು ಮ್ಯಾಕ್ಸಿ ಶೂನ್ಯದೊಂದಿಗೆ ಶುರು ಮಾಡಿದ್ರು. ಬಳಿಕ ಕಮ್ ಬ್ಯಾಕ್ ಮಾಡಿದ ಮ್ಯಾಕ್ಸಿ 7 ಪಂದ್ಯಗಳಿಂದ 132 ರನ್ ಕಲೆ ಹಾಕಿದ್ರು.

ಏಕದಿನ ವಿಶ್ವಕಪ್ ನಲ್ಲಿ ಡಬಲ್ ಸೆಂಚುರಿ ಸಿಡಿಸಿದ್ದ ಮ್ಯಾಕ್ಸಿ!

ಗ್ಲೆನ್ ಮ್ಯಾಕ್ಸ್​​ವೆಲ್. ಸ್ಫೋಟಕ ಆಲ್​ರೌಂಡರ್ ಆಟಗಾರ. ಕ್ರೀಸ್ ಕಚ್ಚಿ ನಿಂತ್ರೆ ಎದುರಾಳಿ ಬೌಲರ್​ಗಳ ಎದೆಯಲ್ಲಿ ನಡುಕ ಹುಟ್ಟಿಸುವಂಥ ಸಾಮರ್ಥ್ಯ ಇರೋ ಬ್ಯಾಟರ್. ಪಂದ್ಯ ಇನ್ನೇನು ಕೈ ಚೆಲ್ಲೇ ಹೋಯ್ತು ಎನ್ನುವಾಗ ಏಕಾಂಗಿಯಾಗಿ ನಿಂತು ಎಷ್ಟೋ ಮ್ಯಾಚ್​ಗಳನ್ನ ಗೆಲ್ಲಿಸಿಕೊಟ್ಟಿರೋ ಛಲವಾದಿ. ಅದ್ರಲ್ಲೂ 2023ರ ಏಕದಿನ ವಿಶ್ವಕಪ್ ವೇಳೆ ಮ್ಯಾಕ್ಸಿ ತೋರಿದ ಪ್ರದರ್ಶನವನ್ನ ಕ್ರಿಕೆಟ್ ಲೋಕದಲ್ಲಿ ಯಾರೂ ಮರೆಯೋಕೆ ಸಾಧ್ಯನೇ ಇಲ್ಲ. ವಾಂಖೇಡೆ ಸ್ಟೇಡಿಯಮ್​ನಲ್ಲಿ ನಡೆದಿದ್ದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಐತಿಹಾಸಿಕ ಗೆಲುವು ಸಾಧಿಸಿತ್ತು. ಈ ಗೆಲುವಿನ ರೂವಾರಿಯೇ ಆಸೀಸ್​ ಸ್ಟಾರ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​. ಕಾಲು ನೋವಿನ ನಡುವೆಯೂ ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದ ಮ್ಯಾಕ್ಸಿ, ಏಕದಿನ ವಿಶ್ವಕಪ್ ಕ್ರಿಕೆಟ್​ನಲ್ಲಿ ಅತಿ ವೇಗದ ಡಬಲ್ ಸೆಂಚುರಿ ಬಾರಿಸಿದ್ರು. ಇದು ಏಕದಿನ ಕ್ರಿಕೆಟ್ ಚರಿತ್ರೆಯಲ್ಲಿ ವಿಶ್ವಶ್ರೇಷ್ಠ ಇನಿಂಗ್ಸ್ ಎಂದರೆ ತಪ್ಪಾಗಲ್ಲ. 91 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲು ಖಚಿತ ಎನ್ನುವ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮ್ಯಾಕ್ಸಿಯೇ ಜೀವ ತುಂಬಿ ಜಯ ತಂದುಕೊಟ್ಟಿದ್ರು. ಅಫ್ಘನ್ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತ್ತು. ಆದರೆ ಆಸೀಸ್ 46.5 ಓವರ್​ಗಳಲ್ಲೇ ಗೆಲುವಿನ ನಗೆ ಬೀರಿತ್ತು. ಕಾಲಿನ ಗಾಯದ ನಡುವೆಯೂ ಏಕಾಂಗಿ ಹೋರಾಟ ನಡೆಸಿದ ಮ್ಯಾಕ್ಸಿ, ಕೇವಲ 128 ಎಸೆತಗಳಲ್ಲಿ ತಾನೊಬ್ಬನೇ 201 ರನ್ ಗಳಿಸಿದರು. ಆ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ 11ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರ ಈ ಹೋರಾಟದ ಇನ್ನಿಂಗ್ಸ್​ನಲ್ಲಿ 21 ಬೌಂಡರಿ, 10 ಸಿಕ್ಸರ್​​ಗಳು ಇದ್ವು.

ಬೆಂಗಳೂರು ತಂಡಕ್ಕೆ ಮರಳುತ್ತಾರಾ ಕನ್ನಡಿಗ ಕೆ.ಎಲ್ ರಾಹುಲ್?

ಇದೆಲ್ಲದ್ರ ನಡುವೆ ಸದ್ಯ ಆರ್​ಸಿಬಿ ಫ್ರಾಂಚೈಸಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ವಿಚಾರ ಅಂದ್ರೆ ಕನ್ನಡಿಗ ಕೆ.ಎಲ್ ರಾಹುಲ್ ಬೆಂಗಳೂರು ತಂಡ ಸೇರ್ತಾರೆ ಅನ್ನೋದು. 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗಾಗಿ ಸ್ಟಾರ್​ ಕ್ರಿಕೆಟರ್​ ಕೆ.ಎಲ್​ ರಾಹುಲ್​​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ನ್ಯಾಷನಲ್ ಮೀಡಿಯಾಗಳಲ್ಲೂ ಕೂಡ ಈ ಬಗ್ಗೆ ಸಾಕಷ್ಟು ವರದಿಯಾಗಿದೆ. ಪ್ರಸ್ತುತ ಲಕ್ನೋ ಸೂಪರ್ ಜೇಂಟ್ಸ್ ತಂಡದ ಕ್ಯಾಪ್ಟನ್ ಆಗಿರುವ ಕೆಎಲ್‌ ರಾಹುಲ್‌ ಮೆಗಾ ಹರಾಜಿಗೂ ಮುನ್ನ ಲಖನೌ ಸೂಪರ್‌ ಜೇಂಟ್ಸ್ ತಂಡದಿಂದ ಹೊರ ಬರುವ ಸಾಧ್ಯತೆ ಇದೆ. 2022ರ ರಿಂದ ಇಲ್ಲಿಯವರೆಗೂ ಕೆಎಲ್‌ ರಾಹುಲ್‌ ಲಖನೌ ಸೂಪರ್‌ ಜಯಂಟ್ಸ್‌ ತಂಡವನ್ನು ಮೂರು ವರ್ಷಗಳ ಕಾಲ ಮುನ್ನಡೆಸಿದ್ದಾರೆ. ಇದೀಗ ಅವರ ಮೂರು ವರ್ಷಗಳ ಒಪ್ಪಂದ ಅಂತ್ಯವಾಗಿದೆ. ಹೀಗಾಗಿ ಮುಂದಿನ ಐಪಿಎಲ್‌ಗೆ ಬೇರೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ರಾಹುಲ್ ತಮ್ಮ ಐಪಿಎಲ್ ವೃತ್ತಿಜೀವನವನ್ನು ಇದೇ ತಂಡದೊಂದಿಗೆ ಪ್ರಾರಂಭಿಸಿದ್ದರು. ಆರ್‌ಸಿಬಿ ನಂತರ ಸನ್‌ರೈಸರ್ಸ್ ಹೈದರಾಬಾದ್‌ ಪರ ಆಡಿದ್ದ ಅವರು ನಂತರ ಪಂಜಾಬ್ ಕಿಂಗ್ಸ್ ಪರ ದೀರ್ಘಾವಧಿ ಆಡಿದ್ದರು. 2022ರ ಐಪಿಎಲ್‌ ಟೂರ್ನಿಯಿಂದ ಅವರು ಹೊಸ ಫ್ರಾಂಚೈಸಿ ಲಖನೌ ಸೂಪರ್‌ ಜೇಂಟ್ಸ್ ತಂಡ ಸೇರಿಕೊಂಡಿದ್ರು.

ಫಾಫ್ ಗೆ ಗೇಟ್ ಪಾಸ್.. ರಾಹುಲ್ ಗೆ ಕ್ಯಾಪ್ಟನ್ಸಿ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 17 ಆವೃತ್ತಿಗಳಿಂದ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. ವಿರಾಟ್ ನಾಯಕತ್ವದಿಂದ ಕೆಳಗಿಳಿದಾಗ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್‌ ಆರ್‌ಸಿಬಿ ನಾಯಕತ್ವವನ್ನು ಪಡೆದಿದ್ದರು. ಆದರೆ, ಅವರ ನಾಯಕತ್ವದಲ್ಲಿಯೂ ತಂಡ ಕಪ್‌ ಗೆಲ್ಲಲು ಸಾಧ್ಯವಾಗಲಿಲ್ಲ. ಫಾಫ್‌ ನಾಯಕತ್ವದಲ್ಲಿ ಆರ್‌ಸಿಬಿ 2022 ಮತ್ತು 2024ರ ಐಪಿಎಲ್‌ ಟೂರ್ನಿಗಳಲ್ಲಿ ಪ್ಲೇಆಫ್‌ಗೆ ತಲುಪಿದ್ದಾರೂ ಪ್ರಶಸ್ತಿ ಗೆಲ್ಲಲು ಆಗಲಿಲ್ಲ. ಹೀಗಾಗಿ ಕೆಎಲ್ ರಾಹುಲ್ ಆರ್‌ಸಿಬಿಗೆ ವಾಪಸಾದರೆ, ಹೊಸ ನಾಯಕರಾಗುವ ಸಾಧ್ಯತೆ ಇದೆ. ರಾಹುಲ್‌ಗೆ ಐಪಿಎಲ್‌ನಲ್ಲಿ ನಾಯಕತ್ವದ ಸುದೀರ್ಘ ಅನುಭವವಿದೆ. ಪಂಜಾಬ್ ಕಿಂಗ್ಸ್ ಮತ್ತು ಲಖನೌ ಸೂಪರ್‌ ಜಯಂಟ್ಸ್‌ ತಂಡಗಳನ್ನು ಮುನ್ನಡೆಸಿದ್ದಾರೆ. ಹೀಗಾಗಿ ಕೆಎಲ್‌ ರಾಹುಲ್ ಬೆಂಗಳೂರು ತಂಡಕ್ಕೆ ಮರಳಿದರೆ, ಫಾಫ್ ಡು ಪ್ಲೆಸಿಸ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಆ ಮೂಲಕ ಕನ್ನಡಿಗ ಕೆಎಲ್‌ ರಾಹುಲ್‌ಗೆ ನಾಯಕತ್ವ ನೀಡಬಹುದು ಎನ್ನಲಾಗಿದೆ. ಒಟ್ಟಾರೆ 2025ರ ಐಪಿಎಲ್ ಸಾಕಷ್ಟು ಟೈಂ ಇದ್ರೂ ಕೂಡ ಫ್ರಾಂಚೈಸಿಗಳಲ್ಲಿ ದಿನಕ್ಕೊಂದು ಬದಲಾವಣೆ ಆಗ್ತಿದೆ. ರೀಟೇನ್ ವಿಚಾರ ಸದ್ದು ಮಾಡ್ತಿದ್ದು, ಬಿಸಿಸಿಐ ಜೊತೆಗಿನ ಸಭೆಯಲ್ಲಿ ಒಂದು ಅಂತಿಮ ಚಿತ್ರಣ ಸಿಗಲಿದೆ.

Shwetha M

Leave a Reply

Your email address will not be published. Required fields are marked *