ಒಲಿಂಪಿಕ್ಸ್ ಕಂಚಿನ ಕ್ವೀನ್ ಮನು – ಸೋತಿದ್ದ ಬಾಕರ್ ​ಗೆ ಭಗವದ್ಗೀತೆ ಪ್ರೇರಣೆ
ಟೋಕಿಯೋ ನೋವು, ಪ್ಯಾರಿಸ್‌ ನಲ್ಲಿ ಗೆಲುವು

ಒಲಿಂಪಿಕ್ಸ್ ಕಂಚಿನ ಕ್ವೀನ್ ಮನು – ಸೋತಿದ್ದ ಬಾಕರ್ ​ಗೆ ಭಗವದ್ಗೀತೆ ಪ್ರೇರಣೆಟೋಕಿಯೋ ನೋವು, ಪ್ಯಾರಿಸ್‌ ನಲ್ಲಿ ಗೆಲುವು

ಜಗತ್ತಿನಾದ್ಯಂತ ಈಗ ಒಲಿಂಪಿಕ್ಸ್ ಫೀವರ್ ಜೋರಾಗಿದೆ. ಪ್ಯಾರಿಸ್ ನೆಲದಲ್ಲಿ ಭಾರತೀಯ ಕ್ರೀಡಾಪಟುಗಳು ಕೂಡ ಪದಕ ಬೇಟೆ ಆರಂಭಿಸಿದ್ದಾರೆ. ಕೋಟಿ ಕೋಟಿ ಭಾರತೀಯರ ಕನಸು ನನಸು ಮಾಡಿದ ಮನು ಭಾಕರ್ ಈಗ ಕಂಚಿನ ರಾಣಿಯಾಗಿ ಮೆರೆಯುತ್ತಿದ್ದಾರೆ. ಭಾರತದ 22 ವರ್ಷದ ಶೂಟರ್ ಮನು ಭಾಕರ್ ಒಲಿಂಪಿಕ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಶೂಟಿಂಗ್ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಸ್ಪರ್ಧಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮನು ಭಾಕರ್ ಗೆದ್ದಿದ್ದು ಕಂಚಿನ ಪದಕವೇ ಇರಬಹುದು. ಆದ್ರೆ, ಭಾರತೀಯರ ಪಾಲಿಗೆ ಈ ಮೊದಲ ಪದಕ ತುಂಬಾ ಮಹತ್ವದ್ದು. ಕಂಚಿನ ಪದಕಕ್ಕೆ ಇಡೀ ದೇಶವೇ ಸಂಭ್ರಮ ಪಡುತ್ತಿದೆ. ಪ್ರತಿಯೊಬ್ಬರ ಬಾಯಲ್ಲೂ ಮನು ಹೆಸರು ಕೇಳಿಬರುತ್ತಿದೆ. ಅಷ್ಟಕ್ಕೂ ಭಾರತೀರಯರೆಲ್ಲರೂ ಹೆಮ್ಮೆ ಪಡುವಂತಾ ಸಾಧನೆ ಮಾಡಿರುವ ಈ ಮನು ಯಾರು?, ಈ ಮಹಾ ಸಾಧಕಿ ಇದೊಂದು ಗೆಲುವಿಗಾಗಿ ಪಟ್ಟ ಶ್ರಮ ಎಂಥಾದ್ದು?. ಈ ಹಿಂದೆ ಒಲಿಂಪಿಕ್‌ನಲ್ಲಿ ನಡೆದ ಆ ನೋವೇ ಈ ಪದಕಕ್ಕೆ ಪ್ರೇರಣೆಯಾಗಿದ್ದು ಹೇಗೆ?, ಭಗವದ್ಗೀತೆಯ ಸಾರವೇ ಮನುವಿನ ಧೈರ್ಯ ಆಗಿದ್ದು ಯಾಕೆ? ಈ ಬಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  RTM ರೂಲ್ಸ್ ​​ಗೆ ಫ್ರಾಂಚೈಸಿಗಳ ಪಟ್ಟು – ಎಷ್ಟು ಆಟಗಾರರ ರಿಟೇನ್​​ ಗೆ ಅವಕಾಶ?

ಶೂಟಿಂಗ್ ಗರ್ಲ್ ಮನು ಭಾಕರ್  

ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ ಅತಿ ಹೆಚ್ಚು ಬಾಕ್ಸರ್‌ಗಳು ಮತ್ತು ಕುಸ್ತಿಪಟುಗಳನ್ನು ನೀಡಿದ ಹರಿಯಾಣ ರಾಜ್ಯದಿಂದ ಬಂದವರು. ಹರಿಯಾಣದ ಜಜ್ಜಾರ್‌ನಲ್ಲಿ ಜನಿಸಿದ ಮನು ಭಾಕರ್ ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ವಾಲಿಬಾಲ್, ಬಾಕ್ಸಿಂಗ್, ಸ್ಕೇಟಿಂಗ್, ಟೆನಿಸ್, ಕರಾಟೆ ಹೀಗೆ ಶಾಲಾ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಸೈಎನಿಸಿಕೊಂಡಿದ್ದಳು. ಟೆನ್ನಿಸ್‌ನಿಂದ ಹಿಡಿದು ಸ್ಕೇಟಿಂಗ್ ಮತ್ತು ಬಾಕ್ಸಿಂಗ್‌ವರೆಗಿನ ಸ್ಪರ್ಧೆಗಳಲ್ಲಿ ಆಗಾಗ್ಗೆ ಭಾಗವಹಿಸುತ್ತಿದ್ದರು. ಅಷ್ಟೇ ಅಲ್ಲ, ಸುಮಾರು 6೦ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದುಕೊಂಡು ಬೀಗಿದ್ದಳು. ಇದಲ್ಲದೇ ‘ಥಾನ್ ತಾ’ ಎಂಬ ಸಮರ ಕಲೆಯಲ್ಲೂ ಭಾಗವಹಿಸಿ ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದಿದ್ದಾರೆ. ಆದ್ರೆ ವಾಲಿಬಾಲ್ ಆಡುತ್ತಿದ್ದಾಗ ಕಣ್ಣಿಗೆ ಗಾಯ ಮಾಡಿಕೊಂಡ ಮನು, ಸಡನ್ ಆಗಿ ಶೂಟಿಂಗ್ ಸ್ಪರ್ಧೆಯತ್ತ ಒಲವು ತೋರಿದ್ದಳು. ಬೇರೆ ಕ್ರೀಡೆಗಳತ್ತ ಗಮನ ಬಿಟ್ಟು ತನ್ನ ಅಪ್ಪನ ಬಳಿ ಶೂಟರ್ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದಳು. ತಂದೆ ರಾಮ್ ಕಿಶಾನ್ ಭಾಕರ್ ಮರ್ಚೆಂಟ್ ನೇವಿಯಲ್ಲಿ ಇಂಜಿನಿಯರ್ ಆಗಿದ್ದರು. ರಜೆಯಲ್ಲಿ ಮನೆಗೆ ಬಂದ ರಾಮ್ ಕಿಶನ್ ಭಾಕರ್‌ಗೆ ಮಗಳು ಮನು ಬಾಕರ್ ಇಟ್ಟ ಬೇಡಿಕೆ ಒಂದೇ ಅದು ಪಿಸ್ತೂಲ್. ತಾನು ಶೂಟರ್ ಆಗೋ ಕನಸನ್ನು ಬಿಚ್ಚಿಟ್ಟಾಗ ಅಪ್ಪನಾಗಿ ರಾಮ್ ಕಿಶನ್ ಮಗಳ ಆಸೆಯನ್ನು ನಿರಾಸೆಗೊಳಿಸಲಿಲ್ಲ. 1.80.000 ರೂಪಾಯಿಗಳ ಪಿಸ್ತೂಲ್ ನ್ನ ಮಗಳಿಗೆ ಉಡುಗೊರೆಯಾಗಿ ನೀಡಿದ್ದರು. ಹರಿಯಾಣದ ಗೊರಿಯಾದ ಯುನಿವರ್ಸಲ್ ಸೀನಿಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ಕಲಿಯುತ್ತಿದ್ದ ಮನು ಬಾಕರ್‌ಗೆ ತಾಯಿ ಸುಮೇಧಾ ಪ್ರಾಂಶುಪಾಲೆಯಾಗಿದ್ದರು. ಅದಕ್ಕೆ ತಕ್ಕಂತೆ ಶಾಲಾ ಕೋಚ್ ನರೇಶ್ ಮತ್ತು ಕಾರ್ಗಿಲ್ ಯೋಧ ಅನಿಲ್ ಜಾಖರ್ ಗರಡಿಯಲ್ಲಿ ಪಳಗಿದ ಮನು ಭಾಕರ್ ನಂತರ ಹಿಂದಿರುಗಿ ನೋಡಲೇ ಇಲ್ಲ. ರಾಜ್ಯ, ರಾಷ್ಟ್ರೀಯ, ವಿಶ್ವಕಪ್ ಶೂಟಿಂಗ್, ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹೀಗೆ ನಾನಾ ಕ್ರೀಡಾ ಕೂಟಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತದ ಭರವಸೆಯ ಶೂಟರ್ ಆಗಿ ಕಂಗೊಳಿಸಿದ್ದಳು. ಜೊತೆಗೆ ಖ್ಯಾತ ಶೂಟರ್ ಜಸ್ಪಲ್ ರಾಣಾ ಮಾರ್ಗದರ್ಶನ ಮನು ಭಾಕರ್ ಅವರ ಬದುಕಿಗೆ ಹೊಸ ತಿರುವನ್ನೇ ನೀಡಿತ್ತು.

ಕಂಚಿನ ಪದಕ ಬೇಟೆಯಾಡಿರೋ ಮನು ಗೆಲುವಿನ ಹಿಂದೆ ಕಹಿ ನೆನಪುಗಳೂ ಇವೆ. 2020ರ ಟೊಕಿಯೋ ಒಲಿಂಪಿಕ್ಸ್ ಮನು ಭಾಕರ್‌ಗೆ ಜೀವ ಮಾನದಲ್ಲೇ ಮರೆಯಲಾಗದ ಕಹಿ ಅನುಭವ ಎದುರಿಸಬೇಕಾಯ್ತು. ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದ ಮನು ಭಾಕರ್‌ಗೆ ತಾನು ನಂಬಿದ್ದ ಪಿಸ್ತೂಲ್ ಕೂಡ ಕೈಕೊಟ್ಟಿತ್ತು. ಪದಕ ಗೆಲ್ಲುವ ಕನಸು ಕಣ್ಣೇದುರೇ ಕಮರಿ ಹೋಗಿತ್ತು. ಟೊಕಿಯೋ ಒಲಿಂಪಿಕ್ಸ್ನಲ್ಲಿ 25ನೇ ಸ್ಥಾನ ಪಡೆದುಕೊಂಡಿದ್ದ ಮನು, ಸುಮಾರು 25 ದಿನ ಮನೆಯಿಂದ ಹೊರಗೆ ಬರಲೇ ಇಲ್ಲ. ಅವಳ ಪಾಲಿಗೆ ಶೂಟಿಂಗ್ ಅನ್ನೋದು ಮುಗಿದು ಹೋದ ಅಧ್ಯಾಯವಾಗಿತ್ತು. ಇಂಥಾ ಸಮಯದಲ್ಲಿ ಮಗಳಿಗೆ ಅಮ್ಮ ನೆನಪು ಮಾಡಿಕೊಟ್ಟಿದ್ದೇ, ಭಗವತ್‌ಗೀತೆಯ ಈ ಸಾರವನ್ನು… ಯಃ ಸರ್ವತ್ರಾನಭಿಸ್ನೇಹಃ ತತ್ತತ್ಪ್ರಾಪ್ಯ ಶುಭಾಶುಭಮ್ | ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ಎಂಬ ಸಾಲುಗಳನ್ನ. ಪ್ರಪಂಚದಲ್ಲಿ ಸೋತು ಗೆದ್ದವರೇ ಯಶಸ್ಸಿನ ಉತ್ತುಂಗಕ್ಕೇರಿರುವುದು. ನಿನ್ನ ಶ್ರಮದ ಕಡೆಗೆ ಗಮನಹರಿಸು. ಫಲಿತಾಂಶದ ಮೇಲೆ ನಿರೀಕ್ಷೆಗಳು ಬೇಡ ಎಂಬ ಸಂದೇಶವನ್ನು ಶ್ರೀ ಕೃಷ್ಣ ಅರ್ಜುನನಿಗೆ ಭಗವದ್ಗೀತೆಯಲ್ಲಿ ಹೇಳುವ ಮಾತನ್ನು ಮನು ಭಾಕರ್ ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ಇನ್ನೊಂದೆಡೆ, ಉಸೇನ್ ಬೋಲ್ಟ್ ಅವರ ಜೀವನ ಚರಿತ್ರೆ ಕೂಡ ಅವರಿಗೆ ಸ್ಪೂರ್ತಿ ನೀಡಿತ್ತು. ಉಸೇನ್ ಬೋಲ್ಟ್ ವೇಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ರೆ, ಮನು ಭಾಕರ್ ತಾಳ್ಮೆ, ಏಕಾಗ್ರತೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇಲ್ಲಿ ಕ್ರೀಡೆ ಬೇರೆಯಾಗಿರಬಹುದು. ಆದ್ರೆ ಗುರಿ ಒಂದೇ ಆಗಿರುತ್ತದೆ. ಹೀಗಾಗೇ ಮನು ಬಾಕರ್ ತನ್ನ ನೋವಿನ ದಿನಗಳನ್ನ ಮೆಟ್ಟಿನಿಂತು ಈಗ ಭಾರತೀಯರು ಹೆಮ್ಮೆ ಪಡುವಂತಾ ಸಾಧನೆ ಮಾಡಿದ್ದಾಳೆ. ಶೂಟಿಂಗ್ ಚಾಂಪಿಯನ್ ಜಸ್ಪಾಲ್ ರಾಣಾ ಅವರ ಮಾರ್ಗದರ್ಶನವಂತೂ ಮನು ಮರೆಯೋದೇ ಇಲ್ಲ. ಜಸ್ಪಲ್ ರಾಣಾ ವಿಭಿನ್ನ ರೀತಿಯ ತರಬೇತಿ ನೀಡಿ ಅಪ್ರತಿಮ ಶೂಟರ್ ಆಗುವಂತೆ ಮಾಡಿದ್ದರು. ಚಿನ್ನ, ಬೆಳ್ಳಿ ಗೆಲ್ಲುವ ಅವಕಾಶ ಕೈತಪ್ಪಿದ್ರೂ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿರಬಹುದು. ಆದ್ರೆ, ಈ ಪದಕ ಇದೆಯಲ್ವಾ.. ಅದು ಭಾರತದ ಮಟ್ಟಿಗೆ ಚಿನ್ನದ ಪದಕವೇ ಸರಿ. ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದು ಬಿಡಿ.. ಅರ್ಹತೆ ಪಡೆದು ಸ್ಪರ್ಧಿಸುವುದೇ ಭಾರತೀಯರ ಪಾಲಿಗೆ ದೊಡ್ಡ ಸಾಧನೆ. ಅಂತಾದ್ರಲ್ಲಿ 22ರ ಹರೆಯದ ಮನುಭಾಕರ್ ಕಂಚಿನ ಪದಕ ಗೆದ್ದು ಭಾರತದ ರಾಷ್ಟ್ರಧ್ವಜವನ್ನು ಒಲಿಂಪಿಕ್ ಪೋಡಿಯಂನಲ್ಲಿ ಹಾರಿಸಿರುವುದು ಅಸಾಮಾನ್ಯ ಸಾಧನೆಯೇ ಸರಿ. ಅಪ್ಪ – ಅಮ್ಮನ ಪ್ರೇರಣೆ, ಗೀತಾಸಾರದ ಸ್ಪೂರ್ತಿ, ಇದೀಗ ಮನಭಾಕರ್ ಭಾರತೀಯರ ಪಾಲಿನ ಕಂಚಿನ ರಾಣಿ ಆಗಿ ಮೆರೆಯುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *