ಸಿಂಹಳೀಯರ ಮೇಲೆ INDIA ಸವಾರಿ – ಸೂರ್ಯ & ಗಂಭೀರ್ ಯುಗಾರಂಭ
T-20I ವಿಕ್ಟರಿ.. ಏಕದಿನ ಸವಾಲುಗಳೇನು?

ಸಿಂಹಳೀಯರ ಮೇಲೆ INDIA ಸವಾರಿ – ಸೂರ್ಯ & ಗಂಭೀರ್ ಯುಗಾರಂಭT-20I ವಿಕ್ಟರಿ.. ಏಕದಿನ ಸವಾಲುಗಳೇನು?

ಟೀಂ ಇಂಡಿಯಾದ ಮಿಷನ್ ಒನ್ ಕಂಪ್ಲೀಟ್ ಆಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಬ್ಬರಿಸಿದ ಮೆನ್ ಇನ್ ಬ್ಲ್ಯೂ ಜೆರ್ಸಿ ಬಾಯ್ಸ್ ಲಂಕನ್ನರ ನೆಲದಲ್ಲೇ ಬೇಟೆಯಾಡಿದ್ದಾರೆ. ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶ ಮಾಡಿಕೊಂಡಿದ್ದಾರೆ. ಆ ಮೂಲಕ ನೂತನ ಕೋಚ್ ಗೌತಮ್ ಗಂಭೀರ್​ ಮತ್ತು ನೂತನ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಚೊಚ್ಚಲ ಅಗ್ನಿಪರೀಕ್ಷೆಯಲ್ಲೇ ಪಾಸ್ ಆಗಿದ್ದಾರೆ. ಮತ್ತೊಂದೆಡೆ ಟೀಂ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿರುವ ಹೊತ್ತಲ್ಲೇ ಕೆಲ ಆಟಗಾರರು ಸಿಕ್ಕಿರುವ ಅವಕಾಶವನ್ನ ಕೈ ಚೆಲ್ಲಿರೋದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಟಾಸ್ಕ್ ಕಂಪ್ಲೀಟ್ ಮಾಡಿದ ಸೂರ್ಯ ಮೂಡಿಸಿದ ಭರವಸೆ ಏನು? ಚಾನ್ಸ್ ಮಿಸ್ ಮಾಡಿಕೊಂಡ ಆಟಗಾರರು ಯಾರು? ಸರಣಿ ಗೆದ್ದ ಭಾರತದ ಮುಂದಿರೋ ಚಾಲೆಂಜಸ್ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಬ್ಬಬ್ಬಾ.. ತಾಪ್ಸಿಗೆ ಇಷ್ಟೊಂದು ಧಿಮಾಕು? – ಸೆಲ್ಫಿ ಕೇಳಲು ಬಂದವರ ಮೇಲೆ ಒರಟಾಗಿ ನಡೆದುಕೊಂಡ ನಟಿ

ಟಿ-20 ವಿಶ್ವಕಪ್ ಗೆಲುವಿನ ಬಳಿಕ ವಿಕ್ಟರಿ ಜರ್ನಿ ಮುಂದುವರಿಸಿರೋ ಟೀಂ ಇಂಡಿಯಾ ಬಾಯ್ಸ್ ಲಂಕಾ ನಾಡಲ್ಲೂ ಗೆಲುವಿನ ಪತಾಕೆ ಹಾರಿಸಿದ್ದಾರೆ. ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವನ್ನೂ ಗೆದ್ದ ಭಾರತ ಸರಣಿಯನ್ನ ಕೈವಶ ಮಾಡಿಕೊಂಡಿದೆ. ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲೂ ದಿಟ್ಟ ಪ್ರದರ್ಶನ ನೀಡಿದ್ರು. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಇಳಿದ ಟೀಮ್ ಇಂಡಿಯಾ ಬ್ಯಾಟರ್ಸ್ ಲಂಕಾ ಬೌಲರ್ಸ್ ಬೆವರಿಳಿಸಿದ್ರು. ಜೈಸ್ವಾಲ್​-ಗಿಲ್, ನಂತರ ಸೂರ್ಯಕುಮಾರ್​ ಯಾದವ್​- ರಿಷಭ್ ಪಂತ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದ ಮೂಲಕ 213ರನ್​ ಗಳ ಬೃಹತ್ ಮೊತ್ತ ದಾಖಲಿಸಿತು. ಜೈಸ್ವಾಲ್​ ಕೇವಲ 21 ಎಸೆತಗಳಲ್ಲಿ 40 ರನ್, ಶುಬ್ಮನ್ ಗಿಲ್ 16 ಎಸೆತಗಳಲ್ಲಿ 34 ರನ್, ಸೂರ್ಯ 26 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 58 ರನ್​, ಪಂತ್ 33 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 49 ರನ್​ಗಳಿಸಿದರು. ಟಾರ್ಗೆಟ್ ಬೆನ್ನಟ್ಟಿದ ಅತಿಥೇಯ ತಂಡ ಕೂಡ ಉತ್ತಮ ಓಪನಿಂಗ್ ಪಡೆದಿತ್ತು. ಆದ್ರೆ ಭಾರತೀಯ ಬೌಲರ್ಸ್​ ಬೆಂಕಿಯಾಟದ ಮುಂದೆ ಲಂಕಾ ಪಡೆ 19.2 ಓವರ್​ಗಳಲ್ಲೇ 170 ರನ್ ಗಳಿಸಿ ಆಲ್ಔಟ್ ಆಯ್ತು. ಈ ಮೂಲಕ ಫಸ್ಟ್ ಮ್ಯಾಚ್​ನಲ್ಲಿ ಸೂರ್ಯ ಬಣ 43 ರನ್​ಗಳ ಅಂತರದಿಂದ ಗೆಲುವು ದಾಖಲಿಸಿತು.

ಇನ್ನು ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ್ರು. ಬ್ಯಾಟಿಂಗ್​ಗೆ ಇಳಿದ ಲಂಕಾ ತಂಡಕ್ಕೆ ಆರಂಭಿಕರಿಬ್ಬರು ಉತ್ತಮ ಆರಂಭ ನೀಡಿದರಾದರೂ, ಮಿಡಲ್ ಆರ್ಡರ್​ನಲ್ಲಿ ಅಷ್ಟೇನು ಪ್ರದರ್ಶನ ಮೂಡಿ ಬರಲಿಲ್ಲ. ಪರಿಣಾಮ 20 ಓವರ್‌ಗಳಲ್ಲಿ 161 ರನ್ ಗಳಿಸಲಷ್ಟೇ ಶಕ್ತವಾಯಿತು. 2 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿದ್ದ ಲಂಕಾ ತಂಡವು ಕೊನೆಯ 31 ರನ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು. 162 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ನಂತರ ಈ ಪಂದ್ಯದಲ್ಲಿ 12 ಓವರ್‌ಗಳನ್ನು ಕಡಿತಗೊಳಿಸಲಾಗಿದ್ದು, ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಟೀಂ ಇಂಡಿಯಾಕ್ಕೆ 8 ಓವರ್‌ಗಳಲ್ಲಿ 78 ರನ್‌ಗಳ ಗುರಿ ನೀಡಲಾಯಿತು. ಮಳೆ ಆರಂಭವಾಗುವ ಮುನ್ನವೇ ಭಾರತ ತಂಡ 3 ಎಸೆತಗಳಲ್ಲಿ 6 ರನ್ ಗಳಿಸಿತ್ತು. ಮಳೆಯ ನಂತರ ಮತ್ತೆ ಮ್ಯಾಚ್ ಶುರುವಾದಾಗ ಭಾರತಕ್ಕೆ ಬಿಗ್ ಶಾಕ್ ಕಾದಿತ್ತು. ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ಡಕ್​ಔಟ್ ಆಗಬೇಕಾಯ್ತು. ಬಳಿಕ ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಇನ್ನಿಂಗ್ಸ್ ತಂಡವನ್ನು ಮೇಲೆತ್ತಿತು. ಯಶಸ್ವಿ ಜೈಸ್ವಾಲ್ 15 ಎಸೆತಗಳಲ್ಲಿ 30 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 12 ಎಸೆತಗಳಲ್ಲಿ 26 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಫೈನಲಿ ಭಾರತ ತಂಡ 6.3 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಮೂರು ಪಂದ್ಯಗಳ T20I ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ವಶಪಡಿಸಿಕೊಂಡಿದೆ.

ಬ್ಯಾಟಿಂಗ್ ಮತ್ತು ಕ್ಯಾಪ್ಟನ್ಸಿಯಲ್ಲೂ ಸೂರ್ಯ ಸಕ್ಸಸ್!

ಅಚ್ಚರಿಯ ರೀತಿಯಲ್ಲಿ ಟೀಂ ಇಂಡಿಯಾ ಟಿ-20ಐ ಕ್ಯಾಪ್ಟನ್ಸಿ ಚುಕ್ಕಾಣಿ ಹಿಡಿದಿದ್ದ ಸೂರ್ಯಕುಮಾರ್ ಯಾದವ್​ಗೆ ಗೆಲುವಿನ ಶುಭಾರಂಭ ಸಿಕ್ಕಿದೆ. ಪೂರ್ಣಾವಧಿ ನಾಯಕನಾಗಿ ಆಯ್ಕೆಯಾದ ಮೊದಲ ಪಂದ್ಯದಲ್ಲೇ ಬ್ಯಾಟಿಂಗ್ ಮತ್ತು ನಾಯಕತ್ವ ಎರಡರಲ್ಲೂ ಯಶಸ್ವಿಯಾಗಿದ್ದಾರೆ. ಮೊದಲ ಪಂದ್ಯದಲ್ಲಿ 26 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 58ರನ್​ಗಳಿಸಿದ್ರು.  ಇದು ಅವರ 24ನೇ ಅರ್ಧಶತಕ​ ಆಗಿದೆ. ಒಟ್ಟು 24 ಇನ್ನಿಂಗ್ಸ್​ನಲ್ಲಿ ಅವರು 9ನೇ ಬಾರಿ 200 ಅಥವಾ ಅದಕ್ಕಿಂತ ಹೆಚ್ಚಿನ ಸ್ಟ್ರೈಕ್​ರೇಟ್​ನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್​ಗಳಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಬಾರಿ ಈ ಸಾಧನೆ ಮಾಡಿದ ಬ್ಯಾಟರ್​ ಎನಿಸಿಕೊಂಡರು. ಆಸ್ಟ್ರೇಲಿಯಾ ಗ್ಲೇನ್ ಮ್ಯಾಕ್ಸ್​ವೆಲ್​ 8, ವೆಸ್ಟ್​ ಇಂಡೀಸ್​ನ ಎವಿನ್ ಲೂಯಿಸ್​ 6, ಭಾರತದ ಯುವರಾಜ್​ ಸಿಂಗ್​ 5, ಕಾಲಿನ್​ ಮನ್ರೋ 5 ಬಾರಿ ಈ ಸಾಧನೆ ಮಾಡಿದ್ದಾರೆ. ಭಾರತದ ಪರ ಸೂರ್ಯ ಹಾಗೂ ಯುವರಾಜ್ ಹೊರತುಪಡಿಸಿದರೆ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್​ ತಲಾ 4 ಬಾರಿ ಈ ಸಾಧನೆ ಮಾಡಿದ್ದಾರೆ. ಇನ್ನು ಎರಡನೇ ಪಂದ್ಯದಲ್ಲೂ 12 ಎಸೆತಗಳಲ್ಲಿ 26 ರನ್ ಸಿಡಿಸಿದ್ದು ವಿಶೇಷವಾಗಿತ್ತು.

ವಿರಾಟ್ ದಾಖಲೆಯನ್ನು ಸರಿಗಟ್ಟಿದ ಸೂರ್ಯಕುಮಾರ್

ಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಪಡೆದ ಸೂರ್ಯಕುಮಾರ್ ಯಾದವ್ ಕಿಂಗ್ ವಿರಾಟ್ ಕೊಹ್ಲಿ ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ. ಅಂತರಾಷ್ಟ್ರೀಯ ಟಿ20 ಪಂದ್ಯಗಳ ಇತಿಹಾಸದಲ್ಲೇ ಅತೀ ಹೆಚ್ಚು ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಪಡೆದುಕೊಂಡ ಆಟಗಾರನಾಗಿ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ. 125 ಪಂದ್ಯಗಳಲ್ಲಿ ಕೊಹ್ಲಿ 16 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರೆ, ಸೂರ್ಯ ಕೇವಲ 69 ಪಂದ್ಯಗಳಿಂದ 16ನೇ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಹಾಗೇ ಭಾರತದ ನಾಯಕನಾಗಿ ಅತಿ ಹೆಚ್ಚು ಟಿ20 ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯರನ್ನು ಹಿಂದಿಕ್ಕಿದ್ದಾರೆ.

ಸಂಜು ಸ್ಯಾಮ್ಸನ್ ಬಗ್ಗೆ ಬೇಸರ ಹೊರ ಹಾಕಿದ ಫ್ಯಾನ್ಸ್

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬೆಂಚ್​ಗೆ ಸೀಮಿತವಾಗಿದ್ದ ಸಂಜು ಸ್ಯಾಮ್ಸನ್​ಗೆ 2ನೇ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಶುಭ್​ಮನ್ ಗಿಲ್ ಅವರ ಅನುಪಸ್ಥಿತಿಯಲ್ಲಿ ಆರಂಭಿಕ ಆಟಗಾರರಾಗಿ ಬಡ್ತಿ ಪಡೆದುಕೊಂಡಿದ್ದರು. ಅಭಿಮಾನಿಗಳು ಕೂಡ ಸಂಜು ಮೇಲೆ ತುಂಬಾ ನಿರೀಕ್ಷೆಗಳನ್ನು ಇಟ್ಕೊಂಡಿದ್ದರು. ಹಿಂದೆ ತಮಗೆ ಆಗಿರುವ ಮೋಸ ಮತ್ತು ಅನ್ಯಾಯಕ್ಕೆ ಬ್ಯಾಟಿಂಗ್ ಮೂಲಕ ಉತ್ತರ ನೀಡುತ್ತಾರೆ ಅಂದ್ಕೊಂಡಿದ್ದರು. ಆದ್ರೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿತ್ತು. ಭರವಸೆಯ ಸಂಜು ಸ್ಯಾಮ್ಸನ್​​ ಗೋಲ್ಡನ್ ಡಕ್ ಆಗುವ ಮೂಲಕ ಪೆವಿಲಿಯನ್​ಗೆ ತಲೆ ತಗ್ಗಿಸಿ ಬಂದ ಹಾದಿಯಲ್ಲೇ ಹೋದರು. ಈ ಮೂಲಕ ಟೀಂ ಇಂಡಿಯಾ ಮ್ಯಾನೇಜ್ಮೆಂಟ್​​ಗೆ, ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಸದ್ಯ ಲಂಕಾ ನಾಡಲ್ಲಿರೋ ಟೀಂ ಇಂಡಿಯಾ ಬಾಯ್ಸ್ ಟಿ-20 ಸರಣಿಯನ್ನ ಕೈ ವಶ ಮಾಡಿಕೊಂಡಿದ್ದಾರೆ. ಇನ್ನೇನಿದ್ರೂ ಕೋಚ್ ಗಂಭೀರ್ ಚಿತ್ತ ಏಕದಿನ ಪಂದ್ಯದತ್ತ ನೆಟ್ಟಿದೆ. ಲಂಕಾ ವಿರುದ್ಧ ನಡೆಯಲಿರುವ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್​ರಂಥ ಸ್ಟಾರ್ ಆಟಗಾರರೇ ಇರೋದ್ರಿಂದ ಫ್ಯಾನ್ಸ್ ಕೂಡ ಸರಣಿ ನೋಡೋಕೆ ಕಾಯ್ತಿದ್ದಾರೆ.

Shwetha M

Leave a Reply

Your email address will not be published. Required fields are marked *