ಗುರುವಿನ ಬದುಕು ಬೆಳಗಿದ ಸೂರ್ಯ – Sky ಬಾಲ್ಯದ ಕೋಚ್ ಕಣ್ಣೀರು..!
ಇಂಥಾ ಶಿಷ್ಯ ಕೋಟಿಗೊಬ್ಬ..!

ಗುರುವಿನ ಬದುಕು ಬೆಳಗಿದ ಸೂರ್ಯ – Sky ಬಾಲ್ಯದ ಕೋಚ್ ಕಣ್ಣೀರು..!ಇಂಥಾ ಶಿಷ್ಯ ಕೋಟಿಗೊಬ್ಬ..!

ಬಾಲ್ಯದಲ್ಲಿ ಸರಿಯಾದ ಗುರು ಸಿಕ್ಕರೆ ಸಾಧನೆಯ ಶಿಖರಕ್ಕೇರಲು ಸಾಧ್ಯ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಸೂರ್ಯಕುಮಾರ್ ಯಾದವ್ ಮತ್ತು ಅವರ ಬಾಲ್ಯದ ಕೋಚ್ ಅಶೋಕ್​​ ಅಸ್ವಾಲ್​ಕರ್​​. ಆದ್ರೆ, ಇಲ್ಲಿ ನೋವಿನ ಸಂಗತಿಯೆಂದರೆ, ಶಿಷ್ಯ ತನ್ನ ಸಾಧನೆಯ ಮೆಟ್ಟಿಲು ಏರುತ್ತಾ ಗುರು ಹೇಳಿದ ದಾರಿಯಲ್ಲಿ ಸಾಗುತ್ತಾ ಕ್ರಿಕೆಟ್ ಲೋಕದ ಅಧಿಪತಿಯಾದ. ಅದೇ ಗುರು ನೂರಾರು ಶಿಷ್ಯರನ್ನ ಯಶಸ್ವೀ ಸಾಧಕರನ್ನಾಗಿ ಮಾಡಿರೋ ಹೆಮ್ಮೆಯಿಂದ ಬೀಗುತ್ತಿದ್ದ ಗುರು ಈಗ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಗೆ ಬಂದಿದ್ದರು. ಈ ವಿಚಾರ ಗೊತ್ತಾಗಿದ್ದೇ ತಡ, ಸೂರ್ಯಕುಮಾರ್ ತಾನೊಬ್ಬ ಗುರುವಿಗೆ ತಕ್ಕ ಶಿಷ್ಯ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಗುರುವಿನ ಬದುಕಿಗೆ ಬೆಳಕು ನೀಡಲು ಸೂರ್ಯಕುಮಾರ್ ಯಾದವ್ ಮುಂದಾಗಿದ್ದಾರೆ. ಗುರು ಶಿಷ್ಯರಿಬ್ಬರು ಒಂದು ಮೆಗಾ ಯೋಜನೆಗೆ ಕೈ ಜೋಡಿಸಿದ್ದಾರೆ. ಆ ಪ್ಲ್ಯಾನ್ ಯಾವುದು?, ಗುರುವಿನ ಕಷ್ಟ ಸೂರ್ಯನಿಗೆ ಗೊತ್ತಾಗಿದ್ದು ಹೇಗೆ ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RCB, LSG, MI ಕ್ಯಾಪ್ಟನ್ಸ್ ಚೇಂಜ್ – 6 ತಂಡಗಳಿಗೆ ಹೊಸ ಸಾರಥಿಗಳು?

ಸೂರ್ಯಕುಮಾರ್​ ಯಾದವ್ ಈಗ ಲಕ್ಕಿ ಕ್ರಿಕೆಟರ್. ಸರ್​​ಪ್ರೈಸ್​ ರೀತಿಯಲ್ಲಿ ಟೀಮ್​ ಇಂಡಿಯಾದ ನಾಯಕನ ಪಟ್ಟ ಕೂಡಾ ಏರಿದ್ದಾರೆ. ಐಪಿಎಲ್​ ಫ್ರಾಂಚೈಸಿಗಳು ಸೂರ್ಯನ ಮೇಲೆ ಕೋಟಿ ಕೋಟಿ ಸುರಿಯಲು ಸಜ್ಜಾಗಿ ನಿಂತಿವೆ. ಸಧ್ಯಕ್ಕೆ ಸೂರ್ಯಕುಮಾರ್ ಲಂಕಾ ದಹನಕ್ಕೆ ಸಜ್ಜಾಗುತ್ತಿದ್ದಾರೆ. ಶ್ರೀಲಂಕಾದಲ್ಲಿ ಟಿ20 ಸರಣಿಯ ಕ್ಯಾಪ್ಟನ್ ಆಗಿ ಸೂರ್ಯ ನಾಯಕತ್ವ ಸಾಬೀತುಪಡಿಸುವ ಜಿದ್ದಿಗೆ ಬಿದ್ದಿದ್ದಾರೆ. ಇದ್ರ ಮಧ್ಯೆಯೇ ಸೂರ್ಯಕುಮಾರ್ ಅವರ ಕರ್ತವ್ಯನಿಷ್ಠೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೌದು, ತನ್ನನ್ನು ತಿದ್ದಿ-ತೀಡಿ ಬೆಳೆಸಿದ ಗುರುವಿನ ಬಾಳಿನಲ್ಲಿ ಬೆಳಕು ಮೂಡಿಸಲು ಸೂರ್ಯ ಮಾಡಿರೋ ಕಾರ್ಯ ಇದೀಗ ಪ್ರಶಂಸೆಗೆ ಒಳಗಾಗಿದೆ.

ಇವತ್ತು ಸೂರ್ಯಕುಮಾರ್​ ಯಾದವ್​ ಕ್ರಿಕೆಟ್​ ಲೋಕದ ಸೂಪರ್​ ಸ್ಟಾರ್​ ಆಗಿರಬಹುದು. ಸೂರ್ಯನ ಈ ಸಕ್ಸಸ್ ಹಿಂದೆ ಇರೋ ಸೂತ್ರದಾರ ಅಶೋಕ್​​ ಅಸ್ವಾಲ್ಕರ್​​. ಸೂರ್ಯನ ಬಾಲ್ಯದ ಕೋಚ್. ವಿಶ್ವದ ಸೂಪರ್​ ಸ್ಟಾರ್ ಕ್ರಿಕೆಟಿಗನ ಕೋಚ್​ ಎಂದು ಇಡೀ ಜಗತ್ತಿಗೆ ಪರಿಚಯವಾದಾಗ ಎಂತವರಿಗಾದ್ರೂ ಹೆಮ್ಮೆಯ ಭಾವ ಮೂಡುತ್ತೆ. ಇನ್ನು ಜಾಹೀರಾತು ಮೂಲಕವೂ ಸೂರ್ಯನ ಗುರುವಿನ ಖ್ಯಾತಿ ಕೂಡ ವಿಶ್ವದೆಲ್ಲೆಡೆ ಹರಡಿತ್ತು. ಆದ್ರೆ, ಅಷ್ಟೊತ್ತಿಗಾಗಲೇ ಸೂರ್ಯನ ಬಾಲ್ಯದ ಕೋಚ್‌ಗೆ ಬ್ಯಾಡ್ ಟೈಮ್ ಶುರುವಾಗಿತ್ತು. ಇದನ್ನ ಮೊದಲು ಸೂರ್ಯನಿಗೆ ತಿಳಿಸಲೇ ಇಲ್ಲ ಅಶೋಕ್ ಅಸ್ವಾಲ್ಕರ್. ಸೂರ್ಯಕುಮಾರ್​ ಯಾದವ್​ರ ಭವಿಷ್ಯವನ್ನ ರೂಪಿಸಿದ ಮೊದಲು ಗುರು ಅಶೋಕ್​​ ಅಸ್ವಾಲ್​ಕರ್​​ ಭವಿಷ್ಯ ನಿಜಕ್ಕೂ ಅತಂತ್ರವಾಗಿತ್ತು. ರಾಜಕೀಯದಾಟದಲ್ಲಿ ಇದ್ದ ಕೆಲಸವನ್ನ ಕಳೆದುಕೊಂಡಿದ್ದ ಕೋಚ್ ಅಶೋಕ್ ಅವರು ಮುಂದೇನು ಅಂತಾ ನೋವಿನಲ್ಲಿ ದಿನಕಳೆಯುತ್ತಿದ್ದರು.

ಮುಂಬೈನ ಅನುಶಕ್ತಿ ನಗರ್​​ ಸ್ಪೋರ್ಟ್ಸ್​ ಮ್ಯಾನೇಜ್​ಮೆಂಟ್​ ಕಮಿಟಿಯಲ್ಲಿ ಕಳೆದ 24 ವರ್ಷಗಳಿಂದ ಅಶೋಕ್ ಅವರು ಕೆಲಸ ಮಾಡ್ತಿದ್ರು. ಹೇಳದೆ ಕೇಳದೆ ಏಕಾಏಕಿ ಇವ್ರನ್ನ ಕೆಲಸದಿಂದ ಕಿತ್ತು ಹಾಕಲಾಗಿದೆ. ಕಳೆದ ಡಿಸೆಂಬರ್​ನಿಂದ ಕೈಗೆ ಸಂಬಳ ಸಿಗ್ತಿರಲಿಲ್ಲ. ‘ನಾನು ಕ್ಲಬ್​ಗೆ​ ತಿಳಿಸಿಯೇ ನನ್ನ ಪಕ್ಕದ ಮನೆಯವರ ವಿವಾಹ ಸಮಾರಂಭಕ್ಕೆ ಹೋಗಿದ್ದೆ. ನಾನು ಡಿಸೆಂಬರ್​ 31ರಂದು ವಾಪಾಸ್ಸಾದಾಗ ಕೆಲಸದಿಂದ ತೆಗೆಯಲಾಗಿತ್ತು. ಅಲ್ಲಿನ ಕಮಿಟಿಯವರು ನನ್ನನ್ನ ಭೇಟಿಯಾಗುವಂತೆ ಕೇಳಿದ್ರು. 3 ಗಂಟೆಗಳ ಭೇಟಿಯಲ್ಲಿ ಯಾರೂ ನನ್ನನ್ನ ಮಾತನಾಡಿಸಲಿಲ್ಲ. ಬಳಿಕ ಮನೆಗೆ ಬಂದೆ. ವಾರದ ಬಳಿಕ ಮತ್ತೆ ಭೇಟಿಗೆ ಕರೆದ್ರು. ಆಗಲೂ ಯಾರೂ ಮಾತನಾಡಿಸಲಿಲ್ಲ. 1 ತಿಂಗಳ ಕಮಿಟಿಯ ಮೆಂಬರ್ಸ್​ ನನ್ನನ್ನ ಮೈದಾನದಲ್ಲಿ ಭೇಟಿಯಾಗಿ ನಿಮ್ಮನ್ನ ಆದಷ್ಟು ಬೇಗ ಸಂಪರ್ಕಿಸುತ್ತೇನೆ ಎಂದಿದ್ರು. ಈವರೆಗೆ ಯಾರೂ ಸಂಪರ್ಕಿಸಿಲ್ಲ. ಡಿಸೆಂಬರ್​ನಲ್ಲಿ ನಾನು ಕೊನೆಯ ಸಂಬಳ ಪಡೆದಿದ್ದು ಎಂದು ಹೇಳುತ್ತಾ ಅಶೋಕ್​ ಅಸ್ವಾಲ್ಕರ್ ಕಂಬನಿ ಮಿಡಿಯುತ್ತಿದ್ದರೆ, ಎಂಥವರ ಹೃದಯ ಕೂಡಾ ಮಿಡಿಯುತ್ತದೆ. ಹೀಗಿರುವಾಗ ತನ್ನ ಕ್ರಿಕೆಟ್ ಭವಿಷ್ಯ ರೂಪಿಸಿದ ಗುರು ಕಣ್ಣೀರಿಡುವಾಗ  ಸೂರ್ಯಕುಮಾರ್ ಮನಸು ಕರಗದೇ ಇರುತ್ತಾ ಹೇಳಿ.​​ ಕೋಚ್ ​ಕೆಲಸ ಹೋಗಿ 7 ತಿಂಗಳಾದ ಮೇಲೆ ವಿಚಾರ ಸೂರ್ಯ ಕುಮಾರ್‌ಗೆ ತಿಳಿಯುತ್ತದೆ. ಅದು ಕೂಡಾ ಪರಿಸ್ಥಿತಿ ಕೈ ಮೀರಿದಾಗ ಅಶೋಕ್ ಅವರು ಸೂರ್ಯನಿಗೆ ತನ್ನ ಕಷ್ಟವನ್ನು ತಿಳಿಸಿದ್ದಾರೆ. ‘ಸೂರ್ಯಕುಮಾರ್​​ಗೆ ಮೆಸೇಜ್​ ಮಾಡಿದ್ದೆ’ ನಾನು ಕೆಲಸ ಕಳೆದುಕೊಂಡಿದ್ರ ಬಗ್ಗೆ ನನ್ನ ಕಟುಂಬದ ಸದಸ್ಯರಿಗೆ ತಿಳಿಸಿರಲಿಲ್ಲ. ಸೂರ್ಯಕುಮಾರ್​ಗೆ ಮೆಸೇಜ್​ ಮಾಡಿ ನಾನು ಕೆಲಸ ಕಳೆದುಕೊಂಡಿದ್ದೇನೆ ಎಂದು ತಿಳಿಸಿದೆ. ಜೊತೆಗೆ ಇದಕ್ಕೆ ಯಾರು ಕಾರಣ ಅನ್ನೋದನ್ನೂ ತಿಳಿಸಿದೆ. ಆ ಬಳಿಕ ಸೂರ್ಯ ಕೂಡ ಆ ವ್ಯಕ್ತಿಯನ್ನ ದೂರವಿಟ್ರು. ಜೊತೆಗೆ ಕಷ್ಟದಲ್ಲಿದ್ದ ನನಗೆ ಜೊತೆಯಾಗಿ ನಿಂತ್ರು ಅಂತಾ ಹೇಳಿದ್ದಾರೆ ಕೋಚ್ ಅಶೋಕ್.

ಸೂರ್ಯಕುಮಾರ್ ಬಳಿ ಕ್ರಿಕೆಟ್ ಅಕಾಡೆಮಿಯೊಂದನ್ನ ಆರಂಭಿಸುವ ಬಗ್ಗೆ ಸೂರ್ಯನ ಬಳಿ ಮಾತನಾಡಿದ್ದೇನೆ. ಅದಕ್ಕೆ ಒಪ್ಪಿಗೆ ಸೂಚಿಸಿದ್ದಾನೆ. ನಾವಿಬ್ಬರು ಯುವ ಆಟಗಾರರಿಗೆ ಕೋಚಿಂಗ್​ ನೀಡಲು ನಿರ್ಧರಿಸಿದ್ದೇವೆ ಎಂದು ಸ್ವತಃ ಅಶೋಕ್ ಅವ್ರೇ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಮೂಲಕ ಸೂರ್ಯಕುಮಾರ್​​ ಕೋಚ್ ಅವರ  ಸಂಕಷ್ಟದ ಸಮಯದಲ್ಲಿ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮರೆದಿದ್ದಾರೆ. ಇದನ್ನ ಸಹಾಯ ಅನ್ನೋದಕ್ಕಿಂತ ಇದು ಸೂರ್ಯ ಮಾಡಿರುವ ಕರ್ತವ್ಯ ಅಂದ್ರೆ ತಪ್ಪಾಗಲ್ಲ. ಆದ್ರೂ ಕೂಡಾ ತನ್ನ ಬ್ಯೂಸಿ ಶೆಡ್ಯೂಲ್ ಮಧ್ಯೆಯೂ ಕ್ರಿಕೆಟ್ ಭವಿಷ್ಯ ರೂಪಿಸಿದ ಕೋಚ್‌ ಗಾಗಿ ಸೂರ್ಯನ ಮನ ಮಿಡಿದಿರುವುದು ಮೆಚ್ಚಲೇಬೇಕು.

ಇನ್ನು ಸೂರ್ಯ ಕುಮಾರ್ ಮತ್ತು ಬಾಲ್ಯದ ಕೋಚ್ ಅಶೋಕ್ ಅವರ ಆತ್ಮೀಯ ಸಂಬಂಧ ಕೂಡಾ ಆಗಾಗ ಸುದ್ದಿಯಾಗುತ್ತಲೇ ಇರುತ್ತೆ.  ಭಾರತ ತಂಡದಲ್ಲಿ ಟೆಸ್ಟ್ ಪಂದ್ಯದಲ್ಲಿ ಆಡಲು ಅವಕಾಶ ಸಿಕ್ಕಾಗ ಸೂರ್ಯ ಮೊದಲು ತಿಳಿಸಿದ್ದು ತನ್ನ ಗುರುವಿಗೆ. ಮುಂಬೈ ನ ಅನುಶಕ್ತಿ ನಗರ್ ಚೆಂಬೂರ್ ನ ಬಾಬಾ ಅಟೋಮಿಕ್ ರೀಸರ್ಚ್ ಸೆಂಟರ್ ನ ಮೈದಾನದಲ್ಲಿ ಸೂರ್ಯ ಕುಮಾರ್ ಅವರಿಗೆ ಪ್ರತಿಯೊಂದು ಕ್ರಿಕೆಟ್ ಕೌಶಲ್ಯವನ್ನು ಹೇಳಿಕೊಟ್ಟಿದ್ದೇ ಅಶೋಕ್ ಅಸ್ವಾಲ್ಕರ್. ಅಂದು ತಮ್ಮ ಶಿಷ್ಯನ ಕರೆಯಿಂದ ಭಾವುಕರಾದ ಕೋಚ್, “ನಾವು ಈ ಪಯಣದ ಆರಂಭದಲ್ಲಿ ಕಂಡ ಕನಸು ನನಸಾಗಿದೆ, ಗಮನ ಕೇಂದ್ರೀಕರಿಸು ಎಂದು ಸೂರ್ಯ ಕುಮಾರ್ ಯಾದವ್ ಗೆ ಹೇಳಿ ಶುಭಾಶಯ ತಿಳಿಸಿದ್ದರು. ಬಲಗೈ ಬ್ಯಾಟ್ಸ್ ಮನ್ ಆಗಿರುವ ಸೂರ್ಯಕುಮಾರ್ ಯಾದವ್, 10 ವರ್ಷದವರಿದ್ದಾಗಲೇ ತರಬೇತಿ ಪಡೆಯಲು ಪ್ರಾರಂಭಿಸಿದ್ದರು. ಅಸ್ವಾಲ್ಕರ್ ಹಾಗೂ ಕೋಚ್ ಕಾಮತ್ ಸೂರ್ಯನ ಕ್ರಿಕೆಟ್ ಶ್ರಮಕ್ಕೆ ನೀರೆರೆದು ಪೋಷಿಸಿದ್ರು. ಸೂರ್ಯಕುಮಾರ್ ಯಾದವ್ ಅವರ ಮುಂಬೈ ಹಾಗೂ ಐಪಿಎಲ್ ಫ್ರಾಂಚೈಸಿ ತಂಡದ ಸದಸ್ಯರು ಭಾರತ ತಂಡ ಪ್ರವೇಶಿಸಿದರು, ಆಗ ಮತ್ತೆ ಸೂರ್ಯಕುಮಾರ್ ಯಾದವ್ ನನ್ನು ಮರಳಿ ಹಳಿಗೆ ತರಲು ಮತ್ತೆ ಅಶೋಕ್ ಅವರು ಪರಿಶ್ರಮ ಹಾಕಿದ್ದರು. “ಕೆಲವೊಮ್ಮೆ ಅಂತಹ ಸಂದರ್ಭಗಳು ಎದುರಾಗುತ್ತವೆ ನೀವು ಯಾರ ಮಾತನ್ನೂ ಕೇಳುವುದಿಲ್ಲ. ಎಷ್ಟೇ ಸಲಹೆಗಳನ್ನು ನೀಡಿದರೂ ಕೇಳುವುದಿಲ್ಲ. ಅಂತೆಯೇ ಸೂರ್ಯಕುಮಾರ್ ಯಾದವ್ ಗೂ ಆಗಿತ್ತು. 3-4 ವರ್ಷಗಳನ್ನು ವ್ಯರ್ಥ ಮಾಡಿದ ಬಳಿಕ, ಸೂರ್ಯಕುಮಾರ್ ಯಾದವ್ ಗೆ ಅರ್ಥವಾಯಿತು. ಅಂತಹ ಸ್ಥಿತಿಯಲ್ಲಿ ನಾವು ಆತನಿಗೆ ಆತ್ಮವಿಶ್ವಾಸ ತುಂಬಿದೆವು. ಆತ ನಿರ್ಧರಿಸಿ, ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾನೆ” ಎನ್ನುತ್ತಾರೆ ಕೋಚ್. ಒಮ್ಮೆ ಸೂರ್ಯಕುಮಾರ್ ಯಾದವ್ ಕಿಟ್ ಹಿಡಿದುಬಂದಿದ್ದರು. ಆದರೆ ಪಿಚ್ ಸಿದ್ಧವಾಗಿರದ ಕಾರಣ ಮನೆಗೆ ತೆರಳುವಂತೆ ಹೇಳಿದ್ದೆ ಆದರೆ 2 ಗಂಟೆಗಳ ಕಾಲ ಪಿಚ್ ಪಕ್ಕದಲ್ಲೇ ಯಾದವ್ ಕುಳಿತಿದ್ದರು ಎಂದು ಹಳೆಯ ಘಟನೆಗಳನ್ನು ಅಸ್ವಾಲ್ಕರ್ ನೆನಪಿಸಿಕೊಳ್ಳುತ್ತಾರೆ. ಸೂರ್ಯಕುಮಾರ್ ಯಾದವ್ ಗೆ ಶಾಲೆಗಿಂತ ಹೆಚ್ಚು ಮೈದಾನ ಇಷ್ಟವಾಗುತ್ತಿತ್ತು. ಪೋಷಕರೂ ಅದನ್ನು ಉತ್ತೇಜಿಸಿದರು ಹಾಗೂ ಆತನ ಮೇಲೆ ಸಂಪೂರ್ಣ ವಿಶ್ವಾಸವಿಟ್ಟಿದ್ದರು. ಇದು ನಮ್ಮ ಕೆಲಸವನ್ನು ಸುಲಭಗೊಳಿಸಿತು. ಸೂರ್ಯಕುಮಾರ್ ಯಾದವ್ ಟೆಸ್ಟ್ ಫಾರ್ಮ್ಯಾಟ್ ನಲ್ಲೂ ಗೇಮ್ ಚೇಂಜರ್ ಆಗಬಲ್ಲರು ಎಂದು ಅಸ್ವಾಲ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೋಚ್ ಅಂದರೆ ಸೂರ್ಯನಿಗೆ ಗೌರವ. ಶಿಷ್ಯ ಅಂದರೆ ಗುರುವಿಗೆ ಹೆಮ್ಮೆ. ಇವರಿಬ್ಬರ ಬಾಂಧವ್ಯವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸೂರ್ಯನ ಯಶಸ್ಸಿಗೆ ಕಾರಣರಾದ ಕೋಚ್ ಬದುಕು ಕೂಡಾ ಪ್ರಜ್ವಲಿಸಲಿ.

Shwetha M

Leave a Reply

Your email address will not be published. Required fields are marked *