ಮುಂಬೈಗೆ RO & SKY ಗುಡ್ ಬೈ – ₹30 ಕೋಟಿ ಆಫರ್ ಕೊಟ್ಟ ಶಾರುಖ್?
HITಮ್ಯಾನ್ ದಾರಿ ಯಾವುದಯ್ಯಾ?

ಮುಂಬೈಗೆ RO & SKY ಗುಡ್ ಬೈ – ₹30 ಕೋಟಿ ಆಫರ್ ಕೊಟ್ಟ ಶಾರುಖ್?HITಮ್ಯಾನ್ ದಾರಿ ಯಾವುದಯ್ಯಾ?

ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕರಲ್ಲಿ ಹಿಟ್​ಮ್ಯಾನ್ ರೋಹಿತ್ ಶರ್ಮಾ ಕೂಡ ಒಬ್ಬರು. ಬರೋಬ್ಬರಿ 17 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಟಿ-20 ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಟ್ಟ ಯಶಸ್ವೀ ನಾಯಕ. ಆದ್ರೆ 2024ರ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಸ್ಥಿತಿ ಹೀಗಿರಲಿಲ್ಲ. ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ರೂ ಕೂಡ ಏಕಾಏಕಿ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ್ರು. ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿದ್ದ ಹಾರ್ದಿಕ್​ ಪಾಂಡ್ಯನನ್ನ ಕರೆದುಕೊಂಡು ಬಂದು ಪಟ್ಟಾಭಿಷೇಕ ಮಾಡಿದ್ರು. ಅಂದು ರೋಹಿತ್ ಶರ್ಮಾಗೆ ಮುಂಬೈ ಫ್ರಾಂಚೈಸಿ ಮಾಡಿದ ಅಪಮಾನ 2025ರ ಐಪಿಎಲ್​ಗೆ ಶಿಕ್ಷೆ ಅನುಭವಿಸುವಂತಾಗಿದೆ. ಬೆಲೆ ಇಲ್ಲದ ತಂಡದಿಂದ ಹೊರಬರೋಕೆ ಹಿಟ್​ಮ್ಯಾನ್ ಸಿದ್ಧರಾಗಿದ್ದಾರೆ. ಹಾಗೇ ಒಲ್ಲದ ನಾಯಕನ ಅಡಿಯಲ್ಲಿ ಆಡಲು ಬಯಸದ ಸೂರ್ಯಕುಮಾರ್ ಯಾದವ್ ಕೂಡ ಟೀಂ ಬಿಡೋದು ಪಕ್ಕಾ ಆಗಿದೆ. ಅಷ್ಟಕ್ಕೂ ಮುಂಬೈ ಫ್ರಾಂಚೈಸಿ ಮಾಡಿದ ಒಂದು ತಪ್ಪಿಗೆ ಅದೆಂಥಾ ಬೆಲೆ ತೆರಬೇಕಾಗಿದೆ ಅನ್ನೋ ಬಗ್ಗೆ ಡೀಟೇಲ್ಡ್ ಇಲ್ಲಿದೆ.

ಇದನ್ನೂ ಓದಿ: ರಾಹುಲ್ RCB ಸೇರೋದು ಫಿಕ್ಸ್ – KL ಕ್ಯಾಪ್ಟನ್ & ವಿಕೆಟ್ ಕೀಪರ್

2025ರ ಐಪಿಎಲ್ ಟೂರ್ನಿಗೆ ಇನ್ನೂ ಏಳೆಂಟು ತಿಂಗಳು ಬಾಕಿ ಇರುವಂತೆಯೇ ತಂಡಗಳಲ್ಲಿ ಸಾಕಷ್ಟು ಬದಲಾವಣೆಗಳಾಗ್ತಿವೆ. ಈಗಾಗ್ಲೇ ಕೋಚ್, ಮೆಂಟರ್ ಸೇರಿದಂತೆ ಇತರೆ ಸಿಬ್ಬಂದಿಯನ್ನ ರಿಪ್ಲೇಸ್ ಮಾಡಲಾಗ್ತಿದೆ.  ಮೆಗಾ ಆಕ್ಷನ್​ಗೂ ಮುನ್ನ ರಿಟೈನ್​-ರಿಲೀಸ್​ ಲೆಕ್ಕಾಚಾರಗಳು ಆರಂಭವಾಗಿದ್ದು, ದಿನಕ್ಕೊಂದು ಶಾಕಿಂಗ್​​ ಸುದ್ದಿಗಳು ಹೊರ ಬೀಳ್ತಿವೆ. ಅದ್ರಲ್ಲೂ ಐಪಿಎಲ್ ಇತಿಹಾಸದಲ್ಲಿ ಯಶಸ್ವೀ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯಲ್ಲಂತೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಫ್ರಾಂಚೈಸಿ ಕಂಡ ಸಕ್ಸಸ್​​​ಫುಲ್​ ಕ್ಯಾಪ್ಟನ್​ ರೋಹಿತ್​ ಶರ್ಮಾ, ಅಂಬಾನಿ ಬ್ರಿಗೇಡ್​ಗೆ​ ಗುಡ್​ ಬೈ ಹೇಳಲು ರೆಡಿಯಾಗಿದ್ದಾರೆ. ಕಳೆದ ಐಪಿಎಲ್​ ಆರಂಭಕ್ಕೂ ಮುನ್ನ ರೋಹಿತ್​ ಶರ್ಮಾಗೆ ಕೊಕ್​ ನೀಡಿದ್ದ ಅಂಬಾನಿ ಬ್ರಿಗೇಡ್​ ಹಾರ್ದಿಕ್​ ಪಾಂಡ್ಯಗೆ ಪಟ್ಟ ಕಟ್ಟಿತ್ತು. 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ, ಫ್ರಾಂಚೈಸಿ ಕಂಡ ಸರ್ವಶ್ರೇಷ್ಠ ನಾಯಕನನ್ನ ಕನಿಷ್ಠ ಒಂದು ಮಾತು ಕೇಳದೆ ಗೇಟ್​ಪಾಸ್​​ ನೀಡಿತ್ತು. ಇದ್ರಿಂದಾಗಿ ಒನ್​ ಫ್ಯಾಮಿಲಿಯಂತಿದ್ದ ತಂಡ ಒಡೆದ ಮನೆಯಾಗಿ ಬದಲಾಗಿತ್ತು. ರೋಹಿತ್ ಶರ್ಮಾ ಪರ ಒಂದಷ್ಟು ಆಟಗಾರರು ನಿಂತಿದ್ರೆ ಹಾರ್ದಿಕ್ ಪಾಂಡ್ಯ ಪರ ಮತ್ತೊಂದಷ್ಟು ಪ್ಲೇಯರ್ಸ್ ಇದ್ದಾರೆ. ಇದೀ ರೋಹಿತ್ ಬಣದಲ್ಲಿ ಗುರುತಿಸಿಕೊಂಡಿದ್ದ  ಸೂರ್ಯಕುಮಾರ್ ಯಾದವ್ ಕೂಡ ತಂಡ ಬಿಡ್ತಾರೆ ಅನ್ನೋ ಸುದ್ದಿ ಇದೆ.

ಸ್ವಾಭಿಮಾನಿ ರೋಹಿತ್ ಶರ್ಮಾ ಮುಂಬೈ ತಂಡಕ್ಕೆ ಗುಡ್ ಬೈ?

ರೋಹಿತ್ ಶರ್ಮಾ ಸಾಮಾನ್ಯ ಆಟಗಾರ ಅಲ್ಲ. ಟೀಮ್​ ಇಂಡಿಯಾಗೆ ಪ್ರತಿಷ್ಠಿತ ವಿಶ್ವಕಪ್​ ಗೆಲ್ಲಿಸಿಕೊಟ್ಟಿರೋ ನಾಯಕ. ಇಂಥಾ ನಾಯಕ ಹಾರ್ದಿಕ್​ ಪಾಂಡ್ಯ ನಾಯಕತ್ವದಲ್ಲಿ ಆಡಬೇಕಂದ್ರೆ ಹೇಗೆ ಸಾಧ್ಯ.? ಮೊದ್ಲೇ  ರೋಹಿತ್​ ಶರ್ಮಾ ಸ್ವಾಭಿಮಾನಿ. ಅವಮಾನವನ್ನ ಸುಲಭಕ್ಕೆ ಮರೆಯೋ ಜಾಯಮಾನ ರೋಹಿತ್​​ದ್ದಲ್ಲ. ಕಳೆದ ಸೀಸನ್​ನಲ್ಲೇ ಸಾಕಷ್ಟು ನೋವಿನಲ್ಲೂ ಕೂಡ ಅಪಮಾನವನ್ನ ನುಂಗಿಕೊಂಡು ಆಟವಾಡಿದ್ರು. ಆದ್ರೆ, ಮುಂದಿನ ಸೀಸನ್​ನಲ್ಲಿ ಆಡೋ ಮಾತೇ ಇಲ್ಲ. ಅಲ್ದೇ ನಾಯಕತ್ವದಿಂದ ತೆಗದು ಹಾಕಿದ ಬೆನ್ನಲ್ಲೇ ರೋಹಿತ್​ ಮುಂಬೈಗೆ ಗುಡ್​ ಬೈ ಹೇಳೋ ಸುದ್ದಿ ಕಳೆದ ಆವೃತ್ತಿಯಲ್ಲೇ ಹರಿದಾಡಿತ್ತು. ಆದ್ರೆ, ಟೂರ್ನಿಗೆ ಸಮಯ ಹತ್ತಿರವಾಗಿದ್ದ ಕಾರಣಕ್ಕೋ ಏನೋ, ಒಲ್ಲದ ಮನಸ್ಸಿನಲ್ಲೇ ಮುಂಬೈ ಪರ ಮುಂಬೈಕರ್ ಆಡಿದ್ರು. ಕಳೆದ ಸೀಸನ್​ನಲ್ಲೇ ಒಂದು ಕಾಲು ಹೊರಗಿಟ್ಟಿದ್ದ ರೋಹಿತ್​, ಇದೀಗ ಮುಂಬೈಗೆ ಬೈ ಹೇಳೋಕೆ ಸಜ್ಜಾಗಿದ್ದಾರೆ. ಮುಂಬೈ ತೊರೆಯುವ ನಿರ್ಧಾರ ತೆಗೆದುಕೊಂಡಿರೋ ರೋಹಿತ್ ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ.

ರೋಹಿತ್ ಮತ್ತು ಸೂರ್ಯಕುಮಾರ್ ಗೆ ಕೆಕೆಆರ್ ಗಾಳ?

ರೋಹಿತ್ ಶರ್ಮಾ ಮುಂಬೈ ಟೀ ಬಿಡ್ತಾರೆ ಅನ್ನೋದಕ್ಕಿಂತ ಕೆಕೆಆರ್ ತಂಡ ಸೇರಿಕೊಳ್ತಾರೆ ಅನ್ನೋ ಸುದ್ದಿಯೇ ದೊಡ್ಡ ಸಂಚಲನ ಸೃಷ್ಟಿಸಿದೆ. ಈಗಾಗಲೇ ಕೆಕೆಆರ್​​ ಫ್ರಾಂಚೈಸಿ ರೋಹಿತ್ ಶರ್ಮಾ ಜೊತೆಗೆ ಮತ್ತೊಬ್ಬ ಅಸಮಾಧಾನಿತ ಆಟಗಾರ ಸೂರ್ಯಕುಮಾರ್ ಯಾದವ್​ಗೂ ಬಿಗ್​ ಆಫರ್​ ಮಾಡಿದೆ ಎಂದು ವರದಿಯಾಗಿದೆ. ಕ್ಯಾಪ್ಟನ್ಸಿ ಪಟ್ಟದೊಂದಿಗೆ ₹30 ಕೋಟಿಯ ಆಫರ್​​ನ ಕೆಕೆಆರ್​ ಮ್ಯಾನೇಜ್​ಮೆಂಟ್​ ಮಾಡಿದೆ. ಮೂಲಗಳ ಪ್ರಕಾರ ರೋಹಿತ್​ ಶರ್ಮಾರನ್ನೂ ಕೆಕೆಆರ್​ ಫ್ರಾಂಚೈಸಿ ಈಗಾಗಲೇ ಸಂಪರ್ಕಿಸಿ ಚರ್ಚಿಸಿದೆ ಎನ್ನಲಾಗಿದೆ. ಇನ್ನು ಮುಂಬೈ ತಂಡದ ಕ್ಯಾಪ್ಟನ್ ಆಗಿ ಹಾರ್ದಿಕ್​ಗೆ ಪಟ್ಟ ಕಟ್ಟಿದಾಗ ಸೂರ್ಯಕುಮಾರ್​ ಯಾದವ್​ ಕೂಡ ಬೇಸರಗೊಂಡಿದ್ರು. ರೋಹಿತ್​ ಶರ್ಮಾ ಜೊತೆಗೆ ಸೂರ್ಯ ಹೆಚ್ಚು ಗುರುತಿಸಿಕೊಂಡಿದ್ರು. ಸೂರ್ಯ​ ಈ ಮಟ್ಟಿಗೆ ಸಕ್ಸಸ್​ ಕಂಡಿದ್ದು ಕೂಡ ರೋಹಿತ್​ ನಾಯಕತ್ವದಡಿಯಲ್ಲೇ. ಈಗ ಟೀಮ್​ ಇಂಡಿಯಾ ನಾಯಕತ್ವ ಸೂರ್ಯನಿಗೆ ಸಿಕ್ಕಿರೋದ್ರ ಹಿಂದೆಯೂ ರೋಹಿತ್​​ ಪಾತ್ರವಿದೆ. ಇಬ್ಬರ ನಡುವೆ ಉತ್ತಮ ಬಾಂಡಿಂಗ್​ ಇರೋದ್ರಿಂದ ಸೂರ್ಯ ನಾಯಕತ್ವದಲ್ಲಿ ಆಡಲು ರೋಹಿತ್​ಗೆ ಯಾವುದೇ ಸಮಸ್ಯೆ ಇರಲ್ಲ. ಹೀಗಾಗಿ ​ಸೂರ್ಯ ಕೆಕೆಆರ್​​ ಸಾರಥ್ಯ ವಹಿಸಿಕೊಂಡ್ರೆ, ರೋಹಿತ್​​ ಕೆಕೆಆರ್​ ಸೇರೋದು ಬಹುತೇಕ ಕನ್​​ಫರ್ಮ್​ ಆದಂತೆ.

ರೋಹಿತ್ ಶರ್ಮಾ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್!

ರೋಹಿತ್ ಶರ್ಮಾ ಎಂಥಾ ಆಟಗಾರ, ಅವ್ರ ವ್ಯಾಲ್ಯೂ ಏನು ಅಂತಾ ಐಪಿಎಲ್​ನ ಎಲ್ಲಾ ಫ್ರಾಂಚೈಸಿಗಳಿಗೂ ಗೊತ್ತಿದೆ. ಇದೇ ಕಾರಣಕ್ಕೆ ಸಾಕಷ್ಟು ತಂಡಗಳು ರೋಹಿತ್ ಶರ್ಮಾರನ್ನ ತಂಡಕ್ಕೆ ಸೇರಿಸಿಕೊಳ್ಳೋಕೆ ಕಾಯ್ತಿದೆ. ಅವುಗಳ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಒಂದು. ಕಳೆದ ಸೀಸನ್​ನಲ್ಲಿ ರೋಹಿತ್​ಗೆ ಮುಂಬೈ ಫ್ರಾಂಚೈಸಿ ಅವಮಾನ ಮಾಡಿದ ಸಮಯದಿಂದ ಡೆಲ್ಲಿ ಫ್ರಾಂಚೈಸಿ ಹಿಟ್​ಮ್ಯಾನ್​​ ಮೇಲೆ ಕಣ್ಣಿಟ್ಟಿದೆ. ಇದ್ರ ನಡುವೆ ರಿಷಬ್​​ ಪಂತ್ ಡೆಲ್ಲಿ ತಂಡವನ್ನ ತೊರೆಯಲು ಸಜ್ಜಾಗಿದ್ದಾರೆ. ಫ್ರಾಂಚೈಸಿ ಕೂಡ ಸ್ಟಾರ್​​ ಕ್ಯಾಪ್ಟನ್​ ಹುಡುಕಾಟದಲ್ಲಿದೆ. ಭವಿಷ್ಯದ ತಂಡ ಕಟ್ಟೋ ಸಾಮರ್ಥ್ಯ ರೋಹಿತ್​ಗಿರೋದ್ರಿಂದ ಡೆಲ್ಲಿ ಫ್ರಾಂಚೈಸಿ ನಾಯಕತ್ವದ ಆಫರ್​ ನೀಡೋ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ರೋಹಿತ್​​ ಡೆಲ್ಲಿ ಸೇರಿದ್ದೇ ಆದ್ರೆ, ತಂಡದ ಚರಿಷ್ಮಾನೇ ಬದಲಾಗಲಿದೆ. ಇದುವರೆಗೂ ಒಂದೂ ಕಪ್ ಗೆಲ್ಲದ ಡೆಲ್ಲಿ ತಂಡ ಇದೀಗ ಹೊಸ ಟೀಮ್​ನೊಂದಿಗೆ ಕಣಕ್ಕಿಳಿಯೋ ಚಾನ್ಸಸ್ ಇದೆ.

11 ವರ್ಷ ನಾಯಕ.. 5 ಬಾರಿ ಚಾಂಪಿಯನ್!

ರೋಹಿತ್ ಶರ್ಮಾ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ಮಾಡಿದ ಸಾಧನೆಗಳು ಅಷ್ಟಿಷ್ಟಲ್ಲ. 2011ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದ ರೋಹಿತ್ ಶರ್ಮಾ, ಆಟಗಾರ ಹಾಗೂ ನಾಯಕನಾಗಿ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ವಿಶ್ವಕಪ್ ವಿಜೇತ ನಾಯಕ ರಿಕಿ ಪಾಂಟಿಂಗ್ ಅವರಿಂದ 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ಸಿ ಪಡೆದಿದ್ದ ರೋಹಿತ್ ಶರ್ಮಾ, ತಂಡಕ್ಕೆ ಅತ್ಯಮೋಘ ಯಶಸ್ಸು ತಂದುಕೊಟ್ಟಿದ್ದಾರೆ. ಎಂಐ ತಂಡವನ್ನು 11 ವರ್ಷಗಳ ಕಾಲ ನಾಯಕನಾಗಿ ಮುಂದುವರಿಸಿದ್ದ ಹಿಟ್‌ಮ್ಯಾನ್, ತಮ್ಮ ಚೊಚ್ಚಲ ಕ್ಯಾಪ್ಟನ್ಸಿಯಲ್ಲೇ ಮುಂಬೈ ಫ್ರಾಂಚೈಸಿಗೆ ಟ್ರೋಫಿ ಗೆದ್ದುಕೊಟ್ಟಿದ್ದರು. ಹಾಗೇ 2015, 2017, 2019 ಹಾಗೂ 2020ರಲ್ಲೂ ತಂಡಕ್ಕೆ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟು, ಅತಿ ಹೆಚ್ಚು ಟ್ರೋಫಿ ಗೆದ್ದ ನಾಯಕ ಎಂಬ ದಾಖಲೆ ನಿರ್ಮಿಸಿದ್ದರು. ಆದ್ರೆ 2023ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವ ಮೂಲಕ ಮಹೇಂದ್ರ ಸಿಂಗ್ ಧೋನಿ ಅವರು ರೋಹಿತ್‌ ಶರ್ಮಾರ ದಾಖಲೆಯನ್ನು ಸರಿಗಟ್ಟಿದ್ದರು. ಹೀಗಾಗಿ ಇಬ್ಬರೂ ತಲಾ ಐದು ಬಾರಿ ತಮ್ಮ ಟೀಮ್​ಗಳಿಗೆ ಟ್ರೋಫಿ ತಂದುಕೊಟ್ಟ ದಾಖಲೆಯನ್ನ ಶೇರ್ ಮಾಡಿದ್ದಾರೆ.

ಒಟ್ನಲ್ಲಿ ರೋಹಿತ್ ಶರ್ಮಾರಂತ ಆಟಗಾರ ಮತ್ತು ನಾಯಕನನ್ನ ಪಡೆದಿದ್ದ ಮುಂಬೈ ಫ್ರಾಂಚೈಸಿ ಇದೀಗ ದಿಗ್ಗಜ ಆಟಗಾರರನ್ನೇ ಕಳೆದುಕೊಳ್ಳೋ ಆತಂಕದಲ್ಲಿದೆ. ರೋಹಿತ್ ಶರ್ಮಾ ಜೊತೆ ಸೂರ್ಯಕುಮಾರ್ ಯಾದವ್ ಕೂಡ ಟೀಂ ಬಿಡೋ ಲೆಕ್ಕಾಚಾರದಲ್ಲಿದ್ದಾರೆ. ಮತ್ತೊಂದೆಡೆ ಬೌಲಿಂಗ್ ಬ್ರಹ್ಮಾಸ್ತ್ರ ಅಂತಾನೇ ಕರೆಸಿಕೊಳ್ಳೋ ಜಸ್​ಪ್ರೀತ್ ಬುಮ್ರಾ ಕೂಡ ಹಾರ್ದಿಕ್ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನ  ಹೊಂದಿದ್ದಾರೆ. ಹೀಗಾಗಿ 2025ರ ಐಪಿಎಲ್ ವೇಳೆಗೆ ಮುಂಬೈ ಇಂಡಿಯನ್ಸ್​ನ ಯಾವೆಲ್ಲಾ ಸ್ಟಾರ್ ಪ್ಲೇಯರ್ಸ್ ತಂಡ ತೊರೆಯುತ್ತಾರೆ ಅನ್ನೋದೇ ತೀವ್ರ ಕುತೂಹಲ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *