ಏಷ್ಯಾಕಪ್ ನಿಂದ ಹೊರಬಿದ್ದ ಕನ್ನಡತಿ – ಶ್ರೇಯಾಂಕಾ ಪಾಟೀಲ್ ಬೆರಳು ಮುರಿತ
ಟಗರುಪುಟ್ಟಿ ಕನಸು ನನಸಾಗಲೇ ಇಲ್ವಾ?
ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ಏಷ್ಯಾಕಪ್ನಲ್ಲಿ ಭಾರತ ವನಿತಾ ಪಡೆ ಅದ್ಭುತ ಪ್ರದರ್ಶನ ನೀಡ್ತಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದ್ದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ ಯುಎಇ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ದಾಖಲೆಯ 201 ರನ್ ಕಲೆಹಾಕಿತು. ಇದು ಮಹಿಳಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಕಲೆಹಾಕಿದ ಅತಿ ದೊಡ್ಡ ಮೊತ್ತವಾಗಿದೆ. ಅಲ್ಲದೆ ಮಹಿಳಾ ಏಷ್ಯಾಕಪ್ನಲ್ಲೂ ಮೊದಲ ಬಾರಿಗೆ ದ್ವಿಶತಕದ ಗಡಿ ದಾಟಿದ ದಾಖಲೆಯನ್ನು ಟೀಂ ಇಂಡಿಯಾ ಸೃಷ್ಟಿಸಿದೆ. ಸತತ ಎರಡನೇ ಜಯದೊಂದಿಗೆ 2024ರ ಏಷ್ಯಾಕಪ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಆದ್ರೆ ಏಷ್ಯಾಕಪ್ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಹೊರ ಬಿದ್ದಿದ್ದಾರೆ.
ಇದನ್ನೂ ಓದಿ: ರಾಹುಲ್ RCB ಸೇರೋದು ಫಿಕ್ಸ್ – KL ಕ್ಯಾಪ್ಟನ್ & ವಿಕೆಟ್ ಕೀಪರ್
ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ನಡೆಯುತ್ತಿರುವ 2024ರ ಮಹಿಳಾ ಏಷ್ಯಾಕಪ್ನಲ್ಲಿ ಟೀಂ ಇಂಡಿಯಾ ಅಮೋಘ ಪ್ರದರ್ಶನ ನೀಡುತ್ತಿದೆ. ಹಾಗೇ ಜುಲೈ 23ರಂದು ನೇಪಾಳ ವಿರುದ್ಧ ಮೂರನೇ ಪಂದ್ಯಕ್ಕೆ ಸಿದ್ಧವಾಗಿದೆ. ಆದ್ರೆ ಹ್ಯಾಟ್ರಿಕ್ ಕನಸಿನಲ್ಲಿರೋ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದೆ. ಸ್ಟಾರ್ ಸ್ಪಿನ್ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಜುಲೈ 19ರಂದು ಶುಕ್ರವಾರ ದಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲೇ ಶ್ರೇಯಾಂಕಾ, ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಎರಡನೇ ಪಂದ್ಯದಲ್ಲೂ ಕಣಕ್ಕಿಳಿಯೋಕೆ ಸಾಧ್ಯವಾಗಿರಲಿಲ್ಲ. ಸ್ಪಿನ್ನರ್ ಶ್ರೇಯಾಂಕಾ ಅವರ ಬೆರಳಿನ ಮೂಳೆ ಮುರಿತವಾಗಿರೋ ಕಾರಣ ಏಷ್ಯಾಕಪ್ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಣೆ ಹೊರಡಿಸಿದೆ. ಪಾಟೀಲ್ ಅವರ ಸ್ಥಾನವನ್ನು ತನುಜಾ ಕನ್ವರ್ ಅವರು ತುಂಬಲಿದ್ದಾರೆ. ಶ್ರೇಯಾಂಕಾ ಬದಲಿಗೆ ಎಡಗೈ ಸ್ಪಿನ್ನರ್ ತನುಜಾ ಕನ್ವರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು ಟೂರ್ನಿಗೆ ಆಯ್ಕೆಯಾಗಿದ್ದ ನಾಲ್ವರು ಮೀಸಲು ಆಟಗಾರರಲ್ಲಿ ಒಬ್ಬರು. ಪಾಟೀಲ್ ಬದಲಿಗೆ ಬಂದ ಕನ್ವರ್ ಮಹಿಳಾ ಪ್ರೀಮಿಯರ್ ಲೀಗ್ನಲ್ಲೂ ಅಮೋಘ ಪ್ರದರ್ಶನ ನೀಡಿದ್ದರು. 8 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದರು. ಗುಜರಾತ್ ಜೈಂಟ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಏಷ್ಯಾಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ಕರ್ನಾಟಕದ ಆಟಗಾರ್ತಿ ಶ್ರೇಯಾಂಕ ಗಾಯಗೊಂಡಿದ್ದರು. ಈ ವೇಳೆ ಎಡಗೈನ ಉಂಗುರದ ಬೆರಳು ಮುರಿದಿದೆ. ಆದ್ರೂ ಕೂಡ ಛಲ ಬಿಡದ ಟಗರು ಪುಟ್ಟಿ ಖ್ಯಾತಿಯ ಶ್ರೇಯಾಂಕಾ ಪಾಕ್ ಇನ್ನಿಂಗ್ಸ್ನ ಕೊನೆವರೆಗೂ ಬೌಲಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ರು. 3.2 ಓವರ್ಗಳನ್ನು ಬೌಲ್ ಮಾಡಿದ ಶ್ರೇಯಾಂಕಾ, ಕೇವಲ 14 ರನ್ ಬಿಟ್ಟುಕೊಟ್ಟು ಪ್ರಮುಖ 2 ವಿಕೆಟ್ ಕಿತ್ತಿದ್ದರು. ಆ ಮೂಲಕ ಎದುರಾಳಿ ತಂಡವನ್ನು 108 ರನ್ಗಳಿಗೆ ಆಲೌಟ್ ಮಾಡುವಲ್ಲಿ ನೆರವಾಗಿದ್ದರು. ಆದ್ರೆ ಗಾಯದ ಸಮಸ್ಯೆ ಉಲ್ಬಣಗೊಂಡಿದ್ದರಿಂದ ಯುಎಇ ವಿರುದ್ಧದ ಪಂದ್ಯಕ್ಕೂ ಕಣಕ್ಕಿಳಿಯೋಕೆ ಸಾಧ್ಯವಾಗಿರಲಿಲ್ಲ. ಅಲ್ದೇ ಈ ಹಿಂದೆ ಮಹಿಳಾ ಪ್ರೀಮಿಯರ್ ಲೀಗ್ನಲ್ಲೂ ಶ್ರೇಯಾಂಕಾ ಅವರ ಅದೇ ಬೆರಳಿಗೆ ಗಾಯವಾಗಿತ್ತು. ಹೀಗಾಗಿ, ಐಪಿಎಲ್ನಲ್ಲೂ ಹಲವು ಪಂದ್ಯಗಳಿಗೆ ಬೆಂಚ್ ಕಾದಿದ್ದರು. ಕರ್ನಾಟಕದ ಟಗರು ಪುಟ್ಟಿ ಎಂದೇ ಪ್ರಖ್ಯಾತಿ ಪಡೆದಿರುವ ಶ್ರೇಯಾಂಕಾ ಪಾಟೀಲ್ ಸದ್ಯ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಹೊಸ ಕ್ರಶ್. 2024ರ ಡಬ್ಲ್ಯೂಪಿಎಲ್ನಲ್ಲಿ ಅಮೋಘ ಪ್ರದರ್ಶನ ನೀಡಿದ ಶ್ರೇಯಾಂಕಾ ಪಾಟೀಲ್ ಆರ್ಸಿಬಿ ಕಪ್ ಗೆಲ್ಲುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ ಕಬಳಿಸುವ ಮೂಲಕ ಶ್ರೇಯಾಂಕಾ ಗ್ರೇಟ್ ಕಂಬ್ಯಾಕ್ ಮಾಡಿದ್ದರು. ಪ್ಲೇಆಫ್ ಹಂತದಲ್ಲೂ ಮಿಂಚಿದ್ದರು. ಅತ್ಯುತ್ತಮ ಪ್ರದರ್ಶನ ನೀಡಿ ಆರ್ಸಿಬಿ ತಂಡವನ್ನು ಚಾಂಪಿಯನ್ ಮಾಡಲು ನೆರವಾಗಿದ್ದ ಶ್ರೇಯಾಂಕಾ, ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದರು. ಅಲ್ಲದೆ, ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಕೂಡ ಪಡೆದಿದ್ದರು.
ಮಹಿಳಾ ಏಷ್ಯಾಕಪ್ನಲ್ಲಿ ಭಾರತ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. 2004ರಿಂದ ಏಷ್ಯಾಕಪ್ ಟೂರ್ನಿ ಆಯೋಜನೆ ಮಾಡಲಾಗುತ್ತಿದೆ. ಇದುವರೆಗೆ 8 ಬಾರಿ ಈ ಏಷ್ಯಾಕಪ್ ಟೂರ್ನಿ ನಡೆದಿದ್ದು, ಈ ಪೈಕಿ ಭಾರತ ತಂಡದ ವನಿತೆಯರೇ ಬರೋಬ್ಬರಿ 7 ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಬಾಂಗ್ಲಾದೇಶ 2018ರಲ್ಲಿ ಒಮ್ಮೆ ಮಾತ್ರ ಟ್ರೋಫಿ ಗೆದ್ದಿದೆ. ಪ್ರಸ್ತುತ ಏಷ್ಯಾಕಪ್ನಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಮೊದಲ ಎರಡು ಪಂದ್ಯಗಳನ್ನ ಗೆದ್ದು ಸೆಮೀಸ್ಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದೆ. ಸೋ ಈ ಬಾರಿಯೂ ಏಷ್ಯಾಕಪ್ ಟೂರ್ನಿ ಗೆಲ್ಲೋ ಫೇವರೆಟ್ ಟೀಂ ಎನಿಸಿಕೊಂಡಿದೆ. ಆದ್ರೆ ಗಾಯದ ಸಮಸ್ಯೆಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ತಂಡದಿಂದ ಹೊರ ಬಿದ್ದಿರೋದು ಕನ್ನಡಿಗರು ಬೇಸರ ಮೂಡಿಸಿದೆ.