ಟ್ವಿಟ್ಟರ್ ಸಿಬ್ಬಂದಿಗೆ ಗೇಟ್ ಪಾಸ್! ಇಂಜಿನಿಯರ್ ಗಳಿಗಾಗಿ ಮಸ್ಕ್ ಪರದಾಟ?
ಒಂದು ಇ-ಮೇಲ್.. ಸಾಲು ಸಾಲು ರಾಜೀನಾಮೆ!
ಜಗತ್ತಿನ ನಂ.1 ಶ್ರೀಮಂತ ಎಲಾನ್ ಮಸ್ಕ್ ಒಡೆತನದಲ್ಲಿರೋ ಟ್ವಿಟ್ಟರ್ ಸಂಸ್ಥೆ ಈಗ ನಿತ್ಯವೂ ಒಂದಿಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಟ್ವಿಟ್ಟರ್ನ್ನ ಎಲಾನ್ ಮಸ್ಕ್ ಖರೀದಿಸಿದ್ದೇ ತಡ ಇಡೀ ಸಂಸ್ಥೆಯ ಚಿತ್ರಣವೇ ಬದಲಾಗಿ ಹೋಗಿದೆ. ದಿನ ಬೆಳಗಾಗುವಷ್ಟರಲ್ಲಿ ಟ್ವಿಟ್ಟರ್ ಶೇಕಡಾ 50ರಷ್ಟು ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಲಾಗಿತ್ತು. ಇನ್ನೊಂದಷ್ಟು ಮಂದಿ ಏಕಕಾಲಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಟ್ವಿಟ್ಟರ್ನಿಂದ ಹೊರ ನಡೆದಿದ್ರು. ಪರಿಣಾಮ ಈ ಹಿಂದೆ ಏಳು ಸಾವಿರ ಸಿಬ್ಬಂದಿಯನ್ನ ಹೊಂದಿದ್ದ ಟ್ವಿಟ್ಟರ್ನಲ್ಲಿ ಈಗ 2,750 ಮಂದಿ ಉದ್ಯೋಗಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ನಡುವೆ, ಕೆಲ ಪ್ರಮುಖ ಹುದ್ದೆಯಲ್ಲಿದ್ದವರ ರಾಜೀನಾಮೆಯಿಂದಾಗಿ ಎಲಾನ್ ಮಸ್ಕ್ಗೆ ಕೂಡ ಒಂದಷ್ಟು ಸವಾಲುಗಳು ಎದುರಾಗಿದೆ. ಕಳೆದ ವಾರವಷ್ಟೇ ಸುಮಾರು 1,200 ಸಾಫ್ಟ್ವೇರ್ ಇಂಜಿನಿಯರ್ಗಳು ಟ್ವಿಟ್ಟರ್ ಸಂಸ್ಥೆಯಿಂದ ಹೊರ ನಡೆದಿದ್ರು. ಈ ಎಲ್ಲಾ ಇಂಜಿನಿಯರ್ಗಳು ಕೋಡಿಂಗ್ ಮಾಡೋದ್ರಲ್ಲಿ ನಿಪುಣರಾಗಿದ್ದರು. ಆದ್ರೀಗ ಈ ಕೋಡಿಂಗ್ ಪರಿಣತರಿಗಾಗಿ ಎಲಾನ್ ಮಸ್ಕ್ ಕಂಪನಿಯೊಳಗೇ ಹುಡುಕಾಟ ನಡೆಸುತ್ತಿದ್ದಾರೆ.
ಇಲ್ಲಿ ಮತ್ತೊಂದು ಕುತೂಹಲಕಾರಿ ವಿಚಾರ ಅಡಗಿದೆ. 1,200 ಮಂದಿ ಸಾಫ್ಟ್ವೇರ್ ಇಂಜಿನಿಯರ್ಗಳು ಟ್ವಿಟ್ಟರ್ಗೆ ಗುಡ್ಬೈ ಹೇಳೋದಕ್ಕೂ ಪ್ರಮುಖ ಕಾರಣವಿದೆ. ಇಂಜಿನಿಯರ್ಗಳಿಂದ ಕಠಿಣ ಕೆಲಸಕ್ಕೆ ಸಜ್ಜಾಗುವಂತೆ ಇ-ಮೇಲ್ ಮಾಡಲಾಗಿತ್ತು. ವಾರಕ್ಕೆ ಬರೋಬ್ಬರಿ 80 ಗಂಟೆಗಳ ಕಾಲ ಕೆಲಸ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಇದಕ್ಕೆ ಒಪ್ಪದ ಕಂಪನಿಯ ಪ್ರಮುಖ ಇಂಜಿನಿಯರ್ಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಟ್ವಿಟ್ಟರ್ನಿಂದ ಹೊರ ನಡೆದಿದ್ದರು.