PAK ಸದ್ದಡಗಿಸಲು IND ರೆಡಿ! – ಬದ್ಧವೈರಿ ಬೇಟೆಗೆ ಸ್ಮೃತಿ & ಕೌರ್ ಸಜ್ಜು 
8ನೇ ಸಲ ಏಷ್ಯಾಕಪ್ ಕೈವಶವಾಗುತ್ತಾ?

PAK ಸದ್ದಡಗಿಸಲು IND ರೆಡಿ! – ಬದ್ಧವೈರಿ ಬೇಟೆಗೆ ಸ್ಮೃತಿ & ಕೌರ್ ಸಜ್ಜು 8ನೇ ಸಲ ಏಷ್ಯಾಕಪ್ ಕೈವಶವಾಗುತ್ತಾ?

ಭಾರತ ಮತ್ತು ಪಾಕಿಸ್ತಾನ ನಡುವಿನ ಮತ್ತೊಂದು ಹೈವೋಲ್ಟೇಜ್ ಕದನಕ್ಕೆ ಕೌಂಟ್​ಡೌನ್ ಶುರುವಾಗಿದೆ. ಜುಲೈ 19ರಿಂದ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳಾ ಏಷ್ಯಾಕಪ್‌ಗೆ ಭಾರತ ಮಹಿಳಾ ತಂಡ ಸಂಪೂರ್ಣ ಸಜ್ಜಾಗಿದೆ. ಭಾರತ ಈ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡವಾಗಿದ್ದು, ಏಳು ಬಾರಿ ಪ್ರಶಸ್ತಿ ಗೆದ್ದಿದೆ. ಹಾಲಿ ಚಾಂಪಿಯನ್ ಭಾರತ ತಂಡ ತನ್ನ ಪಾರಮ್ಯವನ್ನು ಮುಂದುವರಿಸೋ ವಿಶ್ವಾಸದಲ್ಲಿದೆ. ಅದ್ರಲ್ಲೂ ತನ್ನ ಮೊದಲ ಪಂದ್ಯದಲ್ಲೇ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಡಂಬುಲ್ಲಾದಲ್ಲಿ ಸೆಣಸಾಡಲಿದೆ. ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿದ್ದು, ಭಾರತ, ಪಾಕಿಸ್ತಾನ, ಯುಎಇ ಮತ್ತು ನೇಪಾಳ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದರೆ, ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಮಲೇಷ್ಯಾ ಬಿ ಗುಂಪಿನಲ್ಲಿವೆ.

ಇದನ್ನೂ ಓದಿ: ಬಿಗ್‌ಬಾಸ್‌‌ ಸೀಸನ್‌ 11 ಶುರು? – ರೀಲ್ಸ್ ರಾಣಿ ರೇಷ್ಮಾ, ಮಾನಸಾ, ರಾಘು

ಮಹಾಕದನಕ್ಕೆ ಕೌಂಟ್​ ಡೌನ್!  

2012ರಿಂದ ಟಿ20 ಮಾದರಿಯಲ್ಲಿ ನಡೆಯುತ್ತಿರುವ ಮಹಿಳಾ ತಂಡಗಳ ಪಂದ್ಯದಲ್ಲಿ ಅಧಿಕಾರಿಗಳಾಗಿ ಮಹಿಳೆಯರೇ ಕಾಣಿಸಿಕೊಳ್ಳಲಿದ್ದಾರೆ. ಮಹಿಳೆಯರ ಏಷ್ಯಾ ಕಪ್ 2024ರ ಟೂರ್ನಿ ಜುಲೈ 19 ರಿಂದ ಆರಂಭವಾಗಲಿದ್ದು, ಜುಲೈ 28 ರವರೆಗೆ ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯಲಿವೆ. ಒಟ್ಟು 15 ಪಂದ್ಯಗಳು ನಡೆಯಲಿದ್ದು, 12 ಪಂದ್ಯಗಳು ಗುಂಪು ಆಟಗಳಲ್ಲಿ ನಡೆಯಲಿವೆ. ಜುಲೈ 26 ರಂದು ಸೆಮಿಫೈನಲ್ ಮತ್ತು ಜುಲೈ 28 ರಂದು ಫೈನಲ್ ನಡೆಯಲಿದೆ. ಭಾರತ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಯುಎಇ, ಮಲೇಷ್ಯಾ ಮತ್ತು ಥೈಲ್ಯಾಂಡ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ಭಾರತ ಮತ್ತು ಪಾಕಿಸ್ತಾನ ತಂಡಗಳು ಪುರುಷರ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿತ್ತು. ಇದೀಗ ಮಹಿಳಾ ಪಡೆ ಕೂಡ ಪಾಕ್​ ಪಡೆಯನ್ನ ಮಣಿಸಲು ಸಜ್ಜಾಗಿದೆ. ಟೂರ್ನಿಯ ಮೊದಲ ಪಂದ್ಯ ನೇಪಾಳ ಮತ್ತು ಯುಎಇ ನಡುವೆ ನಡೆಯಲಿದೆ. ಇದಾದ ಬಳಿಕ ಭಾರತ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಫೈಟ್ ನಡೆಯಲಿದೆ. ಇನ್ನು ಶ್ರೀಲಂಕಾ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಜುಲೈ 20 ರಂದು ಆಡಲಿದೆ. ಟಿ20 ಕ್ರಿಕೆಟ್​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮಹಿಳಾ ತಂಡಗಳು ಈವರೆಗೆ 13 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಭಾರತ ತಂಡವು 10 ಬಾರಿ ಜಯ ಸಾಧಿಸಿದರೆ, ಪಾಕಿಸ್ತಾನ್ 3 ಬಾರಿ ಗೆಲುವು ದಾಖಲಿಸಿದೆ. ಈ ಅಂಕಿ ಅಂಶಗಳನ್ನ ನೋಡಿದ್ರೆ ಪಾಕ್ ವಿರುದ್ಧ ಭಾರತ ಮೇಲುಗೈ ಹೊಂದಿರುವುದು ಸ್ಪಷ್ಟ. ಹೀಗಾಗಿ ಏಷ್ಯಾಕಪ್​ನಲ್ಲೂ ಭಾರತ ತಂಡವೇ ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ.

ಇನ್ನು ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ. ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಹಕಾರಿಯಾಗಿದೆ. ಮೊದಲ ಇನ್ನಿಂಗ್ಸ್‌ನ ಆರಂಭದಲ್ಲಿ ಚೆಂಡು ಹೊಸದಾಗಿದ್ದಾಗ ಬ್ಯಾಟಿಂಗ್ ಮಾಡಲು ಅನುಕೂಲಕರವಾಗಲಿದೆ. ಬಳಿಕ ವೇಗಿಗಳಿಗೆ ಪಿಚ್ ಹೆಚ್ಚಿನ ನೆರವು ನೀಡಲಿದೆ. ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದಲ್ಲಿ ಭಾರತ ತಂಡ ಸೆಣೆಸಲು ಸಜ್ಜಾಗಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತ, ಈ ಬಾರಿ ಕೂಡ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಮತ್ತೊಂದೆಡೆ ಹಾಲಿ ಚಾಂಪಿಯನ್ನರಿಗೆ ಸವಾಲು ಹಾಕಲು ಪಾಕಿಸ್ತಾನ ಕೂಡ ಸಜ್ಜಾಗಿದೆ.  ಭಾರತ ತಂಡ ಬಲಿಷ್ಠವಾಗಿದ್ದು, ಈ ಬಾರಿ ಕೂಡ ಕಪ್ ಗೆಲ್ಲುವ ವಿಶ್ವಾಸದಲ್ಲಿ ಶ್ರೀಲಂಕಾಗೆ ಪ್ರಯಾಣಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ, ಟೆಸ್ಟ್ ಮತ್ತು ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತ, ಅದೇ ಪ್ರದರ್ಶವನ್ನು ಏಷ್ಯಾಕಪ್‌ನಲ್ಲಿ ಮುಂದುವರೆಸಲು ಸಜ್ಜಾಗಿದೆ.

Shwetha M