T-20I ಸಂಪೂರ್ಣ ನಾಯಕ ಪಾಂಡ್ಯ? -ರೋಹಿತ್ ಸ್ಥಾನಕ್ಕೆ ಹಾರ್ದಿಕ್ ಸಮರ್ಥರಾ?
ಲಂಕಾ ಸರಣಿಗೂ ಮುನ್ನವೇ ಏನಿದು ಶಾಕ್?
ಟಿ-20 ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಘೋಷಿಸಿದ್ದರು. ಇದೀಗ ಹಿಟ್ಮ್ಯಾನ್ ಸ್ಥಾನಕ್ಕೆ ಬಿಸಿಸಿಐ ಹೊಸ ನಾಯಕನನ್ನ ಹುಡುಕಿದೆ. ಅದೂ ಕೂಡ ಪರ್ಮನೆಂಟ್ ಆಗಿ ಆತನಿಗೇ ಪಟ್ಟ ಕಟ್ಟಲು ಪ್ಲ್ಯಾನ್ ಮಾಡಿದೆ. ಆ ಲಕ್ಕಿ ಪ್ಲೇಯರ್ ಮತ್ಯಾರೂ ಅಲ್ಲ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ. ಬಿಸಿಸಿಐ ಇಂಥಾದ್ದೊಂದು ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ಪಾಂಡ್ಯ ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ಪಾಂಡ್ಯ ಕ್ಯಾಪ್ಟನ್ ಆಗಿ ಸಕ್ಸಸ್ ಕಾಣ್ತಾರಾ? ಬಿಸಿಸಿಐ ಈ ನಿರ್ಧಾರದ ಹಿಂದಿನ ಲೆಕ್ಕಾಚಾರ ಏನು? ಸರಣಿ ಆಡಲು ಸಿದ್ಧನಿಲ್ಲ ಎಂದಿದ್ದೇಕೆ ಪಾಂಡ್ಯ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಾ ಬಾ ಬ್ಲಾಕ್ ಶೀಪ್ – ಮ್ಯಾಕ್ಸ್ ನಲ್ಲಿ ಕಿಚ್ಚ ಮಾಸ್ ಎಂಟ್ರಿ
ರೋಹಿತ್ ಶರ್ಮಾ ಭಾರತ ಕಂಡದಂತಹ ಒಬ್ಬ ಶ್ರೇಷ್ಠ ಆಟಗಾರ. ಹಾಗೇ ಸಮರ್ಥ ನಾಯಕ. ಟಿ-20 ವಿಶ್ವಕಪ್ ಗೆದ್ದ ಬಳಿಕ ಟಿ-20ಐ ಫಾರ್ಮೆಟ್ಗೆ ಗುಡ್ ಬೈ ಹೇಳಿದ್ರು. ಹಿಟ್ಮ್ಯಾನ್ ಸ್ಥಾನಕ್ಕೆ ಅವ್ರಷ್ಟೇ ಪರಿಪೂರ್ಣವಾದ ನಾಯಕನನ್ನ ಹುಡುಕುವ ಜವಾಬ್ದಾರಿ ಬಿಸಿಸಿಐ ಹೆಗಲೇರಿತ್ತು. ಇದೀಗ ರೋಹಿತ್ ಉತ್ತರಾಧಿಕಾರಿಯಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾದಲ್ಲಿ ವೈಸ್ ಕ್ಯಾಪ್ಟನ್ ಆಗಿದ್ದ ಪಾಂಡ್ಯಗೆ ಟಿ20 ತಂಡದ ನಾಯಕತ್ವ ನೀಡಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಪಾಂಡ್ಯ ಭಾರತ ಟಿ20 ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳೋದು ಕನ್ಫರ್ಮ್ ಆಗಿದೆ. ಭಾರತ ಮತ್ತು ಶ್ರೀಲಂಕಾ ನಡುವಣ ಟಿ20 ಸರಣಿಯು ಜುಲೈ 27 ರಿಂದ ಶುರುವಾಗಲಿದೆ. ಈ ಸರಣಿ ಮೂಲಕ ಟೀಮ್ ಇಂಡಿಯಾ ಟಿ20 ತಂಡದ ಖಾಯಂ ನಾಯಕರಾಗಿ ಪಾಂಡ್ಯ ಆಯ್ಕೆಯಾಗುವ ಸಾಧ್ಯತೆಯಿದೆ.
ಪಾಂಡ್ಯ ಫುಲ್ ಟೈಂ ಕ್ಯಾಪ್ಟನ್!
ಭಾರತ ಟಿ20 ತಂಡದ ನೂತನ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ ಎಂದು ಬಿಸಿಸಿಐ ಮೂಲಗಳು ಖಚಿತ ಪಡಿಸಿವೆ. ಭಾರತ ಟಿ20 ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲು ಆಯ್ಕೆ ಸಮಿತಿ ನಿರ್ಧಿರಿಸಿದೆ. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಜೊತೆ ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಸೂರ್ಯಕುಮಾರ್ ಹೆಸರುಗಳು ನಾಯಕತ್ವದ ರೇಸ್ನಲ್ಲಿದ್ವು. ಇದೀಗ ಹಾರ್ದಿಕ್ ಪಾಂಡ್ಯರನ್ನೇ ಮುಂದುವರೆಸಲು ಆಯ್ಕೆ ಸಮಿತಿ ನಿರ್ಧರಿಸಿದ್ದು, ಅದರಂತೆ ಮುಂಬರುವ ಟಿ20 ಸರಣಿಗಳಲ್ಲಿ ಭಾರತ ಟಿ20 ತಂಡವನ್ನು ಪಾಂಡ್ಯ ಮುನ್ನಡೆಸಲಿದ್ದಾರೆ. ಜುಲೈ 27 ರಿಂದ ಶುರುವಾಗಲಿರುವ ಟಿ20 ಸರಣಿಯೊಂದಿಗೆ ಹಾರ್ದಿಕ್ ಪಾಂಡ್ಯ ಪೂರ್ಣ ಪ್ರಮಾಣದ ನಾಯಕರಾಗಿ ಪದಾರ್ಪಣೆ ಮಾಡಲಿದ್ದಾರೆ. ಆದ್ರೆ ಏಕದಿನ ಮತ್ತು ಟೆಸ್ಟ್ ತಂಡದ ನಾಯಕರಾಗಿ ಮುಂದಿನ ವರ್ಷದವರೆಗೆ ರೋಹಿತ್ ಶರ್ಮಾರೇ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಇನ್ನು ಹಾರ್ದಿಕ್ ಪಾಂಡ್ಯ ನಾಯಕನಾಗಿ ಭಾರತ ತಂಡವನ್ನು 16 ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾ 10 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿತ್ತು. ಅಲ್ಲದೆ ಪ್ರಸ್ತುತ ಇರುವ ಆಟಗಾರರಲ್ಲಿ ಟಿ20 ತಂಡವನ್ನು ಮುನ್ನಡೆಸಿರುವ ಹೆಚ್ಚಿನ ಅನುಭವ ಪಾಂಡ್ಯಗೆ ಇದೆ. ಇದೇ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯಗೆ ನಾಯಕನ ಪಟ್ಟ ನೀಡಲಾಗಿದೆ. ಇನ್ನು ಇದೇ ತಿಂಗಳಾಂತ್ಯದಲ್ಲಿ ಭಾರತ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಭಾರತ ಮತ್ತು ಶ್ರೀಲಂಕಾ ನಡುವಣ ಸರಣಿಯು ಜುಲೈ 27 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಮೊದಲು ಮೂರು ಟಿ20 ಪಂದ್ಯಗಳನ್ನಾಡಲಾಗುತ್ತಿದ್ದು, ಆ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಆದ್ರೆ ಈ ಸರಣಿಯ ಏಕದಿನ ಪಂದ್ಯಗಳಿಗೆ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಲಭ್ಯರಾಗುವ ಸಾಧ್ಯತೆಯಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗುವುದಾಗಿ ಹಾರ್ದಿಕ್ ಪಾಂಡ್ಯ ಬಿಸಿಸಿಐಗೆ ತಿಳಿಸಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ನಾನು ಏಕದಿನ ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ನನ್ನನ್ನು ಏಕದಿನ ತಂಡದ ಆಯ್ಕೆಗೆ ಪರಿಗಣಿಸದಂತೆ ಪಾಂಡ್ಯ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಹಾರ್ದಿಕ್ ಕಾಣಿಸಿಕೊಳ್ಳುವುದಿಲ್ಲ. ಆದ್ರೆ ಶ್ರೀಲಂಕಾ ವಿರುದ್ಧದ ಟಿ-20 ಸರಣಿಯನ್ನ ಆಡಲಿದ್ದಾರೆ. ಇನ್ನು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಕೂಡ ಹೊರಗುಳಿಯಲು ನಿರ್ಧರಿಸಿದ್ದಾರೆ.
ಅಸಲಿಗೆ ಹಾರ್ದಿಕ್ ಪಾಂಡ್ಯ 2023ರ ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಪರ ಒನ್ಡೇ ಕ್ರಿಕೆಟ್ ಆಡಿಲ್ಲ. ಬಾಂಗ್ಲಾದೇಶ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಪಾಂಡ್ಯ ಅರ್ಧದಲ್ಲೇ ಟೂರ್ನಿ ತೊರೆದಿದ್ದರು. ಅಲ್ಲದೆ ಈ ಬಾರಿಯ ಐಪಿಎಲ್ ಮೂಲಕ ಸಂಪೂರ್ಣ ಫಿಟ್ನೆಸ್ನೊಂದಿಗೆ ಮರಳಿದ್ದರು. ಅದರಂತೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಉಪನಾಯಕನಾಗಿ ಕಾಣಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಭರ್ಜರಿ ಪ್ರದರ್ಶನದ ಮೂಲಕ ಗ್ರೇಟ್ ಕಮ್ಬ್ಯಾಕ್ ಮಾಡಿದ್ದರು. ಆದ್ರೆ ಐಪಿಎಲ್ ಮತ್ತು ಟಿ20 ವಿಶ್ವಕಪ್ ನಡುವೆ ಹಾರ್ದಿಕ್ ಪಾಂಡ್ಯ ಅವರ ವೈಯುಕ್ತಿಕ ಜೀವನ ಚರ್ಚೆಗೆ ಕಾರಣವಾಗಿತ್ತು. ಪಾಂಡ್ಯ ಹಾಗೂ ಪತ್ನಿ ನತಾಶಾ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವಿಚಾರ ಬಹಿರಂಗವಾಗಿತ್ತು. ಅಲ್ಲದೆ ಇಬ್ಬರೂ ಡೈವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿಗಳು ಕೂಡ ವೈರಲ್ ಆಗಿದ್ದವು. ಇದೀಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ವೈಯುಕ್ತಿಕ ಕಾರಣಗಳಿಂದಾಗಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿ ಹಾರ್ದಿಕ್ ಪಾಂಡ್ಯ ಕುತೂಹಲ ಮೂಡಿಸಿದ್ದಾರೆ.