PAKಗೆ IND ಕಾಲಿಡದಿದ್ರೆ ಬರೆದುಕೊಡಿ! – ಚಾಂಪಿಯನ್ಸ್ ಟ್ರೋಫಿಗೆ ಹೊಸ ಕ್ಯಾತೆ
ಲಂಕಾ ತಂಡದ ಮೇಲಿನ ದಾಳಿ ಹೇಗಿತ್ತು?

2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಅದ್ಯಾವ ಗಳಿಗೆಯಲ್ಲಿ ಪಾಕಿಸ್ತಾನದಲ್ಲಿ ಆಯೋಜನೆ ಮಾಡಿದ್ರೋ ಗೊತ್ತಿಲ್ಲ. ಒಂದಿಲ್ಲೊಂದು ಕನ್ಫ್ಯೂಷನ್ಸ್ ಕ್ರಿಯೇಟ್ ಆಗ್ತಾನೇ ಇದೆ. ಅದ್ರಲ್ಲೂ ಭಾರತೀಯ ಆಟಗಾರರ ರಕ್ಷಣೆ ಮತ್ತು ಭದ್ರತಾ ದೃಷ್ಟಿಯಿಂದ ಬಿಸಿಸಿಐ ಪಾಕ್‌ಗೆ ತಮ್ಮ ಆಟಗಾರರನ್ನ ಕಳಿಸಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದೆ. ಆದ್ರೆ ಪಿಸಿಬಿ ಮಾತ್ರ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನಕ್ಕೇ ಬಂದು ಟೂರ್ನಿ ಆಡ್ಬೇಕು ಅಂತಾ ಪಟ್ಟು ಹಿಡಿದಿದೆ. ಇದೆಲ್ಲದ್ರ ನಡುವೆ ಹೊಸ ಕ್ಯಾತೆ ಬೇರೆ ಶುರು ಮಾಡಿದೆ. ಅಷ್ಟಕ್ಕೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹೊಸ ವರಸೆ ಏನು? ದಶಕದ ಹಿಂದೆ ಪಾಕ್ನಲ್ಲಿ ಲಂಕಾ ಆಟಗಾರರ ಮೇಲೆ ನಡೆದಿದ್ದ ದಾಳಿ ಎಂಥಾದ್ದು? ಆಟಗಾರರ ಪಾಲಿಗೆ ಪಾಕ್ ಎಷ್ಟು ಸೇಫ್? ಮೊಂಡಾಟ ಮಾಡ್ತಿರೋ ಪಾಕ್ ಉದ್ದೇಶ ಏನು ಅನ್ನೋ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ನಿವಿ ದೂರಾಗಲು ಆತನೇ ಕಾರಣ!- 3ನೇ ವ್ಯಕ್ತಿ ಬಗ್ಗೆ ಬಾಯ್ಬಿಟ್ಟ ಚಂದನ್
2024ರ ಟಿ20 ವಿಶ್ವಕಪ್ ಗೆದ್ದಿರೋ ರೋಹಿತ್ ಶರ್ಮಾ ಌಂಡ್ ಟೀಂ ಈಗ 2025ರ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲೂ ರೋಹಿತ್ ಶರ್ಮಾರೇ ತಂಡ ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಮತ್ತು ಮುಖ್ಯಕೋಚ್ ಗೌತಮ್ ಗಂಭೀರ್ ಕಾಂಬಿನೇಷನ್ನಲ್ಲಿ ಇಬ್ಬರಿಗೂ ಇದು ಮೊದಲ ಐಸಿಸಿ ಟೂರ್ನಿಯಾಗಿದೆ. ಆದ್ರೆ ಈಗ ಇರೋ ಪ್ರಶ್ನೆ ಅಂದ್ರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತಿರೋದ್ರಿಂದ ಭಾರತದ ಪಂದ್ಯಗಳನ್ನ ಎಲ್ಲಿ ನಡೆಸಬೇಕು ಅನ್ನೋದು. ಯಾಕಂದ್ರೆ ಪಾಕ್‌ಗೆ ತೆರಳಿ ಪಂದ್ಯಗಳನ್ನ ಆಡೋಕೆ ಭಾರತೀಯ ಸರ್ಕಾರ ಒಪ್ಪಿಗೆ ನೀಡಿಲ್ಲ. ಹೀಗಾಗಿ ಟೀಂ ಇಂಡಿಯಾದ ಪಂದ್ಯಗಳನ್ನ ತಟಸ್ಥ ಸ್ಥಳದಲ್ಲಿ ಆಯೋಜನೆ ಮಾಡುವಂತೆ ಬಿಸಿಸಿಐ ಐಸಿಸಿಗೆ ಮನವಿ ಸಲ್ಲಿಸಿದೆ. ಆದ್ರೆ ಭಾರತದ ಈ ನಿರ್ಧಾರಕ್ಕೆ ಉರಿದು ಬಿದ್ದಿರೋ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೊಂಡಾಟ ಶುರು ಮಾಡಿದೆ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸುವ ಪ್ರಸ್ತಾವನೆಗಳನ್ನು ಪಿಸಿಬಿ ತಳ್ಳಿ ಹಾಕಿದೆ. ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಬರಲು ಭಾರತ ತಂಡ ಒಪ್ಪದಿದ್ದರೆ, ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನಗಳ ಸಹ-ಪ್ರಾಯೋಜಕತ್ವದಲ್ಲಿ 2026ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಬೆದರಿಕೆ ಹಾಕುತ್ತಿದೆ. ಚಾಂಪಿಯನ್ಸ್ ಟ್ರೋಫಿಯ ಎಲ್ಲ ಪಂದ್ಯಗಳನ್ನು ತನ್ನ ನೆಲದಲ್ಲಿಯೇ ನಡೆಯಬೇಕೆಂಬ ಹಠಮಾರಿ ಧೋರಣೆ ತೋರುತ್ತಿದ್ದು, ಜುಲೈ 19 ರಿಂದ 22ರವರೆಗೆ ಕೊಲಂಬೊದಲ್ಲಿ ನಡೆಯಲಿರುವ ಐಸಿಸಿಯ ವಾರ್ಷಿಕ ಸಭೆಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜಿಸುವುದನ್ನು ಸ್ಪಷ್ಟವಾಗಿ ವಿರೋಧಿಸಲು ಮುಂದಾಗಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಲಿಖಿತ ರೂಪದಲ್ಲಿ ಬರೆದುಕೊಡುವಂತೆ ಬಿಸಿಸಿಐಗೆ ಒತ್ತಾಯಿಸುತ್ತಿದೆ. ಟೂರ್ನಿಯ ರೂಪುರೇಷೆಗಳನ್ನು ಅಂತಿಮಗೊಳಿಸುವ ಸಲುವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಸಿಸಿಐನಿಂದ ಸ್ಪಷ್ಟತೆ ಕೇಳಿದೆ. ಭಾರತ ತಂಡವು ಪಾಕ್‌ಗೆ ಪ್ರಯಾಣಿಸುವುದಿಲ್ಲ ಎಂಬುದಾಗಿ ಬಿಸಿಸಿಐ ಭಾರತ ಸರ್ಕಾರದ ಲಿಖಿತ ಹೇಳಿಕೆ ಕೊಡಬೇಕೆಂದು ಪಿಸಿಬಿ ಒತ್ತಾಯ ಮಾಡ್ತಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ. ಕಳೆದ ಬಾರಿಯ ಏಷ್ಯಾಕಪ್ ಟೂರ್ನಿ ವೇಳೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಜಾರಿಗೆ ತಂದ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳಲು ಐಸಿಸಿಗೆ ಬಿಸಿಸಿಐ ಒತ್ತಾಯಿಸುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಸಲುವಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ದಕ್ಕೆ ಲಿಖಿತ ಪುರಾವೆಗಳನ್ನು ನೀಡಬೇಕು. ಪಾಕಿಸ್ತಾನಕ್ಕೆ ಬರಲು ಭಾರತ ಸರ್ಕಾರ ಅನುಮತಿ ನಿರಾಕರಿಸಿದರೆ, ಅದು ಲಿಖಿತವಾಗಿರಬೇಕು. ಆ ಪತ್ರವನ್ನು ಬಿಸಿಸಿಐ ಈಗ ಐಸಿಸಿಗೆ ಒದಗಿಸುವುದು ಕಡ್ಡಾಯ ಎಂದು ಪಿಸಿಬಿ ಮೂಲಗಳು ತಿಳಿಸಿವೆ. ಪಂದ್ಯಾವಳಿಗೆ ಕನಿಷ್ಠ 5-6 ತಿಂಗಳ ಮೊದಲು ಹಾಗೂ ಲಿಖಿತ ರೂಪದಲ್ಲಿ ಪಾಕಿಸ್ತಾನಕ್ಕೆ ಪ್ರಯಾಣಿಸುವ ಯೋಜನೆಗಳ ಬಗ್ಗೆ ಬಿಸಿಸಿಐ ಐಸಿಸಿಗೆ ತಿಳಿಸಬೇಕು ಎಂದು ಆಗ್ರಹಿಸಿದೆ.
ಭಾರತ ಪಾಕ್‌ಗೆ ತೆರಳಿ ಪಂದ್ಯಗಳನ್ನ ಆಡುತ್ತೋ ಇಲ್ವೋ ಅನ್ನೋದು ಫೈನಲ್ ಆಗೋ ಮುನ್ನವೇ ಪಿಸಿಬಿ ಈಗಾಗಲೇ ಕರಡು ವೇಳಾಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದೆ. ವೇಳಾಪಟ್ಟಿ ಪ್ರಕಾರ, ಭಾರತದ ಪಂದ್ಯಗಳು ಸೇರಿದಂತೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ಕೂಡಾ ಲಾಹೋರ್‌ನಲ್ಲಿ ನಡೆಯಲಿದೆ. ಮಾರ್ಚ್ 1ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಿಗದಿಯಾಗಿದೆ. ಫೆಬ್ರವರಿ 19ರಂದು ಕರಾಚಿಯಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ. ಮಾರ್ಚ್ 9ರಂದು ಲಾಹೋರ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಪ್ರತಿಕೂಲ ಹವಾಮಾನದಿಂದ ಪಂದ್ಯ ರದ್ದಾದರೆ ಮಾರ್ಚ್ 10ರಂದು ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿ ಮಾಡಲಾಗಿದೆ. ಆದ್ರೀಗ ಭಾರತ ಪಾಕ್‌ಗೆ ಹೋಗೋದೇ ಅನುಮಾನ ಇದೆ.
ಅಸಲಿಗೆ 2008 ರ ಮುಂಬೈ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಮೇಲೂ ಎಫೆಕ್ಟ್ ತಟ್ಟಿತ್ತು. ಇದಾದ ಮೇಲೆ ದ್ವಿಪಕ್ಷೀಯ ಸರಣಿಗಳನ್ನು ಸ್ಥಗಿತಗೊಳಿಸಲಾಗಿದೆ. ಅಸಲಿಗೆ ಪಾಕ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಪಂದ್ಯಗಳನ್ನ ಏಕಾಏಕಿ ನಿಲ್ಲಿಸಿದ್ದೇನೂ ಅಲ್ಲ. 1993ರಲ್ಲಿ ಮುಂಬೈನಲ್ಲಿ ಸೀರಿಯಲ್ ಬ್ಲಾಸ್ಟ್ ನಡೆದಿತ್ತು. ಆದ್ರೂ 1997ರ ಪಾಕ್ನಲ್ಲಿ ಏಕದಿನ ಸರಣಿಯನ್ನಾಡಿದ ಭಾರತ, 1999ರ ವಿಶ್ವಕಪ್ ಸೆಮಿಫೈನಲ್ನ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಿತ್ತು. 2001ರ ಪಾರ್ಲಿಮೆಂಟ್ ಅಟ್ಯಾಕ್ ಬಳಿಕವೂ 2004ರಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ಪಾಕ್ ಪ್ರವಾಸ ಕೈಗೊಂಡಿತ್ತು. ಹಾಗೇ 2006ರ ಮುಂಬೈ ಟ್ರೈನ್ ಅಟ್ಯಾಕ್ನ ಬಳಿಕವೂ 2007ರಲ್ಲಿ ಪಾಕ್, ಭಾರತ ಪ್ರವಾಸ ಕೈಗೊಂಡಿತ್ತು. ಆದ್ರೆ 2008ರ ಮುಂಬೈ ದಾಳಿ ಬಳಿಕ ಸಂಪೂರ್ಣ ದ್ವಿಪಕ್ಷೀಯ ಪ್ರವಾಸಕ್ಕೆ ಬ್ರೇಕ್ ಹಾಕಿತ್ತು. ಈ ಬಳಿಕ ಐಸಿಸಿ ಟೂರ್ನಿಗಳಲ್ಲಷ್ಟೇ ಇಂಡೋ- ಪಾಕ್ ಮುಖಾಮುಖಿಯಾಗ್ತಿದೆ. ಅಂದಿನಿಂದ ಉಭಯ ದೇಶಗಳು ಐಸಿಸಿ ಈವೆಂಟ್ಗಳಲ್ಲಿ ಅಥವಾ ತಟಸ್ಥ ಸ್ಥಳಗಳಲ್ಲಿ ನಡೆಯುವ ಏಷ್ಯಾ ಕಪ್ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗಿವೆ. ಅಷ್ಟೇ ಅಲ್ದೇ ಪಾಕಿಸ್ತಾನದಲ್ಲಿ ಆಟಗಾರರಿಗೆ ಹೇಗೆ ಭದ್ರತೆ ಕೊಡ್ತಾರೆ ಅನ್ನೋದನ್ನ ಹೇಳೋಕೂ ಆಗಲ್ಲ. ಯಾಕಂದ್ರೆ 2009ರ ಮಾರ್ಚ್ 3ರಂದು ಪಾಕಿಸ್ತಾನದಲ್ಲಿ ನಡೆದಿದ್ದ ಅದೊಂದು ಘಟನೆ ಇಂದಿಗೂ ಕೂಡ ಕ್ರಿಕೆಟ್ ಪಾಲಿಗೆ ಕರಾಳ ದಿನವಾಗಿದೆ.
ಟೆಸ್ಟ್ ಕ್ರಿಕೆಟ್ ಸರಣಿ ಸಲುವಾಗಿ 2009ರಲ್ಲಿ ಪಾಕಿಸ್ತಾನ ಪ್ರವಾಸದಲ್ಲಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಲಾಹೋರ್‌ನ ಗಡ್ಡಾಫಿ ಕ್ರೀಡಾಂಗಣದ ಹೊರಗೆ ಭಯೋತ್ಪಾದಕರು ದಾಳಿ ನಡೆಸಿದ್ರು. ಕೂದಲೆಳೆ ಅಂತರದಲ್ಲಿ ಶ್ರೀಲಂಕಾ ತಂಡದ ಆಟಗಾರರು ಅಂದು ಪ್ರಾಣಾಪಾಯದಿಂದ ಪಾರಾಗಿದ್ದರು. ಲಾಹೋರ್‌ನ 2ನೇ ಟೆಸ್ಟ್ನ 3ನೇ ದಿನ ಸ್ಟೇಡಿಯಂನತ್ತ ಲಂಕಾ ಆಟಗಾರರ ಬಸ್ ತೆರಳಿತ್ತು. ಗೆಲುವಿನ ಕನವರಿಕೆಯಲ್ಲೇ ಲಂಕಾ ಆಟಗಾರರು ನಗುನಗುತ್ತಾ ಕುಳಿತಿದ್ದರು. ಆದ್ರೆ ನೋಡ ನೋಡುತ್ತಿದ್ದಂತೆ ಗುಂಡಿನ ಮಳೆ ಸುರಿದಿತ್ತು. 12 ಮಂದಿ ಬಂದೂಕು ದಾರಿಗಳು, ಬಸ್ ಮೇಲೆ ಗುಂಡಿನ ದಾಳಿ ನಡೆಸಿದರು. ಆವತ್ತು ಆಟಗಾರರನ್ನ ರಕ್ಷಣೆ ಮಾಡಿದ್ದೇ ಡ್ರೈವರ್. ಬಸ್ ಡ್ರೈವರ್ ಸಮಯ ಪ್ರಜ್ಞೆಯಿಂದ ಸುರಕ್ಷಿತ ಸ್ಥಳಕೆ ಕೂಡಲೇ ಬಸ್ ತಿರುಗಿಸಿದ್ದರಿಂದಲೇ ಆಟಗಾರರು ಬದುಕುಳಿದಿದ್ದರು. ಇದಾದ ಮೇಲೆ ಪಾಕ್‌ಗೆ ತೆರಳಲು ಆಟಗಾರರು ಹಿಂದೇಟು ಹಾಕುತ್ತಿದ್ದಾರೆ.
ಇನ್ನು ಆವತ್ತು ಲಂಕಾ ಆಟಗಾರರು ಬದುಕಿದ್ದೇ ಹೆಚ್ಚು. ಈ ದಾಳಿ ಅದೆಷ್ಟು ಭಯಾನಕವಾಗಿತ್ತು ಅನ್ನೋ ಬಗ್ಗೆ ಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವ್ರೇ ಹೇಳಿಕೊಂಡಿದ್ದರು. ನಮ್ಮ ತಂಡ ಟೆಸ್ಟ್ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ತೆರಳಿತ್ತು. ನಮ್ಮ ತಂಡದ ಮಸಾಜರ್ ಮುಂದೆ ಕುಳಿತಿದ್ದರು. ಇದ್ದಕ್ಕಿದ್ದಂಗೆ ಗನ್ ಶಬ್ದ ಶುರುವಾಯಿತು. ನಾವು ಪಟಾಕಿ ಸದ್ದು ಅಂದುಕೊಂಡಿದ್ದೆವು. ಆದರೆ, ಕೂಡಲೇ ಬಗ್ಗಿ ಕುಳಿತುಕೊಳ್ಳುವಂತೆ ತಿಳಿಸಿ ಬಸ್ ಕಡೆಗೆ ಶೂಟ್ ಮಾಡುತ್ತಿದ್ದಾರೆಂದು ಮಸಾಜರ್ ಕಿರುಚಿದರು. ಮುಂದೆ ದಿಲ್ಶಾನ್ ಕುಳಿತಿದ್ದರು. ನಾನು ಮಧ್ಯದಲ್ಲಿ ನನ್ನ ಹಿಂದೆ ಮಹೇಲ ಹಾಗೇ ಕೊನೆಯ ಸೀಟ್‌ನಲ್ಲಿ ಮುರಳಿ ಇದ್ದರು. ತಿಲಾನ ಸಮರವೀರ ಮತ್ತು ತರಂಗ ಪರ್ಣವಿತನ ಕೂಡ ಮುಂದೆ ಇದ್ದರು. ನರಕ ಕಣ್ಣೆದುರೇ ಬಂದಂತಾಗಿತ್ತು. ಬಸ್‌ನ ಸೀಟ್‌ಗಳ ಕೆಳಗೆ ಅವಿತಿದ್ದೆವು. ಬಸ್ ಕಡೆಗೆ ಗುಂಡಿನ ಸುರಿಮಳೆಗೈಯುತ್ತಿದ್ದರು. ಗ್ರೆನೇಡ್‌ಗಳನ್ನು ಎಸೆದಿದ್ದರು. ರಾಕೆಟ್ ಲಾಂಚರ್‌ಗಳನ್ನು ಬಿಟ್ಟಿದ್ದರು. ಅಂದು ನಾವು ಹೇಗೆ ಬದುಕುಳಿದೆವು ಎಂಬುದು ಈಗಲೂ ಅರ್ಥವಾಗುತ್ತಿಲ್ಲ. ತಿಲಾನ ಸಮರವೀರ ಭುಜಕ್ಕೆ ಗಾಯಗಳಾಗಿದ್ದವು. ಅಜಂತ ಮೆಂಡಿಸ್ ಕೂಡ ಗಾಯಗೊಂಡಿದ್ರು. ತರಂಗ ಪರ್ಣವಿತನ ಎದೆ ಭಾಗಕ್ಕೆ ಗುಂಟೇಟು ಬಿದ್ದಿದೆ ಎಂದು ಕುಸಿದು ಬಿದ್ದು ನೋವಿನಿಂದ ನರಳುತ್ತಿದ್ದರು. ನಮಗೆ ರಕ್ಷಣೆ ಒದಗಿಸುತ್ತಿದ್ದ ಭದ್ರತಾ ಸಿಬ್ಬಂದಿ ಎಲ್ಲರೂ ಮೃತಪಟ್ಟಿದ್ದರು. ಉಗ್ರರು ಬಸ್ ಡ್ರೈವರ್‌ಗೂ ಗುಂಡಿಟ್ಟು ಸಾಯಿಸುವ ಪ್ರಯತ್ನ ನಡೆಸಿದ್ದರು ಆದರೆ ಕೂದಲೆಳೆ ಅಂತರದಲ್ಲಿ ಗುಂಡು ತಪ್ಪಿಹೋಗಿತ್ತು. ಬಳಿಕ ಕ್ರೀಡಾಂಗಣದ ಸಮೀಪಕ್ಕೆ ಬಸ್ ಕೊಂಡೊಯ್ಯುವಲ್ಲಿ ಡ್ರೈವರ್ ಸಫಲರಾದರು. ನಮ್ಮ ಪಾಲಿನ ಹೀರೋ ಅವರು ಎಂದು ಭಯಾನಕ ಘಟನೆಯನ್ನ ವಿವರಿಸಿದ್ದರು. ಬಳಿಕ ಆ ಸಮಯದಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳುವಾಗ ಭದ್ರತೆ ಬಹುದೊಡ್ಡ ಸಮಸ್ಯೆಯಾಗಿತ್ತು. ಸುರಕ್ಷತೆ ಕುರಿತಾಗಿ ನಾವು ಕಳವಳ ವ್ಯಕ್ತಪಡಿಸಿದ್ದೆವು. ಆಟಗಾರರಿಗೆ ಏನಾದರೂ ಆದರೆ ಎಂಬ ಭಯದಿಂದ ವಿಮಾ ಪಾಲಿಸಿಗಳನ್ನೆಲ್ಲಾ ಪರಿಶೀಲಿಸಿದ್ದೆವು. ಎಲ್ಲ ರೀತಿಯ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಭರವಸೆ ನೀಡಿದ ಬಳಿಕವಷ್ಟೇ ನಾವು ಅಲ್ಲಿಗೆ ತೆರಳಿದ್ದೆವು. ಎಂದು ಸಂಗಕ್ಕಾರ ಹೇಳಿಕೊಂಡಿದ್ದರು. ಅಂದ್ರೆ ಇಲ್ಲಿ ಸಂಗಕ್ಕಾರ ಪ್ರತೀ ಮಾತಿನಲ್ಲೂ ಕೂಡ ನಾವು ಬದುಕಿದ್ದೇ ಹೆಚ್ಚು ಎನ್ನುವ ಭಯ ಇತ್ತು. 2009ರಲ್ಲಿ ಲಂಕಾ ಆಟಗಾರರ ಮೇಲೆ ದಾಳಿ ನಡೆದ ಬಳಿಕ ಐಸಿಸಿ ಕೂಡ ಪಾಕಿಸ್ತಾನಕ್ಕೆ ಯಾವುದೇ ತಂಡಗಳು ಪ್ರವಾಸ ಮಾಡದಂತೆ ಆದೇಶಿಸಿತ್ತು. ಪರಿಣಾಮ ಒಂದು ದಶಕದ ಕಾಲ ಪಾಕಿಸ್ತಾನ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಕಾಣದಂತಾಗಿತ್ತು.
ಇಷ್ಟೆಲ್ಲಾ ಆದ್ರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳೋದೇ ಬೇರೆ. ಭಾರತದ ಟೆನಿಸ್, ಬ್ಯಾಡ್ಮಿಂಟನ್, ಕಬ್ಬಡಿ ಸೇರಿದಂತೆ ಇತರೆ ಅಥ್ಲೆಟಿಕ್ಗಳು ಪಾಕ್ ಪ್ರವಾಸ ಮಾಡಿದ್ದಾರೆ. ಕ್ರಿಕೆಟಿಗರು ಬಂದ್ರೆ, ಏನಾಗುತ್ತೆ ಎಂದು ಪ್ರಶ್ನೆ ಮಾಡ್ತಿದ್ದಾರೆ. ಆದ್ರೆ ಬಿಸಿಸಿಐ ಅಧಿಕಾರಿಗಳಿಗೆ ಟೀಮ್ ಇಂಡಿಯಾ ಆಟಗಾರರು ಪಾಕ್, ಪ್ರವಾಸಕ್ಕೆ ಕಳುಹಿಸಲು ಇಷ್ಟ ಇಲ್ಲ. ಮತ್ತೊಂದೆಡೆ ಪಾಕ್ ಗಡಿಭಾಗದಲ್ಲಿನ ಭಯೋತ್ಪಾದನೆ ನಿಲ್ಲಿಸುವವರೆಗೂ 2 ರಾಷ್ಟ್ರಗಳ ಕ್ರಿಕೆಟ್ ಸರಣಿ ಸಾಧ್ಯವಿಲ್ಲ ಎಂಬ ಸಂದೇಶ ಈ ಹಿಂದೆಯೇ ಕೇಂದ್ರ ಸರ್ಕಾರ ಸೂಚಿಸಿದೆ. ಹೀಗಾಗಿ ಕೇಂದ್ರ ಸರ್ಕಾರದ ಒಪ್ಪಿಗೆ ಇಲ್ಲದೆ ಟೀಮ್ ಇಂಡಿಯಾ ಪಾಕ್ ಪ್ರವಾಸಕ್ಕೆ ತೆರಳುವುದು ಅಸಾಧ್ಯವೇ ಆಗಿದೆ. ಭಾರತ ಮತ್ತು ಪಾಕ್ ನಡುವಿನ ರಾಜಕೀಯ ಸಂಬಂಧ ಹಲವು ವರ್ಷಗಳಿಂದ ಹದಗೆಟ್ಟಿದೆ. ಹೀಗಾಗಿ ಉಭಯ ತಂಡಗಳ ನಡುವೆ ಐಸಿಸಿ ಪಂದ್ಯಗಳ ಹೊರತಾಗಿ ದ್ವಿಪಕ್ಷೀಯ ಸರಣಿ ನಡೆಯದೇ ದಶಕವೇ ಕಳೆದಿದೆ. ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಆಡಲು ಪಾಕ್ ತಂಡ ದಶಕದ ಬಳಿಕ ಭಾರತದ ನೆಲಕ್ಕೆ ಆಗಮಿಸಿತ್ತು. ಆದರೆ, ಭಾರತ ಮಾತ್ರ ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆ ಕಡಿಮೆ. ಸೋ ಫೈನಲಿ ಪಾಕ್ನಲ್ಲೇ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೊಂಡಿದೆ. ಲಾಹೋರ್ನಲ್ಲೇ ಟೀಮ್ ಇಂಡಿಯಾದ ಶೆಡ್ಯೂಲ್ ಕೂಡ ಫಿಕ್ಸ್ ಆಗಿದೆ.