IND Vs PAK.. ಬಹಿಷ್ಕಾರದ ಎಚ್ಚರಿಕೆ – ದಶಕದ ಬಳಿಕ ಭಾರತ ಪಾಕ್​ನಲ್ಲಿ ಆಡುತ್ತಾ?
ICC ಚಾಂಪಿಯನ್ಸ್ ಟ್ರೋಫಿಗೆ ಟ್ವಿಸ್ಟ್

IND Vs PAK.. ಬಹಿಷ್ಕಾರದ ಎಚ್ಚರಿಕೆ – ದಶಕದ ಬಳಿಕ ಭಾರತ ಪಾಕ್​ನಲ್ಲಿ ಆಡುತ್ತಾ?ICC ಚಾಂಪಿಯನ್ಸ್ ಟ್ರೋಫಿಗೆ ಟ್ವಿಸ್ಟ್

ಟಿ-20 ವಿಶ್ವಕಪ್ ಗೆದ್ದಿದ್ದೇ ಗೆದ್ದಿದ್ದು. ಟೀಂ ಇಂಡಿಯಾವನ್ನ ತಡೆಯೋರೇ ಇಲ್ಲ. ಜಿಂಬಾಬ್ವೆ ವಿರುದ್ಧದ ಟಿ-20 ಸರಣಿ ಹಾಗೇ ವಿಶ್ವ ಚಾಂಪಿಯನ್​ಶಿಪ್ ಲೆಜೆಂಡ್ಸ್ ಟ್ರೋಫಿಯೂ ಟೀಂ ಇಂಡಿಯಾ ಪಾಲಾಗಿದೆ. ಸೋ ಸೋಲಿಲ್ಲದ ಸರದಾರನಂತೆ ಟ್ರೋಫಿಗಳನ್ನ ಬೇಟೆಯಾಡ್ತಿರೋ ಭಾರತದ ಮಂದೆ ಸಾಲು ಸಾಲು ಸರಣಿಗಳಿವೆ. ಬಟ್ ಈ ಎಲ್ಲಾ ಪಂದ್ಯಗಳಿಗಿಂತ ಭಾರತದ ಮೇನ್ ಟಾರ್ಗೆಟ್ ಇರೋದು 2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ. ಆದ್ರೆ ಈ ಟೂರ್ನಿಗಿಂತ ಹೆಚ್ಚಾಗಿ ಚರ್ಚೆಯಾಗ್ತಿರೋ ವಿಷ್ಯ ಅಂದ್ರೆ ಅದು ಪಾಕಿಸ್ತಾನ ಆತಿಥ್ಯವನ್ನ ವಹಿಸುತ್ತಿದೆ ಅನ್ನೋದು. ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಹೋಗ್ಬೇಕೋ ಬೇಡ್ವೋ ಇಲ್ಲ ಬೇರೆ ಸ್ಥಳದಲ್ಲಿ ಮ್ಯಾಚ್​ಗಳನ್ನ ಆಡೋದಾ ಅನ್ನೋ ಬಗ್ಗೆ ಗೊಂದಲದಲ್ಲಿರುವಾಗ್ಲೇ ಪಾಕ್ ಕ್ರಿಕೆಟ್ ಮಂಡಳಿ ಬಹಿಷ್ಕಾರದ ಎಚ್ಚರಿಕೆ ಕೊಟ್ಟಿದೆ. ಭಾರತದ ಪಂದ್ಯಗಳಿಗೂ ಪಾಕಿಸ್ತಾನ ಬಹಿಷ್ಕಾರದ ಎಚ್ಚರಿಕೆಗೂ ಏನ್ ಸಂಬಂಧ? ಪಾಕ್​ಗೆ ಕಾಡ್ತಿರೋ ಭಯ ಏನು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗಿಲ್ ಸ್ವಾರ್ಥಕ್ಕೆ ಕೊನೆಯೇ ಇಲ್ವಾ? – ಜೈಸ್ವಾಲ್‌ ಶತಕಕ್ಕೆ ಶುಭ್ಮನ್ ಕಲ್ಲು

ಕ್ರಿಕೆಟ್​ ಲೋಕದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳಿಗೆ ಇರೋವಷ್ಟು ಜಿದ್ದಾಜಿದ್ದಿ ಜಗತ್ತಿನ ಮತ್ಯಾವುದೇ ಮ್ಯಾಚ್​ಗಳಿಗೆ ಇರೋದಿಲ್ಲ. ಹೀಗಿದ್ರೂ ಟೀಂ ಇಂಡಿಯಾ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡದೇ ದಶಕವೇ ಕಳೆದಿದೆ. ಇದ್ರ ನಡುವೆ ಚಾಂಪಿಯನ್ಸ್ ಟ್ರೋಫಿ 2025 ಕ್ಕೆ ಪಾಕಿಸ್ತಾನದಲ್ಲಿ ವೇದಿಕೆ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ರೋಫಿಗಾಗಿ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಆದರೆ, ಭಾರತ ತಂಡದ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಹಾಗೇ ಸರ್ಕಾರ ಆಟಗಾರರನ್ನ ಪಾಕಿಸ್ತಾನಕ್ಕೆ ಕಳುಹಿಸದಂತೆ ಐಸಿಸಿಗೆ ಒತ್ತಡ ಹೇರುತ್ತಿದೆ. ತಟಸ್ಥ ಸ್ಥಳದಲ್ಲಿ ಅಂದ್ರೆ ಬೇರೆ ಕಡೆ ಪಂದ್ಯಗಳನ್ನ ಆಯೋಜಿಸುವಂತೆ ಐಸಿಸಿಗೆ ಮನವಿ ಮಾಡಿದೆ ಎನ್ನಲಾಗಿದೆ. ಆದ್ರೀಗ ಪಾಕ್ ಕ್ರಿಕೆಟ್ ಮಂಡಳಿ ಚಾಂಪಿಯನ್ಸ್ ಟೂರ್ನಿ ಆಡೋಕೆ ಭಾರತ ಪಾಕಿಸ್ತಾನಕ್ಕೆ ಬರ್ಲೇಬೇಕು ಅಂತಾ ಪಟ್ಟು ಹಿಡಿದಿದೆ. 2025ಕ್ಕೆ ಭಾರತವು ಪಾಕಿಸ್ತಾನಕ್ಕೆ ಬಂದು ಆಡದೇ ಹೋದರೆ 2026ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ನ ಬಹಿಷ್ಕರಿಸೋದಾಗಿ ಐಸಿಸಿಗೆ ಎಚ್ಚರಿಕೆ ನೀಡಿದ್ಯಂತೆ.

ಪಾಕ್ ಬಹಿಷ್ಕಾರದ ಎಚ್ಚರಿಕೆ!

2008ರ ನಂತರ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನದ ಪ್ರವಾಸ ಕೈಗೊಳ್ಳುವುದನ್ನು ನಿಲ್ಲಿಸಿದೆ. ಅಂದಿನಿಂದ ಇಂದಿನವರೆಗೂ ಭಾರತ ಮತ್ತು ಪಾಕಿಸ್ತಾನ ತಂಡಗಳು ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡಿಲ್ಲ. ಏಷ್ಯಾಕಪ್, ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಂತಹ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗಿವೆ. ಇಂಥಾ ಟೈಮಲ್ಲಿ ಪಾಕಿಸ್ತಾನವು 2025 ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಸರಣಿಯನ್ನು ಆಯೋಜಿಸುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಆಫ್ಟರ್ ಎ ಲಾಂಗ್ ಟೈಂ ವಿಶ್ವ ದರ್ಜೆಯ ಕ್ರಿಕೆಟ್ ಸರಣಿಯನ್ನು ಆಯೋಜಿಸಲು ಫುಲ್‌ ಜೋಶ್‌ನಲ್ಲಿದೆ. ಹಾಗೇ ಮೈದಾನಗಳನ್ನ ರೆಡಿ ಮಾಡ್ತಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನ ಖರ್ಚು ಮಾಡುತ್ತಿದೆ. ಬಟ್ ಪಾಕಿಸ್ತಾನದಲ್ಲಿ ಭಾರತೀಯ ಆಟಗಾರರು ಅದೆಷ್ಟಮಟ್ಟಿಗೆ ಸೇಫ್ ಆಗಿ ಇರ್ತಾರೆ ಅನ್ನೋದು ದೊಡ್ಡ ಪ್ರಶ್ನೆಯೇ. ಇದೇ ಕಾರಣಕ್ಕೆ ಬಿಸಿಸಿಐ ಭಾರತದ ಪಂದ್ಯಗಳನ್ನ ಬೇರೆಡೆ ಆಯೋಜಿಸಬೇಕೆಂದು ಐಸಿಸಿಗೆ ಒತ್ತಡ ಹೇರಿತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಅಥವಾ ಶ್ರೀಲಂಕಾದಂತಹ ದೇಶಗಳಿಗೆ ಸ್ಥಳಾಂತರಿಸುವಂತೆ ಮನವಿ ಮಾಡಿದೆ ಎನ್ನಲಾಗಿದೆ. ಆದ್ರೆ ಭಾರತದ ಪಂದ್ಯಗಳು ಬೇರೆ ದೇಶಕ್ಕೆ ಸ್ಥಳಾಂತರಿಸಲು ಬಿಸಿಸಿಐ ಮನವಿ ಮಾಡಿರೋದಕ್ಕೆ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಆಕ್ರೋಶಗೊಂಡಿದೆ. ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ‘ನಾವು ಕ್ರಿಕೆಟ್‌ ಮೈದಾನವನ್ನು ನವೀಕರಿಸಲು ಕೋಟಿಗಟ್ಟಲೇ ಖರ್ಚು ಮಾಡುತ್ತಿದ್ದೇವೆ. ಚಾಂಪಿಯನ್ಸ್ ಟ್ರೋಫಿ ಸರಣಿಯನ್ನು ಪಾಕಿಸ್ತಾನದಿಂದ ಹೊರಗೆ ನಡೆಸಲು ನಾವು ಖಂಡಿತವಾಗಿಯೂ ಒಪ್ಪುವುದಿಲ್ಲ. ಭಾರತ ಯಾವುದೇ ನಿರ್ಧಾರ ತೆಗೆದುಕೊಂಡರೂ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿಯೇ ನಡೆಯಲಿದೆ. ಹಾಗೇನಾದ್ರೂ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಸರಣಿ ಆಡಲು ನಿರಾಕರಿಸಿದರೆ ತುಂಬಾ ನಷ್ಟ ಉಂಟಾಗಲಿದೆ. ಭಾರತ ತಂಡವು ಭಾಗವಹಿಸದಿದ್ದರೆ, ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಜಾಹೀರಾತು ಆದಾಯ ಇತ್ಯಾದಿಗಳ ವಿಷಯದಲ್ಲಿ ಭಾರಿ ನಷ್ಟವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ 2025ರ ಚಾಂಪಿಯನ್ಸ್‌ ಟ್ರೋಫಿಯನ್ನು ಸ್ಥಳಾಂತರಿಸಿದರೆ 2026ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಬಹಿಷ್ಕಾರ ಹಾಕುವುದಾಗಿ ಐಸಿಸಿಗೆ ಪಾಕಿಸ್ತಾನ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಹಾಗೇ ಜುಲೈ 19 ರಿಂದ 22ರವರೆಗೆ ಕೊಲಂಬೊದಲ್ಲಿ ನಡೆಯಲಿರುವ ಐಸಿಸಿಯ ವಾರ್ಷಿಕ ಸಭೆಯಲ್ಲಿ ಹೈಬ್ರಿಡ್​ ಮಾದರಿಯಲ್ಲಿ ಪಂದ್ಯಾವಳಿ ಆಯೋಜಿಸುವುದನ್ನು ಸ್ಪಷ್ಟವಾಗಿ ವಿರೋಧಿಸಲು ಯೋಜನೆ ಮಾಡ್ತಿದೆ.

ಅಸಲಿಗೆ ಭಾರತ ತಂಡದ ಆಟಗಾರರನ್ನ ಪಾಕಿಸ್ತಾನಕ್ಕೆ ಕಳಿಸಲು ಭಾರತ ಸರ್ಕಾರ ಒಪ್ಪಿಗೆ ನೀಡಿಲ್ಲ. ಹಾಗೇ ಬಿಸಿಸಿಐಗೂ ಸುತಾರಾಂ ಇಷ್ಟ ಇಲ್ಲ. ಇದೇ ಕಾರಣಕ್ಕೆ ತಟಸ್ಥ ಸ್ಥಳಗಳಲ್ಲಿ ಪಂದ್ಯಗಳನ್ನ ಆಯೋಜಿಸುವಂತೆ ಐಸಿಸಿಗೆ ಮನವಿ ಮಾಡಿದೆ. ಚಾಂಪಿಯನ್ಸ್‌ ಟ್ರೋಫಿಯನ್ನು ಕಳೆದ ವರ್ಷದ ಏಷ್ಯಾಕಪ್‌ ರೀತಿ ಹೈಬ್ರಿಡ್‌ ಮಾದರಿಯಲ್ಲಿ ನಡೆಸಲು ಐಸಿಸಿ ಕೂಡ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಟೂರ್ನಿಯ ಆತಿಥ್ಯ ಹಕ್ಕು ಪಾಕಿಸ್ತಾನದ ಬಳಿಯೇ ಉಳಿಯಲಿದ್ದು, ಯುಎಇ ಸಹ ಕೆಲ ಪಂದ್ಯಗಳಿಗೆ ಆತಿಥ್ಯ ನೀಡಲಿದೆ ಎನ್ನಲಾಗುತ್ತಿದೆ. ಭಾರತದ ಲೀಗ್‌ ಹಂತದ ಪಂದ್ಯಗಳು, ಒಂದು ವೇಳೆ ಭಾರತ ಸೆಮಿಫೈನಲ್‌, ಫೈನಲ್‌ ಪ್ರವೇಶಿಸಿದರೆ ಆ ಪಂದ್ಯಗಳನ್ನು ದುಬೈನಲ್ಲಿ ನಡೆಸಲು ಐಸಿಸಿ ಚಿಂತನೆ ನಡೆಸುತ್ತಿದೆ. ಆದ್ರೆ 2025ರ ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್​ ಪಂದ್ಯಾವಳಿಯ ಎಲ್ಲ ಪಂದ್ಯಗಳನ್ನು ತನ್ನ ದೇಶದಲ್ಲಿಯೇ ಆಯೋಜಿಸುವುದಾಗಿ ದೃಢ ನಿಲುವಿಗೆ ಅಂಟಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ 2026ರ ಟಿ-20 ವಿಶ್ವಕಪ್​ ಮುಂದಿಟ್ಟು ಐಸಿಸಿಗೆ ಬೆದರಿಕೆ ಹಾಕುತ್ತಿದೆ.

Shwetha M

Leave a Reply

Your email address will not be published. Required fields are marked *