ಅಂದು ಸಚಿನ್.. ಇಂದು ರೋಹಿತ್ – ವಿಶ್ವಕಪ್ ಎತ್ತಿ ಹಿಡಿದ ಏಕೈಕ ಅಭಿಮಾನಿ
ಆಸ್ತಿ ಮಾರಿ ದೇಶವನ್ನೇ ಗೆದ್ದ ಚೌಧರಿ
ಕೆರಿಬಿಯನ್ ನಾಡಿನಲ್ಲಿ ನಡೆದ ಟಿ-20 ವಿಶ್ವಕಪ್ ಮಹಾಯುದ್ಧದಲ್ಲಿ ಭಾರತ 17 ವರ್ಷಗಳ ಬಳಿಕ ಚಾಂಪಿಯನ್ ಆಗಿ ಮೆರೆದಿತ್ತು. ದಶಕದ ಬಳಿಕ ಸಿಕ್ಕ ಈ ಗೆಲುವಿಗೆ ಆಟಗಾರರ ಸಂಭ್ರಮ ಹೇಳತೀರದ್ದಾಗಿತ್ತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹೀಗೆ ಟೀಂ ಇಂಡಿಯಾ ಪ್ಲೇಯರ್ಸ್ ಕಣ್ಣೀರಿನ ಮೂಲಕವೇ ಈ ಗೆಲುವಿನ ತೂಕವನ್ನ ಇಡೀ ಜಗತ್ತಿಗೆ ಸಾರಿದ್ದರು. ಅದ್ರಲ್ಲೂ ಟ್ರೋಫಿ ಕೈಯಲ್ಲಿಡಿದು ಕುಣಿದು ಕುಪ್ಪಳಿಸಿದ ಆಟಗಾರರನ್ನ ನೋಡಿದ ಭಾರತೀಯರ ಕಣ್ಣಂಚಲ್ಲೂ ನೀರು ತುಂಬಿತ್ತು. ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋಗಳಿಗೆ ಪೋಸ್ ಕೊಟ್ಟಿದ್ರು. ಕುಟುಂಬಸ್ಥರು ಕೂಡ ಚಾಂಪಿಯನ್ಸ್ ಕಪ್ ಹಿಡಿದು ಸಂಭ್ರಮಿಸಿದ್ದರು. ಬಟ್ ವಿಷ್ಯ ಅಂದ್ರೆ ಕ್ರಿಕೆಟರ್ಸ್ ಮತ್ತು ಅವ್ರ ಫ್ಯಾಮಿಲಿ ಮೆಂಬರ್ಸ್ ಹೊರತುಪಡಿಸಿ ಟ್ರೋಫಿ ಮುಟ್ಟೋಕೆ ಯಾರಿಗೂ ಕೂಡ ಸಾಧ್ಯವಿಲ್ಲ. ಆದ್ರೆ ಅದೊಬ್ಬ ಅಪ್ಪಟ ಅಭಿಮಾನಿ ಚಾಂಪಿಯನ್ಸ್ ಟ್ರೋಫಿ ಹಿಡಿದು ಸಂಭ್ರಮಿಸಿದ್ದರು. ಖುದ್ದು ಕ್ಯಾಪ್ಟನ್ ರೋಹಿತ್ ಶರ್ಮಾರೇ ಅವ್ರ ಕೈಗೆ ಕಪ್ ಕೊಟ್ಟಿದ್ದರು. ಅಷ್ಟೇ ಯಾಕೆ ಈ ಹಿಂದೆ ಸಚಿನ್ ತೆಂಡೂಲ್ಕರ್ ಕೂಡ ಐಸಿಸಿ ವಿಶ್ವಕಪ್ ಟ್ರೋಫಿಯನ್ನ ಇದೇ ಅಭಿಮಾನಿಯ ಕೈಗೆ ಕೊಟ್ಟಿದ್ದರು. ಟೀಂ ಇಂಡಿಯಾದ ಡೈ ಹಾರ್ಡ್ ಫ್ಯಾನ್ ಅಂತಾನೇ ಕರೆಸಿಕೊಳ್ಳೋ ಇವ್ರನ್ನ ನೀವೂ ಕೂಡ ಸ್ಟೇಡಿಯಮ್ಗಳಲ್ಲಿ ನೋಡೇ ಇರ್ತೀರಾ. ಅದು ಮತ್ಯಾರೂ ಅಲ್ಲ ಸುಧೀರ್ ಕುಮಾರ್ ಚೌಧರಿ. ಅಷ್ಟಕ್ಕೂ ಯಾರು ಈ ಚೌಧರಿ? ಟೀಂ ಇಂಡಿಯಾ ಆಟಗಾರರೇ ಇಷ್ಟೊಂದು ಗೌರವ ಕೊಡೋದೇಕೆ? ಸಚಿನ್ ಅವ್ರ ಅಪ್ಪಟ ಅಭಿಮಾನಿಯ ಅಭಿಮಾನ ಎಂಥಾದ್ದು ಅನ್ನೋ ರೋಚಕ ಕಹಾನಿ ಇಲ್ಲಿದೆ.
ಇದನ್ನೂ ಓದಿ: ಗಂಭೀರ್ ಕೊಹ್ಲಿ ಒಂದಾಗಿದ್ದು ಇದಕ್ಕಾ? – ಗೌತಮ್ ಗಂಭೀರ್ ಗಾಗಿ ಕೊಹ್ಲಿಯನ್ನೇ ಕಡೆಗಣಿಸಿತಾ BCCI
ಭಾರತದಲ್ಲಿ ಕ್ರಿಕೆಟ್ಗೆ ಸಿಗೋವಷ್ಟು ರಾಜಮರ್ಯಾದೆ ಮತ್ಯಾವುದೇ ಗೇಮ್ಗೂ ಸಿಗೋದಿಲ್ಲ. ಅದು ನೇಮ್, ಫೇಮ್, ಹಣ, ಸಂಭಾವನೆ ಯಾವುದೇ ಇರ್ಲಿ. ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದು ಬಂದರೂ ಬೇರೆ ಯಾವುದೇ ಕ್ರೀಡೆಯ ಸಾಧಕರಿಗೂ ಕೂಡ ಅಷ್ಟೊಂದು ಗೌರವ ಸಿಗಲ್ಲ. ಅಷ್ಟರ ಮಟ್ಟಿಗೆ ಕ್ರಿಕೆಟ್ ಅನ್ನೋದು ಜನಮನ ಗೆದ್ದಿದೆ. ಸಾಮಾನ್ಯ ಜನ್ರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಕ್ರಿಕೆಟ್ ಅನ್ನ ಇಷ್ಟ ಪಡ್ತಾರೆ. ಅದ್ರಲ್ಲೂ ಆಟಗಾರರಂದ್ರೆ ಪ್ರಾಣ ಬಿಡೋ ಅಭಿಮಾನಿಗಳೂ ಇದ್ದಾರೆ. ಟೀಂ ಇಂಡಿಯಾಗೆ ಅದೆಂಥಾ ಅಪ್ಪಟ ಅಭಿಮಾನಿಗಳಿದ್ದಾರೆ ಅಂದ್ರೆ ಕ್ರಿಕೆಟಿಗರು ಯಾವುದೇ ದೇಶಕ್ಕೆ ಹೋಗಿ ಆಡಿದರೂ ಅವರನ್ನು ಸಪೋರ್ಟ್ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ. ಆದರೆ ಆ ಅಭಿಮಾನಿಗಳ ಪೈಕಿ ವಿಶೇಷ ಅಭಿಮಾನಿ ಎಂದರೆ ಸುಧೀರ್ ಕುಮಾರ್ ಚೌಧರಿ. ಗಾಡ್ ಆಫ್ ಕ್ರಿಕೆಟ್ ಅಂತಾನೇ ಕರೆಸಿಕೊಳ್ಳೋ ಸಚಿನ್ ತೆಂಡುಲ್ಕರ್ ಅವರ ಅಪ್ಪಟ ಅಭಿಮಾನಿ. ಮೈಮೇಲೆ ಇಂದಿಗೂ ತೆಂಡುಲ್ಕರ್ ಎಂದು ಬರೆದುಕೊಂಡು ಭಾರತ ತಂಡ ಎಲ್ಲೇ ಕ್ರಿಕೆಟ್ ಟೂರ್ನಿ ಆಡುವುದಿದ್ದರೂ ಅಲ್ಲಿಗೆ ಹೋಗಿ ಭಾರತದ ಧ್ವಜ ಹಿಡಿದು ತಂಡವನ್ನು ಚಿಯರ್ ಮಾಡ್ತಾರೆ. ಟೀಂ ಇಂಡಿಯಾದ ಅಧಿಕೃತ ಕ್ರಿಕೆಟ್ ಅಭಿಮಾನಿ ಇವರು. 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ಸುಧೀರ್ ಕುಮಾರ್ ರನ್ನು ಡ್ರೆಸ್ಸಿಂಗ್ ರೂಂಗೆ ಕರೆಸಿಕೊಂಡಿದ್ದ ಸಚಿನ್ ತೆಂಡುಲ್ಕರ್ ಈ ಅಪ್ಪಟ ಅಭಿಮಾನಿ ಕೈಗೆ ಟ್ರೋಫಿ ಕೊಟ್ಟು ಅವರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದರು. ಸಾಮಾನ್ಯವಾಗಿ ಯಾವ ಅಭಿಮಾನಿಗೂ ಟ್ರೋಫಿಯನ್ನು ಕೊಡೋದಿಲ್ಲ. ಆದರೆ ಸುಧೀರ್ ಕುಮಾರ್ ಸಂಪಾದನೆ ತೋರಿರುವ ನಿಷ್ಠೆ ಅಂತಹದ್ದು. ಹೀಗಾಗಿಯೇ ಅವರಿಗೆ ವಿಶೇಷ ಗೌರವ ನೀಡಲಾಗಿತ್ತು. ಈ ಬಾರಿ ಟಿ20 ವಿಶ್ವಕಪ್ ವೇಳೆಯೂ ಸುಧೀರ್ ಕುಮಾರ್ ಟೀಂ ಇಂಡಿಯಾಕ್ಕೆ ಚಿಯರ್ ಮಾಡಲು ಮೈದಾನದಲ್ಲಿದ್ದರು. ವಿಶ್ವಕಪ್ ಗೆದ್ದ ಬಳಿಕ ಅಂದು ಸಚಿನ್ ಮಾಡಿದಂತೆಯೇ ಸುಧೀರ್ ಕುಮಾರ್ ರನ್ನು ಕರೆದು ರೋಹಿತ್ ಶರ್ಮಾ ಟ್ರೋಫಿ ನೀಡಿ ಜೊತೆಗೇ ಫೋಟೋಗೆ ಪೋಸ್ ನೀಡಿ ಗೌರವ ನೀಡಿದ್ದಾರೆ. ಆ ಮೂಲಕ ಅಂದು ಸಚಿನ್ ಮಾಡಿದ ಕೆಲಸವನ್ನು ಈಗ ರೋಹಿತ್ ಕೂಡ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ರು.
ಟೀಮ್ ಇಂಡಿಯಾದ ಡೈ ಹಾರ್ಡ್ ಫ್ಯಾನ್ ಎಂದೇ ಖ್ಯಾತಿ ಪಡೆದಿರುವ ಸುಧೀರ್ ಕುಮಾರ್ ಚೌಧರಿ ವಿಶ್ವದ ಯಾವುದೇ ಮೂಲೆಯಲ್ಲೂ ಭಾರತದ ಪಂದ್ಯ ನಡೆದರೂ ಅಲ್ಲಿ ಹಾಜರಾಗಿ ತಂಡವನ್ನು ಸಪೋರ್ಟ್ ಮಾಡುತ್ತಾರೆ. ಅದೇ ರೀತಿ ಈ ಬಾರಿ ಯುಎಸ್ಎ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲೂ ಅವರು ಮೈದಾನದಲ್ಲಿ ಹಾಜರಾಗುವ ಮೂಲಕ ಟೀಮ್ ಇಂಡಿಯಾವನ್ನು ಸಪೋರ್ಟ್ ಮಾಡಿದ್ದರು. ಅದ್ರಂತೆ ಟಿ20 ಕಪ್ ಎತ್ತಿ ಹಿಡಿಯುವ ಅವಕಾಶ ದೊರೆತಿತ್ತು.
ಕ್ರಿಕೆಟ್ ದೇವರು ಅಂತಾನೇ ಕರೆಸಿಕೊಳ್ಳೋ ಸಚಿನ್ ತೆಂಡೂಲ್ಕರ್ ಅವ್ರಿಗೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಬಟ್ ಈ ಸುಧೀರ್ ಕುಮಾರ್ ಚೌಧರಿಗೆ ಸಚಿನ್ ಅವ್ರೇ ಅಭಿಮಾನಿಯಾಗಿದ್ದಾರೆ ಅಂದ್ರೆ ನೀವೇ ಅರ್ಥ ಮಾಡಿಕೊಳ್ಳಿ. ಅಸಲಿಗೆ ಸಚಿನ್ ನಿವೃತ್ತಿಗೂ ಮೊದಲು ಮೈದಾನದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಅದು ಸುಧೀರ್ ಕುಮಾರ್ ಅವರೇ. ಭಾರತ ದೇಶ – ವಿದೇಶ ಎಲ್ಲಿಯೇ ಆಡಲಿ, ಸುಧೀರ್ ಹಾಜರಿ ಖಂಡಿತ ಇರುತ್ತದೆ.
ಕ್ರಿಕೆಟ್ ದೇವರಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್‌ಗೆ ಎಷ್ಟೇ ಅಭಿಮಾನಿಗಳಿದ್ದರೂ, ಈ ಅಭಿಮಾನಿಗೆ ಮಾತ್ರ ಮಾಸ್ಟರ್ ಬ್ಲಾಸ್ಟರ್ ಅವರೇ ಕಟ್ಟಾ ಅಭಿಮಾನಿಯಾಗಿದ್ದಾರೆ. ಈ ಅಭಿಮಾನಿ ತುಂಬಾ ವಿಶೇಷ. ಸಚಿನ್ಗೆ ಆ ಅಭಿಮಾನಿ ಎಂದರೆ ತುಂಬಾ ಇಷ್ಟ. ಸಚಿನ್ ತೆಂಡೂಲ್ಕರ್ ನಿವೃತ್ತಿಗೂ ಮೊದಲು ಮೈದಾನದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಅದು ಸುಧೀರ್ ಕುಮಾರ್ ಅವರೇ. ಚೌಧರಿ ಅವ್ರು ಜನಿಸಿದ್ದು 1982ರಲ್ಲಿ. ಬಿಹಾರದ ಮುಜಾಫರ್ಪುರ. ದೇಹದ ತುಂಬೆಲ್ಲಾ ತ್ರಿವರ್ಣ ಧ್ವಜ ಬಳಿದುಕೊಂಡು, ಒಂದು ಕೈಯಲ್ಲಿ ರಾಷ್ಟ್ರ ಧ್ವಜ, ಮತ್ತೊಂದು ಕೈಯಲ್ಲಿ ಶಂಖ ಹಿಡಿದು ಭಾರತ ತಂಡಕ್ಕೆ ಮತ್ತು ಸಚಿನ್ಗೆ ಹುರುದುಂಬಿಸುತ್ತಿದ್ದರು. ಎದೆಯ ಮೇಲೆ ಸಚಿನ್ ತೆಂಡೂಲ್ಕರ್ ಹೆಸರು ಇದ್ದೇ ಇರುತ್ತಿತ್ತು. ಸಚಿನ್ ಹೋದಲೆಲ್ಲಾ ಸುಧೀರ್ ಕುಮಾರ್ ಹೋಗುತ್ತಾರೆ ಅಂದರೆ ಆಗರ್ಭ ಶ್ರೀಮಂತ ಇರ್ಬೇಕು ಅಂತಾ ಎಷ್ಟೋ ಅಭಿಮಾನಿಗಳು ಅಂದುಕೊಳ್ತಿದ್ರು. ಬಟ್ ರಿಯಾಲಿಟಿ ಏನಂದ್ರೆ ಚೌಧರಿ ಅವರದ್ದು ತೀರಾ ಬಡತನದ ಕುಟುಂಬ. 14ನೇ ವಯಸ್ಸಿನಲ್ಲೇ ಅಂದರೆ ತನ್ನ 6ನೇ ತರಗತಿಗೇ ಓದು ನಿಲ್ಲಿಸಿದ್ದರಂತೆ. ಆಗ ಕೆಲ ಕಾಲ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರಂತೆ. ವರ್ಷಗಳು ಉರುಳಿದಂತೆ ಕ್ರಿಕೆಟ್ ಬಗ್ಗೆ ಆಸಕ್ತಿ ಮೂಡಿತ್ತು. 6ನೇ ವಯಸ್ಸಿಗೆ ಸಚಿನ್ಗೆ ದೊಡ್ಡ ಅಭಿಮಾನಿಯಾದರು. ಅಂದಿನಿಂದ ಜೀವನವನ್ನೇ ಕ್ರಿಕೆಟ್ ಪಂದ್ಯಗಳಿಗೆ ಮೀಸಲಿಡಬೇಕು ಎಂದು ಶಪಥ ತೊಟ್ಟು ಸಣ್ಣಪುಟ್ಟ ಕೆಲಸಗಳೊಂದಿಗೆ ಹಣ ಸಂಪಾದಿಸುತ್ತಿದ್ದರು. 2003ರಿಂದ ಟೀಮ್ ಇಂಡಿಯಾ ಪಂದ್ಯಗಳನ್ನು ನೋಡುವುದು ಮತ್ತು ತಂಡವನ್ನು ಬೆಂಬಲಿಸುವ ಉತ್ಸಾಹ ಸುಧೀರ್ ಚೌಧರಿಗೆ ಮತ್ತಷ್ಟು ಹೆಚ್ಚಾಯಿತು. ಏಪ್ರಿಲ್ 2010ರ ಹೊತ್ತಿಗೆ, ಸರಿ ಸುಮಾರು 150 ಪಂದ್ಯಗಳಿಗೆ ಹಾಜರಿ ಹಾಕಿದ್ದರು. ಆಗಾಗ್ಗೆ ಪಂದ್ಯದ ಸ್ಥಳವನ್ನು ತಲುಪಲು ಬೈಸಿಕಲ್‌ನಲ್ಲಿ ಹೋಗಿದ್ದೂ ಇದೆ. ಹೀಗೆಯೇ 2007ರಲ್ಲಿ ಕ್ರಿಕೆಟ್ ಪಂದ್ಯವನ್ನು ನೋಡಲು ಬಾಂಗ್ಲಾದೇಶಕ್ಕೆ ಮತ್ತು 2006ರಲ್ಲಿ ಪಾಕಿಸ್ತಾನದ ಲಾಹೋರ್‌ಗೆ ಹೋಗಿದ್ದರು. ಬಟ್ ಇವ್ರು ಸೈಕಲ್ನಲ್ಲಿ ಹೋಗ್ತಾ ಇದ್ದದ್ದು ಹಣ ಉಳಿಸೋಕೆ. ಅಷ್ಟೇ ಯಾಕೆ ಎಷ್ಟೋ ಸಲ ರೈಲುಗಳಲ್ಲಿ ಟಿಕೆಟ್ ಇಲ್ಲದೆಯೇ ಪ್ರಯಾಣವನ್ನೂ ಮಾಡಿದ್ದಾರೆ.
ಚೌಧರಿ ಟೀಂ ಇಂಡಿಯಾಗೆ ಅದೆಷ್ಟು ದೊಡ್ಡ ಫ್ಯಾನ್ಸ್ ಅನ್ನೋದಕ್ಕೆ ಮತ್ತೊಂದು ಎಕ್ಸಾಂಪಲ್ ಕೊಡ್ತೇನೆ ನೋಡಿ. ಚೌಧರಿ ಅವರು ಪಂದ್ಯದ ಹಿಂದಿನ ದಿನದಂದು ತಮ್ಮ ದೇಹಕ್ಕೆ ಬಣ್ಣ ಬಳಿದುಕೊಳ್ತಾರೆ. ಮಲಗಿದರೆ ಬಣ್ಣ ಬಣ್ಣ ಹಾಳಾಗುತ್ತದೆ ಎಂಬ ಕಾರಣಕ್ಕೆ ಆ ರಾತ್ರಿ ನಿದ್ರೆಯನ್ನೇ ಬಿಟ್ಟು ಬಿಡುತ್ತಾರೆ. 2003ರ ಅಕ್ಟೋಬರ್ 28ರಂದು ಆಸ್ಟ್ರೇಲಿಯಾ ವಿರುದ್ಧ ಸಚಿನ್ ಆಡುವುದನ್ನು ವೀಕ್ಷಿಸಲು ಬಿಹಾರದ ಮುಜಾಫರ್‌ಪುರದಿಂದ ಮುಂಬೈಗೆ 21 ದಿನಗಳ ಕಾಲ ಸೈಕ್ಲಿಂಗ್ ಮಾಡಿದ್ರಂತೆ. ಆದರೆ ಇಷ್ಟೆಲ್ಲಾ ಮಾಡುವ ಸುಧೀರ್ಗೆ ಹಣ ಎಲ್ಲಿಂದ ಬರುತ್ತಿತ್ತು ಅಂತಾ ನಿಮಗೂ ಅನ್ನಿಸ್ಬೋದು. ಕ್ರಿಕೆಟ್ಗಾಗಿ ತನ್ನ ಸರ್ವಸ್ವವನ್ನೇ ಮುಡಿಪಾಗಿಟ್ಟ ಚೌದರಿ, ಸಚಿನ್ ಆಡುವ ಪ್ರತಿಯೊಂದು ಪಂದ್ಯವನ್ನು ವೀಕ್ಷಿಸುವ ಸಲುವಾಗಿ ತನ್ನ ಆಸ್ತಿಯನ್ನೇ ಮಾರಾಟ ಮಾಡಿದ್ದರು ಅಂದ್ರೆ ನೀವು ನಂಬಲೇಬೇಕು. ತನ್ನ ಆಟ ಕಣ್ತುಂಬಿಕೊಳ್ಳಲು ಆಸ್ತಿಯನ್ನೇ ಮಾರಾಟ ಮಾಡಿದ್ದಾನೆ ಈ ಅಭಿಮಾನಿ ಅನ್ನೋ ವಿಷಯ ತಿಳಿದುಕೊಂಡ ಸಚಿನ್, ಒಮ್ಮೆ ಚೌಧರಿ ಅವ್ರನ್ನ ಭೇಟಿ ಮಾಡಿದ್ರಂತೆ. ನಂತರ ಮುಂದಿನ ಎಲ್ಲಾ ಪಂದ್ಯಗಳ ವೀಕ್ಷಣೆಗೆ ಟಿಕೆಟ್ ಮೊತ್ತವನ್ನು ತಾನೇ ಭರಿಸುವುದಾಗಿ ಹೇಳಿದ್ದರು. ಸುಧೀರ್ ಅವರಿಗೆ ಸಾರ್ವಜನಿಕರು ನೀಡುತ್ತಿದ್ದ ಹಣದ ಬೆಂಬಲದಿಂದಲೂ ಪಂದ್ಯ ವೀಕ್ಷಿಸುತ್ತಿದ್ದರು. ಏಪ್ರಿಲ್ 2, 2011ರಂದು ಭಾರತ ಏಕದಿನ ವಿಶ್ವಕಪ್ ಗೆದ್ದಾಗ ಇಡೀ ದೇಶವೇ ಸಂಭ್ರಮಿಸಿತ್ತು. ಭಾರತೀಯ ಆಟಗಾರರೂ ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮಿಸಿದರು. ಆ ವೇಳೆ ಸಚಿನ್ ಅವರೇ ಸುಧೀರ್ ಅವರನ್ನು ಆಹ್ವಾನಿಸಿ ಸನ್ಮಾನಿಸಿದ್ದರು. ಇದು ಸುಧೀರ್ ಚೌದರಿ ಪಾಲಿಗೆ ಅವಿಸ್ಮರಣೀಯ ದಿನವಾಗಿತ್ತು.
ಇಲ್ಲಿ ಸುದೀರ್ ಕುಮಾರ್ ಚೌಧರಿ ಬಗ್ಗೆ ಮತ್ತೊಂದು ವಿಚಾರವನ್ನ ಹೇಳಲೇಬೇಕು. 2010ರ ಮಾರ್ಚ್ನಲ್ಲಿ ಕಾನ್ಪುರದಲ್ಲಿ ಸುಧೀರ್ ಕುಮಾರ್ ಅವರು ಅಭ್ಯಾಸ ಪಂದ್ಯದ ಸಮಯದಲ್ಲಿ ಸಚಿನ್ ಅವರೊಂದಿಗೆ ಕೈಕುಲುಕಲು ಯತ್ನಿಸಿದ್ದರು. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಡೆದು ಥಳಿಸಿದ್ದರು. ನಂತರ ತೆಂಡೂಲ್ಕರ್ ಅವರ ಮಧ್ಯಸ್ಥಿಕೆ ಮತ್ತು ವಿನಂತಿಯ ನಂತರ ಚೌದರಿಯವ್ರನ್ನ ರಕ್ಷಿಸಲಾಗಿತ್ತು. ಈ ವೇಳೆ ಅಧಿಕಾರಿಗೆ ಸಚಿನ್ ಒಂದು ಮಾತನ್ನ ಹೇಳಿದ್ರಂತೆ. ಸುಧೀರ್ ಅವರು ನನಗೆ ದೊಡ್ಡ ಅಭಿಮಾನಿ. ಆದರೆ ನಾನು ಅವರಿಗೆ ದೊಡ್ಡ ಅಭಿಮಾನಿ ಎಂದಿದ್ದರಂತೆ. ಇದೇ ಕಾರಣಕ್ಕೆ ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್ಗೆ ಕ್ಷಮೆಯಾಚಿಸಿದ್ದರು. ಈ ಘಟನೆಯ ನಂತರ, BCCI ಪ್ರತಿ ಪಂದ್ಯಕ್ಕೂ ಸುಧೀರ್ ಕುಮಾರ್ ಅವರಿಗೆ ಉಚಿತ ಟಿಕೆಟ್ ನೀಡುವುದಾಗಿ ಘೋಷಿಸಿತ್ತು. 2015ರಲ್ಲಿ, ಭಾರತ – ಬಾಂಗ್ಲಾದೇಶದ ಮಿರ್‌ಪುರದಲ್ಲಿ ಸರಣಿಯ ಸಂದರ್ಭದಲ್ಲಿ ಬಾಂಗ್ಲಾ ಅಭಿಮಾನಿಗಳು ಸುಧೀರ್ ಮೇಲೆ ದಾಳಿ ಮಾಡಿದ್ದರು. ಕ್ರೀಡಾಂಗಣದಿಂದ ಹೊರಬರುತ್ತಿದ್ದಾಗ ಭಾರತದ ವಿರುದ್ಧ ಬೊಬ್ಬೆ ಹೊಡೆಯುತ್ತಿದ್ದ ಬಾಂಗ್ಲಾದೇಶದ ಅಭಿಮಾನಿಗಳು ಚೌಧರಿ ಅವರ ಮೇಲೆ ದಾಳಿ ಮಾಡಿ ಕಿರುಕುಳ ನೀಡಿದ್ದರು. ಜೀವಭಯವೂ ಕಾಡಿತ್ತು. ಅಂತಿಮವಾಗಿ ಬಾಂಗ್ಲಾದೇಶ ಪೋಲೀಸರಿಂದ ರಕ್ಷಿಸಲ್ಪಟ್ಟಿದ್ದರು.
ಟೀಂ ಇಂಡಿಯಾ ಆಟಗಾರರನ್ನ ತಮ್ಮದೇ ಕುಟುಂಬಸ್ಥರಂತೆ ಪ್ರೀತಿಸೋ ಕೋಟ್ಯಂತರ ಭಾರತೀಯರಿದ್ದಾರೆ. ಅವ್ರೆಲ್ಲರ ಪೈಕಿ ಚೌಧರಿ ತುಂಬಾನೇ ಸ್ಪೆಷಲ್. ತಮ್ಮ ಆಸ್ತಿಯನ್ನೆಲ್ಲಾ ಮಾರಿ ಮ್ಯಾಚ್ಗಳನ್ನ ನೋಡೋಕೆ ಹೋಗ್ತಿದ್ರು ಅಂದ್ರೆ ಅವ್ರ ಸಪೋರ್ಟ್ ಎಂಥಾದ್ದು ಅನ್ನೋದು ಅಲ್ಲೇ ಗೊತ್ತಾಗುತ್ತೆ.