ಧ್ವನಿಗೆ ದೃಷ್ಟಿ ತಾಗಿತಾ? – ನನ್ನ ಅಪರ್ಣೆಯ ಕೊನೇ ದಿನಗಳು
ಮಗು ಮಾಡಿಕೊಳ್ಳುವಾಸೆ ಈಡೇರಲೇ ಇಲ್ಲ

ಧ್ವನಿಗೆ ದೃಷ್ಟಿ ತಾಗಿತಾ? – ನನ್ನ ಅಪರ್ಣೆಯ ಕೊನೇ ದಿನಗಳುಮಗು ಮಾಡಿಕೊಳ್ಳುವಾಸೆ ಈಡೇರಲೇ ಇಲ್ಲ

ಎರಡು ವರ್ಷಗಳು.. ಅದೆಷ್ಟು ನೋವುಗಳು, ವೇದಿಕೆ ಮೇಲೆ ಬಂದಾಗ ಮಾತ್ರ ಅದೇ ನಗು.. ಅದೇ ಕಂಚಿನ ಕಂಠ.. ಯಾರೂ ಕೂಡಾ ಊಹಿಸಿರಲಿಲ್ಲ. ಕನ್ನಡದ ಮಗಳು ಇಷ್ಟು ಬೇಗ ತಾಯಿ ಭುವನೇಶ್ವರಿ ಮಡಿಲು ಸೇರಿ ಬಿಡುತ್ತಾಳೆ ಅನ್ನೋದನ್ನ.. ಪ್ರತಿ ಕನ್ನಡಿಗರು ಕೂಡಾ ಅಚ್ಚಕನ್ನಡದ ಅಪರ್ಣಾ ಇನ್ನಿಲ್ಲ ಅನ್ನೋ ನೋವಿನಲ್ಲಿದ್ದಾರೆ. ಯಾಕೆಂದರೆ, ಕೊರಳಿನಿಂದ ಪ್ರತಿಯೊಬ್ಬರಿಗೂ ಸ್ವರ ಹೊರಡುತ್ತದೆ. ಕೆಲವರದ್ದು ಮಾತ್ರ ಕೊಳಲಿನ ಮಾಧುರ್ಯವಿರುವಂತ ದನಿ ಇರುತ್ತದೆ. ಅಂಥವರಲ್ಲಿ, ಅದರಲ್ಲೂ ಕನ್ನಡದ ಸ್ಪಷ್ಟ ಸ್ವರ ಮಾಧುರ್ಯಹೊಂದಿರುವ ಅಪರ್ಣಾ ಇಷ್ಟು ಬೇಗ ಕನ್ನಡದ ನೆಲದಿಂದ ಮರೆಯಾಗುತ್ತಾರೆ ಅನ್ನೋ ಕಲ್ಪನೆಯೂ ಇರಲಿಲ್ಲ. ಅಪರ್ಣಾಗೆ ವಯಸ್ಸಾಗೋದೇ ಇಲ್ವಾ, ದೇಹಕ್ಕೂ ಸ್ವರಕ್ಕೂ ವಯಸ್ಸು ಅನ್ನೋದೇ ಇಲ್ವಾ, ಇವತ್ತು ಸಾವಿನ ಮನೆ ಸೇರಲು ಅಪರ್ಣಾ ಧ್ವನಿಯೇ ಕಾರಣವಾಯ್ತಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸೈನಾ ನೆಹ್ವಾಲ್ V/s ರಾಷ್ಟ್ರಪತಿ ಮುರ್ಮು – ಬ್ಯಾಡ್ಮಿಂಟನ್ ಅಂಗಳದಲ್ಲಿ ದ್ರೌಪದಿ

ಯಾರದ್ದೋ ಅಕ್ಷರಗಳಲ್ಲಿ ಚಿರವಾಗಿ ನಿಂತು, ಧ್ವನಿ ಮೂಲಕ ಕನ್ನಡಿಗರ ಮನದಲ್ಲಿ ನೆಲೆಯಾಗಿ ಹೊರಟು ಹೋಗಿದ್ದಾರೆ ಕನ್ನಡಾಂಬೆಯ ಮಗಳು ಅಪರ್ಣಾ. ನಾವು ನೀವೆಲ್ಲಾ ಅಪರ್ಣಾ ಅಗ್ರಗಣ್ಯ ನಿರೂಪಕಿ, ಅಪರ್ಣಾ ಆಂಕರಿಂಗ್ ಇದ್ರೇನೇ ಕಾರ್ಯಕ್ರಮಕ್ಕೆ ಕಳೆ, ಅಪರ್ಣಾ ಮಾತು ಕೇಳೋದೇ ಮನಸಿಗೆ ಹಿತ ಅಂತಾ ಹೇಳುತ್ತೇವೆ. ಆದ್ರೆ, ಅದೇ ಧ್ವನಿಗೆ ದೃಷ್ಟಿ ತಾಗಿತಾ? ನಿರೂಪಣೆ ಮಾಡೋದು, ಸ್ಪಷ್ಟವಾಗಿ ಮಾತಾಡೋದು ಕೂಡಾ ಅಷ್ಟೊಂದು ಸುಲಭವಲ್ಲ. ಇಲ್ಲಿ ಭಾಷೆಯ ಮೇಲೆ ಹಿಡಿತವಿದ್ದರಷ್ಟೇ ಸಾಲದು. ಉಸಿರಿನ ಮೇಲೂ ಹಿಡಿತವಿರಬೇಕು. ನಿರರ್ಗಳವಾಗಿ ಮಾತಾಡ್ತಾ ಹೋಗುವಾಗ ಪ್ರೇಕ್ಷಕರನ್ನ ದೊಡ್ಡ ಸಂಖ್ಯೆಯಲ್ಲಿ ಹಿಡಿದಿಡಲು ಉಸಿರಲ್ಲಿ ಹಿಡಿತ ಸಾಧಿಸಬೇಕು. ಜೊತೆಗೆ ಸ್ವರದ ಏರಿಳಿತಕ್ಕೂ ಉಸಿರಿನ ಮೇಲೆ ಕಂಟ್ರೋಲ್ ಬೇಕೇ ಬೇಕು. ಮೈಕ್ ನಲ್ಲಿ ಉಸಿರು ಕೇಳಿಸುವಂತಿಲ್ಲ, ಪ್ರೇಕ್ಷಕರಿಗೆ ಅಲ್ಲಿ ಕೇಳುವುದು ಧ್ವನಿಯ ಮಾಧುರ್ಯ.

ಕನ್ನಡದಲ್ಲಿ ಕಂಚಿನ ಕಂಠದಿಂದ ಬಂದ ನಿರೂಪಣೆ ಮಾತ್ರ. ಆದ್ರೆ, ವಿಧಿಯಾಟ ನೋಡಿ. ಯಾವ ಉಸಿರು ಕನ್ನಡದ ಮನಸುಗಳಿಗಾಗಿ ಮಿಡಿಯುತ್ತಿತ್ತೋ ಅದೇ ಉಸಿರಿನಿಂದಲೇ, ಕನ್ನಡದ ಕಂಠವನ್ನು ಆಕ್ರಮಿಸಿಕೊಂಡಿತ್ತು ಶ್ವಾಸಕೋಶದ ಕ್ಯಾನ್ಸರ್. ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇನ್ನೂ ಒಂದು ಅಚ್ಚರಿಯಿದೆ. ವೈದ್ಯರು ‘ಅಪರ್ಣಾ ಹೆಚ್ಚೆಂದರೆ ಇನ್ನು ಆರು ತಿಂಗಳು ಬದುಕಬಹುದು’ ಎಂದು ಹೇಳಿದ್ದರು. ಆದರೆ, ವೈದ್ಯರು ಹೇಳಿದ ಮಾತನ್ನ ಸವಾಲಾಗಿ ಸ್ವೀಕರಿಸಿದ್ದರು ಅಪರ್ಣ. ಒಂದು ವರ್ಷಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ, ಅದರ ಜೊತೆಗೆ ನಿರೂಪಣೆಗೆ ಕರೆ ಬಂದಾಗಲೆಲ್ಲಾ ಓಗೊಟ್ಟು, ಅಚ್ಚುಕಟ್ಟಾಗಿ ತನ್ನ ಸುಮಧುರ ಕಂಠದಿಂದಾಗಿ ನಿರೂಪಣೆ ಮುಗಿಸಿ ತನಗೊಂದು ಇಂಥಾ ಮಾರಕ ಕಾಯಿಲೆ ಇದೆ ಅನ್ನೋ ಸಣ್ಣ ಸುಳಿವು ಕೂಡಾ ನೀಡದೇ ಬದುಕಿದ ದಿಟ್ಟೆ ಈಕೆ.

ನಿರೂಪಣೆ ಅಂದ್ರೆ ಯಾರೋ ಬರೆದುಕೊಡ್ತಾರೆ, ಇವ್ರು ಬಂದು ಓದಿ ಹೇಳ್ತಾರೆ ಅಂತಾ ನಂಬಿದ್ರೆ ಅಪರ್ಣಾ ವಿಚಾರದಲ್ಲಿ ನಿಮ್ಮ ಊಹೆ ಖಂಡಿತಾ ತಪ್ಪು. ಯಾವುದೇ ಕಾರ್ಯಕ್ರಮವಿರಲಿ, ಪೂರ್ವಭಾವಿಯಾಗಿ ಬಂದು ಇಡೀ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳುತ್ತಾರೆ. ಅದ್ರಲ್ಲಾ ಯಾವಾಗ ತನಗೆ ಇಂಥಾ ಕ್ರೂರ ಕ್ಯಾನ್ಸರ್ ಇದೆಯೆಂದು ಗೊತ್ತಾದ ಮೇಲೂ ಮನೆಯಲ್ಲಿ ಕುಳಿತು ರೆಸ್ಟ್ ಮಾಡ್ತಿರಲಿಲ್ಲ. ಮೈತುಂಬಾ ಶಾಲು ಹೊದ್ದು, ತಲೆ, ಕಿವಿಯನ್ನು ಪೂರ್ತಿ ಕವರ್ ಮಾಡಿಕೊಂಡು ಕಾರ್ಯಕ್ರಮ ನಡೆಯೋ ಸ್ಥಳಕ್ಕೆ ಬಂದು ತನ್ನ ನಿರೂಪಣೆಯ ವಿವರವನ್ನು ಪಡೆದುಕೊಂಡು ಹೋಗ್ತಾರೆ. ಆಮೇಲೆ ಕಾರ್ಯಕ್ರಮ ನಿಗದಿಯಾದ ಸಮಯಕ್ಕೆ ಸರಿಯಾಗಿ ಬಂದು ಪ್ರೇಕ್ಷಕರಿಗೆ ಖುಷಿಯಾಗುವಂತೆ ನಿರೂಪಣೆ ಮಾಡಿದ ಮೇಲೆಯೇ ಸಮಾಧಾನ.

ಇತ್ತೀಚಿನ ಕೆಲವೊಂದು ಫೋಟೋಗಳಲ್ಲಿ ನಿಮಗೆ ಗೊತ್ತಾಗುತ್ತೆ. ಕ್ಯಾನ್ಸರ್ ಗೆ ತೆಗೆದುಕೊಳ್ತಿರೋ ಟ್ರೀಟ್ ಮೆಂಟ್ ಕಾರಣದಿಂದಾಗಿ ತಲೆಗೂದಲು ಉದುರಿ ಹೋಗಿತ್ತು. ಆದರೆ, ಯಾರಿಗೂ ಸಂಶಯ ಬಾರದಂತೆ ತನ್ನ ಕೇಶವಿನ್ಯಾಸದ ಮೂಲಕ ಕ್ಯಾನ್ಸರ್ ಕಾಯಿಲೆಯನ್ನ ಬಚ್ಚಿಡುವ ಪ್ರಯತ್ನ ಮಾಡುತ್ತಿದ್ರು. ಮುಖದಲ್ಲಿ ಚೆಂದನೆಯ ಅಲಂಕಾರ ಎದ್ದುಕಾಣುತ್ತಿದ್ದು, ಮುಗುಳ್ನಗೆ ಬೀರುತ್ತಾ ಮೈಕ್ ಮುಂದೆ ಬಂದು ನನಗೂ ನನ್ನ ದನಿಗೂ ವಯಸ್ಸೇ ಆಗಿಲ್ಲ ಅನ್ನೋ ರೀತಿ ನಿರೂಪಣೆ ಮಾಡುತ್ತಿದ್ರು. ಈ ಮೂಲಕ ತನ್ನ ಪ್ರೇಕ್ಷಕರಿಗೆ ಖುಷಿಯನ್ನ ಮಾತ್ರ ಉಣಬಡಿಸಿ, ನೋವನ್ನು ಮಾತ್ರ ತಾವೊಬ್ಬರೇ ನುಂಗುತ್ತಿದ್ದರು. ಅವರ ಮೈ ಚಳಿಯನ್ನು ತಡೆದುಕೊಳ್ಳಲು ಸಂಪೂರ್ಣ ಸೋತುಹೋಗಿತ್ತು. ತಾನು ಕರ್ತವ್ಯ ನಿರ್ವಹಿಸುವ ಕಡೆ ಚಳಿ, ಗಾಳಿ ಇದ್ದರೂ ಯಾರಿಗೂ ತನ್ನ ದೇಹದ ಜೊತೆ ನಡೆಸುವ ಹೋರಾಟವನ್ನು ತಿಳಿಸದೇ ಕ್ಷಣ ಕ್ಷಣವೂ ಸಾವಿನ ಕಡೆ ಹೆಜ್ಜೆ ಹಾಕುತ್ತಿದ್ದರೂ ಯಾರಿಗೂ ಹೇಳದೇ ನಿರೂಪಣೆ ಮಾಡುತ್ತಿದ್ದ ದಿಟ್ಟೆ ಈಗ ಕಣ್ಮರೆಯಾಗಿದ್ದಾರೆ.

ನನ್ನ ಅಪರ್ಣೆ ಹೊರಟುಹೋದಳು ಎಂದು ಹೇಳುತ್ತಾ ದುಃಖ ಪಡುವ ಪತಿ ನಾಗರಾಜ ವಸ್ತಾರೆ ಇನ್ನು ಒಂಟಿ. ಮಕ್ಕಳನ್ನು ಪಡೆದುಕೊಳ್ಳುವ ಬೆಟ್ಟದಷ್ಟು ಆಸೆಯಿತ್ತು ಇಬ್ಬರಿಗೂ. ಆದ್ರೆ, ವಿಧಿಯಾಟದ ಮುಂದೆ ಇದೆಲ್ಲಾ ಅಸಾಧ್ಯ ಅನ್ನೋ ವಾಸ್ತವದ ಅರಿವು ಕೂಡಾ ಇಬ್ಬರಿಗೂ ಇತ್ತು. ಈಗ ಅಪರ್ಣೆ ನನ್ನ ಬಿಟ್ಟುಹೋಗಿದ್ದಾಳೆ ಎಂದು ಕರ್ನಾಟಕ ಜನತೆಗೆ ತಿಳಿಸಿದ ಪತಿ ನಾಗರಾಜ್, ಕೆಲವೊಂದು ವಿಚಾರವನ್ನು ನೋವಿನಲ್ಲೇ ತಿಳಿಸಿದ್ದಾರೆ. ವೈಯಕ್ತಿವಾಗಿ ನಾನು ಅಪರ್ಣಾ ತುಂಬಾ ಖಾಸಗಿಯಾಗಿ ಬದುಕಿದವರು. ಅಷ್ಟೇ ಖಾಸಗಿಯಾಗಿ ನಾನು ಅವಳನ್ನು ಬೀಳ್ಕೊಡಲಿಕ್ಕೆ ಇಷ್ಟಪಡ್ತೀನಿ. ಹಾಗಂತ ಆಕೆ ನನಗೆ ಸೇರೋಕೆ ಮುಂಚೆನೇ ಹೆಚ್ಚಾಗಿ ಕರ್ನಾಟಕಕ್ಕೆ ಸೇರಿದವಳು. ಅಪರ್ಣಾಗೆ ಒಂದು ಆಶಯ ಇತ್ತು. ಸಾವಿನ ಬಳಿಕ ಮಾಧ್ಯಮಗಳ ಮುಂದೆ‌ ಎಲ್ಲವನ್ನು ಹೇಳುವಂತೆ ತಿಳಿಸಿದ್ರು. ಎರಡು ವರ್ಷಗಳ ಹಿಂದೆ ಜುಲೈನಲ್ಲಿ ಶ್ವಾಸಕೋಶ ಕ್ಯಾನ್ಸರ್ ಅಂತಾ ಗೊತ್ತಾಯ್ತು. ಮೊದಲು ನೋಡಿದ ವೈದ್ಯರು ಇನ್ನೂ ಆರು ತಿಂಗಳು ಬದುಕಬಹುದು ಅಂತಾ ಹೇಳಿದ್ರು. ಅವರು ಛಲಗಾತಿ ನಾನು ಬದುಕ್ತೀನಿ ಅಂತಾ ಹೇಳ್ತಿದ್ಳು. ಅಲ್ಲಿಂದ ಜನವರಿ ತನಕ ಶಕ್ತಿಮೀರಿ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿದ್ಳು. ಫೆಬ್ರವರಿಯಿಂದ ಕೈಚೆಲ್ಲಿದಳು. ಕ್ಯಾನ್ಸರ್ ಅಂತಾ ಗೊತ್ತಿದ್ದರೂ ಅವಳು  ಒಂದೂವರೆ ವರ್ಷದಿಂದ ಛಲದಿಂದ ಬದುಕಿದ್ಲು. ನಿಜಕ್ಕೂ ಅವಳು ಧೀರೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ನಾವಿಬ್ಬರೂ ಸೋತಿದ್ದೀವಿ. ಬರೋ ಅಕ್ಟೋಬರ್ ಗೆ ಅವಳಿಗೆ 58 ವರ್ಷ ತುಂಬ್ತಿತ್ತು ಎಂದು ಹೇಳುತ್ತಾ ಕಣ್ಣೀರಾಗಿದ್ದಾರೆ ಪತಿ ನಾಗರಾಜ್.

ನಿರೂಪಕಿ ಅಪರ್ಣಾಗೆ ವಯಸ್ಸಾಗೋದೇ ಇಲ್ವಾ ಅಂತಾ. ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಇವರ ವಯಸ್ಸೇ ಕಾಮಿಡಿ ರೀತಿ ಬಿಂಬಿಸಲಾಗಿತ್ತು. ವರೂಗೆ ವಯಸ್ಸೆಷ್ಟು, ಎವರ್‌ಗ್ರೀನ್ ಸುಂದರಿ ವರೂ ಅಂತಾ ಹೇಳುವ ರೀತಿಯೇ ಅಪರ್ಣಾ ವಯಸ್ಸು ಕೂಡಾ ಇಷ್ಟು ದಿನ ಸೀಕ್ರೆಟ್ ಆಗಿತ್ತು. ಕೊನೆಗೂ ಸಾವಿನ ಸತ್ಯದ ಜೊತೆ ತನ್ನ ವಯಸ್ಸೆಷ್ಟು ಅನ್ನೋ ಸತ್ಯವನ್ನು ಹೇಳಿಹೋಗಿದ್ದಾರೆ ಅಪರ್ಣಾ. ಅರಿವಿಗೆ ಬಾರದ ಅಂಬರದಲ್ಲಿ ಚುಕ್ಕಿಯಾಗಿ ಹೋಗಿದ್ದಾರೆ ಅಪರ್ಣ. ಮುಖದಲ್ಲಿನ ಮಂದಹಾಸ, ಕಿವಿಗೆ ಹಿತವಾಗುವ ಸ್ವರವನ್ನ ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ ಶಾಶ್ವತ.. ಕನ್ನಡಕ್ಕೊಬ್ಬರೇ ಅಪರ್ಣ. ಆದರೆ, ಆ ವಿಧಿಯಾಟದ ಮುಂದೆ ಬದುಕು ಮಾತ್ರ ಅಪೂರ್ಣ..

Sulekha