‘ರೈತರು ಎಂದರೆ ಹೆಣ್ಣು ಕೊಡುವುದಿಲ್ಲ. ಕನ್ಯೆಯರ ಪಾಲಕರನ್ನು ಒಪ್ಪಿಸಿ’ – ಸರ್ಕಾರಕ್ಕೆ ಯುವ ರೈತರ ಮನವಿ
ಯುವ ರೈತರಿಗೆ ಹೆಣ್ಣು ಕೊಡಲು ಪಾಲಕರ ಹಿಂದೇಟು..!
ಧಾರವಾಡ : ಇತ್ತೀಚೆಗೆ ಯಾಕೋ ಯುವ ರೈತರಿಗೆ ಬೇರೆಯದ್ದೇ ಆತಂಕ ಶುರುವಾಗಿದೆ. ಮದುವೆಯಾಗಲು ಹುಡುಗಿಯರೇ ಸಿಗಲ್ಲ ಅನ್ನೋ ಚಿಂತೆ ಜಾಸ್ತಿಯಾಗಿದೆ. ಮೊನ್ನೆ ಮೊನ್ನೆಯಷ್ಟೇ ಮಂಡ್ಯದಲ್ಲಿ ವಧು ವರರ ಸಮಾವೇಶದಲ್ಲಿ ಮದುವೆ ಆಗಲು ಹತ್ತು ಸಾವಿರ ಯುವ ರೈತರು ಅರ್ಜಿ ಹಾಕಿದ್ರೆ, ಕೇವಲ 200 ಯುವತಿಯರು ಮಾತ್ರ ಅರ್ಜಿ ಸಲ್ಲಿಸಿದ್ದರು. ಇದೀಗ ಧಾರವಾಡದ ಯುವ ರೈತರ ಸರದಿ. ಅನ್ನ ಕೊಟ್ಟು ಸಲಹೋ ಅನ್ನದಾತ ಯುವಕರಿಗೆ ಮದುವೆಯಾಗಲು ಕನ್ಯೆಯೇ ಸಿಗುತ್ತಿಲ್ವಂತೆ.
ಇದನ್ನೂ ಓದಿ : ಸ್ಫೋಟ ಪ್ರಕರಣ : ಮಂಗಳೂರಿಗೆ ಶಾರಿಕ್ ಜೊತೆ ಬಂದಿದ್ದಾನಾ ಮತ್ತೊಬ್ಬ ಉಗ್ರ? -ಸಿಸಿ ಟಿವಿ ದೃಶ್ಯ ವೈರಲ್
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ಯುವ ರೈತರು ಈಗ ಮದುವೆಯಾಗಲು ಕನ್ಯೆ ಸಿಗುತ್ತಿಲ್ಲ ಅನ್ನೋ ಚಿಂತೆಯಲ್ಲಿದ್ದಾರೆ. ಕೃಷಿ, ಮಳೆ, ಬೆಳೆ, ಅಂತಾ ಚಿಂತೆ ಮಾಡ್ತಿದ್ದ ಯುವ ರೈತರಿಗೆ ಈಗ ಸಂಸಾರ ಶುರುಮಾಡುವುದೇ ದೊಡ್ಡ ಸವಾಲಾಗಿ ಹೋಗಿದೆ. ಮದುವೆ ವಯಸ್ಸು ಕಳೆದರೂ ವಧು ಸಿಗುತ್ತಿಲ್ಲ. ಇದರಿಂದ ಬೇಸತ್ತ ಯುವ ಕೃಷಿಕರು ಕನ್ಯೆಗಾಗಿ ಸರ್ಕಾರದ ಮೊರೆ ಹೋಗಿದ್ದಾರೆ. ತಹಶೀಲ್ದಾರ್ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕಂದಾಯ ಇಲಾಖೆಯನ್ನು ಮನೆ-ಮನೆಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸರ್ಕಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮ ನಡೆಸುತ್ತಿದೆ. ಇದರ ಅಂಗವಾಗಿ ತಹಶೀಲ್ದಾರ್ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಯುವ ರೈತರು ಒಂದು ಅಪರೂಪದ ಬೇಡಿಕೆ ಇಟ್ಟಿದ್ದಾರೆ. ಹೊಸಳ್ಳಿಯಲ್ಲಿ ನಡೆದ ತಹಶೀಲ್ದಾರ್ ಗ್ರಾಮ ವಾಸ್ತವ್ಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯುವ ರೈತರು, ತಾವು ಮದುವೆಯಾಗಲು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಮನವಿ ಪತ್ರ ಬರೆದು ತಹಶೀಲ್ದಾರ್ ಅವರಿಗೆ ನೀಡಿದ್ದಾರೆ. ನಾವು ರೈತರ ಮಕ್ಕಳು. ದೇಶವನ್ನು ಕಾಯುವ ಸೈನಿಕ ದೇಶದ ರಕ್ಷಣೆ ಮಾಡುತ್ತಾನೆ. ಅದರಂತೆ ನಾವು ದೇಶದ ಜನತೆಗೆ ಅನ್ನ ನೀಡಿ ಅವರ ಹಸಿವನ್ನು ನೀಗಿಸುತ್ತೇವೆ. ಬದುಕಿಗಾಗಿ ಕೃಷಿಯನ್ನು ಅವಲಂಬಿಸಿರುವ ನಮಗೆ ರೈತರು ಎನ್ನುವ ಕಾರಣಕ್ಕೆ ಹುಡುಗಿಯನ್ನು ಕೊಡುತ್ತಿಲ್ಲ. ಇದರಿಂದ ನಮ್ಮ ಆತ್ಮ ಸ್ಥೈರ್ಯ ಕುಗ್ಗುತ್ತಿದೆ. ದಯವಿಟ್ಟು ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು, ಹೆಣ್ಣು ಮಕ್ಕಳ ಪಾಲಕರಿಗೆ ಜಾಗೃತಿ ಮೂಡಿಸಿ, ರೈತಾಪಿ ವರ್ಗಗಳ ಕುಟುಂಬಗಳಿಗೆ ಕನ್ಯೆ ಸಿಗುವಂತೆ ಮಾಡಬೇಕು ಅಂತ ಮನವಿ ಪತ್ರದಲ್ಲಿ ರೈತರು ಬೇಡಿಕೆಯನ್ನಿಟ್ಟಿದ್ದಾರೆ. ಈ ವಿಶೇಷ ಮನವಿಯನ್ನ ಆಲಿಸಿದ ತಹಶೀಲ್ದಾರ್, ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ.