ಮಾರಿಯಮ್ಮನ ಭಕ್ತ ಸೂರ್ಯಕುಮಾರ್ – ಟಿ20 ವಿಶ್ವಕಪ್‌ ಗೆಲ್ಲಲು ಸ್ಕೈ ದಂಪತಿ ಹರಕೆ
ಕಾಪು ಮಾರಿಗುಡಿಯಲ್ಲಿ ಸ್ಟಾರ್ ಬ್ಯಾಟರ್

ಮಾರಿಯಮ್ಮನ ಭಕ್ತ ಸೂರ್ಯಕುಮಾರ್ – ಟಿ20 ವಿಶ್ವಕಪ್‌ ಗೆಲ್ಲಲು ಸ್ಕೈ ದಂಪತಿ ಹರಕೆಕಾಪು ಮಾರಿಗುಡಿಯಲ್ಲಿ ಸ್ಟಾರ್ ಬ್ಯಾಟರ್

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಫೈನಲ್‌ನಲ್ಲಿ ಹಿಡಿದ ಆ ಮಿರಾಕಲ್ ಕ್ಯಾಚ್​ನ ಫ್ಯಾನ್ಸ್ ಮರೆಯಲು ಸಾಧ್ಯವೇ ಇಲ್ಲ. ಸ್ಕೈ ಆವತ್ತು ಫೈನಲ್ ಮ್ಯಾಚ್‌ನಲ್ಲಿ ಹಿಡಿದ ಕ್ಯಾಚ್ ಕಪ್ ಗೆಲ್ಲಲು ಟರ್ನಿಂಗ್ ಪಾಯಿಂಟ್ ಆಗಿದ್ದು ಕೂಡಾ ನಿಜವೇ. ಒಂದ್ ರೀತಿಯಲ್ಲಿ ಸೂರ್ಯಕುಮಾರ್ ಯಾದವ್ ಕೂಡಾ ಟಿ20 ವಿಶ್ವಕಪ್ ಹೀರೋನೇ. ಜೊತೆಗೆ ಐಪಿಎಲ್ ನಲ್ಲೂ ಕಮಾಲ್ ಮಾಡಿದ ಸ್ಕೈ ತನ್ನ ಮುದ್ದಿನ ಮಡದಿಗಾಗಿ ಕರಾವಳಿಗೆ ಆಗಮಿಸಿದ್ದಾರೆ. ಟಿ20 ವರ್ಲ್ಡ್ ಕಪ್ ಹೀರೋ ಸ್ಕೈ ತುಳುನಾಡಿಗೆ ಬಂದಿದ್ಯಾಕೆ?, ಮಂಗಳೂರಿಗೂ ಸೂರ್ಯನಿಗೂ ಇರೋ ನಂಟೇನು? ವಿಶ್ವಕಪ್ ಮುಗಿದ ಒಂದೇ ವಾರದಲ್ಲಿ ಕಡಲತಡಿಗೆ ಬರಲು ಕಾರಣವೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಚಹಲ್ ಗೆ ಲೇಡಿ ಲಕ್ – ಧನ್ಯಶ್ರೀಗೆ ಮೆಡಲ್ ಅರ್ಪಣೆ!! – ಬೌಲರ್‌ಗೆ ಡ್ಯಾನ್ಸ್ ಟೀಚರ್ ಬೋಲ್ಡ್

ಟಿ20 ವಿಶ್ವಕಪ್ ಗೆದ್ದಿರೋ ಇಂಡಿಯನ್ಸ್ ಸಂಭ್ರಮ ಇನ್ನೂ ಮುಗಿದಿಲ್ಲ. ಇದಾಗಿ ಒಂದೇ ವಾರದಲ್ಲಿ ತುಳುನಾಡಿಗೆ ಓಡೋಡಿ ಬಂದಿದ್ದಾರೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್. ನಿಮಗೆಲ್ಲಾ ಗೊತ್ತೇ ಇರುವಂತೆ ಸೂರ್ಯಕುಮಾರ್ ಯಾದವ್ ಕರ್ನಾಟಕದ ಅಳಿಯ. ಅದರಲ್ಲೂ ಕರಾವಳಿಯ ನೆಂಟ. ಹೌದು. ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಮಂಗಳೂರಿನವರು. ಜೊತೆಗೆ ಉಡುಪಿಯಲ್ಲಿರುವ ಮಾರಿಗುಡಿ ದೇವಸ್ಥಾನದ ಮೇಲೆ ತುಂಬಾನೇ ನಂಬಿಕೆಯಿಟ್ಟವರು. ಪತ್ನಿಯಂತೆ ಸೂರ್ಯಕುಮಾರ್ ಕೂಡಾ ಮಾರಿಯಮ್ಮನ ಮೇಲೆ ನಂಬಿಕೆಯಿಟ್ಟುಕೊಂಡಿದ್ದಾರೆ. ನಮ್ಮ ಟೀಮ್ ಟಿ20 ವಿಶ್ವಕಪ್ ಗೆದ್ದು ಬರಲಿ ಅಂತಾ ಸೂರ್ಯಕುಮಾರ್ ದಂಪತಿ ಮಾರಿಯಮ್ಮನಿಗೆ ವಿಶೇಷ ಹರಕೆ ಹೊತ್ತಿದ್ದರಂತೆ. ತುಳುನಾಡ ಶಕ್ತಿದೇವತೆಯ ಆಶೀರ್ವಾದದಿಂದ ಸೂರ್ಯಕುಮಾರ್ ಹರಕೆ ಫಲಿಸಿದೆ. ಹೀಗಾಗಿ ಪತ್ನಿ ದೇವಿಶಾ ಶೆಟ್ಟಿ ಜೊತೆ ಸೂರ್ಯಕುಮಾರ್ ಮಂಗಳೂರಿಗೆ ಆಗಮಿಸಿ, ಅಲ್ಲಿಂದ ಉಡುಪಿಗೆ ಬಂದು ಕಾಪು ಮಾರಿಗುಡಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಮಾರಿಯಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಈಡೇರಿಸಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಕಾಪುವಿನ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಅಂತಾ ಗೊತ್ತಾಗ್ತಿದ್ದಂತೆ ಮಾರಿಗುಡಿ ಸುತ್ತ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಸೂರ್ಯಕುಮಾರ್ ಯಾದವ್ ದಂಪತಿ ದೇವಸ್ಥಾನಕ್ಕೆ ಭೇಟಿ ನೀಡುವಾಗ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಜೊತೆಗೆ ದೇವಳದ ಆಡಳಿತ ಮಂಡಳಿ ದಂಪತಿಯನ್ನು ಸನ್ಮಾನಿಸಿದ್ದಾರೆ. ಉಡುಪಿಯ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನವವು ಸದ್ಯ ನಿರ್ಮಾಣ ಹಂತದಲ್ಲಿದೆ. ಸುಮಾರು 40 ಕೋಟಿ ರುಪಾಯಿ ವೆಚ್ಚದಲ್ಲಿ ಇಳಕಲ್ ಶಿಲೆಯನ್ನು ಬಳಸಿ ವಿಶಿಷ್ಟ ದೇವಾಲಯ ನಿರ್ಮಾಣವಾಗುತ್ತಿದೆ. ಈಗಾಗಲೇ ದೇವಸ್ಥಾನದ ಗರ್ಭಗುಡಿ, ಉಚ್ಛಂಗಿ ಗುಡಿ, ಸುತ್ತುಪೌಳಿ ಕಾಮಗಾರಿ ಶೇ.90 ಪೂರ್ಣಗೊಂಡಿದ್ದು, ಮುಂಬರುವ ಮಾರ್ಚ್ 02ರಂದು ಬ್ರಹ್ಮ ಕಲಶ ಮಹೋತ್ಸವ ನಡೆಯಲಿದೆ. ಇನ್ನು ಸೂರ್ಯಕುಮಾರ್ ಯಾದವ್ ದೇವಸ್ಥಾನ ನಿರ್ಮಾಣ, ಶಿಲ್ಪಕಲೆಯ ಕೆತ್ತನೆ ಬಗ್ಗೆ ಮಾಹಿತಿ ಪಡೆದುಕೊಂಡರು.

ತುಳುನಾಡಿನ ಅಳಿಯ ಸೂರ್ಯ  

ಉತ್ತರ ಪ್ರದೇಶ ಮೂಲದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ತುಳುನಾಡಿನ ಅಳಿಯ. ಪತ್ನಿ ದೇವಿಶಾ ಶೆಟ್ಟಿ ಮೂಲತಃ ಮಂಗಳೂರಿನವರು. ಮುಂಬೈನಲ್ಲಿ ನೆಲೆಸಿರುವ ದೇವಿಶಾ ಹಾಗೂ ಸೂರ್ಯ ಒಂದೇ ಕಾಲೇಜ್​ನಲ್ಲಿ ಓದಿದ್ದಾರೆ. ಇದೇ ವೇಳೆ ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, 2016 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ದೇವಿಶಾ ಶೆಟ್ಟಿ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಸಾಧನೆಯನ್ನ ತುಳುವಿನಲ್ಲಿ ಬರೆದು ಶುಭಾಶಯ ಕೋರುತ್ತಾರೆ. ತಾನು ತುಳುನಾಡಿನ ನಂಟು ಬಿಟ್ಟಿಲ್ಲ ಅಂತಾ ಪದೇ ಪದೇ ಪ್ರೂವ್ ಮಾಡ್ತಾ ಇರ್ತಾರೆ. ಇನ್ನು ಕನ್ನಡಿಗ ಕೆ.ಎಲ್ ರಾಹುಲ್ ಕೂಡಾ ಸೂರ್ಯಕುಮಾರ್ ಗೆ ಉತ್ತಮ ಸ್ನೇಹಿತ ಕೂಡಾ ಹೌದು. ಕೆ.ಎಲ್ ಕೂಡಾ ಟಿ20 ವಿಶ್ವಕಪ್ ಹೀರೋಗೆ ತುಳುವಿನಲ್ಲೇ ಶುಭಾಶಯ ಕೋರಿದ್ದಾರೆ. ಬಾರಿ ಎಡ್ಡೆ ಗೊಬ್ಬಿಯಾ ಎಂದು ಕೆ.ಎಲ್ ರಾಹುಲ್ ಶುಭಕೋರಿದ್ದಾರೆ. ಬಾರಿ ಎಡ್ಡೆ ಗೊಬ್ಬಿಯಾ ಅಂದರೆ ತುಂಬಾ ಚೆನ್ನಾಗಿ ಆಡಿದೆ ಎಂದರ್ಥ.

ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಹಿಡಿದ ಅದ್ಭುತ ಕ್ಯಾಚ್​ನಿಂದಾಗಿ ಭಾರತ ತಂಡವು ಸೌತ್ ಆಫ್ರಿಕಾ ವಿರುದ್ಧ ಗೆಲುವು ದಾಖಲಿಸಿತ್ತು. ಈ ಸಂಭ್ರಮದ ನಡುವೆ ಸೂರ್ಯಕುಮಾರ್ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ರು. ಇದ್ರಲ್ಲಿ ಸೂರ್ಯಕುಮಾರ್ ತನ್ನ ಪತ್ನಿಗೆ ವಿಶ್ ಮಾಡಿದ ರೀತಿಗೆ ಫ್ಯಾನ್ಸ್ ಅಂತೂ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ರು. ಅದ್ರಲ್ಲೂ ಯಂಗ್‌ಸ್ಟರ್ಸ್ ಫ್ಯಾನ್ಸ್ ಅಂತೂ ಸ್ಕೈ ಕಾಲೇಜ್ ಬಾಯ್ ಥರಾ ವಿಶ್ ಮಾಡಿದ್ದಾರೆ ಅಂತಾ ಖುಷಿ ಪಟ್ಟಿದ್ರು. ಅದೇನೆಂದರೆ, ಆ ಕ್ಯಾಚ್‌ ಹಿಡಿದು 8 ದಿನಗಳು ಕಳೆದಿವೆ. ಆದರೆ ನನ್ನ ಪ್ರಮುಖ ಕ್ಯಾಚ್ 8 ವರ್ಷಗಳ ಹಿಂದೆ ಹಿಡಿದದ್ದು!’ ಎಂದು ಬರೆದುಕೊಳ್ಳುವ ಮೂಲಕ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿಗೆ ವಿಶ್ ಮಾಡಿದ್ದರು. ಅಂತೂ ಕರಾವಳಿ ಹುಡುಗಿಯನ್ನ ಕ್ಯಾಚ್ ಹಾಕಿಕೊಂಡಿದ್ದು ನಾನೇ ಅಂತಾ ಸೂರ್ಯ ಫ್ಯಾನ್ಸ್ ಗೆ ಹೇಳಿದ ರೀತಿಯಂತೂ ಸೂಪರ್. ಅದೇನೇ ಇರಲಿ, ತನ್ನ ಟೀಮ್ ಗೋಸ್ಕರ ಟ್ರೋಫಿ ಗೆಲ್ಲಲು ಮಾರಿಯಮ್ಮನಲ್ಲಿ ವಿಶೇಷ ಹರಕೆ ಹೊತ್ತಿರುವ ಸೂರ್ಯಕುಮಾರ್, ಇದೀಗ ಪೂಜೆ ಸಲ್ಲಿಸುವ ಮೂಲಕ ಹರಕೆ ತೀರಿಸಿದ್ದಾರೆ. ಇದ್ರಿಂದ ಸ್ಕೈಗೂ ಸಮಾಧಾನ, ಪತ್ನಿಗೂ ಸಂಭ್ರಮ. ಇವರಿಬ್ಬರ ಪ್ರೀತಿ, ನಂಬಿಕೆ ಸದಾ ಹೀಗೆ ಇರಲಿ.

Shwetha M