ಅಭಿಷೇಕ್ ಶರ್ಮಾ ಸೆಂಚೂರಿ ಸೀಕ್ರೆಟ್ – ರೋಹಿತ್ ಶರ್ಮಾ ಉತ್ತಾರಾಧಿಕಾರಿ ಇವರೇ
ಗುರು ಯುವರಾಜ್ ಸಿಂಗ್ ದಾಖಲೆಯೂ ಧೂಳಿಪಟ

ಅಭಿಷೇಕ್ ಶರ್ಮಾ ಸೆಂಚೂರಿ ಸೀಕ್ರೆಟ್ – ರೋಹಿತ್ ಶರ್ಮಾ ಉತ್ತಾರಾಧಿಕಾರಿ ಇವರೇಗುರು ಯುವರಾಜ್ ಸಿಂಗ್ ದಾಖಲೆಯೂ ಧೂಳಿಪಟ

ಟೀಮ್ ಇಂಡಿಯಾದ ಹಿಟ್‌ಮ್ಯಾನ್ ಜಾಗ ತುಂಬಲು ಮತ್ತೊಬ್ಬ ಶರ್ಮಾನ ಉದಯವಾಗಿದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈಗಾಗಲೇ ಟಿ20 ಕ್ರಿಕೆಟ್ ಫಾರ್ಮ್ಯಾಟ್ ಗೆ ನಿವೃತ್ತಿ ಹೇಳಿಯಾಗಿದೆ. ಇದಾಗಿ ಒಂದೇ ವಾರದಲ್ಲಿ ರೋಹಿತ್ ಶರ್ಮಾ ಉತ್ತರಾಧಿಕಾರಿ ಕೂಡಾ ಸಿಕ್ಕಾಗಿದೆ. ಹೌದು ಸ್ನೇಹಿತರೇ,. ಜಿಂಬಾಬ್ವೆ ಎದುರು ಸ್ಪೋಟಕ ಬ್ಯಾಟಿಂಗ್‌ ನಡೆಸಿದ ಅಭಿಷೇಕ್‌ ಶರ್ಮಾ ಇನ್ನು ಮುಂದೆ ರೋಹಿತ್ ಶರ್ಮಾ ಉತ್ತರಾಧಿಕಾರಿ ಎಂದೇ ಕ್ರಿಕೆಟ್ ದಿಗ್ಗಜರು ಭವಿಷ್ಯ ನುಡಿದಿದ್ದಾರೆ. ಟೀಮ್ ಇಂಡಿಯಾದಲ್ಲಿ ಆಡುವ ಕನಸು, ಇದಕ್ಕಾಗಿ ಐಪಿಎಲ್‌ನಲ್ಲಿ ಸಾಮರ್ಥ್ಯ ತೋರಿಸುವ ಸವಾಲು, ಭಾರತ ತಂಡಕ್ಕೆ ಆಯ್ಕೆಯಾದ ಮೊದಲ ಪಂದ್ಯದಲ್ಲೇ ಡಕೌಟ್ ಆಗಿರೋ ನೋವು, ಇದೆಲ್ಲವನ್ನೂ ಮೀರಿ ಯಂಗ್ ಬ್ಯಾಟರ್ ಅಭಿಷೇಕ್ ಶರ್ಮಾ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ತನ್ನ ಹೆಸರು ಕೂಡಾ ಬರೆಸಿಕೊಂಡಿದ್ದಾರೆ. ಇನ್ನೇನಿದ್ರೂ ರೋಹಿತ್ ಶರ್ಮಾ ಬಿಟ್ಟು ಹೋದ ಜಾಗವನ್ನು ಅಭಿಷೇಕ್ ಶರ್ಮಾ ತುಂಬಿಸೋದನ್ನ ನೋಡುವ ಸಂಭ್ರಮ ಭಾರತೀಯರದ್ದು. ಹಾಗಾದ್ರೆ, ಅಭಿಷೇಕ್ ಶರ್ಮಾ ಪದಾರ್ಪಣೆ ಪಂದ್ಯದಲ್ಲಿ ಹೆದರಿದ್ರಾ?., ಐಪಿಎಲ್ ಹೀರೋ ಮೊದಲ ಪಂದ್ಯದಲ್ಲಿ ಝೀರೋ ಆಗಿದ್ದು ಹೇಗೆ?, ಎರಡನೇ ಪಂದ್ಯದಲ್ಲೇ ದಾಖಲೆ ಸರದಾರನಾಗಿ ಮೆರೆದಾಡಲು ಹಿಂದಿರೋ ಶಕ್ತಿ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗೆದ್ದ ಭಾರತ.. ಸೋತ ನಾಯಕ – ಅಭಿ ಸೆಂಚುರಿ, ರಿಂಕು ರೌದ್ರಾವತಾರ

ಹೆಂಗ್ ಬಾಲ್ ಎಸೆದ್ರೂ ಹೊಡಿತಾನಲ್ಲಪ್ಪ ಅಂತಾ ಬೌಲರ್ಸ್. ಗ್ರೌಂಡ್​ನ ಮೂಲೆ ಮೂಲೆಗೂ ಓಡಿ ಓಡಿ ಸುಸ್ತಾಯ್ತು ಅಂತಾ ಫೀಲ್ಡರ್ಸ್. ಒಂದೆಡೆ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಪ್ರತಾಪ, ಮತ್ತೊಂದೆಡೆ ರಿಂಕು ಸಿಂಗ್ ಸಿಡಿಲಬ್ಬರ.. ಜಿಂಬಾಬ್ವೆ ಆಟಗಾರರ ಮೊದಲ ಪಂದ್ಯದ ಗೆಲುವಿನ ಸಂಭ್ರಮ ಒಂದೇ ದಿನದಲ್ಲಿ ಮಣ್ಣುಪಾಲು ಮಾಡಿದ್ರು ನಮ್ಮ ಟೀಮ್ ಇಂಡಿಯಾ ಹೀರೋಗಳು. ಅದ್ರಲ್ಲೂ ಒನ್ ಆಂಡ್ ಒನ್ಲಿ ಅಭಿಷೇಕ್ ಆರ್ಭಟಕ್ಕೆ ಆತಿಥೇಯರ ಬೆವರು ನೀರಾಗಿ ಹರಿದಿತ್ತು. ಸಿಕ್ಸ್ ಫೋರ್‌ಗಳು ಮಿಂಚು ಸಿಡಿಲಿನಂತೆ ಅಬ್ಬರಿಸಿದ್ವು. ಈ ಸಿಡಿಲಬ್ಬರದ ಸೆಂಚೂರಿ ಅಭಿಷೇಕ್ ಎಂಬ ಸುರಸುಂದರಾಂಗನ ಸ್ಟೈಲಿಶ್ ಆಟಕ್ಕೂ ಸಾಕ್ಷಿಯಾಗಿತ್ತು. ಜಿಂಬಾಬ್ವೆ ಪ್ರವಾಸದಲ್ಲಿ ಭಾರತದ ಟಿ20 ಕ್ರಿಕೆಟ್‌ ತಂಡಕ್ಕೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಅಭಿಷೇಕ್ ಡಕ್‌ಔಟ್‌ ಆಗಿದ್ರು. ಅಭಿಷೇಕ್ ಶರ್ಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದ ಫ್ಯಾನ್ಸ್ ಹೃದಯ ಮೊದಲ ಪಂದ್ಯದಲ್ಲೇ ಛಿಧ್ರವಾಗಿತ್ತು. ಇದಾಗಿ ಜಸ್ಟ್ ಒನ್ ಡೇ ಅಷ್ಟೇ. ಟೀಮ್ ಇಂಡಿಯಾ ಆರಂಭಿಕ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಜಿಂಬಾಬ್ವೆ ನೆಲದಲ್ಲಿ ಕಮಾಲ್ ಮಾಡಿಯೇ ಬಿಟ್ರು. ಬೊಂಬಾಟ್ ಬ್ಯಾಟಿಂಗ್‌ ನಡೆಸಿದ ಎಡಗೈ ಬ್ಯಾಟರ್‌ ಕೇವಲ 46 ಎಸೆತಗಳಲ್ಲೇ ಶತಕ ಬಾರಿಸುವ ಮೂಲಕ ಇತಿಹಾಸದ ಪುಟ ಸೇರಿದ್ದಾರೆ. ಆರಂಭದಲ್ಲೇ ನಾಯಕ ಶುಭಮನ್ ಗಿಲ್‌ ಜಸ್ಟ್ ಟೂ ರನ್ ಗೆ ಔಟಾದಾಗ ಓಪನರ್‌ ಆಗಿ ಬಂದ ಅಭಿಷೇಕ್‌ ಶರ್ಮಾ ಮೇಲೆ ಜವಾಬ್ದಾರಿ ಕೂಡಾ ಹೆಚ್ಚಾಗಿತ್ತು. ಎಚ್ಚರಿಕೆಯಿಂದ ಬ್ಯಾಟ್‌ ಬೀಸಿದ್ರು. ಪರಿಣಾಮ ಪವರ್‌ ಪ್ಲೇನ 6 ಓವರ್‌ಗಳಲ್ಲಿ ಭಾರತ ತಂಡ 36 ರನ್‌ ಮಾತ್ರವೇ ಕಲೆಹಾಕಿತ್ತು. ಕ್ರೀಸ್‌ನಲ್ಲಿ ಭದ್ರವಾಗಿ ನೆಲೆನಿಂತು ಕಂಫರ್ಟ್‌ ಜೋನ್‌ಗೆ ಮರಳಿದ ಅಭಿಷೇಕ್, ನಂತರ ಜಿಂಬಾಬ್ವೆ ಬೌಲರ್‌ಗಳನ್ನು ಬಡಿದು ಬೆಂಡೆತ್ತೋಕೆ ಶುರುಮಾಡಿದ್ರು. ಕೇವಲ 23 ವರ್ಷದ ಯುವ ಪ್ರತಿಭೆ ಹ್ಯಾಟ್ರಿಕ್ ಸಿಕ್ಸರ್‌ ಬಾರಿಸಿದ್ರು. ಇದೇ ಹ್ಯಾಟ್ರಿಕ್ ಸಿಕ್ಸ್ ಮೂಲಕ ಶತಕ ಸಿಡಿಸಿದ್ದು ವಿಶೇಷವಾಗಿತ್ತು. ಕೇವಲ 46 ಎಸೆತಗಳಲ್ಲೇ ಶತಕ ದಾಖಲಿಸಿದ ಅಭಿಷೇಕ್ ದಾಖಲೆ ಪುಟದಲ್ಲಿ ತನ್ನ ಹೆಸರು ಬರೆಸಿಕೊಂಡ್ರು.

ದಾಖಲೆಯ ಸರದಾರ ಅಭಿಷೇಕ್ ಶರ್ಮಾ

ಅಭಿಶೇಕ್ ಶರ್ಮಾ ಸಿಡಿಸಿದ ಸೆಂಚೂರಿ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಮೂಡಿ ಬಂದ ನಾಲ್ಕನೇ ಅತಿ ವೇಗದ ಶತಕವಾಗಿದೆ. ಕೆಎಲ್‌ ರಾಹುಲ್‌ ಮತ್ತು ದೀಪಕ್ ಹೂಡ ಬಳಿಕ ಕೇವಲ 2 ಪಂದ್ಯಗಳಲ್ಲಿ ಮೊದಲ ಟಿ20-ಐ ಶತಕ ಬಾರಿಸಿದ ಭಾರತೀಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ ಅಭಿಶೇಕ್ ಶರ್ಮಾ.

ಇಷ್ಟೇ ಅಲ್ಲದೇ, ಅಭಿಷೇಕ್ ಶರ್ಮಾ ಭಾರತದ ಪರ ಜಂಟಿಯಾಗಿ ಮೂರನೇ ವೇಗದ ಟಿ20 ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ಟಿ20ಯಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ಮೊದಲು ಈ ದಾಖಲೆ ದೀಪಕ್ ಹೂಡಾ ಹೆಸರಿನಲ್ಲಿತ್ತು. ದೀಪಕ್ ತಮ್ಮ ಮೂರನೇ ಟಿ20 ಇನ್ನಿಂಗ್ಸ್‌ನಲ್ಲಿಯೇ ಶತಕ ಗಳಿಸಿದ ಸಾಧನೆ ಮಾಡಿದ್ದರು. ಇದೀಗ ಕೇವಲ 2ನೇ ಇನ್ನಿಂಗ್ಸ್​ನಲ್ಲಿ ಶತಕ ಬಾರಿಸಿರುವ ಅಭಿಷೇಕ್, ಹೂಡಾರನ್ನು ಹಿಂದಿಕ್ಕಿದ್ದಾರೆ. ಇದಲ್ಲದೆ, ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಎರಡನೇ ಪಂದ್ಯದಲ್ಲಿಯೇ ಅಂತರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಅಭಿಷೇಕ್ ಶರ್ಮಾ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಅಷ್ಟಕ್ಕೂ ಅಭಿಷೇಕ್ ಶರ್ಮಾ ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ ಗರಡಿ ಹುಡುಗ. ಪಂಜಾಬ್ ಮೂಲದ ಅಭಿಷೇಕ್​ಗೆ ಯುವಿ ವಿಶೇಷ ತರಬೇತಿ ನೀಡಿದ್ದರು. ಅಲ್ಲದೆ ಈ ಬಾರಿಯ ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಮಿಂಚಿದ್ದ ಅಭಿಷೇಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಯುವರಾಜ್ ಸಿಂಗ್ ಅವರಿಗೆ ಧನ್ಯವಾದ ಅರ್ಪಿಸಿದ್ದರು. ಇದೀಗ ತನ್ನ ಗುರುವಿನ ದಾಖಲೆಯನ್ನೇ ಮುರಿದಿದ್ದಾರೆ ಅಭಿಷೇಕ್ ಶರ್ಮಾ.

ಗುರುವಿನ ದಾಖಲೆ ಮುರಿದ ಶಿಷ್ಯ  

2ನೇ ಟಿ20 ಪಂದ್ಯದಲ್ಲೇ ಅಭಿಷೇಕ್ ಶರ್ಮಾ ಭರ್ಜರಿ ಶತಕ ಸಿಡಿಸಿ ಹಲವು ದಾಖಲೆ ಬರೆದಿದ್ದಲ್ಲೇ , ಸ್ವತಃ ತನ್ನ ಗುರು ಯುವರಾಜ್ ಸಿಂಗ್ ಸಾಧನೆಯನ್ನೂ ಕೂಡಾ ಬ್ರೇಕ್ ಮಾಡಿದ್ದಾರೆ. ಅದ್ರಲ್ಲೂ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನು ಅಭಿಷೇಕ್ ತಮ್ಮದಾಗಿಸಿಕೊಂಡಿದ್ದಾರೆ. ಅಭಿಷೇಕ್ ಶರ್ಮಾ ತಮ್ಮ 100 ರನ್​ಗಳಲ್ಲಿ 65 ರನ್​ ಸಿಡಿಸಿರುವುದು ಸ್ಪಿನ್ನರ್​ಗಳ ವಿರುದ್ಧ. ಅಂದರೆ ಸ್ಪಿನ್ ಬೌಲರ್​ಗಳನ್ನೇ ಟಾರ್ಗೆಟ್ ಮಾಡಿದ್ದ ಅಭಿಷೇಕ್ 28 ಎಸೆತಗಳಲ್ಲಿ 65 ರನ್​ ಕಲೆಹಾಕಿದ್ದರು. ಈ ಮೂಲಕ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಟಿ20 ಇನಿಂಗ್ಸ್​ನಲ್ಲಿ ಸ್ಪಿನ್ನರ್​ಗಳ ವಿರುದ್ಧ ಅತ್ಯಧಿಕ ರನ್ ಬಾರಿಸಿದ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿತ್ತು. 2012 ರಲ್ಲಿ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್​ಗಳ ವಿರುದ್ಧ ಯುವರಾಜ್ ಸಿಂಗ್ 57 ರನ್ ಸಿಡಿಸಿ ಈ ವಿಶೇಷ ದಾಖಲೆ ನಿರ್ಮಿಸಿದ್ದರು. ಇದೀಗ 12 ವರ್ಷಗಳ ಬಳಿಕ ಈ ದಾಖಲೆಯನ್ನು ಮುರಿಯುವಲ್ಲಿ ಅಭಿಷೇಕ್ ಶರ್ಮಾ ಯಶಸ್ವಿಯಾಗಿದ್ದಾರೆ. ಗುರುವಿನ ದಾಖಲೆ ಮುರಿದ ಬೆನ್ನಲ್ಲೇ ಅಭಿಷೇಕ್ ಶರ್ಮಾ ಗುರು ಯುವರಾಜ್ ಸಿಂಗ್​ಗೆ ಕರೆ ಮಾಡಿ ಮಾತಾಡಿದ್ದಾರೆ. ವಿಡಿಯೋ ಕಾಲ್ ನಲ್ಲಿ ಮಾತನಾಡಿದ ಯುವಿ, ಆಟದ ಬಗ್ಗೆ ಹೆಮ್ಮೆಯಿದೆ. ಇದು ಆರಂಭವಷ್ಟೇ, ನಿನ್ನಿಂದ ಇನ್ನಷ್ಟು ನಿರೀಕ್ಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ ಅಭಿಷೇಕ್ ಶರ್ಮಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅಭಿಷೇಕ್ ಶರ್ಮಾ ಧನ್ಯವಾದ ಹೇಳಿದ್ದಾರೆ. ಇದೀಗ ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಇನ್ನು ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಬ್ಯಾಕ್ ಟು ಬ್ಯಾಕ್ ಮೂರು ಸಿಕ್ಸ್ ಸಿಡಿಸಿ ಶತಕ ಪೂರೈಸಿದ್ದರು. ಈ ಮೂಲಕ ಟಿ20 ಕ್ರಿಕೆಟ್​ ಇತಿಹಾಸದಲ್ಲಿ 82 ರನ್​ಗಳ ಬಳಿಕ ಹ್ಯಾಟ್ರಿಕ್ ಸಿಕ್ಸ್​ ಸಿಡಿಸಿ ಶತಕ ಪೂರೈಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಅಭಿಷೇಕ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ. 7 ಫೋರ್‌ ಮತ್ತು 8 ಸಿಕ್ಸರ್‌ ಬಾರಿಸಿದ ಸಿಂಗಲ್ ಶೇರ್ ಶರ್ಮಾ ಈ ರೀತಿ ಸಿಡಿಲಬ್ಬರ ಬ್ಯಾಟಿಂಗ್ ಮಾಡಿರೋ ಹಿಂದೆ ಮೊದಲ ಪಂದ್ಯದ ಹತಾಶೆ, ನೋವೇ ಕಾರಣ ಎಂದಿದ್ದಾರೆ. ಮೊದಲ ಪಂದ್ಯದಲ್ಲಿನ ಸೋಲು ನನ್ನ ನಿದ್ರೆ ಕೆಡಿಸಿತ್ತು. ಆದರೆ, ಈ ದಿನ ನನ್ನದು ಎಂಬ ಅನುಭವವಾಗಿತ್ತು. ಅಂತೆಯೇ ಅದರ ಪೂರ್ಣ ಲಾಭ ತೆಗೆದುಕೊಂಡೆ. ಒಬ್ಬ ಯುವ ಆಟಗಾರನಾಗಿ, ನೈಜ ಸಾಮರ್ಥ್ಯ ಏನೆಂಬುದನ್ನು ಹೊರಹಾಕುವ ತುಡಿತ ಇದ್ದೇ ಇರುತ್ತದೆ. ನನ್ನೊಳಗಿನ ಸಾಮರ್ಥ್ಯದ ಮೇಲೆ ಇದ್ದ ವಿಶ್ವಾಸದೊಂದಿಗೆ ಇಂದು ಬ್ಯಾಟ್‌ ಮಾಡಿದ್ದೇನೆ ಎಂದು ಅಭಿಷೇಕ್ ಹೇಳಿದ್ದಾರೆ. ಜೊತೆಗೆ ತನ್ನ ಸೆಂಚೂರಿ ಸಾಧನೆಯ ಹಿಂದೆ ಕ್ಯಾಪ್ಟನ್ ಶುಭ್ಮನ್ ಗಿಲ್ ನಿಂತಿರೋದನ್ನು ಹೇಳಲು ಮರೆಯಲಿಲ್ಲ. ಗಿಲ್ ಬ್ಯಾಟ್ ಗಿಫ್ಟ್ ಆಗಿ ನೀಡಿದ್ದೇ ಶತಕ ಸಿಡಿಸಲು ಸಾಧ್ಯವಾಯ್ತು ಎಂತಾ ಹೇಳಿದ್ದಾರೆ ಅಭಿಷೇಕ್ ಶರ್ಮಾ.

ಐಪಿಎಲ್ ಸ್ಟಾರ್ ಬ್ಯಾಟ್ಸ್​ಮನ್ ಆಗಿ ಶೈನ್ ಆಗಿರೋ ಶರ್ಮಾ ಮೇಲೆ ಟೀಂ ಇಂಡಿಯಾ ಭಾರೀ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ಚೊಚ್ಚಲ ಪಂದ್ಯದಲ್ಲಿ ಆರಂಭಿಕರಾಗಿ ಬಂದ ಅಭಿಷೇಕ್ ಖಾತೆ ತೆರೆಯದೆಯೇ ಔಟಾಗಿದ್ರು. ಅಭಿಷೇಕ್ ಕೇವಲ 4 ಎಸೆತಗಳನ್ನು ಎದುರಿಸಿ ಚೊಚ್ಚಲ ಪಂದ್ಯದಲ್ಲೇ ಝೀರೋ ರನ್‌ಗೆ ಔಟಾದಾಗ ಫ್ಯಾನ್ಸ್ ಅಕ್ಷರಶಃ ಶಾಕ್ ಆಗಿ ಹೋಗಿದ್ರು. ಇದು ಸ್ವತಃ ಅಭಿಷೇಕ್ ಶರ್ಮಾಗೂ ಸೆಟ್‌ಬ್ಯಾಕ್ ಆಗಿತ್ತು. ಮೊದಲ ಪಂದ್ಯದಲ್ಲಿ ಶೂನ್ಯ ಗಳಿಸಿದ ನೋವನ್ನು ಮರುದಿನವೇ ಮರೆಯುವಂತೆ ಮಾಡಿದ್ದಾರೆ ಅಭಿಷೇಕ್ ಶರ್ಮಾ. ಇದು ನಿಜವಾದ ಕ್ರಿಕೆಟರ್‌ನ ಟ್ಯಾಲೆಂಟ್.

Shwetha M