RCBಗೆ ರಾಹುಲ್ ದ್ರಾವಿಡ್ ಬೇಡ್ವಾ? – DKಗಿಂತ WALL ಗ್ರೇಟ್ ಅಲ್ವಾ?
ಐಪಿಎಲ್‌ನಲ್ಲಿ ದ್ರಾವಿಡ್ ಟೀಮ್ ಯಾವುದು?

RCBಗೆ ರಾಹುಲ್ ದ್ರಾವಿಡ್ ಬೇಡ್ವಾ? – DKಗಿಂತ WALL ಗ್ರೇಟ್ ಅಲ್ವಾ?ಐಪಿಎಲ್‌ನಲ್ಲಿ ದ್ರಾವಿಡ್ ಟೀಮ್ ಯಾವುದು?

ಟಿ20 ವಿಶ್ವಕಪ್ ಗೆದ್ದು ಕೋಚ್ ಅವಧಿಯನ್ನು ಮುಕ್ತಾಯಗೊಳಿಸಿದ್ದಾರೆ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್. ಟೀಮ್ ಇಂಡಿಯಾ ಅನ್ನೋ ಬಲಿಷ್ಠ ಪಡೆಯನ್ನು ಮುನ್ನಡೆಸಿಕೊಂಡು ಬಂದ ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ಈಗ ಬಿಸಿಸಿಐ ನಿಯಂತ್ರಣದಿಂದ ಮುಕ್ತರಾಗಿದ್ದಾರೆ. ಕೆಲದಿನಗಳು ಫ್ಯಾಮಿಲಿ, ರಿಲ್ಯಾಕ್ಸ್ ಅಂತಾ ಇದ್ರೂ ಕೂಡಾ ನಾನು ನಿರುದ್ಯೋಗಿ, ಕೆಲಸ ಕೊಡಿ ಅಂತಾ ದ್ರಾವಿಡ್ ತಮಾಷೆಯಾಗಿಯೇ ಹೇಳಿರಬಹುದು. ಆದ್ರೆ, ಒಬ್ಬ ಯಶಸ್ವೀ ಮಾಜಿ ಕ್ರಿಕೆಟರ್ ಸೈಲೆಂಟ್ ಆಗಿರೋಕೆ ಸಾಧ್ಯವೇ ಇಲ್ಲ. ಈ ಸಲ ಐಪಿಎಲ್ ನಲ್ಲಿ ಯಾವುದಾದರೂ ಟೀಮ್‌ನಲ್ಲಿ ಮೆಂಟರ್ ಮತ್ತು ಕೋಚ್ ಆಗಿ ಕಾಣಿಸಿಕೊಳ್ಳೋದ್ರಲ್ಲಿ ನೋ ಡೌಟ್. ಬೇರೆ ಯಾವ ಟೀಮ್ ಯಾಕೆ, ನಮ್ದೇ ಇದೆಯೆಲ್ಲಾ ಆರ್.. ಸಿ.. ಬಿ… ಹೌದು, ಸ್ನೇಹಿತರೇ ಈಗ ಆರ್‌ಸಿಬಿ ಅಭಿಮಾನಿಗಳು ವಿಶ್ವಕಪ್ ವಿಜೇತ ಟೀಮ್ ನ ಕೋಚ್ ಆಗಿರೋ ರಾಹುಲ್ ದ್ರಾವಿಡ್ ಅವ್ರನ್ನ ಆರ್‌ಸಿಬಿ ಕೋಚ್ ಆಗಿ ಬನ್ನಿ ಅಂತಿದ್ದಾರೆ. ಆದ್ರೇನ್ ಮಾಡೋದು ಆರ್‌ಸಿಬಿ ಪ್ರಾಂಚೈಸಿ ಈಗಾಗಲೇ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ದಿನೇಶ್ ಕಾರ್ತಿಕ್ ಅವ್ರನ್ನ ಆಯ್ಕೆ ಮಾಡಿಯಾಗಿದೆ. ಅತ್ತ ರಾಹುಲ್ ದ್ರಾವಿಡ್ ಕೋಚ್ ಅವಧಿ ಮುಕ್ತಾಯಕ್ಕೂ ಇತ್ತ ದಿನೇಶ್ ಕಾರ್ತಿಕ್ ಆರ್‌ಸಿಬಿ ಟೀಮ್‌ನ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ಸೆಲೆಕ್ಟ್ ಆಗಲು ಏನಾದ್ರೂ ಕನೆಕ್ಷನ್ ಇದೆಯಾ? ರಾಹುಲ್ ದ್ರಾವಿಡ್ ಗಿಂತ ಬೆಂಗಳೂರು ಟೀಮ್‌ಗೆ ಡಿಕೆಯೇ ಯಾಕೆ ಬೆಸ್ಟ್? ಈ ಬಗ್ಗೆ ಫ್ಯಾನ್ಸ್ ಮನವಿಗೆ ಕಿವಿಗೊಡುತ್ತಾ ಬೆಂಗಳೂರು ಪ್ರ್ಯಾಂಚೈಸಿ ಅನ್ನೋದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಟಿ20 ವಿಶ್ವಕಪ್‌ ಬಳಿಕ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅವಧಿ ಕೂಡಾ ಮುಕ್ತಾಯವಾಗಿದೆ. ಮುಂದಿನ ವಾರದಿಂದ ನಾನು ನಿರುದ್ಯೋಗಿ, ನನಗೆ ಕೆಲಸ ಇದ್ದರೆ ಹೇಳಿ ಎಂದು ದ್ರಾವಿಡ್ ತಮಾಷೆಯಾಗಿ ಮಾತನಾಡಿದ್ದೂ ಹೌದು. ನೀವು ನಿರುದ್ಯೋಗಿಯಾಗಲು ಸಾಧ್ಯವೇ ಇಲ್ಲ, ಆರ್ ಸಿಬಿ ತಂಡದ ಕೋಚ್ ನೀವೇ ಆಗಿ ಅಂತಿದ್ದಾರೆ ಫ್ಯಾನ್ಸ್. ದ್ರಾವಿಡ್ ಕೋಚ್ ಆದರೆ ಆರ್ ಸಿಬಿ ಕಪ್ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಅಭಿಮಾನಿಗಳದ್ದು. ಇಲ್ಲೇ ಇರೋದು ಟ್ವಿಸ್ಟ್. ಇನ್ನೇನು ರಾಹುಲ್ ದ್ರಾವಿಡ್ ಜೊತೆಗಿನ ಬಿಸಿಸಿಐ ಒಪ್ಪಂದ ಮುಗಿದೇ ಬಿಡ್ತು. ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲೋದು ಗ್ಯಾರಂಟಿ ಎಂಬ ಧೈರ್ಯ ಬಂತೋ ಆಗ್ಲೇ ಮೈಕೊಡವಿ ಎದ್ದಿದ್ದು ಆರ್‌ಸಿಬಿ ಪ್ರಾಂಚೈಸಿ. ತಮಿಳುನಾಡಿನ ಕ್ರಿಕೆಟಿಗ, ತನ್ನ ತಂಡದ ಮಾಜಿ ಸ್ಟಾರ್ ಆಟಗಾರ ದಿನೇಶ್ ಕಾರ್ತಿಕ್ ಆರ್‌ಸಿಬಿ ಟೀಮ್‌ನ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಸೆಲೆಕ್ಟ್ ಮಾಡಿ ಪೋಸ್ಟ್ ಶೇರ್ ಮಾಡಿಯೇ ಬಿಟ್ಟಿತು. ಡಿಕೆ ಬಾಸ್ ಆರ್‌ಸಿಬಿಯಲ್ಲಿ ಕಂಟಿನ್ಯೂ ಆಗೋದು ಅಭಿಮಾನಿಗಳಿಗೂ ಇಷ್ಟವೇ. ಆದ್ರೆ, ಅತ್ತ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಹುದ್ದೆ ಬಿಟ್ಟು ಹೊರಬರಲು ದಿನಗಣನೆ ಶುರುವಾಗಿರೋ ಟೈಮ್ ನೋಡಿ ಆರ್‌ಸಿಬಿ ಈ ಘೋಷಣೆ ಮಾಡಿದ್ದಾದರೂ ಯಾಕೆ ಎಂಬ ಡೌಟ್ ಶುರುವಾಗಿತ್ತು. ಹಾಗಾದ್ರೆ ಆರ್‌ಸಿಬಿ ಟೀಮ್‌ಗೆ ನಮ್ಮ ಕನ್ನಡಿಗರು ಬೇಡ್ವಾ?, ಅದ್ರಲ್ಲೂ ಒಬ್ಬ ಯಶಸ್ವೀ ಕೋಚ್ ಆಗಿ ಮೆರೆದಾಡಿದ ರಾಹುಲ್ ದ್ರಾವಿಡ್ ಸೇವೆ ಬೆಂಗಳೂರು ತಂಡಕ್ಕೆ ಅಗತ್ಯವೇ ಇಲ್ವಾ ಎಂಬ ಪ್ರಶ್ನೆ ಈಗ ದೊಡ್ಡ ಮಟ್ಟದಲ್ಲೇ ಚರ್ಚೆಯಾಗ್ತಿದೆ. ಅಷ್ಟಕ್ಕೂ ವಾಲ್ ಅಂತಾನೇ ಫೇಮಸ್ ಆಗಿರೋ ದ್ರಾವಿಡ್ ಆರ್‌ಸಿಬಿಗೆ ಯಾಕೆ ಬೇಕು ಅನ್ನೋದನ್ನು ನೋಡೋದಾದ್ರೆ,

ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್‌ಗೆ ರಾಹುಲ್ ದ್ರಾವಿಡ್ ಯಾಕೆ ಬೇಕು ಎಂಬ ಬಗ್ಗೆ ವಿವರಿಸೋದಾದ್ರೆ, ದ್ರಾವಿಡ್ ಅವರಿಗೆ ಭಾರತೀಯ ಆಟಗಾರರ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಅಂಡರ್ 19 ಆಟಗಾರರ ಬಗ್ಗೆಯೂ ಅವರು ತಿಳಿದುಕೊಂಡಿದ್ದಾರೆ. ಹೀಗಾಗಿ ಬಲಿಷ್ಠ ಆರ್‌ಸಿಬಿ ತಂಡವನ್ನು ರಾಹುಲ್ ದ್ರಾವಿಡ್ ಕಟ್ಟಬಹುದು ಎಂಬ ನಿರೀಕ್ಷೆಯಿದೆ. ಇದಕ್ಕಿಂತಲೂ ಹೆಚ್ಚಾಗಿ ಆರ್‌ಸಿಬಿ ಸ್ಟಾರ್ ಆಟಗಾರ, ಬೆಂಗಳೂರು ತಂಡದ ಬ್ಯಾಕ್‌ಬೋನ್ ವಿರಾಟ್ ಕೊಹ್ಲಿ ಜೊತೆ ದ್ರಾವಿಡ್ ಉತ್ತಮ ನಂಟು ಹೊಂದಿದ್ದಾರೆ. ರನ್ ಮೆಷಿನ್ ಮತ್ತು ಗ್ರೇಟ್ ವಾಲ್ ಇಬ್ಬರೂ ಸೇರಿ ಸ್ಟ್ರಾಟಜಿ ಮಾಡಿದ್ರು ಅಂದ್ರೆ ಆರ್‌ಸಿಬಿ ಹಿಂತಿರುಗಿ ನೋಡೋ ಮಾತೇ ಇಲ್ಲ. ಈ ಬಾರಿ ಕಪ್ ನಮ್ದೇ ಅಂತಾ ಪ್ರತಿಯೊಬ್ಬ ಕನ್ನಡಿಗನು ಎದೆಯುಬ್ಬಿಸಿಕೊಂಡು ಹೆಮ್ಮೆಯಿಂದ ಹೇಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ದ್ರಾವಿಡ್ ಕರ್ನಾಟಕದವರು, ಆರ್ ಸಿಬಿ ತಂಡಕ್ಕಾಗಿ ಆಡಿದವರು. ಅವರಿಗೆ ತಂಡದ ಜೊತೆ ಭಾವನಾತ್ಮಕ ನಂಟಿದೆ. ಅವರು ತಂಡದ ಕೋಚ್ ಆದರೆ ತಂಡದ ಜನಪ್ರಿಯತೆ ಕೂಡ ಮತ್ತಷ್ಟು ಹೆಚ್ಚಲಿದೆ. ಇದಕ್ಕಿಂತಲೂ ಇನ್ನೊಂದು ವಿಚಾರ ಕನ್ನಡಿಗರನ್ನು ಇಷ್ಟು ದಿನ ಕಾಡುತ್ತಿತ್ತು. ಅದೇನೆಂದರೆ ಬೆಂಗಳೂರು ಟೀಮ್ ಮ್ಯಾನೇಜ್‌ಮೆಂಟ್‌ ಸ್ಥಳೀಯ ಆಟಗಾರರನ್ನು ಸೇರಿಸಿಕೊಳ್ತಿಲ್ಲ ಅನ್ನೋದು. ದ್ರಾವಿಡ್ ಕೋಚ್ ಆದ್ರೆ, ಸ್ಥಳೀಯ ಆಟಗಾರರಿಗೂ ಚಾನ್ಸ್ ಸಿಗಬಹುದು. ಇದೆಲ್ಲವನ್ನೂ ನೋಡಿದಾಗ ದ್ರಾವಿಡ್‌ ಕೋಚ್ ಆಗಲಿ ಅನ್ನೋದು ಆರ್‌ಸಿಬಿ ಫ್ಯಾನ್ಸ್ ಆಸೆ.

ಒಂದು ವೇಳೆ ಆರ್ ಸಿಬಿ ಏನಾದರೂ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗಿ ನೇಮಿಸಿಕೊಳ್ಳಲು ಯೋಚಿಸಿದರೆ, ತಂಡಕ್ಕೆ ಸಾಕಷ್ಟು ಲಾಭವಾಗುತ್ತದೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ ವೃತ್ತಿಬದುಕಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌, ಪಂಜಾಬ್‌ ಕಿಂಗ್ಸ್‌, ಮುಂಬೈ ಇಂಡಿಯನ್ಸ್‌, ಕೋಲ್ಕತಾ ನೈಟ್‌ ರೈಡರ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳಲ್ಲಿ ಆಡಿದ ಅಪಾರ ಅನುಭವ ಹೊಂದಿದವರು ದಿನೇಶ್ ಕಾರ್ತಿಕ್‌. ಕಳೆದ 3 ಸೀಸನ್‌ಗಳಲ್ಲಿ ಆರ್‌ಸಿಬಿ ಪರ ಬ್ಯಾಟ್‌ ಬೀಸಿದ್ದಾರೆ. ತಂಡದಲ್ಲಿ ವಿಕೆಟ್‌ಕೀಪಿಂಗ್ ಜೊತೆಗೆ ಅತ್ಯುತ್ತಮ ಫಿನಿಷರ್‌ ಆಗಿಯೂ ಸೈ ಅನ್ನಿಸಿಕೊಂಡಿದ್ದಾರೆ ಡಿ.ಕೆ. ಆರ್‌ಸಿಬಿ ತಂಡದ ಮೈನ್ ಅಟ್ರಾಕ್ಷನ್ ಅಂದ್ರೆ ವಿಕೆ ಮತ್ತು ಡಿಕೆ. ವಿರಾಟ್ ಕೊಹ್ಲಿ ನಂತರ ಮೈದಾನದಲ್ಲಿ ಕೇಳಿ ಬರುವ ಮತ್ತೊಂದು ಹೆಸರೇ ಡಿಕೆ. ಇದೇ ಜೈಕಾರ, ಫ್ಯಾನ್ಸ್ ಡಿಕೆಗೆ ತೋರಿಸಿರುವ ಅಭಿಮಾನವನ್ನು ಮುಂದಿಟ್ಟುಕೊಂಡು ಈಗ ಆರ್‌ಸಿಬಿ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ದಿನೇಶ್ ಕಾರ್ತಿಕ್ ಹೆಸ್ರನ್ನ ಘೋಷಿಸಿದೆ. ಹಾಗಾದ್ರೆ, ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ಗಿಂತಲೂ ದಿನೇಶ್ ಕಾರ್ತಿಕ್ ಆರ್‌ಸಿಬಿಗೆ ಬೆಸ್ಟ್ ಆಪ್ಶನ್ ಆಗ್ತಾರಾ? ಅನ್ನೋದನ್ನು ನೋಡೋದಾದ್ರೆ,

ರಾಹುಲ್ ದ್ರಾವಿಡ್ ಅವರಿಗೆ ಹೋಲಿಸಿದ್ರೆ ದಿನೇಶ್ ಕಾರ್ತಿಕ್ ಅವರಿಗೆ ಅನುಭವ ಏನೇನೂ ಇಲ್ಲ, ವಿಕೆಟ್ ಕೀಪಿಂಗ್, ಬೌಲಿಂಗ್ ಬಿಟ್ರೆ ಒಂದು ತಂಡವನ್ನು ನಿಭಾಯಿಸುವ ಶಕ್ತಿ ಇದೆ ಎಂಬುದನ್ನೂ ಇನ್ನೂ ತೋರಿಸಿಕೊಡಬೇಕಷ್ಟೇ. ಇನ್ನೊಂದು ಇಂಪಾರ್ಟೆಂಟ್ ವಿಚಾರ ಅಂದ್ರೆ ಆರ್‌ಸಿಬಿ ಮೈನ್ ಆಟಗಾರ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಕೋಚ್ ಆಗಿ ದಿನೇಶ್ ಕಾರ್ತಿಕ್ ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸಬಹುದು ಅನ್ನೋದು. ವಿರಾಟ್ ಕೊಹ್ಲಿ ಜೊತೆ ಸ್ಟ್ರಾಟಜಿ ಮಾಡುವಂತಾ ಆಟಗಾರನಾಗಿ ಡಿಕೆ ಸಾಮರ್ಥ್ಯ ತೋರುತ್ತಾರಾ ಅನ್ನೋ ಡೌಟ್ ಕೂಡಾ ಇದೆ. ಕಾರ್ತಿಕ್ ಮಾತು ದಿಗ್ಗಜ ಕ್ರಿಕೆಟರ್ ಕೊಹ್ಲಿ ಕೇಳ್ತಾರಾ ಅನ್ನೋದು ಕೂಡಾ ಮುಂದಿರೋ ಪ್ರಶ್ನೆ. ದ್ರಾವಿಡ್ ಹಿರಿಯ ಆಟಗಾರ ಅನ್ನೋದಕ್ಕಿಂತೂ ಗ್ರೇಟ್ ವಾಲ್ ಅಂತಾನೇ ಕರೆಸಿಕೊಂಡವರು. ದ್ರಾವಿಡ್ ಜೊತೆಗೂ ಕಾರ್ತಿಕ್ ಜೊತೆಗೆ ವಿರಾಟ್ ಕೊಹ್ಲಿ ಬಾಂಧವ್ಯ ಹೋಲಿಸಲು ಸಾಧ್ಯವೇ ಇಲ್ಲ. ಇನ್ನು ಕ್ಯಾಪ್ಟನ್ ಆಗಿ ಕೂಡಾ ದಿನೇಶ್ ಕಾರ್ತಿಕ್ ಸಕ್ಸಸ್ ಕಂಡಿಲ್ಲ. ಕೆಕೆಆರ್ ಟೀಮ್ ಕ್ಯಾಪ್ಟನ್ ಆಗಿದ್ದ ದಿನೇಶ್ ಕಾರ್ತಿಕ್ ಟೀಮ್ ನ್ನ ಚಾಂಪಿಯನ್ ಮಾಡುವಲ್ಲಿಯೂ ಸೋತು ಹೋಗಿದ್ದರು. ಹೀಗಾಗಿ ಒಂದು ತಂಡವನ್ನ ಮೆಂಟರ್ ಆಗಿ ಹೇಗೆ ಯಶಸ್ವಿಯಾಗಿ ಸ್ಟ್ರಾಟಜಿ ಮೂಲಕ ಕೊಂಡಯ್ಯಬಲ್ಲರು ಅನ್ನೋ ವಿಚಾರ ಕೂಡಾ ಗೊಂದಲದಲ್ಲಿದೆ.

ಇನ್ನು ಆರ್‌ಸಿಬಿ ಟೀಮ್ ಗೆ ರಾಹುಲ್ ದ್ರಾವಿಡ್ ಬರಬೇಕು ಅನ್ನೋದು ಫ್ಯಾನ್ಸ್ ಆಸೆ. ಬೆಂಗಳೂರು ಪ್ರಾಂಚೈಸಿ ಈ ಬಗ್ಗೆ ತುಟಿ ಬಿಚ್ಚಿಲ್ಲ. ಹಾಗಂತಾ ದ್ರಾವಿಡ್ ಗಾಗಿ ಐಪಿಎಲ್ ಟೀಮ್‌ಗಳು ಕಾದು ಕುಳಿತಿವೆ ಅನ್ನೋದು ಕೂಡಾ ಸತ್ಯವೇ. ರಾಹುಲ್ ದ್ರಾವಿಡ್‌ಗೆ ಐಪಿಎಲ್ ಮುಂದಿನ ಹಂತವಾಗಿದೆ. ದ್ರಾವಿಡ್ ಐಪಿಎಲ್‌ನಲ್ಲಿ ತರಬೇತುದಾರರಾಗಲು ಬಯಸಿದರೆ, ಮೂರು ಐಪಿಎಲ್ ತಂಡಗಳು ರಾಹುಲ್ ಸ್ವಾಗತಕ್ಕೆ ಕಾಯುತ್ತಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ಪ್ರಸ್ತುತ ಐಪಿಎಲ್ ಚಾಂಪಿಯನ್ಸ್. ಈ ತಂಡದ ಮೆಂಟರ್ ಗೌತಮ್ ಗಂಭೀರ್ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ಸೆಲೆಕ್ಟ್ ಆಗೋದು ಬಹುತೇಕ ಫಿಕ್ಸ್ ಆಗಿದೆ. ಈ ಖಾಲಿ ಹುದ್ದೆಯನ್ನು ರಾಹುಲ್ ದ್ರಾವಿಡ್ ಅಲಂಕರಿಸುತ್ತಾರಾ ಎಂಬ ಕುತೂಹಲವೂ ಇದೆ. ಡಿಸಿ ಟೀಮ್ ಕೂಡಾ ಉತ್ತಮ ಮೆಂಟರ್‌ಗಾಗಿ ಕಾಯುತ್ತಿದೆ. ಒಂದು ವೇಳೆ ರಾಹುಲ್ ದ್ರಾವಿಡ್ ಒಪ್ಪಿಕೊಂಡಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರಿಕಿ ಪಾಂಟಿಂಗ್ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ಕೈಬಿಡುವ ಸಾದ್ಯತೆಯೂ ಹೆಚ್ಚಾಗಿದೆ. ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಹುದ್ದೆಯನ್ನ ಕಂಟಿನ್ಯೂ ಮಾಡದೇ ಇರೋದು ಫ್ಯಾಮಿಲಿಗೆ ಟೈಮ್ ಕೊಡೋ ಉದ್ದೇಶಕ್ಕೆ. ಐಪಿಎಲ್ ನಲ್ಲಿ ಕಾರ್ಯನಿರ್ವಹಿಸಿದರೆ ಫ್ಯಾಮಿಲಿಗೂ ಟೈಮ್ ಕೊಡಬಹುದು. ಹುದ್ದೆಯೂ ಇದ್ದಂತೆ ಆಗುತ್ತದೆ. ಯಾಕೆಂದರೆ ವರ್ಷದಲ್ಲಿ ನಾಲ್ಕು ತಿಂಗಳು ಸೀರಿಯಸ್ ಆಗಿ ಇದ್ದರೆ ಅಷ್ಟೇ ಸಾಕು. ಮಾಜಿ ಆಟಗಾರರಿಗೆ, ಕ್ರಿಕೆಟ್ ದಿಗ್ಗಜರಿಗೆ ಇದೇ ಬೆಸ್ಟ್ ಚಾಯ್ಸ್ ಅಂದ್ರೂ ತಪ್ಪಲ್ಲ. ಸ್ನೇಹಿತರೇ, ನಿಮಗೆ ಏನನ್ನಿಸ್ತಿದೆ, ರಾಹುಲ್ ದ್ರಾವಿಡ್ ಆರ್‌ಸಿಬಿ ಕೋಚ್ ಆಗ್ಬೇಕಾ?, ಡಿಕೆಯೂ ಇರಲಿ, ದ್ರಾವಿಡ್ ಕೂಡಾ ಬರಲಿ ಅನ್ನೋ ವಿಚಾರದ ಬಗ್ಗೆ ನಿಮ್ಮ ಒಪಿನಿಯನ್ ಏನು ಅನ್ನೋದನ್ನ ಕಮೆಂಟ್ ಮೂಲಕ ತಿಳಿಸಿ.

 

suddiyaana