ZIM ಸರಣಿಗೆ ಗಿಲ್ ಪಡೆ ರೆಡಿ – ಯಂಗ್ ಟೈಗರ್ಸ್​ಗಿರೋ ಸವಾಲೇನು?
ಪಿಚ್ ಹೇಗಿದೆ.. ಯಾವ ತಂಡಕ್ಕೆ ಲಾಭ?

ZIM ಸರಣಿಗೆ ಗಿಲ್ ಪಡೆ ರೆಡಿ – ಯಂಗ್ ಟೈಗರ್ಸ್​ಗಿರೋ ಸವಾಲೇನು?ಪಿಚ್ ಹೇಗಿದೆ.. ಯಾವ ತಂಡಕ್ಕೆ ಲಾಭ?

ಮಾರ್ಚ್​​ ತಿಂಗಳಿನಿಂದ ಮೇವರೆಗೂ ಐಪಿಎಲ್​ ಫೀವರ್. ಜೂನ್​ನಲ್ಲಿ ಟಿ-20 ವಿಶ್ವಕಪ್ ಫೀವರ್. ಚುಟುಕು ಸಮರದ ಚಾಂಪಿಯನ್​ ಆಗಿದ್ದ ಟೀಂ ಇಂಡಿಯಾ ಟೈಗರ್ಸ್ ಗುರುವಾರವಷ್ಟೇ ಭಾರತಕ್ಕೆ ಮರಳಿದ್ದಾರೆ. ವಿಶ್ವ ಗೆದ್ದ ವೀರರಿಗೆ ಮುಂಬೈನ ವಾಂಖೇಡೆ ಸ್ಟೇಡಿಯಮ್​ನಲ್ಲಿ ಐತಿಹಾಸಿಕ ಸ್ವಾಗತವೂ ಸಿಕ್ಕಿದೆ. ಈಗ ಟೀಂ ಇಂಡಿಯಾ ಯಂಗ್​ಸ್ಟರ್ಸ್ ಮತ್ತೊಂದು ಸಮರಕ್ಕೆ ಸಜ್ಜಾಗಿದ್ದಾರೆ. ಶನಿವಾರದಿಂದ ಜಿಂಬಾಬ್ವೆ ಮತ್ತು ಭಾರತದ ನಡುವಿನ ಟಿ-20 ಸಮರ ಶುರುವಾಗಲಿದೆ. ಹರಾರೆಯಲ್ಲಿ ನಡೆಯಲಿರುವ ಈ ಫೈಟ್​​ನಲ್ಲಿ ಯುವ ಪಡೆಯನ್ನೇ ನೆಚ್ಚಿಕೊಂಡಿರುವ ಶುಭಮನ್​ ಗಿಲ್ ಸಾರಥ್ಯದ ಟೀಮ್​ ಇಂಡಿಯಾ ಹೇಗೆ ಪ್ರದರ್ಶನ ನೀಡಲಿದೆ ಎಂಬುದೇ ಬಾರೀ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಈ ಸರಣಿ ಟೀಂ ಇಂಡಿಯಾ ಆಟಗಾರರ ಭವಿಷ್ಯವನ್ನ ಬದಲಿಸೋ ಸಾದ್ಯತೆಯೂ ಇದೆ. ಐಪಿಎಲ್​ನಲ್ಲಿ ಮಿಂಚಿದ್ದ ಆಟಗಾರರು ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳೋಕೆ ಒಂದೊಳ್ಳೆ ಅವಕಾಶ ಕೂಡ ಹೌದು.

ಇದನ್ನೂ ಓದಿ: IND ರಿಯಲ್ ಬಾಹುಬಲಿ KOHLI – ಪ್ರಭಾಸ್ ಫಿಲ್ಮ್ ರಿ ಕ್ರಿಯೇಟ್ ಮಾಡಿದ್ರಾ?

ಗಿಲ್ ಸೇನೆಗೆ ಸವಾಲ್! 

ಟಿ-20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಹಿರಿಯ ಆಟಗಾರರಾದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ. ಪಾಂಡ್ಯ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಇತರೆ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇದೀಗ ಜಿಂಬಾಬ್ವೆ ವಿರುದ್ಧದ ಸರಣಿಗೆ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಸಿಕ್ಕ ಅವಕಾಶವನ್ನು ಯುವ ಆಟಗಾರರು ಸರಿಯಾಗಿ ಬಳಸಿಕೊಂಡರೆ ಭಾರತ ಸೀನಿಯರ್​ ತಂಡದಲ್ಲಿ ಆಡುವ ಅವಕಾಶ ಪಡೆಯಬಹುದು. ಅಲ್ಲದೆ ಈ ಪಂದ್ಯ ಕ್ಯಾಪ್ಟನ್ ಶುಭ್​ಮನ್ ಗಿಲ್ ಪಾಲಿಗೂ ನಿರ್ಣಾಯಕವಾಗಿದೆ. ರೋಹಿತ್​ ನಿವೃತ್ತಿಯಿಂದ ತೆರವಾದ ಟಿ20 ತಂಡದ ನಾಯಕತ್ವಕ್ಕೆ ಈಗಾಗಲೇ ಹಾರ್ದಿಕ್​ ಹೆಸರು ಕೇಳಿ ಬಂದಿದೆ. ಜಿಂಬಾಬ್ವೆ ಸರಣಿಯಲ್ಲಿ ತಂಡ ಮುನ್ನಡೆಸುತ್ತಿರುವ ಶುಭಮನ್​ ಗಿಲ್​ ಈ ಸರಣಿಯಲ್ಲಿ ಯಶಸ್ವಿಯಾದರೆ ಮುಂದಿನ ದಿನದಲ್ಲಿ ನಾಯಕನಾಗುವ ಸಾಧ್ಯತೆಯೂ ಇದೆ. ಈ ಬಾರಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಪರ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಸಿಕ್ಸರ್​ಗಳ ಮಳೆಯನ್ನೇ ಸುರಿಸಿದ್ದ ಎಡಗೈ ಬ್ಯಾಟರ್​ ಅಭಿಷೇಕ್​ ಶರ್ಮ ಬ್ಯಾಟಿಂಗ್​ ಪ್ರದರ್ಶನದ ಮೇಲೆಯೂ ಬಹಳ ನಿರೀಕ್ಷೆ ಇದೆ. ಈ ಸರಣಿಯಲ್ಲಿ ಆಟಗಾರರು ತೋರುವ ಪ್ರದರ್ಶನದಲ್ಲಿ ಅವರ ಮುಂದಿನ ಕ್ರಿಕೆಟ್​ ಭವಿಷ್ಯ ಅಡಗಿದೆ. ಜಿಂಬಾಬ್ವೆ ತಂಡ ಕೂಡ ಬಲಿಷ್ಠವಾಗಿದೆ. ಅನುಭವಿ ಆಲ್​ರೌಂಡರ್​ ಹಾಗೂ ನಾಯಕನಾಗಿರುವ ಸಿಕಂದರ್​ ರಾಜಾ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಜತೆಗೆ ತಂಡದ ನೂತನ ಕೋಚ್​ ಆಗಿರುವ ಜಸ್ಟಿನ್‌ ಸ್ಯಾಮ್ಸನ್‌ ಅವರ ಮಾರ್ಗದರ್ಶನ ಕೂಡ ತಂಡಕ್ಕೆ ನೆರವಾಗಬಹುದು. ಹೀಗಾಗಿ ಭಾರತ ಎಚ್ಚರಿಕೆಯಿಂದ ಆಡಬೇಕು. ಭಾರತ ಮತ್ತು ಜಿಂಬಾಬ್ವೆ ಇದುವರೆಗೆ ಒಟ್ಟು 8 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 6 ಪಂದ್ಯ ಗೆದ್ದಿದ್ದರೆ, ಜಿಂಬಾಬ್ವೆ 2 ಪಂದ್ಯ ಗೆದ್ದಿದೆ. ಕೊನೆಯ ಬಾರಿ ಆಡಿದ್ದು 2022ರಲ್ಲಿ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ. ಈ ಪಂದ್ಯವನ್ನು ಭಾರತ 71 ರನ್​ ಅಂತರದಿಂದ ಗೆದ್ದು ಬೀಗಿತ್ತು.

ಜುಲೈ 6ರಂದು ಹರಾರೆಯಲ್ಲಿ ಫಸ್ಟ್ ಮ್ಯಾಚ್ ನಡೆಸಿದ್ರೆ ಜಲೈ 7, ಜುಲೈ 10,  ಜುಲೈ 13 ಹಾಗೇ ಜುಲೈ 14ರಂದು ಮುಂದಿನ ಪಂದ್ಯಗಳು ನಡೆಯಲಿವೆ. ಸರಣಿಯ ಎಲ್ಲಾ ಐದು ಪಂದ್ಯಗಳಿಗೆ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಆತಿಥ್ಯ ವಹಿಸಿದೆ. ಈ ಕ್ರೀಡಾಂಗಣದ ಪಿಚ್‌ನಲ್ಲಿ ಹೆಚ್ಚಿನ ಬೌನ್ಸ್‌ ಇಲ್ಲ. ಹೀಗಾಗಿ ಸ್ಪಿನ್ನರ್‌ಗಳು ಇಲ್ಲಿ ಪ್ರಾಬಲ್ಯ ಮೆರೆಯುವ ಸಾದ್ಯತೆ ಇದೆ. ಈ ಮೈದಾನದಲ್ಲಿ ಕಳೆದ 50 ಟಿ20-ಐ ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ 29 ಬಾರಿ ಜಯ ದಾಖಲಿಸಿದೆ. ಹೀಗಾಗಿ ಟಾಸ್‌ ಗೆದ್ದ ತಂಡ ಮೊದಲು ಬ್ಯಾಟ್‌ ಮಾಡುವ ಸಾಧ್ಯತೆ ಹೆಚ್ಚಿದೆ. ಸದ್ಯ ಟಿ-20 ವಿಶ್ವಕಪ್​ನಲ್ಲಿ ಸ್ಥಾನ ಪಡೆದಿದ್ದ ಕೆಲ ಆಟಗಾರರು ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿದ್ದರಿಂದ ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗುತ್ತೆ ಅನ್ನೋದೇ ಈಗಿರುವ ಕುತೂಹಲ.

Shwetha M