RCBಗೆ ಕೋಚ್ & ಮೆಂಟರ್ DK – ಬ್ಯಾಟಿಂಗ್ ಬೂಸ್ಟ್ ಕೊಡ್ತಾರಾ ಸ್ಟಾರ್?
2025ಕ್ಕೆ ಕಪ್ ಗೆಲ್ಲಿಸ್ತಾರಾ ದಿನೇಶ್?
ದಶಕದ ಬಳಿಕ ಟೀಂ ಇಂಡಿಯಾ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದ್ದು ಇಡೀ ಭಾರತವೇ ಸಂಭ್ರಮಿಸುತ್ತಿದೆ. ಇದ್ರ ನಡುವೆ ಕನ್ನಡಿಗರಿಗೆ ಮತ್ತೊಂದು ಬಂಪರ್ ಸುದ್ದಿ ಸಿಕ್ಕಿದೆ. 2025ರ ಐಪಿಎಲ್ನಲ್ಲಿ RCBಯ ಸ್ಫೋಟಕ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ತಂಡಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಐಪಿಎಲ್ ವೃತ್ತಿಜೀವನಕ್ಕೆ ಗುಡ್ಬೈ ಹೇಳಿದ್ದ ಡಿಕೆ ಬಾಸ್ ಈಗ ಹೊಸ ಇನ್ನಿಂಗ್ಸ್ ಆರಂಭಕ್ಕೆ ಸಜ್ಜಾಗಿದ್ದಾರೆ. ಆರ್ಸಿಬಿಯ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಪುನಃ ಆರ್ಸಿಬಿ ತಂಡಕ್ಕೆ ಮರುಪ್ರವೇಶ ಮಾಡಲಿದ್ದಾರೆ ಎಂದು ಸ್ವತಃ ಫ್ರಾಂಚೈಸಿಯೇ ಹೇಳಿಕೊಂಡಿದೆ. ಆದ್ರೆ ಈ ಬಾರಿ ಬ್ಯಾಟ್ ಹಿಡಿದು ಗ್ರೌಂಡ್ನಲ್ಲಿ ಆಡೋದಿಲ್ಲ. ಬದಲಾಗಿ ಬ್ಯಾಟ್ ಬೀಸುವವರಿಗೆ ಕೋಚ್ ಆಗುವ ಮೂಲಕ ಶಕ್ತಿಯಾಗಲಿದ್ದಾರೆ. ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ತಮ್ಮ ಫಿನಿಷರ್ ಆಗಿ ಕಾಣಿಸಿಕೊಂಡಿದ್ದ ದಿನೇಶ್ ಕಾರ್ತಿಕ್, ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಟೂರ್ನಿಯ ಆರಂಭದಲ್ಲೇ ಇದೇ ನನ್ನ ಕೊನೆಯ ಐಪಿಎಲ್ ಎಂದು ಹೇಳಿದ್ದ ಡಿಕೆ, ಎಲಿಮಿನೇಟರ್ನಲ್ಲಿ ಸೋತ ನಂತರ ಕ್ರಿಕೆಟ್ನಿಂದ ಹಿಂದೆ ಸರಿದರು. ಕಾರ್ತಿಕ್ ಅವರು ತಮ್ಮ 39ನೇ ಹುಟ್ಟುಹಬ್ಬ ಜೂನ್ 1 ರಂದು ನಿವೃತ್ತಿ ಘೋಷಿಸಿದ್ದರು. ಸರಿಯಾಗಿ ಒಂದು ತಿಂಗಳ ನಂತರ, ಅನುಭವಿ ಬ್ಯಾಟರ್ ಅಧಿಕೃತವಾಗಿ ಮತ್ತೊಂದು ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಡಿಕೆ ರೀ ಎಂಟ್ರಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಡಿಕೆ ಬಾಸ್ ಅಂತಾನೇ ಕರೆಸಿಕೊಳ್ಳೋ ದಿನೇಶ್ ಕಾರ್ತಿಕ್, ಐಪಿಎಲ್ 2024ರ ಬಳಿಕ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಆದರೆ ಇದೀಗ ಸ್ವತಃ ಆರ್ಸಿಬಿ ತಂಡವೇ ಡಿನೇಶ್ ಕಾರ್ತಿಕ್ ಅವರನ್ನು ಮತ್ತೊಮ್ಮೆ ತಂಡಕ್ಕೆ ಕರೆಸಿಕೊಂಡಿದ್ದು, ಮುಂದಿನ ವರ್ಷದಿಂದ ಡಿಕೆ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಿನೇಶ್ ಕಾರ್ತಿಕ್ ಅವರನ್ನು ಬ್ಯಾಟಿಂಗ್ ಕೋಚ್ ಮತ್ತು ತಂಡದ ಮೆಂಟರ್ ಆಗಿ ನೇಮಿಸಿದೆ. ಟಿ20 ವಿಶ್ವಕಪ್ 2024ರಲ್ಲಿ ಅನುಭವಿ ಕ್ರಿಕೆಟಿಗ ತನ್ನ ಕಾಮೆಂಟರಿ ಕರ್ತವ್ಯ ಪೂರೈಸಿದ 2 ದಿನಗಳ ನಂತರ ಜುಲೈ 1ರಂದು ಸೋಮವಾರ ಫ್ರಾಂಚೈಸಿ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ದೊಡ್ಡ ಘೋಷಣೆ ಮಾಡಿದೆ. ಈ ಮೂಲಕ 2025ರ ಐಪಿಎಲ್ನಲ್ಲಿ ದಿನೇಶ್ ಕಾರ್ತಿಕ್ ಮತ್ತೆ ಆರ್ಸಿಬಿಗೆ ಮರಳಲಿದ್ದಾರೆ. ಈ ಬಾರಿ ಕಾರ್ತಿಕ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ತಂಡದ ಮಾಜಿ ಬ್ಯಾಟಿಂಗ್ ಕೋಚ್ ನೀಲ್ ಮೆಕೆಂಜಿ ಸ್ಥಾನಕ್ಕೆ ಕಾರ್ತಿಕ್ ಬರಲಿದ್ದಾರೆ. ಡಿಕೆ ಮುಖ್ಯ ಕೋಚ್ ಆಗುವ ಮಾಹಿತಿಯನ್ನು RCB ಯೇ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದ ಮೂಲಕ ಖಚಿತ ಪಡಿಸಿದೆ. ತಂಡದ ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ, ‘ನಮ್ಮ ಕೀಪರ್, ದಿನೇಶ್ ಕಾರ್ತಿಕ್ ಅವರಿಗೆ ಹೊಚ್ಚ ಹೊಸ ಅವತಾರದಲ್ಲಿ ಆರ್ಸಿಬಿಗೆ ಸ್ವಾಗತ. ಡಿಕೆ ಆರ್ಸಿಬಿ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿರುತ್ತಾರೆ. ನೀವು ಮನುಷ್ಯನನ್ನು ಕ್ರಿಕೆಟ್ನಿಂದ ಹೊರಗಿಡಬಹುದು. ಆದರೆ ಕ್ರಿಕೆಟ್ ಅನ್ನು ಮನುಷ್ಯನಿಂದ ಅಲ್ಲ ಎಂದು ಬರೆದುಕೊಂಡಿದೆ.
ದಿನೇಶ್ ಕಾರ್ತಿಕ್ ತನ್ನ IPL ವೃತ್ತಿಜೀವನವನ್ನು 2008 ರಲ್ಲಿ ದೆಹಲಿ ಕ್ಯಾಪಿಟಲ್ಸ್ ಅಂದ್ರೆ ಆಗಿನ ಡೆಲ್ಲಿ ಡೇರ್ಡೆವಿಲ್ಸ್ ನೊಂದಿಗೆ ಪ್ರಾರಂಭಿಸಿದ್ದರು. ಇದರ ನಂತರ ಅವರು ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ನಂತರ ದೆಹಲಿ ಕ್ಯಾಪಿಟಲ್ಸ್ನಲ್ಲಿ ಆಡಿದ್ದರು. ನಂತರ 2015ರಲ್ಲಿ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ್ದರು. ಇದಾದ ನಂತರ ಕಾರ್ತಿಕ್ ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ನ ಭಾಗವಾದರು. ನಂತರ ಅವರು 2022 ರಲ್ಲಿ ಪುನಃ RCB ಗೆ ಮರಳಿ ಕಳೆದ ವರ್ಷದ ತನಕ ಬೆಂಗಳೂರು ಪರ ಆಡಿದರು. ದಿನೇಶ್ ಕಾರ್ತಿಕ್ ಐಪಿಎಲ್ನಲ್ಲಿ ಅತ್ಯದ್ಬುತ ಪ್ಲೇಯರ್ ಆಗಿದ್ದಾರೆ. ಐಪಿಎಲ್ನಲ್ಲಿ ಒಟ್ಟಾರೆ 257 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ನಂತರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಜಂಟಿ 2ನೇ ಆಟಗಾರರಾಗಿದ್ದಾರೆ. ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ 264 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಅಗ್ರಸ್ಥಾನ ಪಡೆದಿದ್ದಾರೆ. ಇನ್ನು ಟೀಂ ಇಂಡಿಯಾದಲ್ಲೂ ಕೂಡ ಅತ್ಯದ್ಬುತ ಪ್ರದರ್ಶನ ನೀಡಿದ್ದಾರೆ. 2004 ಸೆಪ್ಟೆಂಬರ್ 5ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ ಹಿರಿಯ ಆಟಗಾರ 20 ವರ್ಷಗಳ ಕಾಲ ಕ್ರಿಕೆಟ್ನಲ್ಲಿ ಸೇವೆ ಸಲ್ಲಿಸಿದ್ದಾರೆ. 94 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 30.21ರ ಬ್ಯಾಟಿಂಗ್ ಸರಾಸರಿಯಲ್ಲಿ 1752 ರನ್ ಗಳಿಸಿದ್ದಾರೆ. 26 ಟೆಸ್ಟ್ಗಳಲ್ಲಿ ಬ್ಯಾಟ್ ಬೀಸಿರುವ ವಿಕೆಟ್ ಕೀಪರ್, 25ರ ಸರಾಸರಿಯಲ್ಲಿ 1025 ರನ್ ಕಲೆ ಹಾಕಿದ್ದಾರೆ. 60 ಟಿ20ಐ ಪಂದ್ಯಗಳಲ್ಲಿ 26.38ರ ಸರಾಸರಿಯಲ್ಲಿ 686 ರನ್ ಬಾರಿಸಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 1 ಶತಕ ಮಾತ್ರ ದಾಖಲಿಸಿದ್ದಾರೆ. ಒಟ್ನಲ್ಲಿ ಆರ್ಸಿಬಿಯಲ್ಲಿ ಕೊಹ್ಲಿ ಬಿಟ್ರೆ ಡಿಕೆಯೇ ಹೆಚ್ಚು ಅಭಿಮಾನಿಗಳ ಮನ ಗೆದ್ದಿದ್ದರು. ನಿವೃತ್ತಿ ಘೋಷಣೆ ಮಾಡಿದಾಗ ಸಾಕಷ್ಟು ಫ್ಯಾನ್ಸ್ ಬೇಸರಗೊಂಡಿದ್ರು. ಆದ್ರೀಗ ಡಿಕೆ ಬೆಂಗಳೂರು ತಂಡಕ್ಕೆ ಕಮ್ ಬ್ಯಾಕ್ ಮಾಡ್ತಿರೋದು ಖುಷಿಯ ವಿಚಾರವೇ. ಆದ್ರೆ ಬ್ಯಾಟಿಂಗ್ ಕೋಚ್ ಆದ್ರೂ ಕೂಡ ಗ್ರೌಂಡ್ನಲ್ಲಿ ಬ್ಯಾಟ್ ಬೀಸೋದನ್ನ ನೋಡೋಕೆ ಆಗಲ್ವಲ್ಲ ಅನ್ನೋದೇ ಬೇಸರದ ಸಂಗತಿ.