ಶಾಸಕ ಪ್ರದೀಪ್ ಈಶ್ವರ್ ನಾಪತ್ತೆ? | BSY ಅರೆಸ್ಟ್ ಗೆ ಕೌಂಟ್ ಡೌನ್? | ಶೆಟ್ಟರ್ ಗೆಲ್ಲಿಸಿದ್ದೇ ಕಾಂಗ್ರೆಸ್? | ಇವತ್ತಿನ ಪ್ರಮುಖ ಸುದ್ದಿಗಳು

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್ ಒಂದೇ ಒಂದು ಮತ ಹೆಚ್ಚು ಪಡೆದರೂ ರಾಜೀನಾಮೆ ನೀಡುವೆ. ಸುಧಾಕರ್ ಅವರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತಲು ಬಿಡುವುದಿಲ್ಲ ಅಂತಾ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ರು. ಇದೀಗ ಚುನಾವಣಾ ಫಲಿತಾಂಶ ಹೊರಬಿದ್ದು, ಡಾ.ಕೆ.ಸುಧಾಕರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸುಧಾಕರ್ ಗೆಲ್ಲುತ್ತಿದ್ದಂತೆ ವೈಲೆಂಟ್ ಶಾಸಕ ಸೈಲೆಂಟ್ ಆಗಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಶಾಸಕ ಪ್ರದೀಪ್ ಈಶ್ವರ್ ತಮ್ಮ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಇದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೂ ಕಾರಣವಾಗಿದೆ. ಪ್ರದೀಪ್ ಈಶ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ, ಇಲ್ಲ ಶಾಸಕನಾಗಿ ಮುಂದುವರಿತಾರಾ ಅನ್ನೋ ಕುತೂಹಲ ರಾಜಕೀಯ ವಲಯದಲ್ಲಿದೆ.
- ನಟ ದರ್ಶನ್ ರಕ್ಷಣೆಗೆ ಪೊಲೀಸರು ಮುಂದಾಗ್ತಿದ್ದಾರಾ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣೆ ವೇಗ ಪಡೆದುಕೊಂಡಿದೆ. ಆರೋಪಿಗಳನ್ನು ಮರೆ ಮಾಚಲು ಪೊಲೀಸರು ವಿಶೇಷ ಕಾಳಜಿ ವಹಿಸುತ್ತಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಮಾಧ್ಯಮಗಳಿಗೆ ದರ್ಶನ್ ಸೇರಿ ಇತರೇ ಆರೋಪಿಗಳು ಕಾಣಿಸದಂತೆ ಪೊಲೀಸರು ಪರದೆ ಕಟ್ಟಿದ್ದಾರೆ ಎಂದು ಹೇಳಲಾಗಿದೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ಕಾಂಪೌಂಡ್ ಸುತ್ತಲು ಪೊಲೀಸರು ಪರದೆ ಕಟ್ಟಿಸಿದ್ದಾರೆ. ಪರದೆ ಜೊತೆಗೆ ಶಾಮೀಯಾನ ಕೂಡ ತರಿಸಿರೋ ಪೊಲೀಸರು ಅದನ್ನು ಕೂಡಾ ಹಾಕಿ ಸಂಪೂರ್ಣ ಠಾಣೆ ಕವರ್ ಮಾಡಿದ್ದಾರೆ. ಹೊರಗಡೆಯಿಂದ ಯಾವುದೇ ಸಣ್ಣ ದೃಶ್ಯಾವಳಿಯೂ ಸಿಗದ ಹಾಗೆ ಶಾಮೀಯನ ಹಾಗೂ ಪರದೆ ಹಾಕಿಸಿ ಪೊಲೀಸರು ಬಂದೋಬಸ್ತ್ ಮಾಡಲಾಗಿದೆ. ಸಾರ್ವಜನಿಕರಿಗೂ ಎಂಟ್ರಿ ಇಲ್ಲದ ಹಾಗೆ ಠಾಣಾ ಗೇಟ್ ಕ್ಲೋಸ್ ಮಾಡಲಾಗಿದೆ. ಇದೀಗ ಪೊಲೀಸರ ಈ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಯಾರನ್ನ ರಕ್ಷಣೆ ಮಾಡಲು ಶಾಮೀಯಾನ ಹಾಕಿದ್ರು? ಪೊಲೀಸರು ನಟ ದರ್ಶನ್ ರಕ್ಷಣೆಗೆ ಮುಂದಾಗ್ತಿದ್ದಾರಾ ಎಂಬ ಪ್ರಶ್ನೆಯೂ ಕೇಳಿ ಬಂದಿದೆ.
- ಬಿಎಸ್ವೈ ವಿರುದ್ಧ ಅರೆಸ್ಟ್ ವಾರಂಟ್ ಜಾರಿ
ಪೋಕ್ಸೊ ಕೇಸ್ನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಇದೀಗ ಬಿಎಸ್ವೈ ಬಂಧನದ ಭೀತಿ ಎದುರಾಗಿದೆ. ವಿಚಾರಣೆಗೆ ಬಿಎಸ್ ಯಡಿಯೂರಪ್ಪ ಹಾಜರಾಗದ ಹಿನ್ನೆಲೆ ಜಾಮೀನು ರಹಿತ ವಾರಂಟ್ ಹೊರಡಿಸಲು ಪೊಲೀಸರು ತ್ವರಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಬಿಎಸ್ ವೈ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಯಾಗಿದೆ. ಬೆಂಗಳೂರಿನ 1 ನೇ ತ್ವರಿತಗತಿ ಕೋರ್ಟ್ ಯಡಿಯೂರಪ್ಪ ವಿರುದ್ಧ ವಾರಂಟ್ ಜಾರಿ ಮಾಡಿದೆ. ಇದೀಗ ಯಡಿಯೂರಪ್ಪ ಅವರನ್ನು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ.
- ವಯನಾಡು ಕ್ಷೇತ್ರವನ್ನು ತೊರೆಯುತ್ತಾರಾ ರಾಹುಲ್ ಗಾಂಧಿ?
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡು ಮತ್ತು ರಾಯ್ಬರೇಲಿಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಗೆದ್ದಿದ್ದಾರೆ. ಇದೀಗ ರಾಹುಲ್ ಗಾಂಧಿ ಒಂದು ಕ್ಷೇತ್ರವನ್ನು ತೊರೆಯಬೇಕಾಗಿದೆ. ಕೇರಳದ ವಯನಾಡು ಕ್ಷೇತ್ರವನ್ನು ರಾಹುಲ್ ಗಾಂಧಿ ತೊರೆಯುವ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ರಾಯ್ ಬರೇಲಿ ಕ್ಷೇತ್ರ ಗಾಂಧೀ ಕುಟುಂಬದ ಸಾಂಪ್ರದಾಯಿಕ ಕ್ಷೇತ್ರ. ಈ ಕ್ಷೇತ್ರವನ್ನು ತೊರೆದರೆ ಗಾಂಧೀ ಕುಟುಂಬ ನಂಟು ತಪ್ಪುತ್ತದೆ. ಇನ್ನು ಯುಪಿಯಲ್ಲಿ ಇಂಡಿ ಕೂಟ ಉತ್ತಮ ಸಾಧನೆ ಮಾಡಿದ್ದು, ಅದನ್ನು ಕಾಪಾಡಿಕೊಳ್ಳೂವ ಹೊಣೆ ಕೂಡ ರಾಹುಲ್ ಗಾಂಧಿ ಮೇಲಿದೆ. ಅಷ್ಟೇ ಅಲ್ಲದೇ ವಯನಾಡಿಗೆ ಹೋಲಿಸಿದರೆ ದೆಹಲಿಗೆ ಸಮೀಪದ ರಾಯ್ಬರೇಲಿಗೆ ಹೋಗಿಬರುವುದು ಸುಲಭ. ಹೀಗಾಗಿ ರಾಹುಲ್ ಗಾಂಧಿ ವಯನಾಡು ಕ್ಷೇತ್ರವನ್ನು ತೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
- ಶೆಟ್ಟರ್ ಗೆಲ್ಲಿಸಿದ್ದು ಕಾಂಗ್ರೆಸ್ ನಾಯಕರು?
ಬೆಳಗಾವಿ ನೂತನ ಸಂಸದ ಜಗದೀಶ್ ಶೆಟ್ಟರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಒಳ ಹೊಡೆತ, ಹೊರ ಹೊಡೆತಗಳೆರಡೂ ಇರ್ತಾವೆ. ಚುನಾವಣೆಯಲ್ಲಿ ಪರೋಕ್ಷವಾಗಿ ಸಹಾಯ ಮಾಡಿದವರಿಗೆ ಧನ್ಯವಾದ ಸಲ್ಲಿಸುವೆ. ನನಗೆ ಬೆಂಬಲಿಸಿದ ಬೇರೆ ಪಕ್ಷದವರ ಹೆಸರು ಈಗ ಬೇಡ, ಇನ್ನೊಮ್ಮೆ ಹೇಳ್ತಿನಿ. ಎಲ್ಲ ಪಕ್ಷದ ನಾಯಕರು, ಎಲ್ಲ ಭಾಷಿಕರು ನನ್ನ ಬೆಂಬಲಕ್ಕೆ ನಿಂತರು ಎಂದು ಹೇಳಿದ್ದಾರೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆಲುವಿಗೆ ಕಾಂಗ್ರೆಸ್ ನಾಯಕರು ಬೆಂಬಲ ಸೂಚಿಸಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ.
- ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಪ್ರಮಾಣವಚನ
ಬಿಜೆಪಿ ನಾಯಕ ಪೆಮಾ ಖಂಡು ಅವರು ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸತತ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಪ್ರಮಾಣವಚನ ಸ್ವೀಕರಿಸಿದ್ದಾರೆ. 44 ವಯಸ್ಸಿನ ಖಂಡು 2016 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇನ್ನು ಉಪ ಮುಖ್ಯಮಂತ್ರಿಯಾಗಿ ಚೌನಾ ಮೀನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ಜೆಪಿ ನಡ್ಡಾ, ಕಿರಣ್ ರಿಜಿಜು ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾಗಿಯಾಗಿದ್ರು.
- ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಚಂದ್ರಬಾಬು ನಾಯ್ಡು
ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಕುಟುಂಬದ ಸದಸ್ಯರ ಜೊತೆ ಚಂದ್ರಬಾಬು ನಾಯ್ಡು ದೇವರ ದರ್ಶನ ಪಡೆದಿದ್ದಾರೆ. ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು. ಇಲ್ಲಿ ರಾಜಕೀಯ ಹೇಳಿಕೆಗಳು, ಘೋಷಣೆಗಳು ಕೇಳಬಾರದು ಕೇವಲ ‘‘ಗೋವಿಂದ ಗೋವಿಂದ’ಎಂಬ ಘೋಷ ಮಾತ್ರ ಮೊಳಗಬೇಕು ಎಂದು ಹೇಳಿದ್ದಾರೆ.
- ಭವಾನಿ ರೇವಣ್ಣ ಕಾರು ಚಾಲಕ ಅಜಿತ್ ಮನೆ ಮೇಲೆ ಕಲ್ಲು ತೂರಾಟ
ಕೆ.ಆರ್.ನಗರ ಸಂತ್ರಸ್ತೆಯ ಕಿಡ್ನ್ಯಾಪ್ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರ ಕಾರು ಚಾಲಕ ಅಜಿತ್ ಹೆಸರು ಕೇಳಿಬಂದಿದೆ. ಇದೀಗ ಅಜಿತ್ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಹೊಳೆನರಸೀಪುರ ತಾಲೂಕಿನ ಮೂಡಲ ಹಿಪ್ಪೆಯಲ್ಲಿರೋ ಅಜಿತ್ ಮನೆ ಮೇಲೆ ಮೂವರು ಅಪರಿಚಿತರು ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಿಂದಾಗಿ ಕುಟುಂಬಸ್ಥರು ಆತಂಕಗೊಂಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ನೀಟ್ ಯಜಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ರದ್ದು!
ನೀಟ್ ಯಜಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್ ಮಾರ್ಕ್ಸ್ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. 1,563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನು ತೆಗೆದುಕೊಳ್ಳಲು ಆಯ್ಕೆಯನ್ನು ನೀಡಲಾಗುತ್ತದೆ ಅಥವಾ ಗ್ರೇಸ್ ಮಾರ್ಕ್ಸ್ಗಳಿಲ್ಲದೇ ಪಡೆದ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇನ್ನು ಜೂನ್ 23 ರಂದು ಮರುಪರೀಕ್ಷೆ ನಡೆಯುವ ಸಾಧ್ಯತೆಯಿದ್ದು, ಜುಲೈ 1 ರ ಮೊದಲು ಫಲಿತಾಂಶ ಹೊರಬೀಳಲಿದೆ ಎಂದು ಕೇಂದ್ರವು ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
- ನಂದಮೂರಿ ಬಾಲಕೃಷ್ಣಗೆ ಇಲ್ಲ ಸಚಿವ ಸ್ಥಾನ, ಅಭಿಮಾನಿಗಳ ಬೇಸರ
ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ, ಜನಸೇನಾ ಹಾಗೂ ಬಿಜೆಪಿಯ ಮೈತ್ರಿ ಭಾರಿ ವಿಜಯ ಸಾಧಿಸಿದ್ದು, ಚಂದ್ರಬಾಬು ನಾಯ್ಡು ನಿನ್ನೆಯಷ್ಟೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜೊತೆಗೆ ಇನ್ನೂ 24 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಆಶ್ಚರ್ಯವೆಂಬಂತೆ ಟಿಡಿಪಿ ಪಕ್ಷದ ಪ್ರಮುಖ ನಾಯಕ ಬಾಲಕೃಷ್ಣಗೆ ಸಚಿವ ಸ್ಥಾನ ಮಿಸ್ ಆಗಿದೆ. ದಶಕಗಳಿಂದಲೂ ಪಕ್ಷದಲ್ಲಿರುವ ಪಕ್ಷದ ಏಳಿಗೆಗೆ ಕೊಡುಗೆ ನೀಡಿರುವ, ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಿರುವ ಬಾಲಕೃಷ್ಣಗೆ ಮತ್ತೊಮ್ಮೆ ಸಚಿವ ಸ್ಥಾನ ಕೈತಪ್ಪಿದೆ. ಇದು ಬಾಲಕೃಷ್ಣ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.