ಚುನಾವಣೆಯಲ್ಲಿ ಸೋತವರಿಗೂ ಮಂತ್ರಿಗಿರಿ | ಹೆಬ್ಬಾಳ್ಕರ್ ಬಳಿ ಸಿಎಂ ಕ್ಷಮೆ ಕೇಳಿದ್ದೇಕೆ? | ಪರಪ್ಪನ ಅಗ್ರಹಾರಕ್ಕೆ ಪ್ರಜ್ವಲ್‌ | ಇಂದಿನ ಪ್ರಮುಖ ಸುದ್ದಿಗಳು

ಚುನಾವಣೆಯಲ್ಲಿ ಸೋತವರಿಗೂ ಮಂತ್ರಿಗಿರಿ | ಹೆಬ್ಬಾಳ್ಕರ್ ಬಳಿ ಸಿಎಂ ಕ್ಷಮೆ ಕೇಳಿದ್ದೇಕೆ? | ಪರಪ್ಪನ ಅಗ್ರಹಾರಕ್ಕೆ ಪ್ರಜ್ವಲ್‌ | ಇಂದಿನ ಪ್ರಮುಖ ಸುದ್ದಿಗಳು

ಮಗನ ಸೋಲಿನ ಬೇಸರಲ್ಲಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಬಳಿ ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿದ್ದಾರೆ. ಇವತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಲು ಆಗಮಿಸಿದ್ರು.. ಈ ವೇಳೆ  ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನೋಡಿ ಸಿಎಂ ಸಿದ್ದರಾಮಯ್ಯ ಸಾರಿ ಕಣಮ್ಮ ಎಂದಿದ್ದಾರೆ. ಸಿಎಂ  ಸ್ವಾರಿ ಎಂದ ಕೂಡಲೇ ತುಂಬಾ ಭಾವುಕರಾಗಿ ಲಕ್ಷ್ಮಿ ಹೆಬ್ಬಾಳ್ಕರ್‌ ಮೌನಕ್ಕೆ ಶರಣಾದರು.

ಡಿವೋರ್ಸ್‌ಗೆ ಕಾರಣ ತಿಳಿಸಿದ ಚಂದನ್‌ – ನಿವೇದಿತಾ!

ಕ್ಯೂಟ್ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಈಗ ನಾನೊಂದು ತೀರ ನೀನೊಂದು ತೀರವೆಂದು ದೂರ, ದೂರವಾಗಿದ್ದಾರೆ.   ಸ್ಟಾರ್‌ ಜೋಡಿ ದೂರವಾದ ಬೆನ್ನಲ್ಲೇ ಸಾಕಷ್ಟು ವದಂತಿಗಳು ಹಬ್ಬತ್ತಿವೆ. ಇದೀಗ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಸುದ್ದಿಗೋಷ್ಟಿ ನಡೆಸಿ, ಸ್ಪಷ್ಟನೆ ನೀಡಿದ್ದಾರೆ.  ಸೋಶಿಯಲ್‌ ಮೀಡಿಯಾದಲ್ಲಿ ಹಬ್ಬುತ್ತಿರುವ ಸುದ್ದಿಗಳು ಸುಳ್ಳು.. ಇದ್ಯಾವುದಕ್ಕೂ ಕಿವಿಕೊಡಬೇಡಿ. ನಮ್ಮಿಬ್ಬರ ಮಧ್ಯೆ ಮನಸ್ತಾಪ ಇತ್ತು. ಇಬ್ಬರೂ ಹೊಂದಿಕೊಂಡು ಬದುಕಲು ಸಾಧ್ಯ ಆಗಿಲ್ಲ ಅಂತಾ ದೂರ ಆಗಿದ್ದೇವೆ. ನಮ್ಮಿಬ್ಬರ ಮಧ್ಯೆ ಮೂರನೇ ವ್ಯಕ್ತಿ ಬಂದಿಲ್ಲ. ಇದೆಲ್ಲಾ ಸುಳ್ಳು ಅಂತಾ ಸ್ಪಷ್ಟನೆ ನೀಡಿದ್ದಾರೆ.

 ಚುನಾವಣೆಯಲ್ಲಿ ಸೋತವರಿಗೂ ಮಂತ್ರಿಗಿರಿ

ನರೇಂದ್ರ ಮೋದಿ ಸಂಪುಟದಲ್ಲಿ 72 ಮಂದಿ ಸಚಿವರಾಗಿ ಸೇರ್ಪಡೆಯಾಗಿದ್ದಾರೆ. ಇವರ ಪೈಕಿ ಚುನಾವಣೆಯಲ್ಲಿ ಸೋತ ಇಬ್ಬರಿದ್ದಾರೆ. ಪಂಜಾಬ್​ನ ರವನೀತ್ ಸಿಂಗ್ ಬಿಟ್ಟು ಮತ್ತು ತಮಿಳುನಾಡಿನ ಎಲ್ ಮುರುಗನ್ ಗೆ ಸಚಿವ ಸ್ಥಾನ ಸಿಕ್ಕಿದೆ.  ಕುತೂಹಲವೆಂದರೆ ಈ ಎರಡು ರಾಜ್ಯಗಳಲ್ಲಿ ಬಿಜೆಪಿ ಸೊನ್ನೆ ಸುತ್ತಿದೆ. ಆದರೂ ಕೂಡ ಸಂಪುಟದಲ್ಲಿ ಈ ರಾಜ್ಯಗಳಿಗೆ ಪ್ರಾತಿನಿಧ್ಯ ಸಿಕ್ಕಿದೆ. ಬಿಜೆಪಿಗೆ ಗೆಲ್ಲಲು ಕಷ್ಟವಾಗಿರುವ ರಾಜ್ಯಗಳಿಗೆ ಸಂಪುಟದಲ್ಲಿ ಪ್ರಾಮುಖ್ಯತೆ ನೀಡಿರುವುದು ಭಾರಿ ಕುತೂಹಲ ಕೆರಳಿಸಿದೆ. ಪಂಜಾಬ್​ನಲ್ಲಿ ಬಿಜೆಪಿ ಬೆಳವಣಿಗೆಗೆ ರವನೀತ್ ಸಿಂಗ್ ಅವರಿಂದ ಸಹಕಾರಿ ಆಗಬಹುದು ಎನ್ನುವ ನಂಬಿಕೆ ಬಿಜೆಪಿ ವರಿಷ್ಠರಲ್ಲಿ ಇದೆ. ಇನ್ನು ಮುರುಗನ್ ಸಂಘಟನಾ ಚತುರ. ದಲಿತ ಮುಖಂಡ. ತಮಿಳುನಾಡಿನಲ್ಲಿ ಬಿಜೆಪಿಯ ಭವಿಷ್ಯವು ಮುರುಗನ್ ಕೈಯಲ್ಲಿ ಇದೆ ಎಂಬುದು ವರಿಷ್ಠರ ನಂಬಿಕೆ. ಹೀಗಾಗಿ ಇವರಿಬ್ಬರು ಸೋತ್ರು ಕೇಂದ್ರದಲ್ಲಿ ಮಂತ್ರಿಗಿರಿ ನೀಡಲಾಗಿದೆ.

ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಮೋದಿ ಕೆಲಸ ಶುರು

ನರೇಂದ್ರ ಮೋದಿ ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಕೆಲಸ ಶುರು ಮಾಡಿದ್ದಾರೆ. ಪ್ರಧಾನಿ ಕಚೇರಿಗೆ ಆಗಮಿಸಿದ ಮೋದಿ ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ.  ಪಿಎಂ ಕಿಸಾನ್ ನಿಧಿಯ 17ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಿಂದ ಬರೋಬ್ಬರಿ 9.3 ಕೋಟಿ ರೈತರಿಗೆ ಅನುಕೂಲವಾಗಲಿದೆ. ಅಂದಾಜು 20 ಸಾವಿರ ಕೋಟಿ ರೂಪಾಯಿ ರೈತರ ಅನುಕೂಲಕ್ಕೆ ಸಿಗಲಿದೆ.

ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಬಗ್ಗೆ ಸಂತಸ  ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ

ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಶೋಭಾ ಕರಂದ್ಲಾಜೆ ಸಂತಸ ವ್ಯಕ್ತಪಡಿಸಿದ್ದಾರೆ. ಮೋದಿ ಅವರೊಂದಿಗೆ ಪುನಃ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ತನ್ನ ಅದೃಷ್ಟ ಎಂದಿದ್ದಾರೆ. ಜೊತೆಗೆ ಕ್ಷೇತ್ರಕ್ಕೆ ತಾನು ಹೊಸಬಳಾದರೂ, ಭಾರೀ ಬಹುಮತದಿಂದ ಗೆಲ್ಲಿಸಿರುವ ಬೆಂಗಳೂರು ಉತ್ತರ ಕ್ಷೇತ್ರದ ಜನತೆಗೆ ಚಿರಋಣಿಯಾಗಿದ್ದೇನೆ, ತನ್ನ ಗೆಲುವಿಗೆ ಹಗಲು ರಾತ್ರಿ ಶ್ರಮಪಟ್ಟ ಕಾರ್ಯಕರ್ತರಿಗೆ ಸ್ಥಳೀಯ ಮುಖಂಡರಿಗೆ ಧನ್ಯವಾದಗಳು ಎಂದು ಮೊದಲ ಬಾರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.

ಮನೆಗೆ ಮಗ ಬಂದ್ರೂ ಮುಖ ನೋಡಲಾಗದ ಸ್ಥಿತಿಯಲ್ಲಿ ಭವಾನಿ ರೇವಣ್ಣ

ಹಾಸನ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್‍ಐಟಿ ಪೊಲೀಸರು ಇವತ್ತು ಪ್ರಜ್ವಲ್‌ ರೇವಣ್ಣರನ್ನು ಬಸವನಗುಡಿ ನಿವಾಸಕ್ಕೆ ಅವರನ್ನು ಕರೆತಂದು ಮಹಜರು ನಡೆಸಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನು ಸ್ಥಳ ಮಹಜರಿಗೆ ಕರೆತಂದ ವೇಳೆ ಅವರ ತಾಯಿ ಭವಾನಿ ರೇವಣ್ಣ ಮನೆಯ ಮೊದಲ ಮಹಡಿಯಲ್ಲಿರುವ ತುಳಸಿಕಟ್ಟೆಗೆ ಪೂಜೆ ಸಲ್ಲಿಸುತ್ತಿದ್ದರು. ಈ ವೇಳೆ ಅಧಿಕಾರಿಗಳು ಮಹಜರು ಮುಕ್ತಾಯವಾಗುವವರೆಗೂ ಮನೆಯ ಪ್ರತ್ಯೇಕ ಜಾಗದಲ್ಲಿ ಇರುವಂತೆ ಮನೆಯ ಸದಸ್ಯರಿಗೆ ಸೂಚಿಸಿದ್ರು. ಮಗ ಮನೆಗೆ ಬಂದ್ರೂ ಕೂಡ ಭವಾನಿಗೆ ಪ್ರಜ್ವಲ್‌ ನನ್ನು ನೋಡುವ ಅವಕಾಶ ಸಿಕ್ಕಿಲ್ಲ.

ಪರಪ್ಪನ ಅಗ್ರಹಾರಕ್ಕೆ ಪ್ರಜ್ವಲ್‌ ರೇವಣ್ಣ

ಹಾಸನ ಪೆನ್‌ಡ್ರೈವ್‌ ಕೇಸ್‌ ಆರೋಪಿ ಪ್ರಜ್ವಲ್ ರೇವಣ್ಣ ಜೈಲು ಪಾಲಾಗಿದ್ದಾರೆ. ಎಸ್ಐಟಿ  ವಶದಲ್ಲಿದ್ದ ಪ್ರಜ್ವಲ್ ರೇವಣ್ಣ ಕಸ್ಟಡಿ ಇಂದಿಗೆ ಅಂತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ 42ನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಜ್ವಲ್ ರೇವಣ್ಣನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದೀಗ ಪ್ರಜ್ವಲ್‌ ರೇವಣ್ಣ ತಂದೆಯಂತೆ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಆಗಲಿದ್ದಾರೆ. ಜೂನ್‌ 24ರ ವರೆಗೂ ಪ್ರಜ್ವಲ್‌ ನ್ಯಾಯಾಂಗ ಬಂಧನದಲ್ಲಿ ಇರಬೇಕಾಗಿದೆ.

ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಖಾತೆ ಬೇಡ ಎಂದ ಸಂಸದ

ನಿನ್ನೆ ಪ್ರಧಾನಿ ಮೋದಿ ಅವರ ಜೊತೆಯಲ್ಲೇ 72 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಈ ಬೆನ್ನಲ್ಲೇ ಬಿಜೆಪಿಗೆ ದೊಡ್ಡ ಶಾಕ್‌ ಎದುರಾಗಿದೆ. ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದ ಸಂಸದರೊಬ್ಬರು ತನಗೆ ರಾಜ್ಯ ಖಾತೆ ಬೇಡ ಅಂತಾ ಹೇಳಿದ್ದಾರೆ.  ಕೇರಳ ಬಿಜೆಪಿಯ ಮೊದಲ ಸಂಸದ ಸುರೇಶ್ ಗೋಪಿ ರಾಜ್ಯ ಖಾತೆ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಬಳಿಕ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ತಾವು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಶೀಘ್ರದಲ್ಲೇ ಸಚಿವ ಸ್ಥಾನದಿಂದ ಮುಕ್ತರಾಗುವ ವಿಶ್ವಾಸ ಇದೆ. ನಾನು ಹಲವು ಚಿತ್ರಗಳಿಗೆ ಸಹಿ ಮಾಡಿದ್ದೇನೆ. ಅವುಗಳನ್ನು ಮುಗಿಸಿಕೊಡುವ ಅಗತ್ಯ ಇದೆ. ತ್ರಿಶೂರ್ ಸಂಸದನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದಿದ್ದಾರೆ. ಸುರೇಶ್‌ ಗೋಪಿ ಅವರ ಈ ಹೇಳಿಕೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

 ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ – ಡಿಕೆ ಸುರೇಶ್‌

ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಸೋಲನುಭವಿಸಿರುವ ಕಾಂಗ್ರೆಸ್ ನಾಯಕ ಡಿಕೆ ಸುರೇಶ್, ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಕಣಕ್ಕಿಳಿಯಬಹುದು ಎಂದು ಹೇಳಲಾಗುತ್ತಿತ್ತು. ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ಅಲ್ಲಿ ಕಾಂಗ್ರೆಸ್​ನಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದರು. ಈ ಮೂಲಕ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ.

7 ರಾಜ್ಯದ ವಿಧಾನಸಭಾ ಉಪ ಚುನಾವಣೆ ದಿನಾಂಕ ಘೋಷಣೆ

ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಒಂದೇ ವಾರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಲೋಕಸಮರದ ಬೆನ್ನಲ್ಲೇ ಇದೀಗ 7 ರಾಜ್ಯದ ವಿಧಾನಸಭಾ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ತೆರವಾಗಿರುವ  13 ವಿಧಾನಸಭಾ ಸ್ಥಾನಗಳ ಭರ್ತಿಗಾಗಿ ಇದೀಗ ಚುನಾವಣೆ ನಡೆಯಲಿದೆ. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ, ಉತ್ತರಖಂಡ, ಪಂಜಾಬ್ ಹಾಗೂ ಹಿಮಾಚಲ ಪ್ರದೇಶದ ವಿಧಾಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಜುಲೈ 10ಕ್ಕೆ ಮತದಾನ ನಡೆಯಲಿದ್ದು, ಜುಲೈ 13ಕ್ಕೆ ಮತ ಏಣಿಕೆ ನಡೆಯಲಿದೆ. ಇದಕ್ಕಾಗಿ ನಾಮಪತ್ರ ಸಲ್ಲಿಸಲು ಜೂನ್ 21 ಕೊನೆಯ ದಿನವಾಗಿದೆ.

Shwetha M