ಸುಧಾಕರ್ ಗೆಲ್ಲಿಸಿದ್ದೇ ಟ್ರೋಲ್ ಮೇಷ್ಟ್ರು – ಇರಲಾರದೆ ಇರುವೆ ಬಿಟ್ಕೊಂಡ್ರಾ?
ಪ್ರದೀಪ್ ಈಶ್ವರ್ ರಾಜೀನಾಮೆ?
ಇರಲಾರದೆ ಇರುವೆ ಬಿಟ್ಕೊಂಡ್ರು ಅಂತಾರಲ್ಲ ಹಂಗಾಗಿದೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕಥೆ. ಪ್ರದೀಪ್ ಒಳ್ಳೆ ಭಾಷಣಕಾರ ಅನ್ನೋದ್ರಲ್ಲಿ ಡೌಟೇ ಇಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕೆ.ಸುಧಾಕರ್ ವಿರುದ್ಧ ಗೆದ್ದಿದ್ದೂ ಕೂಡ ಅದೇ ಮಾತುಗಳಿಂದ್ಲೇ. ತಮ್ಮನ್ನ ತಾವು ಬಯಾಲಜಿ ಬ್ರಹ್ಮ ಅಂತಾ ಕರೆದುಕೊಳ್ಳೋ ಪ್ರದೀಪ್ ಈಶ್ವರ್ ಈಗ ತಮ್ಮ ಮಾತುಗಳಿಂದಲೇ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ತಮ್ಮ ಶಾಸಕ ಸ್ಥಾನವನ್ನೇ ಕಳೆದುಕೊಳ್ಳೋ ಹಂತಕ್ಕೆ ಬಂದಿದ್ದಾರೆ. ಶಾಸಕನ ಈ ಅತಿರೇಖದ ಹೇಳಿಕೆ ಇದೀಗ ಕಾಂಗ್ರೆಸ್ ಪಾಳಯಕ್ಕೂ ಸಂಕಷ್ಟ ತಂದೊಡ್ಡಿದೆ. ಬಿಜೆಪಿ ನಾಯಕರ ಆದಿಯಾಗಿ ಬಿಜೆಪಿ ಕಾರ್ಯಕರ್ತರು ರಾಜೀನಾಮೆ ಯಾವಾಗ ಕೊಡ್ತೀಯಪ್ಪ ಅಂತಾ ಪ್ರದೀಪ್ ಈಶ್ವರ್ರನ್ನ ಪ್ರಶ್ನೆ ಮಾಡ್ತಿದ್ದಾರೆ. ಅಷ್ಟೇ ಯಾಕೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಈ ರೆಸಿಗ್ನೇಷನ್ದೇ ಟ್ರೆಂಡ್. ಇದೆಲ್ಲದರ ನಡುವೆ ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಾಟ ಕೂಡ ನಡೆದಿದೆ. ಅದಕ್ಕೆ ಕಾರಣ ಪ್ರದೀಪ್ ಈಶ್ವರ್ ನೀಡಿದ್ದ ಇದೇ ಹೇಳಿಕೆ.
ರಾಜೀನಾಮೆ ಕೊಡ್ತಾರಾ?
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಭರ್ಜರಿ ಜಯ ದಾಖಲಿಸಿದ್ದಾರೆ. 8,22,619 ವೋಟ್ ಪಡೆದಿದ್ದಾರೆ. ಹಾಗೇ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯಗೆ 6,59,159 ಮತಗಳು ಬಿದ್ದಿವೆ. ಈ ಮೂಲಕ ಸುಧಾಕರ್ ಸಂಸತ್ ಗೆ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಮ್ಮ ಸ್ಥಾನಕ್ಕೆ ಯಾವಾಗ ರಾಜೀನಾಮೆ ನೀಡುತ್ತಾರೆ ಎಂಬ ಚರ್ಚೆಗಳು ಜೋರಾಗಿಯೇ ಇದೆ. 2023ರಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರದೀಪ್ ಈಶ್ವರ್ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ವಿರುದ್ಧ ಗೆಲುವು ಸಾಧಿಸಿದ್ರು. ಅಂದಿನಿಂದಲೂ ಕೂಡ ಪ್ರದೀಪ್ ಈಶ್ವರ್ ಹೋದಲ್ಲಿ ಬಂದಲ್ಲೆಲ್ಲಾ ಸುಧಾಕರ್ ವಿರುದ್ಧ ತುಂಬಾ ಕೇವಲವಾಗೇ ಮಾತಾಡ್ತಿದ್ರು. ಪ್ರಭಾವಿ ಸಚಿವ್ರನ್ನೇ ಸೋಲಿಸಿದೆ ಅಂತಾ ಬಡಾಯಿ ಕೊಚ್ಚಿಕೊಳ್ತಿದ್ರು. ಈ ಸಲ ಸುಧಾಕರ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಮೇಲಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಶಾಸಕ ಸ್ಥಾನವನ್ನೇ ಬೆಟ್ಟಿಂಗ್ಗೆ ಇಟ್ಟವರಂತೆ ಹೇಳಿಕೆ ನೀಡಿದ್ದರು. ಏನೇ ಮಾಡಿದರೂ ಸುಧಾಕರ್ ಈ ಚುನಾವಣೆಯಲ್ಲೂ ಗೆಲ್ಲಲ್ಲ ಭವಿಷ್ಯ ಹೇಳುತ್ತಲೇ ಇದ್ದರು. ಮಾತ್ರವಲ್ಲ ಸುಧಾಕರ್ ಗೆದ್ದರೆ ರಾಜೀನಾಮೆ ನೀಡುತ್ತೇನೆ. ನನ್ನ ಮಾತಿಗೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದ್ದರು. ಆದ್ರೀಗ ಸುಧಾಕರ್ ಚುನಾವಣೆಯಲ್ಲಿ ಗೆದ್ದಿದ್ದು ಪ್ರದೀಪ್ ಈಶ್ವರ್ ಯಾವಾಗ ರಾಜೀನಾಮೆ ಕೊಡ್ತೀಯಪ್ಪ ಎಂದು ಬಿಜೆಪಿ ನಾಯಕರು ಹಾಗೇ ಕಾರ್ಯಕರ್ತರು ಪ್ರಶ್ನೆ ಮಾಡ್ತಿದ್ದಾರೆ. ಸುಧಾಕರ್ ಅಭಿಮಾನಿಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಮೀಮ್ಸ್, ಕಮೆಂಟ್ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೇ ಮಂಗಳವಾರ ರಾತ್ರಿ ಪ್ರದೀಪ್ ಈಶ್ವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ.)
ಇನ್ನು ಮೈಸೂರು – ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಸುಧಾಕರ್ ಗೆದ್ದ ಬೆನ್ನಲ್ಲೇ ಪ್ರದೀಪ್ ಈಶ್ವರ್ ಕಾಲೆಳೆದಿದ್ದಾರೆ. Breaking News: ಇನ್ನು ಕೆಲವೇ ಗಂಟೆಗಳಲ್ಲಿ ಪ್ರದೀಪ್ ಈಶ್ವರ್ ರಾಜೀನಾಮೆ!’ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದೂ ಕೂಡ ಪ್ರದೀಪ್ ಈಶ್ವರ್ ನೀಡಿದ್ದ ಹೇಳಿಕೆ ಸಮೇತ.
ಅಬ್ಬರದ ಮಾತುಗಳ ಮೂಲಕವೇ ಗಮನ ಸೆಳೆಯುವ ಪ್ರದೀಪ್ ಈಶ್ವರ್ರ ಮಾತುಗಳು ಈಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ತಂದುಕೊಡುವುದಕ್ಕಿಂತ ಪೆಟ್ಟು ನೀಡಿದೆ. ಚುನಾವಣೆಯ ಸಮಯದಲ್ಲಿ ಸೈದ್ಧಾಂತಿಕ ಟೀಕೆಗಳ ಬದಲು ಪ್ರದೀಪ್ ಈಶ್ವರ್, ಸುಧಾಕರ್ ವಿರುದ್ಧ ವ್ಯಕ್ತಿ ನಿಂದನೆಯ ಟೀಕೆಯಲ್ಲಿಯೇ ಅಬ್ಬರಿಸಿದರು. ಇದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರಬಲ ಒಕ್ಕಲಿಗ ಸಮುದಾಯದ ಮತಗಳ ಧ್ರುವೀಕರಣಕ್ಕೆ ಪ್ರಮುಖವಾಗಿ ಕಾರಣವಾಯಿತು ಎನ್ನುವ ಚರ್ಚೆ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಮೇಲಿನ ಸಿಟ್ಟಿಗೆ ಕಾಂಗ್ರೆಸ್ ಬೆಂಬಲಿಸಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಒಕ್ಕಲಿಗರಲ್ಲಿ ಪ್ರದೀಪ್ ಮಾತುಗಳು ಅಸಮಾಧಾನಕ್ಕೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವಷ್ಟೇ ಅಲ್ಲ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಸೇರಿದಂತೆ ಒಕ್ಕಲಿಗ ಮತದಾರರು ಗಣನೀಯವಾಗಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರದೀಪ್ ಈಶ್ವರ್, ಸುಧಾಕರ್ಗೆ ಸವಾಲು ಹಾಕಿದ ವಿಡಿಯೊಗಳು ಜೋರಾಗಿಯೇ ಹರಿದಾಡಿದ್ದವು. ಅಲ್ದೇ ಸುಧಾಕರ್ ಅವರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತಲು ಬಿಡುವುದಿಲ್ಲ ಎನ್ನುವ ಸವಾಲು ಒಕ್ಕಲಿಗ ಸಮುದಾಯದ ಒಗ್ಗಟ್ಟಿಗೆ ಮತ್ತಷ್ಟು ಕಾರಣವಾಯಿತು. ಈ ಎಲ್ಲಾ ಕಾರಣಗಳಿಂದ ಸುಧಾಕರ್ಗೆ ಹೆಚ್ಚಿನ ಪ್ರಮಾಣದಲ್ಲಿ ಮತ ಪಡೆಯಲು ಸಹಾಯಕವಾಗಿದೆ. ಒಟ್ನಲ್ಲಿ ಚುನಾವಣೆ ಅಂದ್ಮೇಲೆ ಸೋಲು ಗೆಲುವು ಇದ್ದದ್ದೇ. ಜನರಿಗೆ ಗೊತ್ತೇ ಇಲ್ಲದ ಪ್ರದೀಪ್ ಈಶ್ವರ್ ರನ್ನು ಜನ ವಿಧಾನಸಭೆಗೆ ಕಳಿಸಿದ್ರು. ಆರಂಭದಲ್ಲಿ ಜನಸೇವೆ ಮೂಲಕ ಪ್ರದೀಪ್ ಈಶ್ವರ್ ರಾಜ್ಯದ ಜನರ ಗಮನ ಸೆಳೆದಿದ್ರು. ಆದ್ರೆ ಆ ಬಳಿಕ ತಮ್ಮ ಸಮಯವನ್ನೆಲ್ಲಾ ಸುಧಾಕರ್ ವಿರುದ್ಧ ಮಾತಾಡೋದ್ರಲ್ಲೇ ಕಳೆದ್ರು. ಇದೀಗ ತಮ್ಮ ಶಾಸಕ ಸ್ಥಾನಕ್ಕೇ ಕುತ್ತು ತಂದುಕೊಂಡಿದ್ದಾರೆ.
ಇದರ ಮಧ್ಯೆ ಪ್ರದೀಪ್ ಈಶ್ವರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಕಾರಣ ಅವರ ರಾಜೀನಾಮೆ ಪತ್ರವೊಂದು ವೈರಲ್ ಆಗಿದೆ. ಆದ್ರೆ ಇದು ಎಷ್ಟು ಸತ್ಯ ಎಷ್ಟು ಸುಳ್ಳು ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ.