T20 ವಿಶ್ವಕಪ್‌ ನಲ್ಲಿ ಭಯಂಕರ ಪೆನಾಲ್ಟಿ! – ದುಡ್ಡಲ್ಲ.. ಓವರ್‌ ಮುಗಿಸದಿದ್ರೆ ರನ್‌ ದಂಡ!
ಸ್ಟಾಪ್‌ ಕ್ಲಾಕ್‌ ನಿಯಮ ಬೇಕಿತ್ತಾ?

T20 ವಿಶ್ವಕಪ್‌ ನಲ್ಲಿ ಭಯಂಕರ ಪೆನಾಲ್ಟಿ! – ದುಡ್ಡಲ್ಲ.. ಓವರ್‌ ಮುಗಿಸದಿದ್ರೆ ರನ್‌ ದಂಡ!ಸ್ಟಾಪ್‌ ಕ್ಲಾಕ್‌ ನಿಯಮ ಬೇಕಿತ್ತಾ?

ಟಿ20 ವಿಶ್ವಕಪ್‌ ಹಬ್ಬಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಈ ಬಾರಿ ವಿಶ್ವಕಪ್‌ನಲ್ಲಿ ಕೆಲವು ನೂತನ ನಿಯಮಗಳು ಜಾರಿಯಾಗಿವೆ. ಆ ನಿಯಮಗಳು ಯಾವುದು ಅಂತಾ ನೋಡೋಣ ಇವತ್ತಿನ ನ್ಯೂಸ್ ಶೋ ನಲ್ಲಿ. ಟಿ20 ವಿಶ್ವಕಪ್ ಜೂನ್ 2 ರಿಂದ ಪ್ರಾರಂಭವಾಗಲಿದೆ. ಕಳೆದಿರುವ 8 ಆವೃತ್ತಿಗಳಲ್ಲೂ ಐಸಿಸಿ ಹಲವು ನೂತನ ನಿಯಮಗಳನ್ನು ಅಳವಡಿಸಿಕೊಂಡಿದೆ. ಅದರಂತೆ ಈ ಬಾರಿಯೂ ನೂತನ ನಿಯಮವೊಂದು ಅಳವಡಿಸಿಕೊಂಡಿದೆ. ಆ ನಿಯಮವೇ ಸ್ಟಾಪ್ ಕ್ಲಾಕ್ ನಿಯಮ. ಟಿ20 ವಿಶ್ವಕಪ್‌ನಲ್ಲಿ ನಿಗದಿತ ಸಮಯದಲ್ಲಿ ತಮ್ಮ ಓವರ್‌ಗಳನ್ನು ಪೂರ್ಣಗೊಳಿಸದ ತಂಡಗಳಿಗೆ ಈ ನಿಯಮ ದುಬಾರಿಯಾಗುವುದಂತೂ ಖಚಿತ.

ಇದನ್ನೂ ಓದಿ: ಸುಮತಲಾ ತ್ಯಾಗಕ್ಕೆ ಬಿಜೆಪಿ ಗಿಫ್ಟ್‌! – ಮೇಲ್ಮನೆ ಟಿಕೆಟ್‌ ಹಿಂದಿನ ತಂತ್ರವೇನು?

ನಿಯಮ ಮೀರಿದ್ರೆ ರನ್ ಪೆನಾಲ್ಟಿ..!

ಸ್ಟಾಪ್ ಕ್ಲಾಕ್ ನಿಯಮದಿಂದಾಗಿ ಟಿ20 ವಿಶ್ವಕಪ್ ಪಂದ್ಯಾವಳಿ ನಿಗದಿತ ಸಮಯದಲ್ಲಿಯೇ ಮುಗಿಯುವುದು ಗ್ಯಾರಂಟಿ. ನಿಗದಿತ ಸಮಯದಲ್ಲಿ ತಮ್ಮ ಓವರ್‌ಗಳನ್ನು ಪೂರ್ಣಗೊಳಿಸದ ತಂಡಗಳಿಗೆ ಈ ನಿಯಮ ದುಬಾರಿಯಾಗುವುದಂತೂ ಖಚಿತ. ಪ್ರಯೋಗವಾಗಿ ಈ ನಿಯಮವು ಯಶಸ್ವಿಯಾದ ನಂತರ ಐಸಿಸಿ, ಈ ವಿಶ್ವಕಪ್‌ನಿಂದ ವೈಟ್ ಬಾಲ್ ಮಾದರಿಯಲ್ಲಿ ಸ್ಟಾಪ್ ಕ್ಲಾಕ್ ನಿಯಮವನ್ನು ಬಳಸಲು ಮುಂದಾಗಿದೆ.  ಸ್ಟಾಪ್ ಕ್ಲಾಕ್ ನಿಯಮದ ಪ್ರಕಾರ ಎರಡು ಓವರ್‌ಗಳ ನಡುವೆ ತಂಡಕ್ಕೆ ಮುಂದಿನ ಓವರ್ ಆರಂಭಿಸಲು 60 ಸೆಕೆಂಡ್‌ ಸಮಯಾವಕಾಶವನ್ನು ನೀಡಲಾಗುತ್ತದೆ. ಈ ಸಮಯದ ಮಧ್ಯಂತರದಲ್ಲಿ ಬೌಲಿಂಗ್ ತಂಡವು ಮುಂದಿನ ಓವರ್ ಅನ್ನು ಪ್ರಾರಂಭಿಸಬೇಕಾಗುತ್ತದೆ. ಒಂದು ಓವರ್ ಮುಗಿದ ತಕ್ಷಣ, ಮೂರನೇ ಅಂಪೈರ್ ಈ ನಿಯಮವನ್ನು ಅನುಷ್ಠಾನಕ್ಕೆ ತರುತ್ತಾರೆ. ಈ ಸಮಯದ ಮಿತಿಯೊಳಗೆ ಓವರ್ ಪ್ರಾರಂಭವಾಗದಿದ್ದರೆ, ಮೈದಾನದಲ್ಲಿರುವ ಅಂಪೈರ್, ಬೌಲಿಂಗ್ ತಂಡಕ್ಕೆ ಎರಡು ಎಚ್ಚರಿಕೆಗಳನ್ನು ನೀಡುತ್ತಾರೆ. ಮೂರನೇ ಎಚ್ಚರಿಕೆಯಲ್ಲಿ ಐದು ರನ್‌ಗಳ ದಂಡ ವಿಧಿಸಲಾಗುತ್ತದೆ. ಈ ರನ್‌ಗಳು ಬ್ಯಾಟಿಂಗ್ ತಂಡದ ಖಾತೆಗೆ ಸೇರ್ಪಡೆಯಾಗಲಿವೆ.

ಐಸಿಸಿ ಡಿಸೆಂಬರ್ 2023 ರಿಂದ ವೈಟ್ ಬಾಲ್ ಮಾದರಿಯಲ್ಲಿ ಈ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮವು ಪಂದ್ಯದ ಸಮಯದಲ್ಲಿ 20 ನಿಮಿಷಗಳ ಸಮಯವನ್ನು ಉಳಿಸುತ್ತದೆ. ಈ ಯಶಸ್ಸಿನಿಂದ ಉತ್ತೇಜಿತವಾದ ಐಸಿಸಿ, ಈ ನಿಯಮವನ್ನು ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಜಾರಿಗೆ ತರುತ್ತಿದೆ. ಇನ್ನು ಪಂದ್ಯದ ವೇಳೆ ಕೆಲವು ಸಂದರ್ಭಗಳಲ್ಲಿ ಈ ನಿಯಮ ಬಳಸಲಾಗುವುದಿಲ್ಲ. ಆದಾಗ್ಯೂ, ಈ ನಿಯಮವನ್ನು ಬಳಸುವುದು ಹಾಗೂ ಬಳಸದಿರುವುದು ಸಂಪೂರ್ಣವಾಗಿ ಮೂರನೇ ಅಂಪೈರ್ ಮೇಲೆ ಅವಲಂಬಿತವಾಗಿರುತ್ತದೆ. ಹೊಸ ಬ್ಯಾಟ್ಸ್‌ಮನ್ ಕ್ರಿಸ್​ಗೆ ಬರುವ ಸಂದರ್ಭದಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ. ಅಲ್ಲದೆ ಅಧಿಕೃತ ಪಾನೀಯಗಳ ವಿರಾಮದ ಸಮಯದಲ್ಲೂ ಈ ನಿಯಮದಿಂದ ರಿಯಾಯಿತಿ ಇರುತ್ತದೆ. ಬ್ಯಾಟ್ಸ್‌ಮನ್ ಅಥವಾ ಫೀಲ್ಡರ್‌ಗೆ ಗಾಯವಾದಾಗ ಅಥವಾ ಫೀಲ್ಡಿಂಗ್ ತಂಡದಿಂದ ಸಮಯ ವ್ಯರ್ಥವಾಗದ ಸಂದರ್ಭದಲ್ಲೂ ಈ ನಿಯಮವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಯಾವ್ಯಾವ ರೂಲ್ಸ್‌ ಗೆ ಬ್ರೇಕ್

ಐಪಿಎಲ್‌ನಲ್ಲಿ ರನ್ ಮಳೆ ಹರಿಯಲು ಪ್ರಮುಖ ಕಾರಣವೇ ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮ. ಈ ನಿಯಮದಿಂದಾಗಿ ಪ್ರತಿ ತಂಡವೂ ಒಬ್ಬ ಬ್ಯಾಟರ್​ನನ್ನು ಹೆಚ್ಚುವರಿಯಾಗಿ ಕಣಕ್ಕಿಳಿಸುವ ಅವಕಾಶ ಹೊಂದಿತ್ತು. ಆದರೆ ಟಿ20 ವಿಶ್ವಕಪ್​ನಲ್ಲಿ ಈ ನಿಯಮವನ್ನು ಬಳಸಲಾಗುವುದಿಲ್ಲ. ಹೀಗಾಗಿ ಟಾಸ್ ವೇಳೆ ನಾಯಕ ನೀಡಿದ 11 ಆಟಗಾರರ ಪಟ್ಟಿಯೇ ಪಂದ್ಯದಲ್ಲಿ ಆಡಬೇಕಾಗುತ್ತದೆ. ಐಪಿಎಲ್‌ನಲ್ಲಿ ಪಂದ್ಯದ ವೇಳೆ ಅಂಪೈರ್​ಗಳು ನೀಡಿದ ವೈಡ್ ಬಾಲ್ ಮತ್ತು ನೋ ಬಾಲ್‌ಗಳಿಗೆ ಡಿಆರ್‌ಎಸ್ ತೆಗೆದುಕೊಳ್ಳುವ ಅವಕಾಶವಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿ ಈ ನಿಯಮವಿರುವುದಿಲ್ಲ. ಅಲ್ಲಿ ಆಟಗಾರರು ವೈಡ್ ಮತ್ತು ನೋ ಬಾಲ್‌ಗಳಿಗೆ ಡಿಆರ್‌ಎಸ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಐಪಿಎಲ್ ಪಂದ್ಯಗಳಲ್ಲಿ, ಯಾವುದೇ ಬೌಲರ್ ಒಂದು ಓವರ್‌ನಲ್ಲಿ ಎರಡು ಬೌನ್ಸರ್‌ಗಳನ್ನು ಬೌಲ್ ಮಾಡಬಹುದಾಗಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿ ಒಂದು ಓವರ್‌ನಲ್ಲಿ ಒಂದು ಬೌನ್ಸರ್ ಅನ್ನು ಮಾತ್ರ ಎಸೆಯಬಹುದು. ಎರಡನೇ ಬೌನ್ಸರ್ ಎಸೆದರೆ ಅದನ್ನು ನೋ ಬಾಲ್ ಅಥವಾ ವೈಡ್ ಎಂದು ಪರಿಗಣಿಸಲಾಗುತ್ತದೆ. ಐಪಿಎಲ್‌ನಲ್ಲಿ, ಇನ್ನಿಂಗ್ಸ್‌ವೊಂದರಲ್ಲಿ ತಲಾ 2 ಬಾರಿ 2.30 ನಿಮಿಷಗಳ ಕಾಲ ಸ್ಟ್ರಾಟೆಜಿಕ್ ಟೈಮ್ ಔಟ್ ನಿಯಮವನ್ನು ಬಳಸಬಹುದಾಗಿತ್ತು. ಅಂದರೆ ಈ ವಿರಾಮದ ಅವಧಿಯಲ್ಲಿ ತಂಡಗಳು ಪಂದ್ಯಕ್ಕನುಗುಣವಾಗಿ ತಮ್ಮ ಆಟವನ್ನು ಬದಲಿಸುವ ಚಿಂತನೆ ನಡೆಸಬಹುದಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿ ಈ ನಿಯಮವನ್ನು ಬಳಸಲಾಗುವುದಿಲ್ಲ.

Shwetha M