ಮಂಗಳೂರು: ಸ್ಪೋಟ ಸ್ಥಳದಲ್ಲಿ ‘ಪ್ರೇಮರಾಜ್’ ಆಧಾರ್ ಕಾರ್ಡ್ – ಯಾರೀತ.. ಏನು ಲಿಂಕ್?
ಎರಡೆರಡು ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದು ಹೇಗೆ?
ಮಂಗಳೂರು: ನಾಗುರಿಯಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸ್ಥಳದಲ್ಲಿ ದೊರೆತ ಆಧಾರ್ ಕಾರ್ಡ್ ವಿಳಾಸ ನಕಲಿ ಎನ್ನುವುದು ಪತ್ತೆಯಾಗಿದೆ. ಅದು ಹುಬ್ಬಳ್ಳಿಯ ಪ್ರೇಮರಾಜ್ ಅವರಿಗೆ ಸೇರಿದ್ದಾಗಿದೆ. ಆಟೋರಿಕ್ಷಾದಲ್ಲಿ ಪತ್ತೆಯಾದ ಆಧಾರ ಕಾರ್ಡ್ ಹುಬ್ಬಳ್ಳಿಯ ಕೇಶ್ವಾಪುರ ಮಧುರಾ ಕಾಲೋನಿ ನಿವಾಸಿ ಪ್ರೇಮರಾಜ್ ಹೆಸರಿನಲ್ಲಿದೆ. ಇದು ಆರು ತಿಂಗಳ ಹಿಂದೆ ಕಳೆದು ಹೋಗಿತ್ತು. ಇವರ ವಿಳಾಸವನ್ನು ಆಗಂತುಕರು ಬಳಕೆ ಮಾಡಿದ್ದಾರೆ. ಈ ಪ್ರಕರಣಕ್ಕೂ ಪ್ರೇಮ್‌ರಾಜ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಅವರ ಕುಟುಂಬದವರು ಹೇಳಿದ್ದಾರೆ.
ಇದನ್ನೂ ಓದಿ: ಮಂಗಳೂರು ರಿಕ್ಷಾ ಸ್ಫೋಟ ಪ್ರಕರಣ- ಇದೊಂದು ಭಯೋತ್ಪಾದನೆ ಕೃತ್ಯ
ಸ್ಫೋಟ ನಡೆದ ಸ್ಥಳದಲ್ಲಿ ಪ್ರೇಮರಾಜ ಹುಟಗಿ ಹೆಸರು ಮತ್ತು ವಿಳಾಸವಿದ್ದ ಆಧಾರ್ ಕಾರ್ಡ್ ದೊರೆತಿತ್ತು. ಇದಕ್ಕೆ ಸಂಬಂಧಿಸಿ ಅವರ ಪೋಷಕರನ್ನು ಸ್ಥಳೀಯ ಪೊಲೀಸರು ವಿಚಾರಣೆ ಮಾಡಿದ್ದಾರೆ. ಪ್ರೇಮರಾಜ್ ರೈಲ್ವೇ ಇಲಾಖೆಯ ಡಿ ಗ್ರೂಪ್ ಉದ್ಯೋಗಿಯಾಗಿದ್ದು, ಕಳೆದ ಮೂರು ವರ್ಷದಿಂದ ತುಮಕೂರಿನಲ್ಲಿ ಟ್ರಕ್ ಮೆಂಟೇನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಪೋಷಕರು ಹುಬ್ಬಳ್ಳಿಯ ಕೇಶ್ವಾಪುರದ ಮಧುರಾ ಕಾಲೋನಿ ನಿವಾಸಿಯಾಗಿದ್ದಾರೆ. ಪ್ರೇಮರಾಜ ಅವರ ತಂದೆ ಮಾರುತಿ ಹುಟಗಿ, ತಾಯಿ ರೇಖಾ ಹಾಗೂ ಸಹೋದರ ನವರಾಜ ಅವರನ್ನು ಶನಿವಾರ ರಾತ್ರಿಯೇ ಪೊಲೀಸರು ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಪ್ರೇಮರಾಜ ತಂದೆ ಮಾರುತಿ ಹುಟಗಿ, ಸ್ಫೋಟದ ಸ್ಥಳದಲ್ಲಿ ಸಿಕ್ಕಿದೆ ಎನ್ನಲಾದ ಆಧಾರ್ ಕಾರ್ಡ್‌ನಲ್ಲಿ ನಮ್ಮ ವಿಳಾಸವಿದೆ. ಆದರೆ ಅದರಲ್ಲಿರುವ ಭಾವಚಿತ್ರ ನನ್ನ ಮಗ ಪ್ರೇಮಾರಾಜನದ್ದಲ್ಲ. ಆರು ತಿಂಗಳ ಹಿಂದಷ್ಟೇ ಪರೀಕ್ಷೆ ಬರೆಯಲು ಹೋಗಿದ್ದಾಗ ಆಧಾರ್ ಕಾರ್ಡ್ ಕಳೆದುಕೊಂಡಿದ್ದ. ಆಗ ದೂರು ಕೊಡು ಎಂದು ಹೇಳಿದ್ದೆ. ನನ್ನ ಮಗ ಅಂಥಹವನಲ್ಲ. ಈ ಪ್ರಕರಣಕ್ಕೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ. ಶನಿವಾರ ರಾತ್ರಿ 8.45ರ ವೇಳೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮನೆಗೆ ಬಂದು ವಿಚಾರಣೆ ನಡೆಸಿದ್ದಾರೆ. ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಿದ್ದೇವೆ. ನನ್ನ ಎದುರಿಗೆ ಮಗನ ಜತೆಯೂ ಮಾತನಾಡಿದ್ದಾರೆ. ಸ್ಫೋಟ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.
ತುಮಕೂರು ಸಮೀಪದ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಪ್ರೇಮರಾಜ್ ಹುಟಗಿ, ಕಳೆದ ಎರಡು ವರ್ಷದಲ್ಲಿ 2 ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಧಾರವಾಡದಿಂದ ಬೆಳಗಾವಿಗೆ ಬಸ್‌ನಲ್ಲಿ ಬರುವಾಗ ಕಳೆದುಕೊಂಡಿದ್ದ. ಬಳಿಕ ಮತ್ತೊಂದು ಆಧಾರ್ ಕಾರ್ಡ್ ಪಡೆದಿದ್ದ. ಕಳೆದ ಆರು ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಬಸ್‌ನಲ್ಲಿ ಬರುವಾಗ ಮತ್ತೊಮ್ಮೆ ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಶನಿವಾರ ರಾತ್ರಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಕರೆ ಮಾಡಿ ಕೂಡಲೇ ತುಮಕೂರು ಎಸ್‌ಪಿ ಸಂಪರ್ಕಿಸುವಂತೆ ಸೂಚನೆ ನೀಡಿದ್ದರು. ಅದರಂತೆ ರವಿವಾರ ಎಸ್‌ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಅವರನ್ನು ಪ್ರೇಮರಾಜ್ ಹುಟಗಿ ಸಂಪರ್ಕಿಸಿದ್ದಾನೆ ಎನ್ನಲಾಗಿದೆ.